Sunday, July 14, 2024

ಭಾರತ್ ಜೋಡೋ ನ್ಯಾಯ ಯಾತ್ರೆ‌ | 37ನೆಯ ದಿನ

Most read

ಇಂದು ಇಡೀ ದೇಶದ ಯುವಜನತೆ ಮೊಬೈಲ್ ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಒಬ್ಬರು ಇನ್ನೊಬ್ಬರಿಗೆ ವೀಡಿಯೋ ಕಳುಹಿಸುತ್ತಾರೆ. ಆದರೆ ಅದಾನಿ ಅಂಬಾನಿಯ ಮಕ್ಕಳು ಮೊಬೈಲ್ ನಲ್ಲಿ ವೀಡಿಯೋ ನೋಡುವುದಿಲ್ಲ. ಅವರು ತಮ್ಮ ಹಣ ಎಣಿಸುತ್ತಾರೆ. ಅದೇ ರೀತಿಯಲ್ಲಿ ಅಮಿತ್ ಶಾನ ಮಗನಿಗೆ ಬ್ಯಾಟು ಹಿಡಿಯಲು ಬಾರದಿದ್ದರೂ ಆತ ಭಾರತದ ಕ್ರಿಕೆಟ್ ಮಂಡಳಿ ಮುಖ್ಯಸ್ಥನಾಗುತ್ತಾನೆ. ಇದು ದೇಶದ ವಾಸ್ತವ – ರಾಹುಲ್‌ ಗಾಂಧಿ

ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಇಂದೂ ಉತ್ತರಪ್ರದೇಶದಲ್ಲಿ ಮುಂದುವರಿದಿದೆ. ಇಂದು ಯಾತ್ರೆಯು ರಾಹುಲ್ ಅವರ ಈ ಹಿಂದಿನ ಸಂಸದೀಯ ಕ್ಷೇತ್ರವಾದ ಅಮೇಠಿಯಲ್ಲಿ ಮತ್ತು ಐತಿಹಾಸಿಕ ಆನಂದ ಭವನದ ಬಳಿಯಿಂದ ಸಾಗಿದ್ದು ವಿಶೇಷ. ಆನಂದ ಭವನವು  ಭವ್ಯ ಕಟ್ಟಡ ಮಾತ್ರವಲ್ಲ, ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಾಕ್ಷಿ ಕೂಡಾ ಆಗಿದೆ.ಇದು ಪಂಡಿತ್ ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ ಅವರ ತ್ಯಾಗ, ಸಮರ್ಪಣೆ ಮತ್ತು ದೇಶಭಕ್ತಿಯ ಸ್ಮಾರಕವೂ ಹೌದು.

ಸಂಜೆ ನಾಲ್ಕು ಗಂಟೆಗೆ ಅಮೇಠಿಯ ಬಾಬುಗಂಜ್ ನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಿತು. ಅದರಲ್ಲಿ ರಾಹುಲ್ ಜತೆಗೆ ಪಕ್ಷದ ಅಧ‍್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಭಾಗವಹಿಸಿದ್ದರು.

ಇಂದಿನ (19.02.2024) ಕಾರ್ಯಕ್ರಮ ವಿವರ ಹೀಗಿದೆ. ಬೆಳಿಗ್ಗೆ 8.00 ಕ್ಕೆ ಉತ್ತರಪ್ರದೇಶದ ಪ್ರತಾಪಗಢದ ಭಗವಾ ಚುಂಗಿ ಚೌರಾಹದಿಂದ ಅಂಬೇಡ್ಕರ್ ಚೌರಾಹದ ಮೂಲಕ ಯಾತ್ರೆ ಆರಂಭ. 11.00 ಗಂಟೆಗೆ ಲಾಲ್ ಗಂಜ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತು. 12.00 ಗಂಟೆಗೆ ಮಧ‍್ಯಾಹ್ನದ ವಿರಾಮ. ಪ್ರತಾಪಗಢದ ಸಂಗಿಪುರ ಗಾಂಧಿ ಇಂಟರ್ ಕಾಲೇಜ್ ನಲ್ಲಿ. ಮಧ‍್ಯಾಹ್ನದ ನಂತರ 2.00 ಗಂಟೆಗೆ ರಿಸರ್ವ್ ಪೋಲಿಸ್ ಲೈನ್ ನಿಂದ ಯಾತ್ರೆ ಪುನರಾರಂಭ. ಅಮೇಠಿಯ ಸಗ್ರಾ ತಿರಾಹದಲ್ಲಿ ಸ್ವಾಗತ ಕಾರ್ಯಕ್ರಮ. ಅಮೇಠಿಯ ಗೌರಿಗಂಜ್ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಜೆಯ ವಿರಾಮ. 4.00 ಗಂಟೆಗೆ ಅಮೇಠಿಯ ಬಾಬುಗಂಜ್ ನ ಟೋಲ್ ಬಳಿಯಲ್ಲಿ ಸಾರ್ವಜನಿಕ ಸಭೆ. ರಾತ್ರಿ ವಾಸ್ತವ್ಯ ಅಮೇಠಿಯ ತೆಂದುವಾದಲ್ಲಿ.

ಲಾಲ್ ಗಂಜ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನಾನು ಭಾರತ ಜೋಡೋ ಪಾದಯಾತ್ರೆಯ ಸಮಯದಲ್ಲಿ ಸಾವಿರಾರು ಮಂದಿಯನ್ನು ಭೇಟಿ ಮಾಡಿದೆ. ಪ್ರತಿಯೊಂದು ಜಾಗದಲ್ಲಿ ಕೇಳಿ ಬಂದ ಒಂದೇ ಒಂದು ಮಾತು ಎಂದರೆ ನಿರುದ್ಯೋಗ. ನಾನು ಶಿವನನ್ನು ಪೂಜಿಸುತ್ತೇನೆ. ನಾನು ವಾರಣಾಸಿಯ ಕಾಶಿ ವಿಶ್ವನಾಥ ಮಂದಿರಕ್ಕೆ ಹೋದೆ. ಅಲ್ಲಿ ಪೊಲೀಸರು ನಮ್ಮ ಎಲ್ಲ ಮೊಬೈಲ್ ತಮ್ಮ ಬಳಿ ಇರಿಸಿಕೊಂಡರು. ಯಾಕೆಂದರೆ ರಾಹುಲ್ ಗಾಂಧಿ ಶಿವಮಂದಿರದ ಒಳಗೆ ಇರುವ ಫೋಟೋವನ್ನು ಬಿಜೆಪಿ ಇಷ್ಟಪಡುವುದಿಲ್ಲ. ನಾನು ಇಂದು ಮಾಡುತ್ತಿರುವ ಭಾಷಣವೂ ನಿಮಗೆ ಟಿವಿಯಲ್ಲಿ ಕಾಣಿಸದು. ಯುವಮಂದಿ ನನ್ನಲ್ಲಿ ಹೇಳಿದರು- ನಾವು ಲಕ್ಷಾಂತರ ರುಪಾಯಿ ಹಣ ಖರ್ಚು ಮಾಡಿ ಓದಿದ್ದೇವೆ. ಯಾಕೆಂದರೆ ನಮಗೆ ಉದ್ಯೋಗ ಬೇಕು. ನಾವು ತುಂಬಾ ಕಷ್ಟಪಟ್ಟು ಓದುತ್ತೇವೆ. ಆದರೆ ಪರೀಕ್ಷೆಯ ದಿನ ಪೇಪರ್ ಲೀಕ್ ಆಗಿರುವುದು ಮೊಬೈಲ್ ಮೂಲಕ ತಿಳಿಯುತ್ತದೆ. ಮೋದಿ ಸರಕಾರದಲ್ಲಿ ಜನಸಾಮಾನ್ಯರ ಗಮನ ಬೇರೆಡೆ ತಿರುಗಿಸಿ ಜನರ ಜೇಬಿನ ಹಣವನ್ನು ಕದಿಯಲಾಗುತ್ತದೆ. ಭಾರತದಲ್ಲಿ 73% ಬಬ್ಬರ್ ಶೇರ್ ವಾಸಿಸುತ್ತಿದ್ದಾರೆ. ಆದರೆ ಅವರು ಈಗ ಹೆದರಿಬಿಟ್ಟಿದ್ದಾರೆ. ಇದು ದೇಶದ ವಾಸ್ತವ. 73% ಮಂದಿ ಇದು ಆಗಬಾರದು ಎಂದು ಹೇಳುತ್ತಿರುತ್ತಾರೆ. ಆದರೆ ಅದಾನಿ ಮತ್ತು ಮೋದಿ ಏನನ್ನು ನಿರ್ಧರಿಸುತ್ತಾರೋ ಅದುವೇ ಆಗುತ್ತದೆ. ಅಂದರೆ ದೇಶದ 73% ಜನತೆ ಏನು ಹೇಳುತ್ತಾರೆ ಎನ್ನುವುದು ಅವರಿಗೆ ಮುಖ್ಯವಲ್ಲ” ಎಂದರು.

ಅಮೇಠಿ ಸಾರ್ವಜನಿಕ ಸಭೆಯಲ್ಲಿ ಅವರು “ಭಾರತ ಜೋಡೋ ಯಾತ್ರೆಯಲ್ಲಿ ರೈತರು, ಯುವಜನತೆ, ಬಡವರು, ಸಣ್ಣ ವ್ಯಾಪಾರಿಗಳು ನಮ್ಮ ಬಳಿ ಬಂದು ತಮ್ಮ ಮನದ ಮಾತು ಹೇಳಿಕೊಂಡರು. ಕೆಲವರು ಬೆಲೆ ಏರಿಕೆಯ ಬಗ್ಗೆ ಮಾತನಾಡಿದರು, ಇನ್ನು ಕೆಲವರು ನಿರುದ್ಯೋಗ, ಜಿ ಎಸ್ ಟಿ ದೂರು ಹೇಳಿಕೊಂಡರು. ಹಿಂದಿನ ಯಾತ್ರೆ ಈ ಭಾಗದಲ್ಲಿ ಆಗಿರಲಿಲ್ಲ. ಹಾಗಾಗಿ ನಾವಿಲ್ಲಿ ಬಂದಿದ್ದೇವೆ. ಇಂದು ಇಡೀ ದೇಶದ ಯುವಜನತೆ ಮೊಬೈಲ್ ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಒಬ್ಬರು ಇನ್ನೊಬ್ಬರಿಗೆ ವೀಡಿಯೋ ಕಳುಹಿಸುತ್ತಾರೆ. ಆದರೆ ಅದಾನಿ ಅಂಬಾನಿಯ ಮಕ್ಕಳು ಮೊಬೈಲ್ ನಲ್ಲಿ ವೀಡಿಯೋ ನೋಡುವುದಿಲ್ಲ. ಅವರು ತಮ್ಮ ಹಣ ಎಣಿಸುತ್ತಾರೆ. ಅದೇ ರೀತಿಯಲ್ಲಿ ಅಮಿತ್ ಶಾನ ಮಗನಿಗೆ ಬ್ಯಾಟು ಹಿಡಿಯಲು ಬಾರದಿದ್ದರೂ ಆತ ಭಾರತದ ಕ್ರಿಕೆಟ್ ಮಂಡಳಿ ಮುಖ್ಯಸ್ಥನಾಗುತ್ತಾನೆ. ಇದು ದೇಶದ ವಾಸ್ತವ. ಮಣಿಪುರ ಕ್ಕೆ ಬೆಂಕಿ ಇಡಲಾಯಿತು. ಅಲ್ಲಿ ಎರಡು ವರ್ಗಗಳ ನಡುವೆ ಮೋದಿ ಸರಕಾರ ಜಗಳ ಹಚ್ಚಿತು. ಮಣಿಪುರದಲ್ಲಿ ಜನರನ್ನು ಕೊಲ್ಲಲಾಯಿತು. ಮನೆ ಸುಡಲಾಯಿತು. ಅಲ್ಲಿ ಅಂತರ್ಯುದ್ಧ ಮುಂದುವರಿದಿದೆ. ಆದರೆ ಇಂದಿನ ತನಕವೂ ದೇಶದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಹೋಗಿಲ್ಲ. ರೈತರು ದಿಲ್ಲಿಗೆ ಬರದಂತೆ ಮೋದಿಯವರು ದೊಡ್ಡ ದೊಡ್ಡ ಗೋಡೆ ಕಟ್ಟಿದರು. ದೇಶದ ರೈತರು ಎಂ ಎಸ್ ಪಿ (ಕನಿಷ್ಠ ಬೆಂಬಲ ಬೆಲೆ) ಕೇಳುತ್ತಿದ್ದಾರೆ ಅಷ್ಟೇ. ಮೋದಿ ಸರಕಾರ ಬಿಲಿಯಾಧಿಪತಿಗಳ ಲಕ್ಷ ಕೊಟಿ ಸಾಲ ಮನ್ನಾ ಮಾಡುತ್ತದೆ. ಆದರೆ ರೈತರಿಗೆ ಎಂ ಎಸ್ ಪಿ ಕೊಡುವುದಿಲ್ಲ. ಆದರೆ ನಾವು ರೈತರಿಗೆ ಎಂ ಎಸ್ ಪಿ ಯ ಕಾನೂನು ಗ್ಯಾರಂಟಿ ಕೊಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದೇವೆ” ಎಂದರು.

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ‍್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ ಅಮೇಠಿ ಇಡೀ ಜಗತ್ತಿಗೆ ಪರಿಚಿತ.  ದೇಶದ ಪ್ರತಿಯೊಬ್ಬರಿಗೂ ಅಮೇಠಿ ಬಗ್ಗೆ ಹೆಮ್ಮೆಯಿದೆ. ಯಾಕೆಂದರೆ ನಮ್ಮೆಲ್ಲರ ಪ್ರೀತಿಯ ಮಾಜಿ ಪ್ರಧಾನಿ ರಾಜೀವ ಗಾಂಧಿ, ಹಿಂದಿನ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯ ಕರ್ಮ ಭೂಮಿಯಿದು. ರಾಹುಲ್ ಗಾಂಧಿಯವರಿಗೆ ಅಮೇಠಿಯೊಂದಿಗೆ ಆಳ ಸಂಬಂಧವಿದೆ. ಅವರು ಈಗಲೂ ನಿಮ್ಮೊಂದಿಗಿದ್ದಾರೆ.

ಕಾಂಗ್ರೆಸ್ ಸರಕಾರದ ಕಾಲದಲ್ಲಿ ಇಲ್ಲಿಗೆ ಸಾವಿರಾರು ಕೋಟಿಯ ಯೋಜನೆಗಳನ್ನು ಮಂಜೂರು ಮಾಡಲಾಯಿತು. ಆದರೆ ಮೋದಿ ಸರಕಾರ ಅವುಗಳಿಗೆ ತಡೆ ನೀಡಿತು. ಈ ಸರಕಾರ ಅಮೇಠಿ ಮತ್ತು ರಾಯಬರೇಲಿ ಜನರ ಶತ್ರುವೆನಿಸಿಕೊಂಡಿದೆ. ಇಲ್ಲಿ ಮೆಗಾ ಫುಡ್ ಪಾರ್ಕ್ ಯೋಜನೆ ಇತ್ತು. ಅದರಲ್ಲಿ ಲಕ್ಷಗಟ್ಟಲೆ ರೈತರಿಗೆ ಲಾಭವಾಗುತ್ತಿತ್ತು. ಆದರೆ ಮೋದಿಯವರು ಅದನ್ನು ಬಂದ್ ಮಾಡಿದರು. ಮೋದಿಯವರೇ ನೆನಪಿಟ್ಟುಕೊಳ್ಳಿ, ಇದೇ ವರ್ತನೆ ಮುಂದುವರಿದರೆ ಜನರನ್ನು ನಿಮ್ಮನ್ನು ಅಧಿಕಾರದ ಕುರ್ಚಿಯಿಂದ ಕೆಳಗಿಳಿಸುತ್ತಾರೆ.

ಮೋದಿಯವರು ಹೇಳಿದರು- ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ, ಕಪ್ಪು ಹಣ ವಾಪಸ್ ತರುತ್ತೇನೆ, ಎಲ್ಲರ ಖಾತೆಗೂ 15 ಲಕ್ಷ ಹಾಕುತ್ತೇನೆ. ಆದರೆ ಪ್ರಧಾನಿ ಮೋದಿ ಹೇಳಿದ್ದು ಬರೇ ಸುಳ್ಳು. ಮೋದಿ ಸರಕಾರ ಉದ್ಯೋಗದ ಮಾತು ಆಡುತ್ತದೆ. ಆದರೆ ಈಗ ದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ 2 ಲಕ್ಷ ಹುದ್ದೆ ಖಾಲಿ ಇದೆ. ಈ ಪೈಕಿ 60 ಸಾವಿರ ಹುದ್ದೆ ಉತ್ತರಪ್ರದೇಶ ಒಂದರಲ್ಲಿಯೇ ಖಾಲಿ ಇದೆ. ಆದರೆ ಡಬಲ್ ಇಂಜಿನ್ ಸರಕಾರ ಅವನ್ನು ಭರ್ತಿ ಮಾಡುವುದಿಲ್ಲ. ದೇಶದ ಸರಕಾರಿ ಇಲಾಖೆಗಳಲ್ಲಿ 30 ಲಕ್ಷ ಹುದ್ದೆ ಖಾಲಿ ಇದೆ. ಆದರೆ ಅದನ್ನು ಭರ್ತಿ ಮಾಡುವುದಿಲ್ಲ. ಯಾಕೆಂದರೆ ಅವರು ಒಬಿಸಿ, ಎಸ್ ಸಿ, ಎಸ್ ಟಿ ಮಂದಿ ಉದ್ಯೋಗ ಪಡೆದು ಸ್ವಾಭಿಮಾನದಿಂದ ಬದುಕುವುದನ್ನು ಇಷ್ಟಪಡುವುದಿಲ್ಲ. ಮೋದಿಯವರ ಗ್ಯಾರಂಟಿ ದೇಶದ ರೈತರು, ಕಾರ್ಮಿಕರು, ಆದಿವಾಸಿಗಳು, ಹಿಂದುಳಿದವರಿಗಿಲ್ಲ. ತಮ್ಮ ಮಿತ್ರರಾದ ಎರಡೋ ಮೂರೋ ಧನಿಕರಿಗಾಗಿದೆ.

ಮೋದಿಯವರ ಮಿತ್ರರ 13 ಲಕ್ಷ ಕೋಟಿ ಸಾಲ ಮನ್ನಾ ಆಗುತ್ತದೆ. ಅದೇ ರೈತರು 12-13 ಸಾವಿರ ರುಪಾಯಿ ಸಾಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಧನಿಕರಿಗೆ ತೆರಿಗೆ ಕಡಿಮೆ ಮಾಡಲಾಗುತ್ತದೆ, ಬಡವರ ತೆರಿಗೆ ಹೆಚ್ಚಿಸಲಾಗುತ್ತಿದೆ. ದೊಡ್ಡ ದೊಡ್ಡ ಕಂಪೆನಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಬಡವರು, ರೈತರು, ಮಹಿಳೆಯರ ಸಬ್ಸಿಡಿಗೆ ಕತ್ತರಿ ಹಾಕಲಾಗುತ್ತದೆ. ಮೋದಿ ಸರಕಾರದ 10 ವರ್ಷಗಳಲ್ಲಿ ಒಂದು ಲಕ್ಷ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಮೊದಲ ಬಾರಿ ರೈತರಿಗೆ ಬೇರೆ ಬೇರೆ ರೀತಿಯ ತೆರಿಗೆ ಹಾಕಲಾಗುತ್ತಿದೆ. ಟ್ರಾಕ್ಟರ್, ರಸಗೊಬ್ಬರ, ಮಶಿನರಿ ಮೇಲೆ ಜಿ ಎಸ್ ಟಿ ಹಾಕಲಾಯಿತು. ಕೇಂದ್ರದಲ್ಲಿ ಯುಪಿಎ ಇದ್ದಾಗ ನಾವು ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆವು. ಕಾಂಗ್ರೆಸ್ ಸರಕಾರ ಇರುವ ರಾಜ್ಯಸರಕಾರಗಳೂ ಇದನ್ನು ಮಾಡಿದವು. ಕಾಂಗ್ರೆಸ್ ಮ 10 ವರ್ಷಗಳಲ್ಲಿ ಧಾನ್ಯದ ಎಂ ಎಸ್ ಪಿ 135% ಹೆಚ್ಚಿಸಲಾಯಿತು. ಬಿಜೆಪಿ ಸರಕಾರ ಕೇವಲ 50% ಹೆಚ್ಚಿಸಿತು. ನಾವು ರೈತ ನ್ಯಾಯದ ಮತು ಆಡುತ್ತಿದ್ದೇವೆ. ಆದ್ದರಿಂದಲೇ ನಾವು ಎಲ್ಲ ರೈತರಿಗೆ ಎಂ ಎಸ್  ಪಿ ಯ ಗ್ಯಾರಂಟಿಯ ಕಾನೂನಿನ ಭರವಸೆ ಕೊಟ್ಟಿದ್ದೇವೆ” ಎಂದರು.–

ಶ್ರೀನಿವಾಸ ಕಾರ್ಕಳ, ಮಂಗಳೂರು

ಯಾತ್ರೆ -36 ಭಾರತ್ ಜೋಡೋ ನ್ಯಾಯ ಯಾತ್ರೆ‌ | 36ನೆಯ ದಿನ

More articles

Latest article