ಈಗ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ತನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಬದ್ಧತೆಯಿಂದ ನಿರ್ವಹಿಸಬೇಕಾಗಿದೆ. ಇಡೀ ಸರ್ಕಾರವೇ ಒಗ್ಗಟ್ಟಾಗಿ ನಿಂತು ಈ ಸಮೀಕ್ಷೆಯನ್ನು ಸಮರ್ಥಿಸಿಕೊಳ್ಳ ಬೇಕಾಗಿದೆ. ಕಾಂಗ್ರೆಸ್ ಪಕ್ಷದ ಒಕ್ಕಲಿಗ ಮತ್ತು ಲಿಂಗಾಯಿತ ಪ್ರಭಾವಿ ನಾಯಕರುಗಳೂ ಸೇರಿದಂತೆ ಎಲ್ಲ ವರ್ಗಗಳಿಗೆ ಸೇರಿದ ನಾಯಕರುಗಳು ಜಾತಿವಾದದ ಸಂಕುಚಿತ ಮನೋಭಾವವನ್ನು ತೊರೆದು ಸಮೀಕ್ಷೆಯ ಪರ ನಿಂತು ಹಿಂದುಳಿದ ವರ್ಗಗಳ ಹಿತ ಕಾಪಾಡುವಲ್ಲಿ ತಮ್ಮ ನಿಜ ಕಾಳಜಿಯನ್ನು ಪ್ರದರ್ಶಿಸ ಬೇಕಾಗಿದೆ – ಎನ್ ಆರ್ ವಿಶುಕುಮಾರ್,
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ , ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿದೆ. ರಾಜ್ಯದಲ್ಲಿ ಸುಮಾರು ಎರಡು ಕೋಟಿ ಮನೆಗಳಿವೆ. ಅಂದಾಜು ಏಳು ಕೋಟಿ ಜನಸಂಖ್ಯೆಯಿದೆ. ಸುಮಾರು 1.75 ಲಕ್ಷ ಮಂದಿ ಶಿಕ್ಷಕರನ್ನು ಮತ್ತು ಸರ್ಕಾರೀ ನೌಕರರನ್ನು ಬಳಸಿಕೊಂಡು ಈ ಸಮೀಕ್ಷೆಯಲ್ಲಿ ಪ್ರತೀ ಕುಟುಂಬದ ಮಾಹಿತಿ ಸಂಗ್ರಹಿಸುವ ಮಹಾ ಸಾಹಸಕ್ಕೆ ಸರ್ಕಾರ ಕೈ ಹಾಕಿದೆ. ಪ್ರತಿ ಶಿಕ್ಷಕರಿಗೆ 120 ರಿಂದ 150 ಮನೆಗಳ ಸಮೀಕ್ಷೆಯ ಜವಾಬ್ದಾರಿ ವಹಿಸಲಾಗಿದೆ. ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರ ಗೌರವ ಧನಕ್ಕಾಗಿಯೇ 375 ಕೋಟಿ ರೂಗಳು ವೆಚ್ಚವಾಗಲಿದೆ. ಇದು ಈಗ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬೃಹತ್ ಕಾರ್ಯಾಚರಣೆಯ ಒಂದು ನೋಟ .
ರಾಜ್ಯದ ಪ್ರತಿ ಕುಟುಂಬದ ವಿವರಗಳು , ಕುಟುಂಬದಲ್ಲಿನ ವ್ಯಕ್ತಿಗಳ ಶೈಕ್ಷಣಿಕ ಮಾಹಿತಿ, ಅವರ ಆರ್ಥಿಕ ಸ್ಥಿತಿಗತಿ , ಅವರ ಧರ್ಮ; ಜಾತಿ, ಉಪಜಾತಿ, ಉದ್ಯೋಗ ಮಾಹಿತಿ, ಇತ್ಯಾದಿ 60 ಮಾಹಿತಿಗಳನ್ನು ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುವುದು. ರಾಜ್ಯದ ಜನ ಸಮುದಾಯಗಳ ರಚನೆ, ವಿವಿಧ ಜಾತಿ ವರ್ಗಗಳ ಸಂಯೋಜನೆ ಮತ್ತು ಸರ್ಕಾರದ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಫಲಾನುಭವದ ಖಚಿತ ನೋಟ ಇತ್ಯಾದಿಗಳನ್ನು ವಿಶ್ಲೇಷಣೆ ಮಾಡಲು ಈ ಅಂಕಿ ಅಂಶಗಳು ನೆರವಾಗುತ್ತವೆ. ಅಲ್ಲದೆ ಸರ್ಕಾರದ ಮುಂದಿನ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಈ ಸಮೀಕ್ಷೆಯ ಅಂಕಿ ಅಂಶಗಳು ಅನುಕೂಲಕ್ಕೆ ಬರುತ್ತವೆ .
ಸಾಮಾಜಿಕ ನ್ಯಾಯದ ವಿಷಯದಲ್ಲಿ ಕರ್ನಾಟಕಕ್ಕೆ ತನ್ನದೇ ಆದ ಭವ್ಯ ಪರಂಪರೆಯಿದೆ. ‘ಮನುಷ್ಯ ಜಾತಿ ತಾನೊಂದೇ ವಲಂ ‘ ಎಂದು ಎಂಟನೇ ಶತಮಾನದಲ್ಲಿಯೇ ಸಾರಿದ ಆದಿಕವಿ ಪಂಪನ ನಾಡು ನಮ್ಮದು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ವಚನ ಚಳವಳಿಯ ಮೂಲಕ ಸಮಾನತೆಯ ಕ್ರಾಂತಿಗೆ ಅಡಿಗಲ್ಲು ಹಾಕಿದ ಹಿರಿಮೆ ನಮ್ಮದು. ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೆ ತಂದ ಮಾದರಿ ಮೈಸೂರು ರಾಜ್ಯ ನಮ್ಮದು. ಮುಖ್ಯಮಂತ್ರಿ ದೇವರಾಜ ಅರಸ್ ಅವರ ಆಡಳಿತದಲ್ಲಿ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣ ಎರಡರಲ್ಲೂ ಮೀಸಲಾತಿ ನೀಡಿದ ಗರಿಮೆ ನಮ್ಮದು .
ಸ್ವಾತಂತ್ರ್ಯಾನಂತರ ಮೈಸೂರು ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು 1960 ರಲ್ಲಿ ಮೊಟ್ಟ ಮೊದಲ ಬಾರಿಗೆ ಡಾ. ನಾಗನ ಗೌಡ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿಯು ರಾಜ್ಯದಲ್ಲಿ 399 ಜಾತಿಗಳನ್ನು ಗುರುತಿಸಿ ಹಿಂದುಳಿದ ವರ್ಗಗಳಿಗೆ ಶೇ. 28 ಮತ್ತು ಅತೀ ಹಿಂದುಳಿದ ವರ್ಗಗಳಿಗೆ ಶೇ. 22 ರಷ್ಟು ಮೀಸಲಾತಿ ನಿಗದಿ ಪಡಿಸಿತ್ತು . ಆದರೆ ನಾನಾ ಕಾರಣಗಳಿಂದಾಗಿ ಸುಪ್ರೀಂ ಕೋರ್ಟ್ ನಲ್ಲಿ ಈ ಮೀಸಲಾತಿ ಅನೂರ್ಜಿತವಾಯಿತು. ಇದಾದ ನಂತರ ಬದಲಾದ ಕಾಲಘಟ್ಟ ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಆಯಾ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿರ್ಧರಿಸಲು ರಚಿಸಿದ ವೆಂಕಟಸ್ವಾಮಿ ಆಯೋಗ ಮತ್ತು ಚಿನ್ನಪ್ಪರೆಡ್ಡಿ ಆಯೋಗದ ವರದಿಗಳೂ ಸಹ ಮುಂದುವರಿದ ಜಾತಿಗಳ ಕಟು ವಿರೋಧದಿಂದಾಗಿ ಜಾರಿಯಾಗಲಿಲ್ಲ .
ಹೀಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ಲಾಗಾಯ್ತಿನಿಂದಲೂ ಮೇಲ್ವರ್ಗದವರ ತಕರಾರು ನಡೆಯುತ್ತಲೇ ಬಂದಿದೆ . ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಲೆಸ್ಲಿ ಮಿಲ್ಲರ್ ಸಮಿತಿಯ ವರದಿ ಜಾರಿಗೊಳಿಸುವ ವಿಷಯದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಭಿನ್ನಾಭಿಪ್ರಾಯ ತಳೆದು ತಮ್ಮ ದಿವಾನಗಿರಿಗೇ ರಾಜೀನಾಮೆ ನೀಡಿದರು . ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶ್ವೇಶ್ವರಯ್ಯನವರ ರಾಜಿನಾಮೆಗೆ ಮಣಿಯದೆ ತಮ್ಮ ಸಾಮಾಜಿಕ ನ್ಯಾಯದ ಬದ್ದತೆ ಮೆರೆದು ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಿದರು. ಸ್ವಾತಂತ್ರ್ಯಾನಂತರದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಎಪ್ಪತ್ತರ ದಶಕದಲ್ಲಿ ಮೇಲ್ವರ್ಗದ ರಾಜಕೀಯ ಪ್ರತಿರೋಧವನ್ನು ಜಾಣ್ಮೆ ಮತ್ತು ದಿಟ್ಟತನದಿಂದ ಎದುರಿಸಿ ಎಲ್ ಜಿ ಹಾವನೂರ್ ಆಯೋಗದ ವರದಿಯಂತೆ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಿದರು. ಇದಾದ ನಂತರವೂ ಆಯಾ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಮೀಸಲಾತಿ ಗುಂಪುಗಳ ವರ್ಗಿಕರಣ ಮತ್ತು ಮೀಸಲಾತಿ ಪ್ರಮಾಣದಲ್ಲಿ ಸಣ್ಣಪುಟ್ಟ ಸುಧಾರಣೆಗಳನ್ನು ತಂದಿವೆ.
ಹಿಂದುಳಿದ ವರ್ಗಗಳ ನಾಯಕ ಸಿದ್ಧರಾಮಯ್ಯನವರು 2013 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ ಹಿಂದುಳಿದ ವರ್ಗಗಳ ಮೀಸಲಾತಿಗೆ ಹೊಸ ಬಲ ಬಂತು. ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಸಂಕಲ್ಪ ತಳೆಯಿತು. ಈ ನಿಟ್ಟಿನಲ್ಲಿ ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜು ಅವರಿಗೆ ನಿರ್ದೇಶನವನ್ನು ನೀಡಿತು.
ಈಗೀಗ ಸರ್ಕಾರ ರೂಪಿಸುವ ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳು ರಾಜಕೀಯ ಅಧಿಕಾರವನ್ನು ಹಿಡಿಯುವ ಒಂದು ಹುನ್ನಾರವಾಗಿ ರೂಪುಗೊಳ್ಳುತ್ತಿರುವುದು ಹೊಸ ವಿದ್ಯಮಾನವಾಗಿದೆ. ಕೇಂದ್ರ, ರಾಜ್ಯ ಎನ್ನುವ ಬೇಧವಿಲ್ಲದೆ ಎರಡೂ ಇದೇ ಹಾದಿ ತುಳಿಯುತ್ತಿವೆ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಈ ಮಹತ್ವದ ಸಮೀಕ್ಷೆಯನ್ನು ಸಹ ವಿರೋಧ ಪಕ್ಷಗಳು ಹಿಂದುಳಿದ ವರ್ಗಗಳ ಓಟು ಒಗ್ಗೂಡಿಸುವ ಕಾರ್ಯಕ್ರಮ ಎಂದೇ ಟೀಕಿಸಿದವು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಎಷ್ಟೇ ಬಣ್ಣಿಸಿದರೂ ವಿರೋಧ ಪಕ್ಷಗಳು ಅದನ್ನು ಧನಾತ್ಮಕವಾಗಿ ಸ್ವೀಕರಿಸಲೇ ಇಲ್ಲ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಕೂಡಾ ಈ ಸಮೀಕ್ಷೆಯ ಪರ ಒಗ್ಗಟ್ಟಾಗಿ ನಿಂತು ಅದನ್ನು ಸಮರ್ಥಿಸಿಕೊಳ್ಳುವ ಕಾರ್ಯವನ್ನು ಗಟ್ಟಿಯಾಗಿ ಮಾಡಲಿಲ್ಲ. ಹೀಗಾಗಿ ಸಾಮಾನ್ಯ ಜನರನ್ನು ಒಳಗೊಂಡಂತೆ ಮಾಧ್ಯಮಗಳು ಈ ಸಮೀಕ್ಷೆಯನ್ನು ಒಂದು ಮಾಮೂಲಿ ಜಾತಿಗಣತಿ ಕಾರ್ಯಕ್ರಮ ಎಂದೇ ಬಿಂಬಿಸಿದವು .
ಈ ಎಲ್ಲ ಬೆಳವಣಿಗೆಗಳ ನಡುವೆ ಎಚ್ ಕಾಂತರಾಜು ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸುಮಾರು 165 ಕೋಟಿ ರೂಗಳ ವೆಚ್ಚದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುತುವರ್ಜಿಯಿಂದ ನಿರ್ವಹಿಸಿ ಅಂಕಿ ಅಂಶಗಳನ್ನು ಸಂಗ್ರಹಿಸಿತು. ಆದರೆ ಈ ಸಮೀಕ್ಷಾ ವರದಿ ಸಿದ್ಧವಾಗುತ್ತಿದ್ದ ವೇಳೆಗೆ 2018 ರ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿತ್ತು. ಹೀಗಾಗಿ ಅಪೂರ್ಣವಾಗಿದ್ದ ಈ ಸಮೀಕ್ಷಾ ವರದಿ ಸಿದ್ಧರಾಮಯ್ಯನವರ ಅವಧಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಲಿಲ್ಲ .
ರಾಜ್ಯದಲ್ಲಿ 2018 ರ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರ ಎಚ್ ಡಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ಆ ವೇಳೆಗೆ ಈ ಸಮೀಕ್ಷಾ ವರದಿಯಲ್ಲಿ ಹಿಂದುಳಿದ ವರ್ಗಗಳಿಗೆ ತುಂಬಾ ಅನುಕೂಲವಾಗುವ ಹಾಗೂ ಮುಂದುವರಿದ ಜಾತಿಗಳಿಗೆ ಹಿತಕಾರಿಯಾಗಿಲ್ಲದಿರುವ ಕೆಲವಾರು ಅಂಶಗಳಿವೆ ಎನ್ನುವ ಗುಸುಗುಸು ಸುದ್ದಿ ರಾಜಕೀಯದ ಉನ್ನತ ವಲಯಗಳಲ್ಲಿ ಸುಳಿದಾಡುತ್ತಿತ್ತು . ಹೀಗಾಗಿ ಮುಂದುವರಿದ ಜಾತಿಗಳ ಪ್ರತಿರೋಧ ಕಟ್ಟಿಕೊಳ್ಳಲು ಬಯಸದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸ್ವೀಕರಿಸುವ ಗೊಡವೆಗೇ ಹೋಗಲಿಲ್ಲ. ನಂತರ ಆಪರೇಷನ್ ಕಮಲದ ಮೂಲಕ ಮುಖ್ಯಮಂತ್ರಿಯಾದ ಬಿಜೆಪಿಯ ಬಿ ಎಸ್ ಯಡಿಯೂರಪ್ಪನವರು ಸಹ ಇದೇ ಕಾರಣದಿಂದಾಗಿ ಸಮೀಕ್ಷಾ ವರದಿಯ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ.
ಹೀಗೆ ರಾಜಕೀಯ ನಾಯಕರುಗಳ ಅವಜ್ಞೆಗೆ ತುತ್ತಾಗಿ ಮೂಲೆಗುಂಪಾಗಿದ್ದ ಈ ಸಮೀಕ್ಷಾ ವರದಿಗೆ ಸಿದ್ದರಾಮಯ್ಯನವರು 2023 ರಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ತುಸು ಚಾಲನೆ ಸಿಕ್ಕಿದೆ. ಈ ಹಿಂದೆ ಕಾಂತರಾಜ ಆಯೋಗ ಸಿದ್ಧಪಡಿಸಿದ್ದ ವರದಿಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆಯವರು ತುಸು ಪರಿಶ್ರಮ ವಹಿಸಿ ಪರಿಷ್ಕೃತಗೊಳಿಸಿ ಸಿದ್ಧಪಡಿಸಿದ್ದರು. ತಾವೇ ಮುತುವರ್ಜಿ ವಹಿಸಿ ಮಾಡಿಸಿದ್ದ ಈ ಸಮೀಕ್ಷಾ ವರದಿಯನ್ನು ಸಿದ್ದರಾಮಯ್ಯನವರು ಈಗ 2025 ರಲ್ಲಿ ಸ್ವೀಕರಿಸಿ ಸಚಿವ ಸಂಪುಟದ ಮುಂದೆ ಮಂಡಿಸಿ ಪ್ರಾಥಮಿಕ ಚರ್ಚೆಯನ್ನೂ ನಡೆಸಿ ವರದಿಯನ್ನು ಅಂಗೀಕರಿಸುವ ಇಂಗಿತವನ್ನೂ ಸಹ ವ್ಯಕ್ತ ಪಡಿಸಿದ್ದರು.
ಸಚಿವ ಸಂಪುಟದ ಮುಂದೆ ಮಂಡನೆಯಾಗಿದ್ದ ಈ ಸಮೀಕ್ಷಾ ವರದಿಯ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಭಿನ್ನ ಅಭಿಪ್ರಾಯಗಳಿವೆ. ವರದಿಯಲ್ಲಿ ಉಲ್ಲೇಖಿಸಿರುವ ವಿವಿಧ ಜಾತಿಗಳ ಜನಸಂಖ್ಯೆಯ ಬಗ್ಗೆ ಗೊಂದಲಗಳಿವೆ. ಇನ್ನೂ ಆಘಾತಕಾರಿ ಅಂಶವೆಂದರೆ; ಲಿಂಗಾಯಿತ ಮತ್ತು ಒಕ್ಕಲಿಗರ ಪ್ರಮುಖ ಕಾಂಗ್ರೆಸ್ ನಾಯಕರುಗಳು ಈ ಸಮೀಕ್ಷೆಯ ವಿಶ್ವಾಸಾರ್ಹತೆಯ ಬಗ್ಗೆ ತಮ್ಮ ಪಕ್ಷದ ಒಳ ವೇದಿಕೆಗಳಲ್ಲಿ ತಮ್ಮ ಸಮುದಾಯದ ಜನಸಂಖ್ಯೆ ಕಡಿಮೆಯಾಗಿ ಬಿಂಬಿತವಾಗಿದೆ ಇದಕ್ಕೆ ವ್ಯತಿರಿಕ್ತವಾಗಿ ಹಿಂದುಳಿದ ಜಾತಿಗಳ ಜನಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಅಂಶಗಳೇ ಈಗ ವಿವಾದದ ಪ್ರಧಾನ ಕೇಂದ್ರಗಳಾಗಿವೆ.
ಈಗ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ (ಅನಧಿಕೃತ ಮಾಹಿತಿಗಳ ಪ್ರಕಾರ) ರಾಜ್ಯದ ಒಟ್ಟು 5. 98 ಕೋಟಿ ಜನರ ಸಮೀಕ್ಷೆಯನ್ನು ನಡೆಸಲಾಗಿದೆ ಎನ್ನುವ ಮಾಹಿತಿಯಿದೆ. ಈ ಒಟ್ಟು ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇಕಡಾ 70 ರಷ್ಟು ಅಂದರೆ ಸುಮಾರು 4.16 ಕೋಟಿ ಇದೆ ಎನ್ನುವ ಮಾಹಿತಿಯಿದೆ. ಹಾಗೆಯೇ ಲಿಂಗಾಯಿತರ ಜನಸಂಖ್ಯೆ ಶೇ. 11 ರಷ್ಟು ಅಂದರೆ ಸುಮಾರು 81.36 ಲಕ್ಷದಷ್ಟು ಮತ್ತು ಒಕ್ಕಲಿಗರ ಜನಸಂಖ್ಯೆ ಶೇ. 10.29 ರಷ್ಟು ಅಂದರೆ ಸುಮಾರು 73 ಲಕ್ಷದಷ್ಟು ಇದೆ ಎನ್ನುವ ಮಾಹಿತಿಯಿದೆ. ಪ್ರಸ್ತುತ ಹಿಂದುಳಿದ ವರ್ಗಗಳಿಗೆ ಈಗ ಶೇ. 32 ರಷ್ಟು ಪ್ರಮಾಣದ ಮೀಸಲಾತಿಯನ್ನು ನೀಡಲಾಗುತ್ತಿದೆ. ಈಗಿನ ಸಮೀಕ್ಷಾ ವರದಿಯಲ್ಲಿರುವಂತೆ ಹಿಂದುಳಿದ ವರ್ಗದ ಶೇ. 70 ರಷ್ಟು ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿಯನ್ನು ಮತ್ತಷ್ಟು ಹೆಚ್ಚಿಸ ಬೇಕು ಎನ್ನುವ ಶಿಫಾರಸ್ಸು ಸಹ ಈ ಸಮೀಕ್ಷಾ ವರದಿಯಲ್ಲಿದೆ ಎನ್ನುವ ಸುದ್ದಿಯೂ ಸುಳಿದಾಡುತ್ತಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾವು ಸಾಮಾಜಿಕ ನ್ಯಾಯದ ಪರವಾಗಿ ಎಷ್ಟೇ ಮಾತಾಡಿದರೂ ನೆಲದ ವಾಸ್ತವ ಸಂಗತಿಗಳು ಬೇರೆಯೇ ಇರುತ್ತವೆ. ಮುಂದುವರಿದ ಜಾತಿಗಳಿಗೆ ಹಿತಕಾರಿಯಾಗಿಲ್ಲದಿರುವ ಅಂಶಗಳನ್ನು ಒಳಗೊಂಡಿರುವ ವರದಿಯನ್ನು ಸರ್ಕಾರ ಒಪ್ಪಿಕೊಂಡರೆ ಸಹಜವಾಗಿಯೇ ಮುಂದುವರಿದ ಜನರ ಕೋಪಕ್ಕೆ ತುತ್ತಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎನ್ನುವ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಲಿಂಗಾಯಿತ ಮತ್ತು ಒಕ್ಕಲಿಗ ಪ್ರಭಾವಿ ನಾಯಕರುಗಳು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿ ಹತ್ತು ವರ್ಷಗಳಷ್ಟು ಹಿಂದಿನ ಅಂಕಿ ಅಂಶಗಳನ್ನು ಒಳಗೊಂಡಿರುವ ಈ ಸಮೀಕ್ಷಾ ವರದಿಯನ್ನು ಕೈ ಬಿಟ್ಟು ಹೊಸದಾಗಿ ಸಮೀಕ್ಷೆ ಮಾಡುವಂತೆ ಸಿದ್ಧರಾಮಯ್ಯನವರಿಗೆ ಸೂಚನೆ ನೀಡಿಸಿ ಸ್ವಲ್ಪ ನಿರಾಳವಾಗಿದ್ದಾರೆ .
ಈಗ ಹೈಕಮಾಂಡ್ ಸೂಚನೆಯಂತೆ ರಾಜ್ಯದಲ್ಲಿ ಹೊಸ ಸಮೀಕ್ಷೆ ಆರಂಭವಾಗಿದೆ. ಆದರೆ ಈ ಸಮೀಕ್ಷೆಯ ಬಗ್ಗೆ ಈಗಲೂ ಕಾಂಗ್ರೆಸ್ ಪಕ್ಷದಲ್ಲಿನ ಲಿಂಗಾಯಿತ ಮತ್ತು ಒಕ್ಕಲಿಗ ನಾಯಕರುಗಳಿಗೇ ಅಂತಹ ಒಲವೇನೂ ಇಲ್ಲ. ಆದರೆ ತಮ್ಮ ನಾಯಕ ರಾಹುಲ್ ಗಾಂಧಿಯವರೇ ಬಿಹಾರದ ಚುನಾವಣೆ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ಹಿಂದುಳಿದ ಜಾತಿಯ ಜನಗಣತಿ ಆಗಲೇ ಬೇಕೆಂದು ರಾಷ್ಟ್ರ ಮಟ್ಟದಲ್ಲಿ ಜೋರು ದನಿಯಲ್ಲಿ ಮಾತಾಡುತ್ತಿರುವುದರಿಂದ ಈ ನಾಯಕರುಗಳ ಬಾಯಿ ಸಧ್ಯಕ್ಕೆ ಕಟ್ಟಿ ಹಾಕಿದಂತಾಗಿದೆ .
ಇನ್ನು ಇತ್ತ ಕಡೆ ನೋಡಿದರೆ ಬಿಜೆಪಿ ಪಕ್ಷಕ್ಕೆ ಇಂಥ ಮೀಸಲಾತಿ ವಿಷಯಗಳೇ ಪಥ್ಯವಾಗುವುದಿಲ್ಲ. ಮುಂದುವರಿದ ಜಾತಿಗಳ ಹಿತವನ್ನೇ ಹೊತ್ತುಕೊಂಡು ಮೆರೆಯುತ್ತಿರುವ ಹಾಗೂ ಕೋಮುವಾದವನ್ನೇ ಉಸಿರಾಡುತ್ತಿರುವ ಬಿಜೆಪಿ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಾರಾಸಗಟಾಗಿ ವಿರೋಧಿಸುತ್ತಿದೆ. ವಿರೋಧ ಪಕ್ಷದ ನಾಯಕ ಬಿಜೆಪಿಯ ಆರ್ ಅಶೋಕ್ ‘ಇದು ಜಾತಿ ಗಣತಿ ಮೂಲಕ ತನ್ನ ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಗಟ್ಟಿಗೊಳಿಸಿ ಕೊಳ್ಳಲು ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ರಾಜಕೀಯ ಹುನ್ನಾರ. ಇದು ‘ ಸಿದ್ಧರಾಮ ಗಣತಿ ‘ ಎಂದು ಲೇವಡಿ ಮಾಡುತ್ತಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಂತೂ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನೇ ಜನರು ಬಹಿಷ್ಕರಿಸ ಬೇಕು ಎನ್ನುವ ಹೊಣೆಗೇಡಿ ಹೇಳಿಕೆ ನೀಡಿ ತಮ್ಮ ಅಪ್ರಬುದ್ದತೆ ಪ್ರದರ್ಶಿಸಿದ್ದಾರೆ.
ಅತ್ತ, ಇನ್ನೊಂದು ಕಡೆ ಸಾಮಾಜಿಕ ನ್ಯಾಯದ ಬಗ್ಗೆ ಅಂತರಂಗದಲ್ಲಿ ಕುದಿಯಿಟ್ಟು ಕೊಂಡಿರುವ ಬ್ರಾಹ್ಮಣ ಮಹಾಸಭಾದಂತಹ ಸನಾತನಿಗಳು ಕೋರ್ಟ್ ಮೆಟ್ಟಿಲು ಹತ್ತಿ ಈ ಸಮೀಕ್ಷೆಗೆ ತಡೆಯೊಡ್ಡುವ ಹುನ್ನಾರ ನಡೆಸಿದ್ದಾರೆ. ಆದರೆ ಸಂವಿಧಾನ ಬದ್ಧವಾಗಿರುವ ಈ ಸಮೀಕ್ಷೆಗೆ ನ್ಯಾಯಾಲಯ ತಡೆ ನೀಡಲು ಹಿಂಜರಿದಿದೆ. ಆದರೂ ಜನರು ಬೇಕಿದ್ದರೆ ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಬಹುದು. ಆದರೆ ಮಾಹಿತಿಯನ್ನು ನೀಡಲೇ ಬೇಕೆಂದು ಆದೇಶ ಹೊರಡಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎನ್ನುವ ಅಡ್ಡ ಹೇಳಿಕೆಯನ್ನು ನೀಡಿದೆ. ನಿಜವಾಗಿ ನೋಡಿದರೆ ಸಂವಿಧಾನ ಬದ್ಧವಾದ ಈ ಸಮೀಕ್ಷೆಗೆ ಉತ್ತೇಜನ ನೀಡಿ, ನ್ಯಾಯಾಲಯದ ಮೆಟ್ಟಿಲು ಹತ್ತಿರುವವರಿಗೆ ಮುಖಭಂಗವಾಗುವಂಥ ತೀರ್ಪನ್ನು ನ್ಯಾಯಾಲಯ ನೀಡಬೇಕಾಗಿತ್ತು. ಆದರೆ ಜಾತಿವಾದಿ ವ್ಯವಸ್ಥೆಯಲ್ಲಿ ಸಿಲುಕಿ ನರಳುತ್ತಿರುವ ನಮ್ಮ ನ್ಯಾಯಾಂಗ ವ್ಯವಸ್ಥೆಯೂ ಸಹ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ವಿಷಯದಲ್ಲಿ ಸ್ವಲ್ಪ ಪಕ್ಷಪಾತಿಯಾಗಿ ಸನಾತನವಾದಿಗಳ ಸೊಕ್ಕು ಮುರಿಯುವಲ್ಲಿ ಹಿಂದೇಟು ಹಾಕಿದೆ.
ಸಾಮಾಜಿಕ ನ್ಯಾಯ ವಿತರಣೆಯ ವಿಷಯದಲ್ಲಿ ಒಂದು ಕಾಲಕ್ಕೆ ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದಲ್ಲಿ ಈಗ ಮೀಸಲಾತಿ ವಿಷಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಆಘಾತಕಾರಿಯಾಗಿವೆ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ಎಲ್ಲ ಪಕ್ಷಗಳಲ್ಲಿರುವ ಮುಂದುವರಿದ ಜಾತಿವಾದಿ ನಾಯಕರುಗಳಿಗೆ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಉದಾರ ಮನಸ್ಥಿತಿಯೇ ಇಲ್ಲ. ಇವರೆಲ್ಲರೂ ತಮ್ಮ ತಮ್ಮ ಜಾತಿಯ ಹಿತವನ್ನು ಮಾತ್ರ ರಕ್ಷಿಸಿ ಕೊಳ್ಳುವುದಷ್ಟೇ ನಮ್ಮ ಕೆಲಸ ಎಂದು ನಂಬಿದ್ದಾರೆ. ಹಿಂದುಳಿದ ವರ್ಗಗಳ ನಾಯಕರೂ ಈ ಚಾಳಿಯಿಂದ ಹೊರತಾಗಿಲ್ಲ. ಅವರಿಗೂ ಅಷ್ಟೇ. ಅವರವರ ಜಾತಿ, ಉಪಜಾತಿಯ ಹಿತ ಕಾಪಾಡುವುದಷ್ಟೇ ಮುಖ್ಯವಾಗಿದೆ. ಒಟ್ಟಾರೆಯಾಗಿ ಜನ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕು. ದುರ್ಬಲ ವರ್ಗಗಳಿಗೆ ಶಕ್ತಿ ತುಂಬ ಬೇಕು ಎನ್ನುವ ವಿಶಾಲ ಮನಸ್ಥಿತಿಯ ರಾಜಕೀಯ ನಾಯಕರುಗಳೇ ಈಗ ನಮ್ಮ ನಡುವೆ ಇಲ್ಲವೇ ಇಲ್ಲ .
ಸ್ವಲ್ಪ ಎತ್ತರದ ಮಟ್ಟದ ಚಿಂತನೆಯಲ್ಲಿ ನಿಂತು ಹೇಳುವುದಾದರೆ-
ಪ್ರತಿ ಹತ್ತು ವರ್ಷಕ್ಕೊಮ್ಮೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವುದು ಸಂವಿಧಾನದ ಬದ್ಧ ವಿಚಾರವಾಗಿದೆ. ಆದರೆ ನಮ್ಮ ಇವತ್ತಿನ ಬಹುತೇಕ ರಾಜಕೀಯ ನಾಯಕರುಗಳು ಮತ್ತು ರಾಜಕಾರಣಿಗಳಿಗೆ ಇವೆಲ್ಲ ವಿಷಯಗಳು ಅರ್ಥವೇ ಆಗುವುದಿಲ್ಲ. ಇಂಥ ರಾಜಕೀಯ ನಾಯಕರುಗಳ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವರ ಇತಿಮಿತಿಗಳ ನಡುವೆ ಕೂಡಾ ಸಂವಿಧಾನ, ಕಾನೂನು ಕಟ್ಟಳೆಗಳಿಗೆ ಗೌರವ ನೀಡುವ ಮತ್ತು ಅವುಗಳಿಗೆ ಮಾನ್ಯತೆ ನೀಡಿ ನಡೆಯುವ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಇಂಥ ಸಂಕ್ರಮಣ ಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳನ್ನು ಗೌರವಿಸುವ ಪ್ರಜೆಗಳೆಲ್ಲರೂ ಈ ಸಮೀಕ್ಷೆಯ ವಿಷಯದಲ್ಲಿ ಅವರಿಗೆ ಪೂರ್ಣ ನೈತಿಕ ಬೆಂಬಲ ನೀಡಿ ಸಮೀಕ್ಷೆ ಯಶಸ್ವಿಯಾಗಿ ನಡೆಯಲು ಒತ್ತಾಸೆಯಾಗಿ ನಿಲ್ಲಬೇಕಿದೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವಿಷಯದಲ್ಲಿ ಈಗ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ತನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಬದ್ಧತೆಯಿಂದ ನಿರ್ವಹಿಸಬೇಕಾಗಿದೆ. ಇಡೀ ಸರ್ಕಾರವೇ ಒಗ್ಗಟ್ಟಾಗಿ ನಿಂತು ಈ ಸಮೀಕ್ಷೆಯನ್ನು ಸಮರ್ಥಿಸಿಕೊಳ್ಳ ಬೇಕಾಗಿದೆ. ಕಾಂಗ್ರೆಸ್ ಪಕ್ಷದ ಒಕ್ಕಲಿಗ ಮತ್ತು ಲಿಂಗಾಯಿತ ಪ್ರಭಾವಿ ನಾಯಕರುಗಳೂ ಸೇರಿದಂತೆ ಎಲ್ಲ ವರ್ಗಗಳಿಗೆ ಸೇರಿದ ನಾಯಕರುಗಳು ಜಾತಿವಾದದ ಸಂಕುಚಿತ ಮನೋಭಾವವನ್ನು ತೊರೆದು ಸಮೀಕ್ಷೆಯ ಪರ ನಿಂತು ಹಿಂದುಳಿದ ವರ್ಗಗಳ ಹಿತ ಕಾಪಾಡುವಲ್ಲಿ ತಮ್ಮ ನಿಜ ಕಾಳಜಿಯನ್ನು ಪ್ರದರ್ಶಿಸ ಬೇಕಾಗಿದೆ.
ಈಗಾಗಲೇ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅನಧಿಕೃತ ಅಂಕಿ ಅಂಶಗಳನ್ನು ಗಮನಿಸಿದರೆ ಈಗ ಸರ್ಕಾರ ಕೈಗೆತ್ತಿಕೊಂಡಿರುವ ಹೊಸ ಸಮೀಕ್ಷೆಯಲ್ಲಿ ಗಣನೀಯ ಭಿನ್ನ ಫಲಿತಾಂಶ ಹೊರಬರುವ ಸಾಧ್ಯತೆ ಬಹಳ ಕಡಿಮೆಯಿದೆ. ಹೊಸ ಸಮೀಕ್ಷೆಯಲ್ಲಿ ಜನಸಂಖ್ಯಾ ಅಂಕಿ ಅಂಶಗಳು ಏಳೆಂಟು ಲಕ್ಷ ಆಚೀಚೆ ಆಗಬಹುದು. ಇದು ಅಂಥ ಭಾರಿ ವ್ಯತ್ಯಾಸವೇನೂ ಆಗುವುದಿಲ್ಲ. ಹೊಸ ಸಮೀಕ್ಷೆಯು ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ದೊರೆಯಲಿದೆ ಎಂದು ಸರ್ಕಾರ ಹೇಳುತ್ತಿದೆ .
ಈ ಹಿನ್ನೆಲೆಯಲ್ಲಿ 94 ವರ್ಷಗಳ ನಂತರ ನಡೆಯುತ್ತಿರುವ ಜಾತಿಗಣತಿಯನ್ನೂ ಒಳಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಜನಪರ ನಿಲುವಿರುವ ಎಲ್ಲರೂ ಬೆಂಬಲಿಸಲೇ ಬೇಕು . ಈ ಸಮೀಕ್ಷಾ ವರದಿಯಿಂದ ಒಂದು ವೈಜ್ಞಾನಿಕವಾದ ಜಾತಿಗಣತಿಯ ಮಾಹಿತಿ ರಾಜ್ಯಕ್ಕೆ ದೊರಕುತ್ತದೆ. ಈ ಮಾಹಿತಿಯನ್ನು ಆಧರಿಸಿ ಸರ್ಕಾರ ಮತ್ತು ಜನತೆ ಒಗ್ಗೂಡಿ ಭವಿಷ್ಯ ಕರ್ನಾಟಕದ ಅಭಿವೃದ್ಧಿಯ ನೀತಿ ನಿಲುವುಗಳನ್ನು ನಿರೂಪಿಸುವ ಹೊಣೆಗಾರಿಕೆಯನ್ನು ನಿರ್ವಹಿಸ ಬೇಕಾಗಿದೆ.
ಎನ್ ಆರ್ ವಿಶುಕುಮಾರ್
ಇವರು ಕನ್ನಡ ನಾಡಿನ ಸಾಂಸ್ಕೃತಿಕ ವಲಯ, ಸುದ್ದಿ ಮಾಧ್ಯಮ ಹಾಗೂ ಆಡಳಿತ ಕ್ಷೇತ್ರದಲ್ಲಿ ಹೆಸರಾದವರು.
ಇದನ್ನೂ ಓದಿ- ಮತ್ತೆ ಜಾತಿಗಣತಿ ಸಮೀಕ್ಷೆ; ಈಡೇರಲಿ ಸಾಮಾಜಿಕ ನ್ಯಾಯದ ನಿರೀಕ್ಷೆ