Sunday, September 8, 2024

ನವ ಉದಾರವಾದದ ಛಾಯೆಯಲ್ಲಿ ಸಾಮಾಜಿಕ ನ್ಯಾಯ

Most read

ಸಾರ್ವಜನಿಕ ಬಂಡವಾಳ ಹೂಡಿಕೆಯ ಹಾದಿಯಿಂದ ಸಂಪೂರ್ಣವಾಗಿ ವಿಮುಖವಾಗುವ ಲಕ್ಷಣಗಳೊಂದಿಗೇ ರಾಜ್ಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ʼಆಸ್ತಿ ನಗದೀಕರಣʼ ಪ್ರಕ್ರಿಯೆಗೂ ಒಲವು ತೋರಿರುವುದು, ಆರ್ಥಿಕತೆಯ ಮೇಲೆ ಕಾರ್ಪೋರೇಟ್‌ ಮಾರುಕಟ್ಟೆಯ ಬಿಗಿ ಹಿಡಿತವನ್ನು ತೋರಿಸುತ್ತದೆ – ನಾ ದಿವಾಕರ, ಚಿಂತಕರು 

ಬದಲಾಗುತ್ತಿರುವ ಭಾರತದಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ ಎಲ್ಲ ಮುಖ್ಯವಾಹಿನಿ ಪಕ್ಷಗಳಲ್ಲೂ ಕಾಣಬಹುದಾದ ಸಮಾನ ಎಳೆ ಎಂದರೆ ನವ ಉದಾರವಾದ-ಬಂಡವಾಳಶಾಹಿ-ಕಾರ್ಪೋರೇಟ್‌ ಮಾರುಕಟ್ಟೆಯ ಬಗ್ಗೆ ಇರುವ ಧೋರಣೆ ಮತ್ತು ಒಲವು. ಕೇಂದ್ರ ಹಾಗೂ ರಾಜ್ಯ ವಾರ್ಷಿಕ ಬಜೆಟ್‌ಗಳನ್ನು ಒಳಹೊಕ್ಕು ನೋಡಿದಾಗ ಮಾತ್ರ ಈ ಸೂಕ್ಷ್ಮ ಅರಿವಾಗಲು ಸಾಧ್ಯ. ಕಳೆದ ಚುನಾವಣೆಗಳ ಗೆಲುವಿನ ನಂತರ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಆರಂಭದಲ್ಲಿ ಲೇವಡಿ ಮಾಡಲಾದರೂ, 2024ರ ಮಹಾ ಚುನಾವಣೆಗಳಿಗೆ ಮುನ್ನ ʼ ಗ್ಯಾರಂಟಿ ʼ ಎನ್ನುವುದು ಒಂದು ಯುದ್ಧಘೋಷದಂತೆ ಕೇಳಿಬರುತ್ತಿದೆ. ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿರುವ ದೇಶದ ತಳಸಮಾಜದ ಅಸಂಖ್ಯಾತ ಜನತೆಗೆ ಜೀವನೋಪಾಯದ ಮಾರ್ಗವನ್ನು ಕೊಂಚಮಟ್ಟಿಗಾದರೂ ಸುಗಮಗೊಳಿಸುವ ಈ ಯೋಜನೆಗಳು ಜನಕಲ್ಯಾಣ ಯೋಜನೆಗಳ ಮತ್ತೊಂದು ಸ್ವರೂಪವಾಗಿದ್ದು ಕೇಂದ್ರ ಸರ್ಕಾರವೂ ಇದೇ ಮಾದರಿಯನ್ನು ಅನುಸರಿಸುತ್ತಿದೆ.

ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮಾಸಿಕ ಹತ್ತು ಕಿಲೋ ಅಕ್ಕಿ ನೀಡುವ ಕರ್ನಾಟಕದ ಅನ್ನಭಾಗ್ಯ ಯೋಜನೆಯನ್ನು ಲೇವಡಿ ಮಾಡಿದ ಬಿಜೆಪಿ, ಇದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹುಯಿಲೆಬ್ಬಿಸಿತ್ತು. ಕೇಂದ್ರ ಸರ್ಕಾರವೂ ಸಹ ರಾಜ್ಯಕ್ಕೆ, ಕಿಲೋಗೆ 34 ರೂ ದರದಲ್ಲಿ, ಅಕ್ಕಿ ಪೂರೈಸಲು ನಿರಾಕರಿಸಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಹತ್ತು ಕಿಲೋ ಅಕ್ಕಿಯನ್ನು 29 ರೂಗಳಂತೆ ವಿತರಿಸಲು ಭಾರತ್‌ ರೈಸ್‌ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. 80 ಕೋಟಿ ಜನತೆಗೆ ಮಾಸಿಕ ಐದು ಕಿಲೋ ಪಡಿತರ ನೀಡುವ ಯೋಜನೆಯನ್ನೂ ಕೇಂದ್ರ ಮುಂದುವರೆಸಿದೆ. ಇದು  ತಳಸಮಾಜದ ಸಾಮಾನ್ಯ ಜನತೆಯ ಕೊಳ್ಳುವ ಶಕ್ತಿ ಕುಸಿದಿರುವುದನ್ನು ನೇರವಾಗಿಯೇ ಸೂಚಿಸುತ್ತದೆ. ಕೇಂದ್ರ ಸರ್ಕಾರ ಘೋಷಿಸುತ್ತಿರುವಂತೆ ಭಾರತದ ಆರ್ಥಿಕತೆ ಏರುಗತಿಯಲ್ಲಿರುವುದೇ ಆದರೆ, ಈ ಯೋಜನೆಗಳೇಕೆ ಜಾರಿಯಾಗುತ್ತಿವೆ ?

ಐದು ಟ್ರಿಲಿಯನ್‌ ಆರ್ಥಿಕತೆ ಎಂಬ ಭ್ರಮಾಲೋಕದಲ್ಲಿ ತೇಲುತ್ತಿರುವ ಭಾರತದಲ್ಲಿ ತಾಂಡವಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಮತ್ತು ನಿತ್ಯಜೀವನ ನಿರ್ವಹಣೆಯ ಬವಣೆಯನ್ನು ಅರಿಯಬೇಕಾದರೆ ನೆಲ ನೋಡುತ್ತಾ ನಡೆಯಬೇಕಾಗುತ್ತದೆ. ಸಿದ್ದು ಗ್ಯಾರಂಟಿ, ಮೋದಿ ಗ್ಯಾರಂಟಿ ಎಂಬ ಆಕರ್ಷಕ ಘೋಷಣೆಗಳ ಹಿಂದೆ ಅಡಗಿರುವ ವಾಸ್ತವ ಎಂದರೆ ಭಾರತದ ಶ್ರಮಿಕ ವರ್ಗಗಳಿಗೆ ಬದುಕು ದುಸ್ತರವಾಗುತ್ತಿದೆ.  ಇತ್ತೀಚೆಗೆ ಹಲವು ಭಿನ್ನ ಕಾರಣಗಳಿಗಾಗಿ ʼಮಾದರಿ ರಾಜ್ಯʼ ಎನಿಸಿಕೊಳ್ಳುತ್ತಿರುವ ಉತ್ತರಪ್ರದೇಶದಲ್ಲಿ ಡಿಸೆಂಬರ್‌ 2023ರಂದು ಆರಂಭವಾದ ಪೊಲೀಸ್‌ ನೇಮಕಾತಿ ಪ್ರಕ್ರಿಯೆಯನ್ನು ಗಮನಿಸಿದರೆ ಈ ಸೂಕ್ಷ್ಮದ ಅರಿವಾಗುತ್ತದೆ. ಉತ್ತರಪ್ರದೇಶ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 60,244 ಹುದ್ದೆಗಳಿಗೆ 50 ಲಕ್ಷ ಯುವಕರು ಅರ್ಜಿ ಸಲ್ಲಿಸಿದ್ದಾರೆ. ಮಹಿಳೆಯರಿಗೆ ಮೀಸಲಾಗಿರುವ 12 ಸಾವಿರ ಹುದ್ದೆಗಳಿಗೆ 15 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

ಸಾಮಾನ್ಯ ಜನತೆಯ ಜೇಬಿನಲ್ಲಿ ಹಣದ ಕೊರತೆ ಕಾಣಿಸುವುದೇ ನಿರುದ್ಯೋಗ, ಹಣದುಬ್ಬರ ಮತ್ತು ಬಡತನದ ಸೂಚಕ. ಮಾರುಕಟ್ಟೆ ಸೂಚ್ಯಂಕ, ಜಿಡಿಪಿ ವೃದ್ಧಿ, ಬೆಳವಣಿಗೆಯ ದರ ಮುಂತಾದ ಅಂಕಿಅಂಶಗಳ ಮಂಜಿನ ಪರದೆಯ ಹಿಂದೆ ಅಡಗಿರುವ ಸುಡು ವಾಸ್ತವಗಳನ್ನು ಗಮನಿಸಿದಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ಈ ಪರಿಸ್ಥಿತಿಯನ್ನು ಮನಗಂಡೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಸ್ಪಷ್ಟ. ನವ ಉದಾರವಾದ ತಳಮಟ್ಟದಲ್ಲಿ ಸೃಷ್ಟಿಸುತ್ತಿರುವ ಆರ್ಥಿಕ ಅಸಮಾನತೆ ಎಲ್ಲ ದೇಶಗಳಲ್ಲೂ ಕಂಡುಬರುತ್ತಿದ್ದು ಭಾರತವೂ ಹೊರತಾಗಿಲ್ಲ. ಸಹಜವಾಗಿಯೇ ಬಡತನ ಮತ್ತು ಹಣದ ಕೊರತೆ ತಳಸಮಾಜದಲ್ಲಿ ಉಂಟುಮಾಡುವ ಕ್ಷೋಭೆ ಜನಸಾಮಾನ್ಯರ ಹತಾಶೆ ಮತ್ತು ಆಕ್ರೋಶಗಳಿಗೂ ಕಾರಣವಾಗುತ್ತದೆ. 2024ರ ಅಂದಾಜುಗಳ ಅನುಸಾರ ಈ ವರ್ಷ ನಿರುದ್ಯೋಗ ಪ್ರಮಾಣ ಶೇ 7.38ಕ್ಕೆ ಏರಿಕೆಯಾಗಲಿದೆ. ಅಂದರೆ 40.22 ದಶಲಕ್ಷ ನಿರುದ್ಯೋಗಿಗಳನ್ನು ಕಾಣಬಹುದು.

ಇದನ್ನೂ ಓದಿಅಧಿವೇಶನದಲ್ಲಿ ಬಜೆಟ್ ಮಂಡನೆ; ಹೊರಗೆ ಪ್ರತಿಪಕ್ಷಗಳ ಸಮೂಹ ಗಾನ ಖಂಡನೆ

ವಿಶ್ವದಾದ್ಯಂತ ಆವರಿಸುತ್ತಿರುವ ಆರ್ಥಿಕ ಹಿಂಜರಿತದ ಪರಿಣಾಮ ಐಟಿ ಉದ್ಯಮದಲ್ಲೂ ನೌಕರಿ ಕಡಿತ ಅವ್ಯಾಹತವಾಗಿ ನಡೆಯುತ್ತಿದ್ದು, ಮೈಕ್ರೋಸಾಫ್ಟ್‌, ಆಪಲ್‌, ಅಮೆಜಾನ್‌, ಮೆಟಾ ಮುಂತಾದ ಪ್ರಥಮ ಸ್ತರದ ಕಂಪನಿಗಳಲ್ಲೂ ಸಾವಿರಾರು ನೌಕರರಿಗೆ ಗೇಟ್‌ ಪಾಸ್‌ ನೀಡಲಾಗುತ್ತಿದೆ. ಜಪಾನ್‌ ವಿಶ್ವ ಆರ್ಥಿಕತೆಯಲ್ಲಿ ಮೂರನೆಯ ಸ್ಥಾನಕ್ಕೆ ಕುಸಿದಿದ್ದು, ಬ್ರಿಟನ್‌ನೊಡನೆ ಆರ್ಥಿಕ ಹಿಂಜರಿತ ಎದುರಿಸುತ್ತಿರುವುದನ್ನು ಒಪ್ಪಿಕೊಂಡಿದೆ. 2022 ರಲ್ಲಿ 1,061 ಟೆಕ್ ಕಂಪನಿಗಳು 1,64,769 ಉದ್ಯೋಗಿಗಳನ್ನು ವಜಾಗೊಳಿಸಿದರೆ, 2023 ರಲ್ಲಿ ಅಕ್ಟೋಬರ್‌ವರೆಗೆ 1,059 ಕಂಪನಿಗಳು 240,193 ಕಾರ್ಮಿಕರನ್ನು ವಜಾಗೊಳಿಸಿವೆ. ಕಳೆದ ಎರಡು ವರ್ಷಗಳಲ್ಲಿ ಪ್ರತಿದಿನ ಸರಾಸರಿ 555 ಉದ್ಯೋಗಿಗಳು ಅಥವಾ ಪ್ರತಿ ಗಂಟೆಗೆ 23 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಕೃಷಿ ವಲಯದಲ್ಲಿ ಬಿಕ್ಕಟ್ಟು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ನಗರಗಳಿಗೆ ವಲಸೆ ಹೋಗುವವರ ಪ್ರಮಾಣವೂ ಹೆಚ್ಚಾಗುತ್ತಿದ್ದು ಗ್ರಾಮೀಣ ಪ್ರದೇಶದಲ್ಲೂ ಸಹ ಉದ್ಯೋಗ ಅರಸುವವರ ಸಂಖ್ಯೆ ಏರುಗತಿಯಲ್ಲಿದೆ.

ನರೇಗಾ

2024-25ರ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ನರೇಗಾ ಯೋಜನೆಗೆ 86,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ, ಇದು ಕಳೆದ ಬಜೆಟ್‌  ಹಂಚಿಕೆಗಿಂತ ಸುಮಾರು 43.33% ಹೆಚ್ಚಳವಾಗಿದೆ. ಅಂದರೆ ಹೆಚ್ಚು ಹೆಚ್ಚು ಕಾರ್ಮಿಕರು ನರೇಗಾ ಯೋಜನೆಯನ್ನು ಆಶ್ರಯಿಸುತ್ತಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಯುಪಿಎ ಸರ್ಕಾರದ ಈ ಮಹತ್ತರ ಯೋಜನೆಯನ್ನು ಕಾಂಗ್ರೆಸ್‌ ವೈಫಲ್ಯಗಳ ಜೀವಂತ ಸ್ಮಾರಕ ಎಂದು ಬಣ್ಣಿಸಿದ ಎನ್‌ಡಿಎ ಸರ್ಕಾರ, ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ಈ ಯೋಜನೆಯನ್ನೇ ಅವಲಂಬಿಸಬೇಕಾದ್ದು ಇತಿಹಾಸದ ವ್ಯಂಗ್ಯ ಎನ್ನಬಹುದು. ವರ್ತಮಾನದ ಆರ್ಥಿಕ ಬಿಕ್ಕಟ್ಟಿನಲ್ಲೂ ಸಹ ಈ ಯೋಜನೆಯೇ ತಳಸಮಾಜದ ಸಾಮಾನ್ಯ ಜನತೆಗೆ ಜೀವನೋಪಾಯದ ಮಾರ್ಗವಾಗಿರುವುದು ವಾಸ್ತವ.

ಈ ವಾಸ್ತವಗಳ ನೆಲೆಯಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ವಾರ್ಷಿಕ ಆಯವ್ಯಯ ಪತ್ರವನ್ನು ಗಮನಿಸಬೇಕಿದೆ. ರೈತರು, ಮಹಿಳೆಯರು, ಅಲ್ಪಸಂಖ್ಯಾತರು, ತಳಸಮುದಾಯಗಳು ಹಾಗೂ ಬುಡಕಟ್ಟು ಸಮುದಾಯಗಳಿಗೆ ಪೂರಕವಾದ ಹಲವು ಸಕಾರಾತ್ಮಕ ಅಂಶಗಳನ್ನು ಬಜೆಟ್‌ ಹೊಂದಿರುವುದು ಆಶಾದಾಯಕವಾಗಿ ಕಾಣುತ್ತದೆ. ದೇವದಾಸಿ ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸಹಾಯಧನ ಹಾಗೂ ಅಂಗನವಾಡಿ ನೌಕರರಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸಿರುವುದು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ಒದಗಿಸುವ ಯೋಜನೆಯೂ ಫಲಕಾರಿಯಾಗಲಿದೆ. ಅಲ್ಪಸಂಖ್ಯಾತ-ದಲಿತ ಸಮುದಾಯಗಳಿಗೆ ಅನುದಾನ ಹೆಚ್ಚಿಸಿರುವುದೂ ಸಹ ಶ್ಲಾಘನೀಯ. ಇದರೊಂದಿಗೆ 24 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಚಾರಿತ್ರಿಕ ನಿರ್ಧಾರ ಸ್ವಾಗತಾರ್ಹ. ಆದರೆ ನಿರಂತರ ಸಮಸ್ಯೆ ಎದುರಿಸುತ್ತಿರುವ ಅಸಂಘಟಿತ ಕಾರ್ಮಿಕರು, ಸ್ಕೀಮ್‌ ನೌಕರರು, ಬಿಸಿಯೂಟದ ಕಾರ್ಮಿಕರು, ಆಶಾ-ಅಂಗನವಾಡಿ-ಸಂಜೀವನೀ ನೌಕರರಿಗೆ ವೇತನ ಹೆಚ್ಚಿಸಲು ಸರ್ಕಾರ ಮುಂದಾಗದಿರುವುದು ವಿಷಾದನೀಯ.

ಉತ್ತರ ಪ್ರದೇಶದಲ್ಲಿ ಪೊಲೀಸ್ ನೇಮಕಾತಿ ಪ್ರಕ್ರಿಯೆ

ಪ್ರಾಥಮಿಕ ಹಂತದಲ್ಲಿ ದ್ವಿಭಾಷಾ ಮಾಧ್ಯಮವನ್ನು ಅಳವಡಿಸುವುದರಿಂದ ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸತೊಡಗುತ್ತಾರೆ. ಇದರಿಂದ ಉಸಿರುಗಟ್ಟುತ್ತಿರುವ ಸರ್ಕಾರಿ ಶಾಲೆಗಳು ಭೌತಿಕವಾಗಿ ಉಸಿರಾಡತೊಡಗುತ್ತವೆ. ಕನ್ನಡ ಒಂದು ಔದ್ಯೋಗಿಕ-ಔದ್ಯಮಿಕ ಭಾಷೆಯಾಗಿ ರೂಪುಗೊಳ್ಳದಿರುವ ಕಾರಣ ಆಂಗ್ಲಭಾಷಾ ಕಲಿಕೆ ತಳಸಮುದಾಯದ ಜನತೆಗೆ ಅನಿವಾರ್ಯವಾಗಿರುವುದು ನಿಶ್ಚಿತ. ಆದರೆ ಈ ಉದ್ದೇಶಿತ 2,000 ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಬೋಧಿಸುವ ತರಬೇತಿ ಪಡೆದ ಪರಿಣತ ಶಿಕ್ಷಕರು ನಮ್ಮಲ್ಲಿದ್ದಾರೆಯೇ ? ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಯೊಂದಿಗೆ ಕರ್ನಾಟಕದ ಜನತೆಯ ಜೀವನ-ಜೀವನೋಪಾಯವೂ ಮುಖ್ಯವಾಗುವುದರಿಂದ ಆಂಗ್ಲ ಭಾಷಾ ಕಲಿಕೆ ಇಂದಿನ ಅನಿವಾರ್ಯತೆ ಎನ್ನಬಹುದು. ಈ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಬೋಧನೆಯನ್ನು ಆರಂಭಿಸಿ, ಉಳಿದ ಮಾಧ್ಯಮೇತರ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಜಾರಿಗೊಳಿಸುವ ನೀತಿ ಹೆಚ್ಚು ಉಪಯುಕ್ತವಾಗುತ್ತಿತ್ತು.

ಇದನ್ನೂ ಓದಿ-ಬಜೆಟ್‌ | ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಜೊತೆಜೊತೆಗೆ ಸಾಧಿಸುವಂತಿದೆ

ಎಲ್ಲಕ್ಕಿಂತಲೂ ಮಿಗಿಲಾಗಿ ಸೂಕ್ಷ್ಮವಾಗಿ ಗಮನಿಸಬೇಕಾದ್ದು ನಮ್ಮ ಆಳ್ವಿಕೆಯ ʼಪ್ರಗತಿʼಯ ದೃಷ್ಟಿಕೋನ. ಈ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2024-25ರ ಬಜೆಟ್‌ನಲ್ಲಿ ಆಯೋಜಿಸಲಾಗಿರುವ ಹಲವಾರು ಮೂಲ ಸೌಕರ್ಯದ ಯೋಜನೆಗಳಲ್ಲಿ ಪ್ರಧಾನವಾಗಿ ಪಿಪಿಪಿ ಮಾದರಿಯನ್ನು ಅನುಸರಿಸುವುದಾಗಿ ಘೋಷಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಈ ಯೋಜನೆಗಳು ಅಂತಿಮವಾಗಿ ಬೃಹತ್‌ ಬಂಡವಾಳಿಗರ ಭಂಡಾರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಸಾಧನಗಳಾಗುತ್ತವೆ.  ಪಿಪಿಪಿ ಮಾದರಿಯಲ್ಲಿ ನಿರ್ಮಿಸುವ ಪ್ರತಿಯೊಂದು ಹೆದ್ದಾರಿ, ಮೇಲ್ಸೇತುವೆಯೂ ಕ್ರಮೇಣ ಬಡಜನತೆಯ, ಮಧ್ಯಮ ವರ್ಗಗಳ, ದುಡಿಯುವ ಜನತೆಯ ಪಾಲಿಗೆ “ ಶಾಶ್ವತ ಸುಲಿಗೆಯ ಕೇಂದ್ರ”ಗಳಾಗುತ್ತವೆ.

ಸಾರ್ವಜನಿಕ ಬಂಡವಾಳ ಹೂಡಿಕೆಯ ಹಾದಿಯಿಂದ ಸಂಪೂರ್ಣವಾಗಿ ವಿಮುಖವಾಗುವ ಲಕ್ಷಣಗಳೊಂದಿಗೇ ರಾಜ್ಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ʼಆಸ್ತಿ ನಗದೀಕರಣʼ ಪ್ರಕ್ರಿಯೆಗೂ ಒಲವು ತೋರಿರುವುದು, ಆರ್ಥಿಕತೆಯ ಮೇಲೆ ಕಾರ್ಪೋರೇಟ್‌ ಮಾರುಕಟ್ಟೆಯ ಬಿಗಿ ಹಿಡಿತವನ್ನು ತೋರಿಸುತ್ತದೆ.  ದುಡಿಯುವ ಜನತೆಯ ಬೆವರಿನ ಫಲವಾಗಿ ಸೃಷ್ಟಿಸಲಾಗುವ ಸಾರ್ವಜನಿಕ ಸಂಪತ್ತನ್ನು ಕಾರ್ಪೋರೇಟ್‌ ಮಾರುಕಟ್ಟೆಯ ಜಗುಲಿಯಲ್ಲಿ ಹರಾಜು ಮಾಡುವಾಗ ʼ ಆಸ್ತಿ ನಗದೀಕರಣ ʼ ಎಂಬ ಕಿವಿಗಿಂಪಾದ ಪದವನ್ನು ಬಳಸಲಾಗುತ್ತಿದೆ. ತಮ್ಮ ಜನಕಲ್ಯಾಣ ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜವಾದದ ಚಹರೆಯನ್ನು ಪ್ರದರ್ಶಿಸುತ್ತಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವೂ ಇದೇ ಹಾದಿಯನ್ನು ಅನುಸರಿಸುವುದು, ʼಪ್ರಗತಿ ಅಥವಾ ಅಭಿವೃದ್ಧಿʼಯ ವ್ಯಾಖ್ಯಾನವನ್ನೇ ಬದಲಾಯಿಸಿರುವುದರ ಸಂಕೇತವಾಗಿ ಕಾಣುತ್ತದೆ.

ನಾ ದಿವಾಕರ, ಚಿಂತಕರು

More articles

Latest article