ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ) ಯ ಕಾರ್ಯ ನಿರ್ವಹಣೆಗೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಏಳು ಎಕರೆ ಭೂಮಿಯನ್ನು ಯಾವುದೇ ಷರತ್ತುಗಳಿಗೆ ಒಳಪಡದೆ ಹೆಚ್ಚುವರಿಯಾಗಿ ಹಸ್ತಾಂತರಿಸುವ ತೀರ್ಮಾನವನ್ನು ಹಿಂಪಡೆಯಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದಿರುವ ಡಾ.ಬಿಳಿಮಲೆ, ರಾಷ್ಟ್ರೀಯ ಕಾನೂನು ಶಾಲೆ ತನ್ನ ರಾಷ್ಟ್ರಮಟ್ಟದ ಸ್ಥಾನಮಾನವನ್ನು ಉಲ್ಲೇಖಿಸಿ ಸ್ಥಳೀಯ ಕನ್ನಡ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸುತ್ತಿರುವುದು ಈ ಶಾಲೆ ಬೆಂಗಳೂರಿನಲ್ಲಿ ಸ್ಥಾಪನೆಯಾದ ದಿನದಿಂದ ನಡೆದು ಬಂದಿರುವ ಅನಪೇಕ್ಷಿತ ಪದ್ಧತಿಯಾಗಿರುತ್ತದೆ. ಅನ್ಯ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಒದಗಿಸಿದ ಭೂಮಿಯಲ್ಲಿ ಸ್ಥಾಪನೆಯಾಗಿರುವ ರಾಷ್ಟ್ರೀಯ ಕಾನೂನು ಶಾಲೆಯ ಶಾಖೆಗಳು ಆಯಾ ರಾಜ್ಯಗಳ ಸ್ಥಳೀಯ ವಿದ್ಯಾರ್ಥಿಗಳಿಗೆ ತನ್ನ ದಾಖಲಾತಿಯಲ್ಲಿ ಶೇ.25ರ ಲಂಬ ಪ್ರಾತಿನಿಧ್ಯವನ್ನು ಕಲ್ಪಿಸಿರುವುದು ಕನ್ನಡಿಗರಿಗೆ ಇನ್ನಷ್ಟು ಹೆಚ್ಚಿನ ಅಸಮಾಧಾನವನ್ನು ಉಂಟು ಮಾಡುವ ವಿಷಯವಾಗಿದೆ. ಹಾಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಏಳು ಎಕರೆ ಜಾಗವನ್ನು ರಾಷ್ಟ್ರೀಯ ಕಾನೂನು ಶಾಲೆಗೆ ಹಸ್ತಾಂತರಿಸುವ ತೀರ್ಮಾನವನ್ನು ಕೂಡಲೇ ಮರುಪರಿಶೀಲಿಸಬೇಕು. ಈ ಜಾಗವನ್ನು ಹಸ್ತಾಂತರಿಸುವ ಮುನ್ನ ಆ ಸಂಸ್ಥೆಯೊಂದಿಗೆ ಸ್ಥಳೀಯ ಕನ್ನಡದ ವಿದ್ಯಾರ್ಥಿಗಳಿಗೆ ಶೇ.25ರ ಪ್ರಾತಿನಿಧ್ಯವನ್ನು ಕಲ್ಪಿಸಲು ಸೂಕ್ತ ಒಡಂಬಡಿಕೆ ಮಾಡಿಕೊಂಡು, ಪ್ರತಿವರ್ಷ ಈ ಪ್ರಾತಿನಿಧ್ಯವನ್ನು ಮುಂದುವರೆಸಿ ಕನ್ನಡಿಗರ ಹಿತ ಕಾಯುವ ಕೆಲಸವಾಗಬೇಕು ಎಂದು ಡಾ.ಬಿಳಿಮಲೆ ಮುಖ್ಯಮಂತ್ರಿ ಅವರನ್ನು ಕೋರಿದ್ದಾರೆ.