Saturday, May 18, 2024

ವಿಡಂಬನೆ |ಕೋಮುವಾದಿಯಿಂದ ಕವಿತೆಯ ಪಾಠ

Most read

ನೋಡಿ ಮಕ್ಕಳೇ ಸರಿಯಾಗಿ ಎಲ್ಲರೂ ಕೇಸರಿ ಶಾಲನ್ನು ಹಾಕಿಕೊಳ್ಳಿ. ಎಲ್ಲರೂ ನಿಮ್ಮ ಕೈಯಲ್ಲಿ ಭಗವಾದ್ವಜ ಹಿಡಿದುಕೊಳ್ಳಿ. ಯಾವಾಗಲೂ ಎಲ್ಲರೂ ನಿಮ್ಮ ಮನಸಲ್ಲಿ ಜೈಶ್ರೀರಾಂ ಎಂದು ಹೇಳಿಕೊಳ್ಳುತ್ತಾ ಇರಿ. ಹಿಂದೂ ಧರ್ಮ ಉಳಿಯಬೇಕೆಂದರೆ ಇದನ್ನೆಲ್ಲಾ ಮಾಡಲೇಬೇಕು ಆಯ್ತಾ.

ನಾನು ಈ ಕ್ಷೇತ್ರದ ಎಂಎಲ್ಲೆ. ಕೋಮುವಾಧಿ ಕಾಮತ್, ಕೋಮುವ್ಯಾಧಿ ಕಾಮತ್, ಕೋಮುಪೀಡೆ ಕಾಮತ್, ಮತಾಂಧ ಕಾಮತ್, ಧರ್ಮಾಂಧ ಕಾಮತ್.. ಅಂತೆಲ್ಲಾ ನಮ್ಮ ವಿರೋಧಿಗಳು, ಧರ್ಮದ್ರೋಹಿಗಳು, ದೇಶದ್ರೋಹಿಗಳು ನನ್ನನ್ನು ಕರೀತಾರೆ. ಯಾರು ಏನೇ ಅಂದುಕೊಳ್ಳಲಿ ನಾನು ಮಾತ್ರ ಅಪ್ಪಟ ಹಿಂದೂ, ನನ್ನ ಮೈಯಲ್ಲಿ ಹರೀತಿರೋದು ಪಕ್ಕಾ ಹಿಂದುತ್ವದ ರಕ್ತ. ನಾನು ಖಂಡಿತಾ ಭಜರಂಗಿಯ ಮಹಾನ್ ಭಕ್ತ.

ಇವತ್ತು ನಿಮಗೆಲ್ಲಾ ಕವಿತೆಯೊಂದರ ಪಾಠ ಮಾಡಲು ಬಂದಿರುವೆ. ನನ್ನ ವಿರೋಧಿಗಳು ಏಳನೇ ಕ್ಲಾಸಿನ ಪಠ್ಯದಲ್ಲಿರುವ ಟ್ಯಾಗೋರರ ಕವಿತೆಯನ್ನು ಪಾಠ ಮಾಡಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಸವಾಲನ್ನು ಸ್ವೀಕರಿಸಿ ನಿಮಗೆ ಇವತ್ತು ಇಲ್ಲಿ ನಾನು ಪಾಠ ಮಾಡಲು ಬಂದಿದ್ದೇನೆ. ಜೈಶ್ರೀರಾಂ.

ಸಾಂಧರ್ಭಿಕ ಚಿತ್ರ

ಈ ಕವಿತೆಯ ಹೆಸರು “ವರ್ಕ್‌ ಈಸ್ ವರ್ಶಿಪ್”. ಈ ಶೀರ್ಷಿಕೆಯೇ ಆಘಾತಕಾರಿಯಾಗಿದೆ. ಕೆಲಸವೇ ದೇವರು ಅನ್ನೋದೇ ಸರಿಯಲ್ಲ. ಕೆಲಸ ಎಂದರೆ ಕೆಲಸ ಅಷ್ಟೇ. ಯಾರಾದರೂ ಮಾಡುವ ಕೆಲಸಕ್ಕೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿ ದೂಪ ಹಚ್ಚಿ ದೀಪ ಬೆಳಗಲು ಸಾಧ್ಯವೇ? ಸಾಧ್ಯವೇ ಇಲ್ಲ. ಈ ಶೀರ್ಷಿಕೆಯನ್ನು ಬದಲಾಯಿಸಬೇಕಿದೆ. ಇದನ್ನು “ಪ್ರೇಯರ್ ಈಸ್ ವರ್ಶಿಪ್ ಅಂದರೆ ಪ್ರಾರ್ಥನೆಯೇ ದೇವರು” ಅಂತಾ ನಿಮ್ಮ ಪುಸ್ತಕಗಳಲ್ಲಿ ಈಗಲೇ ತಿದ್ದುಪಡಿ ಮಾಡಿಕೊಳ್ಳಿ. ಇನ್ನು ಕವಿತೆಗೆ ಬರೋಣ. ಈ ಕವಿತೆ ಏನು ಹೇಳುತ್ತದೆ ಅಂದರೆ..

“ಮಂತ್ರ ಪಠಣಗಳನ್ನು ತೊರೆದು ಬಿಡು

ದೇವರು ಮಂದಿರಗಳಲಿಲ್ಲ ಕಣ್ಣು ತೆರೆದು ನೋಡು”

ನಾನ್ಸೆನ್ಸ್. ದೇವರು ದೇವಸ್ಥಾನಗಳಲ್ಲಿ ಇಲ್ಲದೆ ಕಂಬಗಳಲ್ಲಿ ಇಲ್ಲವೇ ಮಲಗುವ ದಿಂಬುಗಳಲ್ಲಿ ಇರಲು ಸಾಧ್ಯವೇ.? ದೇವರನ್ನು ಮೆಚ್ಚಿಸಬೇಕೆಂದರೆ ಪೂಜಾರಿಗಳಿಂದ ಮಂತ್ರ ಹೇಳಿಸಲೇ ಬೇಕಲ್ಲವೇ? ಮಂತ್ರ ಹೇಳೋದನ್ನ ಬಿಟ್ಟರೆ ಪುರೋಹಿತರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗುತ್ತದೆ ಅಲ್ಲವೇ? ಯಾರಾದರೂ ಹೀಗೆಲ್ಲಾ ಕವಿತೆ ಬರೆಯುತ್ತಾರಾ? ಇದನ್ನು ನಾನು ವಿರೋಧಿಸಿತ್ತೇನೆ. ಖಂಡಿತಾ ಖಂಡಿಸುತ್ತೇನೆ. ಮಕ್ಕಳೇ ನಾನು ಹೇಳಿದ ಹಾಗೆ ತಿದ್ದುಪಡಿ ಮಾಡಿಕೊಳ್ಳಿ.

“ಸುಮ್ಮನೇ ಕೂರಬೇಡಿ

ಮಂತ್ರಪಠಣ ಮಾಡಿ

ದೇವನಿರುವನು ಮಂದಿರದೊಳಗೆ

ಕಣ್ಣು ತೆರೆದು ನೋಡಿ”

ಶಹಬ್ಬಾಸ್.. ಕವಿತೆ ಅಂದ್ರೆ ಹೀಗಿರಬೇಕು. ಕಲ್ಲು ಕೂಡಾ ಜೀವ ಪಡೆದು ಹೌದೌದು ಎನ್ನಬೇಕು. ಮುಂದಕ್ಕೆ ಹೋಗೋಣ.

ಏನಿದು?

“ದೇವರು ಮೌಢ್ಯ ಮಡಿವಂತಿಕೆಯಲ್ಲಿಲ್ಲ

ಮೂಢ ಸಂಪ್ರದಾಯದಲ್ಲಿಲ್ಲ

ನೇಗಿಲ ಯೋಗಿಯಲ್ಲಿದ್ದಾನೆ

ಕಠಿಣ ಪರಿಶ್ರಮದಲ್ಲಿದ್ದಾನೆ

ಪರಿಶ್ರಮ ಪಟ್ಟು ಕಾಯಕ ಮಾಡಿದರೆ

ದೇವರ ಕೃಪೆಗೆ ಪಾತ್ರರಾಗುವೆ”

ಶಾಂತಂ ಪಾಪಂ. ಈ ಸಾಲುಗಳನ್ನು ಓದುವುದೇ ಮಹಾಪಾಪ. ಅಲ್ಲಾ ಮಕ್ಕಳೇ ಮಡಿವಂತಿಕೆ ಬಿಟ್ಟು ಬಾಳಲು ಮನುಷ್ಯರಿಗೆ ಸಾಧ್ಯವಿದೆಯಾ? ಸನಾತನ ಸಂಪ್ರದಾಯಗಳನು ಬಿಟ್ಟು ಹಿಂದೂಗಳು ಬದುಕಲು ಸಾಧ್ಯವಿದೆಯಾ? ನೇಗಿಲಯೋಗಿ ಅಂದ್ರೆ ರೈತ. ರೈತರಲ್ಲಿ ದೇವರು ಇದ್ದಿದ್ದೇ ಆದರೆ ರೈತರು ಯಾಕೆ ಹೀಗೆ ಬಡತನದಲ್ಲಿ ಬಾಳುತ್ತಿದ್ದರು, ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದರು. ಈ ಮನೆ ಕಟ್ಟುವ ಕೂಲಿಯವರು, ಬೀದಿ ಗುಡಿಸುವ ಕಾರ್ಮಿಕರೂ ಕಠಿಣ ಪರಿಶ್ರಮ ಪಡ್ತಾನೇ ಇರ್ತಾರಲ್ವಾ. ಅವರ ಮೇಲೆ ದೇವರ ಕೃಪೆ ಇದ್ದಿದ್ದರೆ ಅವರ್ಯಾಕೆ ದುಡಿದುಡಿದು ಬಡವರಾಗಿ ಸಾಯ್ತಾ ಇದ್ರು. ನೋ..ಈ ಕವಿತೆ ಪ್ರಾಕ್ಟಿಕಲ್ ಅಲ್ಲವೇ ಅಲ್ಲ. ದೇವರು ಇರೋದು ಪೂಜಾರಿಗಳು, ಅರ್ಚಕರು, ಪುರೋಹಿತರು, ಸ್ವಾಮಿಗಳಲ್ಲಿ ಅನ್ನುವುದು ವಾಸ್ತವ. ನೋಡಿ ಇವರೆಲ್ಲಾ ಯಾವತ್ತಾದರೂ ದುಡೀತಾರಾ? ಸಾಲಾ ಸೋಲ ಮಾಡಿ ಆತ್ಮಹತ್ಯೆ ಮಾಡಿಕೋತಾರಾ? ತಿಂದುಂಡು ಹೇಗೆ ಆರಾಮಾಗಿ ಇರ್ತಾರೆ ನೋಡಿ. ಯಾಕೆ ಗೊತ್ತಾ? ಯಾಕೆಂದರೆ ಅವರು ದೇವರ ಕೃಪೆಗೆ ಪಾತ್ರರಾಗಿರ್ತಾರೆ. ದೇವರ ಪೂಜೆ ಪ್ರಾರ್ಥನೆ ಭಜನೆ  ಮಂತ್ರಗಳ ಮೂಲಕ ದೇವರನ್ನು ತೃಪ್ತಿ ಪಡಿಸುತ್ತಾರೆ. ಇದನ್ನು ನೀವೆಲ್ಲಾ ಕಣ್ಣಾರೆ ನೋಡಿರ್ತೀರಿ ಅಲ್ವಾ. ಇದೇ ಸತ್ಯ ಅಲ್ವಾ? ಈ ಕವಿಗಳು ಇದ್ದಾರಲ್ಲಾ ಯಾವಾಗಲೂ ಸುಳ್ಳನ್ನೇ ಸತ್ಯ ಅಂತಾ ನಂಬಿಸಿ ಮೋಸ ಮಾಡ್ತಾರೆ. ನಾವಿದ್ದೀವಲ್ಲಾ ನಮ್ಮಂತೋರು ಸತ್ಯ ಏನು ಅನ್ನೋದನ್ನ ಹೇಳ್ತೀವಿ. ಈ ಕವಿತೆಯ ಸಾಲುಗಳು ಹೀಗಿರಬೇಕಿತ್ತು.

” ದೇವನಿಹನು ಮಡಿವಂತಿಕೆಯಲಿ

ಧರ್ಮ ಶಾಸ್ತ್ರ ಸಂಪ್ರದಾಯಗಳಲಿ

ಪೂಜಾರಿ ಪುರೋಹಿತ ಯೋಗಿಗಳಲಿ

ಪರಿಶ್ರಮ ಪಟ್ಟು ಪೂಜೆ ಪ್ರಾರ್ಥನೆ ಮಾಡಿದರೆ

ದೇವರ ಕೃಪೆಗೆ ಪಾತ್ರರಾಗುವೆ”

ಹಾಂ.. ಇದು ಸರಿಯಾದ ಕವಿತೆ. ಹೀಗೆ ತಿದ್ದುಪಡಿ ಮಾಡಿಕೊಂಡು ಕಂಠಪಾಠ ಮಾಡಿಕೊಳ್ಳಿ ಮಕ್ಕಳೇ. ಇಂದಿನ ಮಕ್ಕಳೇ ನಾಳೆಯ ಕರಸೇವಕರು, ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ರಾಮಭಕ್ತರು. ನಿಮಗೆಲ್ಲಾ ಆಂಜನೇಯ ಗೊತ್ತಲ್ವಾ. ಹಾಂ. ರಾಮನಿಗೆ ಹೇಗೆ ಹನುಮ ಆಜ್ಞಾಧಾರಕನೋ ಹಾಗೆ ನೀವೆಲ್ಲಾ ಭಜರಂಗಿಗಳಾಗಬೇಕು. ದೇವರು ಅಂದ್ರೆ ರಾಮ, ರಾಮ ಅಂದ್ರೆ ದೇಶ. ದೇಶ ಅಂದ್ರೆ ಧರ್ಮ ಎಂಬುದನ್ನು ಅರ್ಥಮಾಡಿಕೊಳ್ಳಿ. ನಮ್ಮ ಸನಾತನ ಧರ್ಮ ರಕ್ಷಣೆಗೆ ಪ್ರಾಣ ಕೊಡಲೂ ಸಿದ್ದರಾಗಿ. ಯಾಕೆಂದರೆ ನಮ್ಮ ಪವಿತ್ರ ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ “ಧರ್ಮೋ ರಕ್ಷತಿ ರಕ್ಷತಃ” ಅಂತಾ ಹೇಳಿದ್ದಾರೆ. ಅಂದರೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅಂತವರನ್ನು ಧರ್ಮ ರಕ್ಷಿಸುತ್ತದೆ ಅಂತಾ. ನೀವೂ ಸಹ ನಮ್ಮ ಧರ್ಮರಕ್ಷಣೆಗಾಗಿ ಬದುಕನ್ನು ಮೀಸಲಿಡಬೇಕು. ಧರ್ಮದ್ರೋಹಿಗಳನ್ನು ಸೆದೆಬಡಿಯಬೇಕು. ರಾಮ ಹುಟ್ಟಿದ ಈ ಪವಿತ್ರ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು.

ಇಂತಹ ದೈವವಿರೋಧಿ ಕವಿತೆಗಳನ್ನು ಬ್ಯಾನ್ ಮಾಡುತ್ತೇವೆ. ಧರ್ಮವಿರೋಧಿ ಪಠ್ಯಗಳನ್ನು ನಿಷೇಧಿಸುತ್ತೇವೆ. ಸನಾತನ ಸಂಪ್ರದಾಯ ಸಾರುವ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತೇವೆ. ರವೀಂದ್ರನಾಥ ಟ್ಯಾಗೋರರು ಈ ಕವಿತೆಯನ್ನು ಜವಾಹರಲಾಲ್ ನೆಹರೂರವರನ್ನು ಮೆಚ್ಚಿಸಲು ಬರೆದದ್ದು ಅಂತಾ ನಾನು ಅಧ್ಯಯನ ಮಾಡಿ ತಿಳಿದು ಕೊಂಡಿದ್ದೇನೆ. ಟ್ಯಾಗೋರರು ಎಲ್ಲಿಯವರು? ಪಶ್ಚಿಮ ಬಂಗಾಳದವರು. ಆ ರಾಜ್ಯವನ್ನು ಸುದೀರ್ಘ ಕಾಲ ಆಳಿದ್ದು ಕಮ್ಯೂನಿಸ್ಟರು. ಹೀಗಾಗಿ ದೈವವಿರೋಧಿಯಾದ ಕಮ್ಯೂನಿಸ್ಟರ ಸಿದ್ಧಾಂತವನ್ನು ಸಾರುವ ಕವಿತೆಯನ್ನು ಟ್ಯಾಗೂರರು ಬರೆದಿದ್ದಾರೆ ಎಂದು ನಮ್ಮ ಐಟಿ ಸೆಲ್ ನವರು ಸಂಶೋಧನೆ ಮಾಡಿ ಹೇಳಿದ್ದಾರೆ. ಆದ್ದರಿಂದ ನಮ್ಮ ದೇವರು ಧರ್ಮವನ್ನು ಅಪಮಾನ ಮಾಡುವ ಇಂತಹ ಕವಿತೆಗಳು ಪಠ್ಯದಲ್ಲಿ ಇರಬೇಕಾ? ಸಾಧ್ಯವೇ ಇಲ್ಲ. ನಮ್ಮ ಸನಾತನ ಸಂಪ್ರದಾಯವನ್ನು ಪ್ರಶ್ನಿಸುವ ಇಂತಹ ಪದ್ಯಗಳನ್ನು ಶಾಲೆಯಲ್ಲಿ ಮಕ್ಕಳು ಓದಬೇಕಾ? ಬೇಕಾಗಿಲ್ಲ. ಈ ಕವಿತೆಯಿಂದಾಗಿ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಕವಿತೆಯನ್ನು ಯಾರೇ ಬೋಧಿಸಲಿ ಅದನ್ನು ವಿರೋಧಿಸುತ್ತೇವೆ. ಪಾಠ ಮಾಡುವ ಶಿಕ್ಷಕರನ್ನು ವಜಾಮಾಡಲು ಒತ್ತಾಯಿಸುತ್ತೇವೆ. ಪಾಠಮಾಡುವ ಶಾಲೆಗಳ ಮುಂದೆ ಮಕ್ಕಳ ಜೊತೆ ಸೇರಿಕೊಂಡು ಗಲಾಟೆ ಮಾಡಿಸುತ್ತೇವೆ. ಇದಕ್ಕಾಗಿ ನಮ್ಮ ಭಜರಂಗಿಗಳು ಸದಾ ಸನ್ನದ್ಧರಾಗಿರುತ್ತಾರೆ. ಮಕ್ಕಳೇ ಇಂತಹ ದೈವ ನಿಂದನೆಯ ಪಾಠವನ್ನು ಮಾಡುವ ಶಿಕ್ಷಕರನ್ನು ಬಹಿಷ್ಕರಿಸಿ. ಶಾಲೆಗಳನ್ನು ವಿರೋಧಿಸಿ. ಧರ್ಮದ್ರೋಹಿಗಳಿಂದ ನಮ್ಮ ಹಿಂದೂಧರ್ಮ ರಕ್ಷಿಸಲು ಎಲ್ಲಾ ರೀತಿಯ ತ್ಯಾಗ ಬಲಿದಾನಗಳಿಗೆ ಸಿದ್ಧರಾಗಿ. ಜೈಶ್ರೀರಾಂ.. ಜೈ ಜೈ ಶ್ರೀರಾಂ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

More articles

Latest article