ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ರಾಜ್ಯದಾದ್ಯಂತ ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ 35 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇವುಗಳಲ್ಲಿ 10 ಶಾಲೆಗಳು CBSE ಪಠ್ಯಕ್ರಮವನ್ನು ಹೊಂದಿರಲಿವೆ. ಇದರೊಂದಿಗೆ, 100 ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಕೆ.ಪಿ.ಎಸ್. (KPS) ಮಾದರಿಯಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.

ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು 25 ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಪಿ.ಯು.ಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಆರಂಭಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಾದ K-CET/JEE/NEET ಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ನಾಲ್ಕು ವಸತಿ ಶಾಲೆಗಳನ್ನು ‘Center of Excellence’ ಗಳನ್ನಾಗಿ ರೂಪಿಸಲಾಗುವುದು. ಅಲ್ಲದೆ, ತಾಂತ್ರಿಕ ಶಿಕ್ಷಣ ಪಡೆಯುವ 5,000 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ತಲಾ 50,000 ರೂ. ಆರ್ಥಿಕ ನೆರವು ನೀಡಲಾಗುವುದು.
ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ
ಮಹಿಳಾ ಶಿಕ್ಷಣ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ವಕ್ಫ್ ಸಂಸ್ಥೆಗಳ ಅಡಿಯಲ್ಲಿರುವ 31 ಮಹಿಳಾ ಪಿ.ಯು. ಕಾಲೇಜುಗಳನ್ನು ಪದವಿ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು. ಬೆಂಗಳೂರಿನಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ 100 ಸಂಖ್ಯಾಬಲದ ನಾಲ್ಕು ಹೊಸ ವಸತಿ ನಿಲಯಗಳನ್ನು ಸ್ಥಾಪಿಸಲಾಗುವುದು. ಆರ್ಥಿಕ ಸ್ವಾವಲಂಬನೆಗಾಗಿ ಅಲ್ಪಸಂಖ್ಯಾತ ಮಹಿಳಾ ಕೋ-ಆಪರೇಟಿವ್ ಸೊಸೈಟಿಗಳನ್ನು ರಚಿಸಲು ಸರ್ಕಾರ ಮುಂದಾಗಿದೆ.
ಧಾರ್ಮಿಕ ಮತ್ತು ಸಾಮಾಜಿಕ ಸಮಗ್ರ ಅಭಿವೃದ್ಧಿ
ಸರ್ಕಾರವು ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ಮಾಸಿಕ 6,000 ರೂ. ಗೌರವಧನ ಘೋಷಿಸಲಾಗಿದೆ. ಹಜ್ ಯಾತ್ರಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನಗಳನ್ನು ನಿರ್ಮಿಸಲಾಗುವುದು. ಅಲ್ಲದೆ, ಬೀದರ್‌ನ ಶ್ರೀ ನಾನಕ್ ಝೀರಾ ಸಾಹೇಬ್ ಗುರುದ್ವಾರದಲ್ಲಿ ಸುಸಜ್ಜಿತ ಗ್ರಂಥಾಲಯ ಸ್ಥಾಪನೆಯಾಗಲಿದೆ.
ಆರೋಗ್ಯ ಮತ್ತು ಹಿರಿಯ ನಾಗರಿಕರ ಸೇವೆ
ಹಿರಿಯ ನಾಗರಿಕರ ಆರೈಕೆಗಾಗಿ ಕ್ರೈಸ್ತ ಸಂಸ್ಥೆಗಳು ನಡೆಸುವ 10 ವೃದ್ಧಾಶ್ರಮಗಳಲ್ಲಿ ಸಮಗ್ರ ‘ಜೆರಿಯಾಟ್ರಿಕ್ ಪ್ಯಾಲಿಯೇಟಿವ್ ಕೇರ್’ ಘಟಕಗಳನ್ನು ಸ್ಥಾಪಿಸಲು ಐದು ಕೋಟಿ ರೂ. ಒದಗಿಸಲಾಗಿದೆ. ಇಷ್ಟೇ ಅಲ್ಲದೆ, ಅಲ್ಪಸಂಖ್ಯಾತ ಸಮುದಾಯದ ನಿರ್ಗತಿಕರಿಗಾಗಿ ಎರಡು ಮಹಿಳಾ ವೃದ್ಧಾಶ್ರಮಗಳನ್ನು ಪ್ರಾರಂಭಿಸಲು ನೆರವು ನೀಡಲಾಗುವುದು.
ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಫಾಸ್ಟ್ ಫುಡ್ ಟ್ರಕ್ ಅಥವಾ ಮೊಬೈಲ್ ಕಿಚನ್ ಸ್ಥಾಪಿಸಲು ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ಮೂರು ಲಕ್ಷ ರೂ.ಗಳವರೆಗೆ ಸಹಾಯಧನ ನೀಡುವ ಮೂಲಕ ಉದ್ಯಮಶೀಲತೆಗೆ ಉತ್ತೇಜನ ನೀಡಲಾಗಿದೆ.

