ಕಾರ್ನಾಡರ ನಾಟಕೋತ್ಸವದ ನೆಪದಲ್ಲಿ ಕೆಲವು ನೆನಪುಗಳು..

Most read

ಆಧುನಿಕ ಭಾರತೀಯ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ಮುಂದಿನ ಪೀಳಿಗೆಗೆ ತಮ್ಮ ನಾಟಕ ಸಿನೆಮಾಗಳ ಮೂಲಕ ಬೆಳಕನ್ನು ತೋರಿಸುತ್ತಲೇ ಕನಸುಗಳನ್ನು ನನಸಾಗಿಸಲು ಪ್ರೇರಣೆಯೂ ಆಗಿದ್ದಾರೆ. ಅವರ ವೈಯಕ್ತಿಕ ಒಲವು ನಿಲುವುಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಅವರ ಬದುಕು ಹಾಗೂ ಸಾಧನೆಯೇ ಯುವ ರಂಗಪೀಳಿಗೆಗೆ ಮಾರ್ಗದರ್ಶಕವಾಗಿದೆ. ರಂಗಭೂಮಿ ಜೀವಂತವಾಗಿರುವವರೆಗೂ ಕಾರ್ನಾಡರು ತಮ್ಮ ನಾಟಕಗಳ ಮೂಲಕ ಜೀವಂತವಾಗಿರುತ್ತಾರೆ ಶಶಿಕಾಂತ ಯಡಹಳ್ಳಿ, ರಂಗಕರ್ಮಿ

ಕನ್ನಡ ರಂಗಭೂಮಿಯ ಬೆಳಕನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ, ನಾಟಕ ಸಾಹಿತ್ಯಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪಡೆದ, ಕನ್ನಡ ರಂಗಭೂಮಿಗೆ ವಿಶಿಷ್ಟವಾದ ಅಪರೂಪದ ನಾಟಕಗಳನ್ನು ಬರೆದುಕೊಟ್ಟು ಆಧುನಿಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದ, ಭಾರತೀಯ ರಂಗಭೂಮಿಯ ಹೆಸರಾಂತ ನಾಟಕಕಾರ ಗಿರೀಶ್ ಕಾರ್ನಾಡರು. ಭಾರತದಲ್ಲಿ ಸಾಹಿತ್ಯ ಸಾಧನೆಗಾಗಿ ಕೊಡಮಾಡುವ ಜ್ಞಾನಪೀಠ ಪ್ರಶಸ್ತಿಯು ಮೊದಲ ಬಾರಿಗೆ ನಾಟಕಕಾರನೊಬ್ಬನಿಗೆ ಒಲಿದು ಬಂದಿದ್ದರೆ ಅದು ಗಿರೀಶ್ ಕಾರ್ನಾಡರಿಗೆ ಮಾತ್ರ. (1998ರಲ್ಲಿ).

ಭಾಗವತರು ಸಾಂಸ್ಕೃತಿಕ ಸಂಘಟನೆಯು ಮಾರ್ಚ್ 20 ರಿಂದ 23ರ ವರೆಗೆ ಕಲಾಗ್ರಾಮ ಸಮುಚ್ಛಯದ ರಂಗಮಂದಿರದಲ್ಲಿ ಡಾ.ಗಿರೀಶ್ ಕಾರ್ನಾಡರ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ತುಘಲಕ್, ಅಗ್ನಿ ಮತ್ತು ಮಳೆ, ಯಯಾತಿ ಮತ್ತು ಮಾನಿಷಾದ ಎನ್ನುವ ನಾಲ್ಕು ಕಾರ್ನಾಡರ ಮಹತ್ವದ ನಾಟಕಗಳ ಪ್ರದರ್ಶನವನ್ನು ಅದು ಏರ್ಪಡಿಸಿತ್ತು. ಈ ನಾಟಕೋತ್ಸವದ ನೆಪದಲ್ಲಿ ಕಾರ್ನಾಡರ ಬದುಕು ಮತ್ತು ಸಾಧನೆಗಳನ್ನು ನೆನಪಿಸಿಕೊಳ್ಳುವ ಅವಕಾಶ ಇದಾಗಿತ್ತು.

ತಾವು ನಂಬಿದ ಸಿದ್ಧಾಂತಗಳಿಗೆ  ಬದ್ಧರಾಗಿ ನಡೆದಂತೆ ನುಡಿದ, ನುಡಿದಂತೆ ನಡೆದ ವ್ಯಕ್ತಿಗಳು ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದವರು ಗಿರೀಶ್ ಕಾರ್ನಾಡರು. ಅವರ ವಿಚಾರಗಳನ್ನು ವಿರೋಧಿಸುವವರೂ ಇದ್ದಾರೆ, ಅವರ ಹಿಂದುತ್ವ ವಿರೋಧಿತನವನ್ನು ಖಂಡಿಸುವವರೂ ಇದ್ದಾರೆ, ಅವರ ವಿವಾದಾತ್ಮಕ ಹೇಳಿಕೆಗಳನ್ನು ಒಪ್ಪದೇ ಇರುವವರೂ ಬೇಕಾದಷ್ಟು ಜನರಿದ್ದಾರೆ. ಆದರೆ.. ಯಾರು ಎಷ್ಟೇ ವಿರೋಧಿಸಲಿ, ಅದ್ಯಾರು ಅದೆಷ್ಟೇ ಪ್ರತಿಭಟಿಸಲಿ ತಾವು ನಂಬಿದ ಸಿದ್ಧಾಂತಕ್ಕೆ ಕೊನೆಯವರೆಗೂ ನಿಷ್ಠರಾಗಿದ್ದ  ಕಾರ್ನಾಡರ ಬದ್ಧತೆಯನ್ನು ಒಪ್ಪಲೇಬೇಕು.

ಎಲ್ಲಾ ರೀತಿಯ ಹೇರಿಕೆಗಳನ್ನೂ ತಮ್ಮ ಬದುಕಿನಾದ್ಯಂತ ಕಾರ್ನಾಡರು ವಿರೋಧಿಸುತ್ತಲೇ ಬಂದರು. ಗೋಮಾಂಸ ನಿಷೇಧವನ್ನು ಮಾಂಸಾಹಾರಿಗಳ ಮೇಲೆ ಹೇರಲು ಹಿಂದುತ್ವವಾದಿಗಳು ಪ್ರಯತ್ನಿಸಿದಾಗ ಕಾರ್ನಾಡರು ಜನರ ಆಹಾರದ ಹಕ್ಕನ್ನು ಎತ್ತಿಹಿಡಿಯಲು ಬೀದಿಗಿಳಿದು ಪ್ರತಿಭಟಿಸಿದ್ದರು. ಸಲಿಂಗ ಕಾಮಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರುವ ಕಾನೂನುಗಳನ್ನು ಕಿತ್ತು ಹಾಕಲು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ಕೊಟ್ಟರು. ಹಿಂದುತ್ವವಾದವನ್ನು ವಿರೋಧಿಸಿದವರೆಲ್ಲರನ್ನು ನಗರ ನಕ್ಸಲರು ಎಂದು ಆರೋಪಿಸಿ ಸಂಘಪರಿವಾರದವರು ಹೀಯಾಳಿಸುತ್ತಿದ್ದಾಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡರು ಆಕ್ಸಿಜನ್ ನಳಿಕೆಗಳನ್ನು ಕೈಯಲ್ಲಿ  ಹಿಡಿದುಕೊಂಡೇ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಅವರ ಕತ್ತಿನಲ್ಲಿ ‘ನಾನೂ ನಗರ ನಕ್ಸಲ್’ ಎನ್ನುವ ಭಿತ್ತಿಪತ್ರವನ್ನು ತೂಗಿಹಾಕಿಕೊಂಡೇ ಬಂದು ಬಲಪಂಥೀಯರ ಅಸಹಿಷ್ಣುತತೆಯ ವಿರುದ್ಧ ಪ್ರತಿಭಟಿಸಿದ್ದರು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ, ಮನುಷ್ಯರ ಮೂಲಭೂತ ಅಗತ್ಯಗಳನ್ನು ಬಲವಂತವಾಗಿ ನಿರ್ಬಂಧಿಸಿದಾಗ, ಅಲ್ಪಸಂಖ್ಯಾತರ ಹಕ್ಕುಗಳಿಗೆ ಚ್ಯುತಿಯಾದಾಗ, ಕಾನೂನುಗಳು ಮಾನವೀಯತೆಯ ಮೇಲೆ ಸವಾರಿ ಮಾಡಿದಾಗಲೆಲ್ಲಾ ಕಾರ್ನಾಡರು ಬೀದಿಗಿಳಿದು ಪ್ರತಿಭಟನಾನಿರತರ ಜೊತೆಗೆ ಸೇರಿ ವಿರೋಧಿಸುತ್ತಲೇ ಬಂದವರು. ಅವರ ಈ ಎಲ್ಲಾ ವಿರೋಧಗಳು ವಿವಾದಗಳಿಗೆ ಕಾರಣವಾಗಿದ್ದವು. ಕಾರ್ನಾಡರಿಗೆ ಜೀವಬೆದರಿಕೆ ಬರಲೂ ನೆಪವಾಗಿದ್ದವು. ಉಗ್ರ ಬಲಪಂಥೀಯರ ಹಿಟ್ ಲಿಸ್ಟಲ್ಲಿ ಕಾರ್ನಾಡರ ಹೆಸರೂ ಸೇರ್ಪಡೆಯಾಗುವಂತೆ ಮಾಡಿದ್ದವು. ಆದರೆ.. ಇಂತಹ ಯಾವುದೇ ಬೆದರಿಕೆಗಳಿಗೂ ಒಂಚೂರು ಮಣಿಯದೇ ತಾವು ನಂಬಿದ್ದನ್ನು ನಿರ್ಭಿಡೆಯಿಂದ ಹೇಳುತ್ತಲೇ ಬದುಕಿದ ಕಾರ್ನಾಡರು ಬಹುಸಂಖ್ಯಾತರಿಂದ ತುಳಿತಕ್ಕೊಳಗಾದ ಅಲ್ಪಸಂಖ್ಯಾತರ ದಮನಿತ ಜನರ ದ್ವನಿಯಾಗಿದ್ದರು.

ಹಿಂದುತ್ವವಾದಿ ಶಕ್ತಿಗಳು ಅಟ್ಟಹಾಸ ಮೆರೆಯುತ್ತಿರುವ ಈ ದಿನಮಾನಗಳಲ್ಲಿ ಕಾರ್ನಾಡರಂತಹ ಪ್ರತಿರೋಧದ ಧ್ವನಿ ಇರಬೇಕಾಗಿತ್ತು. ಅವರ ವೈಚಾರಿಕ ಪ್ರಜ್ಞೆ ಮತ್ತು ಸಾಮಾಜಿಕ ಬದ್ಧತೆ ಈಗಿನವರಿಗೆ ಸ್ಪೂರ್ತಿಯಾಗಬಹುದಾಗಿತ್ತು. ಕಾರ್ನಾಡರಂತಹ ದಿಟ್ಟ ವ್ಯಕ್ತಿಯ ಅನುಪಸ್ಥಿತಿ ಈಗಲೂ ಕಾಡುತ್ತಲೇ ಇದೆ.

ಗಿರೀಶ್ ಕಾರ್ನಾಡರು ತಮ್ಮ ಬಹುಮುಖಿ ಪ್ರತಿಭೆಯಿಂದಾಗಿ ದೇಶಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಟಕಕಾರರಾಗಿ, ನಟರಾಗಿ, ಚಲನಚಿತ್ರಗಳ ನಿರ್ದೇಶಕರಾಗಿ, ಸ್ಕ್ರಿಪ್ಟ್ ರೈಟರಾಗಿ, ಬರಹಗಾರರಾಗಿ, ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಗಳ ನಿರ್ದೇಶಕರಾಗಿ ರಾಜ್ಯದ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲಿಯೂ ಸಹ ತಮ್ಮ ಅಸ್ಮಿತೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಬೆಂಗಾಲಿಯಲ್ಲಿ ಬಾದಲ್ ಸರ್ಕಾರ್, ಮರಾಠಿಯಲ್ಲಿ ವಿಜಯ್ ತೆಂಡೂಲ್ಕರ್, ಹಿಂದಿಯಲ್ಲಿ ಮೋಹನ್ ರಾಕೇಶ್‌ ರವರು ಆಧುನಿಕ ರಂಗಭೂಮಿಯಲ್ಲಿ ನಾಟಕಕಾರರಾಗಿ ದೇಶಾದ್ಯಂತ ಹೆಸರಾದಂತೆಯೇ ಕನ್ನಡದಲ್ಲಿ ಗಿರೀಶ್ ಕಾರ್ನಾಡರು ಜಗದ್ವಿಖ್ಯಾತರಾದವರು. ಕಾರ್ನಾಡರು ಬರೆದ ನಾಟಕಗಳು ಒಂದಕ್ಕಿಂತಾ ಒಂದು ವಿಭಿನ್ನವಾಗಿರುವಂತಹವು. ಪುರಾಣ, ಚರಿತ್ರೆ, ಜಾನಪದಗಳ ಸೊಗಡನ್ನು ಸಂಸ್ಕರಿಸಿ ಕಾರ್ನಾಡರು ಬರೆದ ನಾಟಕಗಳು ದೇಶಾದ್ಯಂತ ರಂಗಭೂಮಿಯಲ್ಲಿ ಸಂಚಲನವನ್ನು ಉಂಟುಮಾಡಿದವು. ಕನ್ನಡದಲ್ಲಿ ಒಬ್ಬ ಅಪ್ರತಿಮ ಪ್ರತಿಭಾವಂತ ನಾಟಕಕಾರ ಹುಟ್ಟಿ ಬರಲು ಕಾರಣವಾದವು.

ಚಿತ್ರಕಲಾವಿದರು ಹಾಗೂ ಕವಿಯಾಗಿದ್ದ ಕಾರ್ನಾಡರು ಮೊಟ್ಟಮೊದಲ ಬಾರಿಗೆ 1961ರಲ್ಲಿ ಬರೆದ ನಾಟಕ ‘ಯಯಾತಿ’. ಕಾರ್ನಾಡರಿಗೆ ದೇಶಾದ್ಯಂತ ಹೆಸರು ತಂದುಕೊಟ್ಟು ಜ್ಞಾನಪೀಠ ಪ್ರಶಸ್ತಿ ದೊರಕಲು ಕಾರಣವಾಗಿದ್ದು 1964ರಲ್ಲಿ ರಚಿಸಿದ ನಾಟಕ ‘ತುಘಲಕ್’. ಕನ್ನಡದಲ್ಲಿ ಪ್ರೊ.ಬಿ.ಚಂದ್ರಶೇಖರರವರು ನಿರ್ದೇಶಿಸಿದ್ದ ಈ ನಾಟಕ ತದನಂತರ ಸಿ.ಆರ್.ಸಿಂಹರವರ ಅಭಿನಯ ಮತ್ತು ನಿರ್ದೇಶನದಲ್ಲಿ (1969ರಿಂದ) ಅತೀ ಹೆಚ್ಚು ಖ್ಯಾತಿಯನ್ನು ಪಡೆದು ನೂರಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿತು. ಬಿ.ವಿ.ಕಾರಂತರೇ ಈ ನಾಟಕವನ್ನು ಹಿಂದಿ ಭಾಷೆಗೆ ರೂಪಾಂತರ ಮಾಡಿದ್ದರು. ಭಾರತದ ಪ್ರಮುಖ ರಂಗನಿರ್ದೇಶಕರುಗಳಾದ ಇಬ್ರಾಹಿಂ ಅಲ್ಕಾಜಿ, ಪ್ರಸನ್ನ, ಅರವಿಂದ ಗೌರ್, ದಿನೇಶ್ ಠಾಕೂರ್‌ ರವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಬೆಂಗಾಲಿ ಭಾಷೆಯಲ್ಲೂ ಸಹ ಶ್ಯಾಮಾನಂದ್ ಜಲನ್‌ ರವರಿಂದ ‘ತುಘಲಕ್’ ನಿರ್ದೇಶನಕ್ಕೊಳಗಾಗಿದೆ. ‘ತುಘಲಕ್’ ನಾಟಕ ಇಂಗ್ಲೀಷ್, ಹಂಗೇರಿಯನ್, ಸ್ಪ್ಯಾನಿಶ್, ಜರ್ಮನ್ ಭಾಷೆಗಳಿಗೂ ಅನುವಾದವಾಗಿದೆ.

ಮಾನಿಶಾದ, 1971ರಲ್ಲಿ ಹಯವದನ, 1977ರಲ್ಲಿ ಅಂಜುಮಲ್ಲಿಗೆ, 1980ರಲ್ಲಿ ಹಿಟ್ಟಿನ ಹುಂಜ, 1989ರಲ್ಲಿ ನಾಗಮಂಡಲ, 1991ರಲ್ಲಿ ತಲೆದಂಡ, 1994ರಲ್ಲಿ ಅಗ್ನಿ ಮತ್ತು ಮಳೆ, 2000ರಲ್ಲಿ ಟಿಪ್ಪು ಸುಲ್ತಾನ ಕಂಡ ಕನಸು, 2006ರಲ್ಲಿ ಒಡಕಲು ಬಿಂಬ ಹಾಗೂ ಮದುವೆ ಅಲ್ಬಂ, 2012ರಲ್ಲಿ ಹೂ ಮತ್ತು ಬೆಂದ ಕಾಳು ಆನ್ ಟೋಸ್ಟ್.. ಹೀಗೆ ಒಟ್ಟು ಹದಿನಾಲ್ಕು ನಾಟಕಗಳನ್ನು ಕಾರ್ನಾಡರು ರಚಿಸಿದ್ದಾರೆ. ಸಂಖ್ಯೆಯ ದೃಷ್ಟಿಯಲ್ಲಿ ಇವು ಜಾಸ್ತಿ ಅಲ್ಲದೇ ಇರಬಹುದು, ಆದರೆ.. ಯಶಸ್ಸಿನ ದಾರಿಯಲ್ಲಿ ಬಹುತೇಕ ನಾಟಕಗಳು ಮೈಲುಗಲ್ಲಾಗುವಂತಹುವೇ ಆಗಿವೆ. ಕಾರ್ನಾಡರು ಬಾದಲ್ ಸರ್ಕಾರರ ‘ಏವಂ ಇಂದ್ರಜಿತ್’ ನಾಟಕವನ್ನು ಹಾಗೂ ಮರಾಠಿಯ ಮಹೇಶ್ ಎಲಕುಂಚವಾರರ ವಾಸಾಂಸಿ ಜೀರ್ಣಾನಿ ಮತ್ತು ಧರ್ಮಪುತ್ರ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ತಲೆದಂಡ’ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ (1990), ಕರ್ನಾಟಕ ಸಾಹಿತ್ಯ ಅಕಾಡೆಮಿ (1993) ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ (1994) ಪ್ರಶಸ್ತಿಗಳು ದೊರಕಿವೆ.

ತುಘಲಕ್‌ ನಾಟಕ

ಬಹುಭಾಷಾ ಚಲನಚಿತ್ರ ನಟರಾಗಿಯೂ ಗುರುತಿಸಲ್ಪಟ್ಟಿರುವ ಕಾರ್ನಾಡರು ಕನ್ನಡ, ಹಿಂದಿ, ತಮಿಳು, ಮಲಯಾಳಿ, ತೆಲಗು, ಮರಾಠಿ ಭಾಷೆಗಳೂ ಸೇರಿದಂತೆ ಒಟ್ಟು ನೂರರಷ್ಟು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಿದ್ಧ ಟಿವಿ ಸೀರಿಯಲ್‌ ಗಳಾದ ‘ಮಾಲ್ಗುಡಿ ಡೇಸ್ ಹಾಗೂ ಇಂದ್ರ ಧನುಷ್’ನಲ್ಲಿಯೂ ಸಹ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿನೆಮಾ ನಿರ್ದೇಶಕರಾಗಿಯೂ ಹೆಸರುವಾಸಿಯಾಗಿರುವ ಕಾರ್ನಾಡರು 1971ರಲ್ಲಿ ನಿರ್ದೇಶಿಸಿದ್ದ ‘ವಂಶವೃಕ್ಷ’ ಕನ್ನಡ ಸಿನೆಮಾದ ನಿರ್ದೇಶನಕ್ಕಾಗಿ ರಾಷ್ಟ್ರೀಯ ಫಿಲಂ ಪ್ರಶಸ್ತಿ ಪುರಸ್ಕೃತವಾಗಿತ್ತು. ಕನ್ನಡದ ಅತ್ಯುತ್ತಮ ಸಿನೆಮಾ ಪ್ರಶಸ್ತಿಯನ್ನೂ ಸಹ ತಮ್ಮದಾಗಿಸಿಕೊಂಡಿತ್ತು. ತದನಂತರ ತಬ್ಬಲಿಯು ನೀನಾದೆ ಮಗನೆ (1977), ಗೋಧೂಳಿ (ಹಿಂದಿ 1977), ಒಂದಾನೊಂದು ಕಾಲದಲ್ಲಿ (1978), ಕಾನೂರು ಹೆಗ್ಗಡತಿ (1999), ಕಾಡು (1973), ಉತ್ಸವ್ (ಹಿಂದಿ 1984) ಚೆಲುವಿ (ಹಿಂದಿ ಮತ್ತು ಕನ್ನಡ 1992), ಚಿದಂಬರ ರಹಸ್ಯ (ಟಿವಿ ಫಿಲಂ).. ಎನ್ನುವ ಕಲಾತ್ಮಕ ಸಿನೆಮಾಗಳನ್ನು ಕಾರ್ನಾಡರು ನಿರ್ದೇಶಿಸಿ ಸಿನೆಮಾ ರಂಗದಲ್ಲೂ ಸಹ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಕಾರ್ನಾಡರು ನಿರ್ದೇಶಿಸಿದ ಕಾಡು, ಒಂದಾನೊಂದು ಕಾಲದಲ್ಲಿ, ತಬ್ಬಲಿಯು ನೀನಾದೆ ಮಗನೆ, ಚೆಲುವಿ, ಕಾನೂರು ಹೆಗ್ಗಡತಿ.. ಹೀಗೆ ಅವರ ಬಹುತೇಕ ಸಿನೆಮಾಗಳೆಲ್ಲಾ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿವೆ. ವಂಶವೃಕ್ಷ, ಕಾಡು, ಒಂದಾನೊಂದು ಕಾಲದಲ್ಲಿ ಈ ಮೂರೂ ಸಿನೆಮಾಗಳ ನಿರ್ದೇಶನಕ್ಕಾಗಿ ಪ್ರತಿಷ್ಠಿತ ಫಿಲಂ ಫೇರ್ ಅವಾರ್ಡ ದೊರಕಿದ್ದು, ಆನಂದ ಭೈರವಿ ಸಿನೆಮಾದಲ್ಲಿ ನಟಿಸಿದ್ದ ಕಾರ್ನಾಡರ ಅತ್ಯತ್ತಮ ನಟನೆಗೆ ಫಿಲಂ ಫೇರ್ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ಸಂಸ್ಕಾರ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪತಿಗಳಿಂದ ಸುವರ್ಣ ಪದಕವನ್ನೂ ಕಾರ್ನಾಡರು ಪಡೆದು ಕರ್ನಾಟಕದ ಗೌರವವನ್ನು ಹೆಚ್ಚಿಸಿದ್ದಾರೆ.

ಯಯಾತಿ ನಾಟಕದಲ್ಲಿ ಕಾರ್ನಾಡರು ಬರೆದ ಈ ಸಂಭಾಷಣೆ ಹೀಗಿದೆ..

“ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸುಗಳಿಲ್ಲದ ದಾರಿಯಲ್ಲಿ ಹೇಗೆ ನಡೆಯಲಿ..”

ಆಧುನಿಕ ಭಾರತೀಯ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ಮುಂದಿನ ಪೀಳಿಗೆಗೆ ತಮ್ಮ ನಾಟಕ ಸಿನೆಮಾಗಳ ಮೂಲಕ ಬೆಳಕನ್ನು ತೋರಿಸುತ್ತಲೇ ಕನಸುಗಳನ್ನು ನನಸಾಗಿಸಲು ಪ್ರೇರಣೆಯೂ ಆಗಿದ್ದಾರೆ. ಅವರ ವೈಯಕ್ತಿಕ ಒಲವು ನಿಲುವುಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಅವರ ಬದುಕು ಹಾಗೂ ಸಾಧನೆಯೇ ಯುವ ರಂಗಪೀಳಿಗೆಗೆ ಮಾರ್ಗದರ್ಶಕವಾಗಿದೆ. ಕಾರ್ನಾಡರು ತೀರಿಕೊಂಡು 2024, ಜೂನ್ 10 ಕ್ಕೆ ಸರಿಯಾಗಿ 5 ವರ್ಷಗಳಾದವು. ರಂಗಭೂಮಿ ಜೀವಂತವಾಗಿರುವವರೆಗೂ ಕಾರ್ನಾಡರು ತಮ್ಮ ನಾಟಕಗಳ ಮೂಲಕ ಜೀವಂತವಾಗಿರುತ್ತಾರೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ-http://“ಬಿಲ್ಲವರು ಕೊಲ್ಲುವವರೂ, ಕೊಲ್ಲಲ್ಪಡುವವರೂ ಅಲ್ಲ. ಈ ನೆಲವನ್ನು ಆಳುವವರು” https://kannadaplanet.com/billavas-are-the-rulers-of-this-land/

More articles

Latest article