ಕಲಬುರಗಿ: ಕಲಬುರಗಿ ನಗರ ಪಾಲಿಕೆ ಆಯುಕ್ತರ ಸಹಿ ನಕಲು ಮಾಡಿ ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡ ಪ್ರಕರಣದಲ್ಲಿ ಪಾಲಿಕೆ ಆಯುಕ್ತರ ಆಪ್ತ ಸಹಾಯಕ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಪ್ತ ಸಹಾಯಕ ಮೊಹಮ್ಮದ್ ನಯಿಮೋದ್ದಿನ್, ವಾಜೀದ್ ಇಮ್ರಾನ್, ಮಿರ್ಜಾ ಬೇಗ್, ನಸೀರ್ ಅಹ್ಮದ್ ಮತ್ತು ಮೊಹಮ್ಮದ್ ರೆಹಮಾನ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 30 ಲಕ್ಷ ರೂ. ಹಣ ಜಪ್ತಿ ಮಾಡಿಕೊಂಡಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೆಕ್ಬುಕ್ನಲ್ಲಿ ಆಯುಕ್ತರ ನಕಲಿ ಸಹಿ ಮಾಡಿ ಬ್ಯಾಂಕ್ಗೆ 1 ಕೋಟಿ 32 ಲಕ್ಷ ರೂ. ಹಣ ವಿತ್ ಡ್ರಾ ಮಾಡಿಕೊಳ್ಳಲು 3 ಚೆಕ್ಗಳನ್ನು ಆರೋಪಿಗಳು ಬ್ಯಾಂಕ್ ಗೆ ಕಳಿಸಿದ್ದರು. ಒಂದು ಚೆಕ್ ನೀಡಿ 35,56,640 ರೂ. ಹಣ ಡ್ರಾ ಮಾಡಿಕೊಂಡಿದ್ದರು. ಬಳಿಕ ಮತ್ತೆರಡು ಚೆಕ್ಗಳನ್ನು ಡ್ರಾಗೆ ಕಳುಹಿಸಿದ್ದರು. ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.