ನಕ್ಸಲೀಯರಿಗೆ ಶರಣಾಗಲು ಕರೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನರ ಈ ನಡೆ ಶ್ಲಾಘನೀಯ

Most read

ಇತ್ತೀಚೆಗೆ ಮಲೆನಾಡು ಕರಾವಳಿಯ ಪೀತಬೈಲು ದಟ್ಟ ಕಾನನದಲ್ಲಿ ಗುಂಡಿನ ಸದ್ದು ಮೊಳಗಿತು. ವಿಕ್ರಂ ಗೌಡ ಎಂಬ ಆದಿವಾಸಿ ಯುವಕ ಬಲಿಯಾದ. ಅವನನ್ನು ಶರಣಾಗಿಸಿ ಬಂಧಿಸುವ ಎಲ್ಲಾ ಸಾಧ್ಯತೆಗಳಿದ್ದರೂ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ವಿನಾಕಾರಣ ಬರ್ಬರವಾಗಿ ಹೊಡೆದು ಕೊಂದುಹಾಕಿದರು.

ನಮ್ಮ ರಾಜ್ಯದ ಮಲೆನಾಡು-ಕರಾವಳಿಗಳ ಗಡಿಭಾಗಗಳಲ್ಲಿ ಕೈಯಲ್ಲಿ ಬಂದೂಕು ಹಿಡಿದು ನಕ್ಸಲೀಯರಾಗಿ ಕಾಡು ಮೇಡು ಸುತ್ತುತ್ತಿರುವ ಯುವಕರು ಭಯೋತ್ಪಾಕರಲ್ಲ. ರಾಷ್ಟ್ರದ್ರೋಹಿಗಳೂ ಅಲ್ಲ. ಅವರೆಲ್ಲಾ ತಾವು ಬದುಕಿನಲ್ಲಿ ಅನುಭವಿಸಿದ ನೋವು, ಅನ್ಯಾಯ, ದಬ್ಬಾಳಿಕೆ, ಅಸಮಾನತೆಗಳಿಗೆ ಬಂದೂಕು ಹೋರಾಟವೇ ಪರಿಹಾರ, ಅದೇ ಅಂತಿಮ ದಾರಿ ಎಂದುಕೊಂಡು ಹೋಗಿರುವ ಆದಿವಾಸಿಗಳು, ಮಹಿಳೆಯರು, ಶೋಷಿತರು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಯುವಕರ ಗುಂಪು ನಡೆಸಿರುವ ಯಾವುದೇ ಹಿಂಸಾಕೃತ್ಯದ ದಾಖಲಾಗಿರಲಿಲ್ಲ, ಯಾವುದೇ ಚಟುವಟಿಕೆಯ ಸುಳಿವೂ ಇರಲಿಲ್ಲ.

ಮೇಲುನೋಟಕ್ಕೇ ತಿಳಿಯುವಂತೆ ಈ ಬೆರಳೆಣಿಕೆಯ ಯುವಕ ಯುವತಿಯರು ಯಾವುದೋ ಅನಿವಾರ್ಯತೆಯಿಂದ ಕಾಡುಗಳಲ್ಲಿದ್ದರೂ ಒಂದು ದುರ್ಬಲ ಶಕ್ತಿಯಾಗಿದ್ದಾರೆ. 2000ದಿಂದ 2015ರ ವರೆಗೂ ಮಲೆನಾಡು – ಕರಾವಳಿಗಳಲ್ಲಿ ಅನೇಕ ಎನ್ ಕೌಂಟರುಗಳು ನಡೆದಿದ್ದವು. ಹತ್ತಾರು ಯುವಕರು ಪ್ರಾಣ ಕಳೆದುಕೊಂಡರು. 2003ರಲ್ಲಿ ಈದು ಎನ್ ಕೌಂಟರ್ ನಲ್ಲಿ ಪಾರ್ವತಿ, ಹಾಜಿಮಾ, 2005ರಲ್ಲಿ ಸಾಕೇತ್ ರಾಜನ್, ಶಿವಲಿಂಗು, ನಂತರ ಮನೋಹರ್, ಉಮೇಶ್, ದೇವಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ನಿವಾಸಿಗಳಾದ ದಿನಕರ್ ಹಾಗೂ ವಸಂತ, ಅಜಿತ್ ಕುಸುಬಿ, ಸುಂದರೇಶ್, ಗೌತಮ್, ಪರಮೇಶ್ವರ್ ಇವರೆಲ್ಲಾ ಬಲಿಯಾದರು. ಇನ್ನು ನಕ್ಸಲೀಯರೂ ಸಹ ಪೊಲೀಸ್ ಮಾಹಿತಿದಾರರು ಎಂದು ಶೇಷಪ್ಪ ಗೌಡ್ಲು ಎಂಬುವವರನ್ನು ಕೊಂದಿದ್ದರು. ಅಮಾಸೆ ಬೈಲು ಪ್ರದೇಶದಲ್ಲಿ ದಲಿತ ಕೂಲಿ ಕಾರ್ಮಿಕರ ಮೇಲೆ ಅತ್ಯಾಚಾರ, ಕ್ರೂರ ದಬ್ಬಾಳಿಕೆ ನಡೆಸುತ್ತಿದ್ದ ಭೂಮಾಲಿನೊಬ್ಬನನ್ನು ಕೊಂದಿದ್ದರು.

ಸಾಕೇತ್ ರಾಜನ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಆಂಧ್ರದ ನಕ್ಸಲೀಯರು ಪಾವಗಡ ತಾಲ್ಲೂಕಿನ ವೆಂಕಟಮ್ಮನಗಳ್ಳಿಯಲ್ಲಿ ರಾತ್ರಿ ಮಲಗಿದ್ದ CRPF ಪೊಲೀಸರ ಮೇಲೆ ಗುಂಡಿನ ಮಳೆಗರೆದು 8 ಮಂದಿ ಪೊಲೀಸರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಾದ ನಂತರ ಕರ್ನಾಟಕದಲ್ಲಿ ನಕ್ಸಲೀಯರ ಕುರಿತು ಮೊದಲಿದ್ದ ಅನುಕಂಪ ಯಾರಿಗೂ ಉಳಿಯಲಿಲ್ಲ.
ಇದೆಲ್ಲಾ ಈಗ ಇತಿಹಾಸ. ಪ್ರಸ್ತತ ಸನ್ನಿವೇಶ ಬೇರೆ. ಈಗಾಗಲೇ ಹಲವಾರು ಯುವಕರು ಹೊಸ ಬದುಕನ್ನು ಕಟ್ಟಿಕೊಳ್ಳಲು ಬಯಸಿ ಬಂದಿದ್ದಾರೆ. ಬಂದೂಕು ಹೆಗಲಿಗೆ ಹಾಕಿಕೊಂಡು ಕಾಡು ಮೇಡು ಅಲೆಯುವುದರ ನಿರರ್ಥಕತೆಯೂ ಅವರಿಗೆ ಅರಿವಾಗಿರಬಹುದು. ಸಾವಿರಾರು ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿರುವ ಛತ್ತೀಸ್ಗಡ, ಜಾರ್ಖಂಡ್ ಗಳಲ್ಲಿ ಪರಿಸ್ಥಿತಿ ಏನೇ ಇರಬಹುದು ಆದರೆ ಕರ್ನಾಟಕದಲ್ಲಂತೂ ನಕ್ಸಲ್- ಪೊಲೀಸ್ ಸಂಘರ್ಷವನ್ನು ತಪ್ಪಿಸಿ ಶಾಂತಿ ಸ್ಥಾಪನೆಯನ್ನು ಸಾಧ್ಯವಾಗಿಸಬಲ್ಲ ಅವಕಾಶ ಮತ್ತು ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಹೀಗಿರುವಾಗ ಒಂದು ಜವಾಬ್ದಾರಿ ಸರ್ಕಾರ ಮತ್ತು ನಾಗರಿಕ ಸಮಾಜದ ಹೊಣೆ ಏನೆಂದರೆ ಈಗ ಅಲ್ಲಿರುವ ಯುವಕ-ಯುವತಿಯರ ಮನವೊಲಿಸಿ ಕರೆದುಕೊಂಡು ಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಅವರು ನೆಮ್ಮದಿಯಿಂದ ಬದುಕುವ ಅವಕಾಶ ನೀಡುವ ಭರವಸೆ ನೀಡುವುದು, ತಮ್ಮ ಕುಟುಂಬಗಳನ್ನು ಎಂದೋ ತೊರೆದು ಹೋಗಿರುವ ಅವರು ಕುಟುಂಬಗಳೊಂದಿಗೆ ಸೇರಿಕೊಂಡು ಹೊಸ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವುದು. ಹೀಗೆ ಮಾಡುವುದರಿಂದ ಅವರಿಗೆ ಮಾತ್ರವಲ್ಲ ಸರ್ಕಾರಕ್ಕೂ, ಸಮಾಜಕ್ಕೂ ಲಾಭವಿದೆ. ಈ ನಕ್ಸಲರನ್ನು ನಿಗ್ರಹಿಸುವ ಕೆಲಸಕ್ಕೆಂದು ಸರ್ಕಾರ ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಅದೇ ಹಣವನ್ನು ಈ ಭಾಗದ ಆದಿವಾಸಿಗಳ, ದಲಿತರ ಮತ್ತು ಮಹಿಳೆಯರ ಅಭಿವೃದ್ಧಿ ಕೆಲಸಗಳಿಗೆ, ಅರಣ್ಯವಾಸಿಗಳ ಮೂಲಸೌಕರ್ಯಗಳಿಗೆ ವಿನಿಯೋಗಿಸಿದರೆ, ಅವರ ಮಕ್ಕಳ ಶಿಕ್ಷಣಕ್ಕೆ, ಯುವಕರ ಉದ್ಯೋಗ ತರಬೇತಿಗೆ ವಿನಿಯೋಗಿಸಿದರೆ ಯಾರೂ ನಕ್ಸಲ್ ದಾರಿಯಲ್ಲಿ ಹೋಗುವ ಮನಸ್ಸನ್ನೂ ಮಾಡರು. ನಮ್ಮ ಸರ್ಕಾರಗಳು ಈ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ.

ಒಂದು ಸಮಾಧಾನಕರ ಬೆಳವಣಿಗೆ ಏನೆಂದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಈ ನಿಟ್ಟಿನಲ್ಲಿ ಒಂದಷ್ಟು ಕೆಲಸಗಳು ನಡೆಯುತ್ತಿವೆ. ನಕ್ಸಲೀಯರ ಶರಣಾಗತಿ ಮತ್ತು ಪುನರ್ವಸತಿಗಾಗಿ ಹಿರಿಯ ಸಾಹಿತಿ ಡಾ ಬಂಜಗೆರೆ ಜಯಪ್ರಕಾಶ್, ಪತ್ರಕರ್ತ ಪಾರ್ವತೀಶ್ ಬಿಳಿದಾಳೆ ಮತ್ತು ನ್ಯಾಯವಾದಿ ಕೆ. ಪಿ ಶ್ರೀಪಾಲ್ ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು ಈ ಸಮಿತಿ ಆದಿವಾಸಿ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ನಕ್ಸಲೀಯ ಯುವಕರನ್ನು ಮುಖ್ಯವಾಹಿನಿಗೆ ಬರಲು ವಿನಂತಿಸಿಕೊಂಡಿದೆ.

ಮೊನ್ನೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ʼನಕ್ಸಲ್ ಚಳವಳಿಗಾರರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಬೇಕೆಂದು ಕರೆಕೊಟ್ಟಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಈಗಾಗಲೇ ಇರುವ ಶರಣಾಗತಿ ನೀತಿಯನ್ನು ಇನ್ನಷ್ಟು ಸರಳಗೊಳಿಸಿ, ಸಮರ್ಪಕವಾಗಿ ಜಾರಿ ಮಾಡಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಕೇವಲ ಕರ್ನಾಟಕ ಸರ್ಕಾರ ಮಾತ್ರವಲ್ಲ, ನೆರೆಯ ತಮಿಳುನಾಡು ಹಾಗೂ ಕೇರಳ ಸರ್ಕಾರಗಳೂ ಈ ನಿಟ್ಟಿನಲ್ಲಿ ಮಾನ್ಯ ಸಿದ್ದರಾಮಯ್ಯನವರನ್ನು ಅನುಸರಿಸಬೇಕಾದ ಅಗತ್ಯವಿದೆ. ಇದರಿಂದ ಸಮಾಜಕ್ಕೆ ಆಗುವ ಪ್ರಯೋಜನವೇನೆಂದರೆ, ಜನರ ತೆರಿಗೆಯ ಸಾವಿರಾರು ಕೋಟಿ ಹಣವು ಉಳಿತಾಯವಾಗುವುದರ ಜೊತೆಗೆ ನಕ್ಸಲ್- ಪೊಲೀಸ್ ಸಂಘರ್ಷವು ಶಾಶ್ವತವಾಗಿ ತಪ್ಪಿ ಸಮಾಜದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗುತ್ತದೆ. ಇದು ಇಂದಿಗೆ ಅತ್ಯಗತ್ಯವಾಗಿ ಬೇಕಾದ ನಡೆ.

ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಶಾಂತಿಗಾಗಿ ನಾಗರಿಕರ ವೇದಿಕೆ ಸಹ ಮುಖ್ಯಮಂತ್ರಿಗಳ ಉಪಕ್ರಮವನ್ನು ಸ್ವಾಗತಿಸುವ ಜೊತೆಗೆ ನಕ್ಸಲೀಯರಿಗೂ, ಸರ್ಕಾರಕ್ಕೂ ಮಾತುಕತೆ ನಡೆಸುವಲ್ಲಿ ತಾವೂ ಸಹಕರಿಸುವ ಇಂಗಿತವನ್ನು ವೇದಿಕೆಯ ಸದಸ್ಯರು ವ್ಯಕ್ತಪಡಿಸಿದ್ದಾರೆ. ದಲಿತ ಮುಖಂಡ ಎನ್ ವೆಂಕಟೇಶ್, ಹಿರಿಯ ರಾಜಕಾರಣಿ ಮತ್ತು ಸಾಹಿತಿ ಬಿ ಟಿ ಲಲಿತಾನಾಯಕ್, ಹಿರಿಯ ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ್ ಹೆಗಡೆ, ಪ್ರೊ. ವಿ. ಎಸ್ ಶ್ರೀಧರ್, ಪ್ರೊ ನಗರಗೆರೆ ರಮೇಶ್ ಹಾಗೂ ತಾರಾರಾವ್ ಒಳಗೊಂಡ ವೇದಿಕೆ ಈ ಕುರಿತು ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಗಡಿಗಳ ಕಾಡು ಪ್ರದೇಶದಲ್ಲಿ ಓಡಾಡಿಕೊಂಡಿರುವ ನಕ್ಸಲ್ ಯುವಕರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ. ಈಗಾಗಲೇ ಈ ಯುವಕ ಯುವತಿಯರಿಗೆ ಆದಿವಾಸಿ ಜನರ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಮತ್ತು ಸಮಿತಿಗಳ ಆಹ್ವಾನ ತಲುಪಿದ್ದು ಅವರಿಂದ ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆಯೂ ಇದೆ.

ಈ ಹಿಂದೆ ಕೂಡಾ ಇಂತಹುದೇ ಒಂದು ವಿದ್ಯಮಾನ ರಾಜ್ಯದಲ್ಲಿ ಜರುಗಿತ್ತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ದಿ. ಎಚ್ ಎಸ್ ದೊರೆಸ್ವಾಮಿ, ಪತ್ರಕರ್ತೆ ದಿ. ಗೌರಿ ಲಂಕೇಶ್, ದಿ. ಪ್ರೊ ಜಿ ಕೆ ಗೋವಿಂದರಾವ್ ಮೊದಲಾದವರು ಈ ಕುರಿತು ಮುತುವರ್ಜಿ ವಹಿಸಿ ಹಲವಾರು ನಕ್ಸಲ್ ಕಾರ್ಯಕರ್ತರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮವಹಿಸಿದ್ದರು. ಪ್ರಜಾಪ್ರಭುತ್ವವಾದಿ ನೆಲೆಯಲ್ಲಿ ಚಳುವಳಿಗಳು ನಡೆಯಲು ಸರ್ಕಾರ ಅನುವು ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮವಾಗಿ ನಕ್ಸಲ್ ಮುಖಂಡರಾಗಿದ್ದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಅವರು ಈ ರೀತಿಯಲ್ಲಿ ಮುಖ್ಯವಾಹಿನಿಗೆ ಬಂದಿದ್ದರು. ನಂತರದಲ್ಲಿ ಸಹ ಈ ಚಳವಳಿಯಲ್ಲಿ ತೊಡಗಿದ್ದ ಕೆಲವಾರು ಮಂದಿ ಬಂದೂಕು ತೊರೆದು ಮುಖ್ಯವಾಹಿನಿಗೆ ಬಂದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಸಂವಿಧಾನಬದ್ಧವಾಗಿ ಹೋರಾಟದ ಬದುಕಿನಲ್ಲಿ ಸಕ್ರಿಯವಾಗಿದ್ದಾರೆ. ಇದಕ್ಕೂ ಅಂದು ಕಾಳಜಿ ವಹಿಸಿದ್ದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ.

ಈ ಪ್ರಕ್ರಿಯೆಯಲ್ಲಿ ಅನೇಕ ಪೊಲೀಸ್ ಆಧಿಕಾರಿಗಳ ಪ್ರಬುದ್ಧ ತೀರ್ಮಾನ ಮತ್ತು ಕಾಳಜಿ ಬದ್ಧತೆಗಳೂ ಕೆಲಸ ಮಾಡಿವೆ. ನಕ್ಸಲ್ ಸಮಸ್ಯೆಯನ್ನು ಕಾನೂನು ಅಪರಾಧ ಎಂಬ ಚೌಕಟ್ಟಿನಲ್ಲಿ ಮಾತ್ರ ನೋಡಿದಾಗ ತೋರುವ ಪರಿಹಾರ ಒಂದಾದರೆ, ಇದನ್ನು ಒಂದು ಸಾಮಾಜಿಕ ಹಾಗೂ ರಾಜಕೀಯ ಸಂಗತಿ ಮತ್ತು ಸಮಾಜೋ-ರಾಜಕೀಯ ಸಮಸ್ಯೆಗಳಿಗೆ ಈ ಯುವಕರು ಕಂಡುಕೊಂಡಿರುವ ಪರಿಹಾರ ಎಂದು ನೋಡಿದಾಗ ತೋರುವ ಪರಿಹಾರ ಬೇರೆ. ನಕ್ಸಲೀಯ ಚಳುವಳಿ ಒಂದು ಸಮಸ್ಯೆಯಲ್ಲ, ಇರುವ ಸಮಾಜದ ಸಮಸ್ಯೆಗಳಿಗೆ ಕೆಲವರು ಕಂಡುಕೊಂಡಿರುವ ತಪ್ಪು ಪರಿಹಾರ ಎನ್ನಬಹುದು. ಹೀಗೆ ನೋಡಿದಾಗ ಒಂದು ಸರ್ಕಾರವಾಗಿ, ಅಧಿಕಾರಿಗಳಾಗಿ ಮತ್ತು ನಾಗರಿಕ ಸಮಾಜವಾಗಿ ವರ್ತಿಸಬೇಕಾದ ರೀತಿ ಮುಖ್ಯ. ಎನ್ ಕೌಂಟರ್ ಗಳ ಮೂಲಕ ಇದನ್ನು ಪರಿಹರಿಸಲು ಸಾಧ್ಯವಿಲ್ಲ. ಸಮಸ್ಯೆಗಳ ಮೂಲವನ್ನು ಗ್ರಹಿಸಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕೆಲವಾರು ಅಧಿಕಾರಿಗಳ ಶ್ರಮ ಮತ್ತು ಕಾಳಜಿಗಳು ಶ್ಲಾಘನೀಯ. ಇಂತವರ ಪ್ರಯತ್ನಗಳನ್ನು ಸರ್ಕಾರವೂ ಗುರುತಿಸಿ ಮನ್ನಣೆ ನೀಡಲಿ. ಹಿಂದೆ ಈ ಬಗೆಯಲ್ಲಿ ಸಮಸ್ಯೆಗಳನ್ನು ಗ್ರಹಿಸಿ ಪರಿಹರಿಸಲು ಪ್ರಯತ್ನಿಸುತ್ತಿದ್ದ ಐ ಪಿ ಎಸ್ ಅಧಿಕಾರಿ ಮಧುಕರ ಶೆಟ್ಟಿಯವರು ಇಂದಿಗೂ ಗೌರವಕ್ಕೆ ಪಾತ್ರರಾಗುತ್ತಾರೆ. ಸಮಾಜದಲ್ಲಿ ಅಪರಾಧಗಳನ್ನು ಸಮಾಜಶಾಶ್ತ್ರೀಯ ನೆಲೆಯಲ್ಲಿ ಗ್ರಹಿಸುವ ತಿಳುವಳಿಕೆ ಮತ್ತು ಪ್ರಬುದ್ಧತೆ ಹೊಂದಿದ್ದ ಅಪರೂಪದ ಪೊಲೀಸ್ ಆಧಿಕಾರಿ ಮಧುಕರ ಶೆಟ್ಟಿಯಾಗಿದ್ದರು.

ಇದೀಗ, ಕರ್ನಾಟಕದಲ್ಲಿ ಹೊಸ ಅಧ್ಯಾಯವೊಂದು ತೆರೆಯಲಿ. ನಕ್ಸಲೀಯರಾಗಿ ಕಡಲೆಯುತ್ತಿರುವ ಯುವಕ ಯುವತಿಯರು ಎಲ್ಲರಂತೆ ಉತ್ತಮ ಬದುಕು ಸಾಗಿಸಲಿ. ಈ ಯುವಕರು ಯಾವ ಸಮಸ್ಯೆಗಳನ್ನು ತೋರಿಸುತ್ತಿದ್ದಾರೋ ಅವುಗಳಲ್ಲಿ ಗಂಭೀರವಾದ ಸಮಸ್ಯೆಗಳನ್ನು ಸರ್ಕಾರ ಕೇಳಿಸಿಕೊಳ್ಳಲಿ, ಅವುಗಳ ತುರ್ತು ಪರಿಹಾರಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಿ, ಹೊಣೆಯರಿತ ಅಧಿಕಾರಿಗಳನ್ನು ಇದಕ್ಕಾಗಿ ನೇಮಿಸಲಿ. ಇದರೊಂದಿಗೆ ಶರಣಾಗತಿ ನೀತಿಗೆ ಒಪ್ಪಿ ಮುಖ್ಯವಾಹಿನಿಗೆ ಸೇರಿಕೊಳ್ಳುವ ಯುವಕ ಯುವತಿಯರು ಮತ್ತೆ ತಿಂಗಳುಗಟ್ಟಲೆ ಜೈಲು ವಾಸ ಅನುಭವಿಸುವುದು, ವರ್ಷಗಟ್ಟಲೆ ಕೋರ್ಟಿಗೆ ಅಲೆಯುವುದು, ಕನಿಷ್ಟ ಒಂದು ಸೂರು, ಉದ್ಯೋಗ ಹೊಂದಿ ಬದುಕು ಕಟ್ಟಿಕೊಳ್ಳಲು ವರ್ಷಗಟ್ಟಲೆ ಪರದಾಡುವುದು ಇವೆಲ್ಲಾ ತಪ್ಪಲಿ. ಈಗಾಗಲೇ ಹೊರಗೆ ಬಂದಿರುವ ಕೆಲ ಮಾಜಿ ನಕ್ಸಲರೂ ಈ ವಿಷಯದಲ್ಲಿ ಇನ್ನೂ ಪರದಾಡುತ್ತಿದ್ದಾರೆ. ಇತ್ತೀಚೆಗೆ ಪದ್ಮನಾಭ ನಿಲಗುಳಿಯವರು ಮಾಧ್ಯಮದ ಎದುರು ತೆರೆದಿಟ್ಟಿದ್ದ ಅವರ ಚಿಂತಾಜನಕ ಪರಿಸ್ಥಿತಿ ಇದಕ್ಕೆ ಸಾಕ್ಷಿ.

ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮಾನವೀಯವಾಗಿ ನಡೆದುಕೊಳ್ಳಲಿದೆ ಮತ್ತು ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ದೃಢವಾದ ಹೆಜ್ಜೆ ಇಡಲಿದೆ ಎಂಬ ಭರವಸೆ ಎಲ್ಲರಿಗಿದೆ.

More articles

Latest article