Thursday, December 12, 2024

ಮೂರೂ ಕ್ಷೇತ್ರಗಳಲ್ಲಿ ಗೆಲುವು ಶತಸಿದ್ದ: ಸಿದ್ದರಾಮಯ್ಯ ವಿಶ್ವಾಸ

Most read

ಶಿಗ್ಗಾಂವಿ : ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಸಿದ್ದ ಎಂದು ಸಿ.ಎಂ.ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಇದು ನುಡಿದಂತೆ ನಡೆದ ಕಾಂಗ್ರೆಸ್ ಮತ್ತು ಮಾತಿಗೆ ತಪ್ಪಿದ ಬಿಜೆಪಿ ನಡುವಿನ ಚುನಾವಣೆ ಎಂದು ಸಿ.ಎಂ ಬಣ್ಣಿಸಿದರು. ರಾಜ್ಯದಲ್ಲಿ ಇವತ್ತಿನವರೆಗೂ ಬಿಜೆಪಿ ಬಹುಮತ ಪಡೆದು ಅಧಿಕಾರ ನಡೆಸಿಲ್ಲ. ಒಂದು ಬಾರಿಯೂ ಬಿಜೆಪಿಗೆ ಬಹುಮತ ಸಿಕ್ಕಿಲ್ಲದ್ದರಿಂದ ಮೂರು ಬಾರಿಯೂ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಅಧಿಕಾರ ನಡೆಸಿದರು. ಬಿಜೆಪಿ ಚುನಾವಣೆ ವೇಳೆ ಕೊಟ್ಟ ಭರವಸೆಗಳಲ್ಲಿ ಶೇ10 ರಷ್ಟನ್ನೂ ಈಡೇರಿದಿಲ್ಲ. ನಾವು ಕೊಟ್ಟ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಬಗ್ಗೆ ನಾವು ಯಾವುದೇ ವೇದಿಕೆಯಲ್ಲಿ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಸಿದ್ದ ಎಂದರು.

ಈಗ ನಮ್ಮ ಸರ್ಕಾರ 136 ಸೀಟುಗಳನ್ನು ಗೆದ್ದು ಅಧಿಕಾರದಲ್ಲಿದೆ. ಆದ್ದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಈ ಕ್ಷೇತ್ರಗಳ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಬಸವರಾಜ ಬೊಮ್ಮಾಯಿ ಎಂಥಾ ಮನುಷ್ಯ ಅಂದ್ರೆ, ಲೋಕಸಭಾ ಚುನಾವಣೆಗೆ ನಾನು ನಿಲ್ಲಲ್ಲ. ನನಗೆ ಬೇಕಾಗಿಲ್ಲ ಅಂತ ಹೇಳ್ತಾ ಹೇಳ್ತಾ ಅವರೇ ಟಿಕೆಟ್ ತಗೊಂಡು ಅವರೇ ಚುನಾವಣೆಗೆ ಸ್ಪರ್ಧಿಸಿದರು. ಈಗ ಉಪ ಚುನಾವಣೆಯಲ್ಲಿ ನನ್ನ ಮಗ ಸ್ಪರ್ಧಿಸಲ್ಲ. ನನ್ನ ಮಗನಿಗೆ ಟಿಕೆಟ್ ಕೇಳಲ್ಲಾ, ಕೇಳಲ್ಲಾ ಅನ್ನುತ್ತಲೇ ಅವರ ಮಗ ಭರತ್ ಗೇ ಟಿಕೆಟ್ ತಂದರು. ಇದು ಬೊಮ್ಮಾಯಿ ಅವರ ಸ್ವಭಾವ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ಮೋದಿ ಕುಟುಂಬ ರಾಜಕಾರಣ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ, ಇಲ್ಲಿ ಎಸ್.ಆರ್ ಬೊಮ್ಮಾಯಿ ಅವರ ಮೊಮ್ಮಗ, ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಹಾಗೆಯೇ ಕುಟುಂಬ ರಾಜಕಾರಣವನ್ನು ಬಿಟ್ಟು ಬೇರೇನೂ ಮಾಡದ ದೇವೇಗೌಡರು ತಮ್ಮ ಮಕ್ಕಳಾದ ಕುಮಾರಸ್ವಾಮಿ, ಮತ್ತು ರೇವಣ್ಣ ಅವರನ್ನು ಅಪ್ಪಿಕೊಂಡಿದಾರೆ ಎಂದು ವ್ಯಂಗ್ಯವಾಡಿದರು

ಮೋದಿ ಅಂದರೆ ಇದೇನೇ. ಹೇಳಿದ್ದನ್ನು ಯಾವತ್ತೂ ಮಾಡಲ್ಲ. ಬರೀ ಭಾಷಣ ಮಾಡ್ಕೊಂಡು ಓಡಾಡ್ತಾರೆ ಎಂದು ಮೋದಿ ಹೇಳಿದ ಸುಳ್ಳುಗಳ ಸರಮಾಲೆಗಳನ್ನು ಪಟ್ಟಿ ಮಾಡಿದರು. ಕಪ್ಪುಹಣ ತರ್ತೀನಿ , ಪ್ರತಿಯೊಬ್ಬ ಭಾರತೀಯರ ಖಾತೆಗೂ 15 ಲಕ್ಷ ಹಾಕ್ತೀನಿ ಅಂದ್ರು. ಕಪ್ಪು ಹಣವನ್ನೂ ತರಲಿಲ್ಲ, ನಯಾ ಪೈಸೆ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು, ಆದರೆ ರೈತರ ಖರ್ಚು ಮೂರು ಪಟ್ಟು ಹೆಚ್ಚಾಗುವಂತೆ ಮಾಡಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸ್ತೀವಿ ಎಂದರು. ಇರುವ ಉದ್ಯೋಗಗಳನ್ನೂ ಕಿತ್ತುಕೊಂಡು ಪಕೋಡಾ ಮಾರೋಕೆ ಹೋಗಿ ಅಂದರು.

ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸ್ತೀನಿ ಅಂದರು. ಆದರೆ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಎಂದು ಭಾಷಣ ಭಾರಿಸಿದ ಮೋದಿಯವರು ಪೆಟ್ರೋಲ್, ಡೀಸೆಲ್, ಗ್ಯಾಸ್, ಅಡುಗೆ ಎಣ್ಣೆ, ಬೇಳೆ ಕಾಳು, ರಸಗೊಬ್ಬರ ಎಲ್ಲದರ ಬೆಲೆ ಆಕಾಶಕ್ಕೆ ಏರಿಸಿದರು. ದೇಶದ ಸಾಲವನ್ನೆಲ್ಲಾ ತೀರಿಸ್ತೀನಿ ಎಂದರು. ಆದರೆ ದೇಶದ ಸಾಲವನ್ನು ಮೂರು ಪಟ್ಟು ಹೆಚ್ಚಿಸಿದರು.

ಕರ್ನಾಟಕದ ಆರ್ಥಿಕತೆ ದಿವಾಳಿ ಆಗಿದೆ ಎಂದರು. ಆದರೆ ಕರ್ನಾಟಕದ ಆರ್ಥಿಕತೆ, ದೇಶದ ಆರ್ಥಿಕತೆಗಿಂತ ಹೆಚ್ಚು ವೇಗದಲ್ಲಿ ಪ್ರಗತಿ ಸಾಧಿಸಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು. ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಘೋಷಿಸಿದೆ. ಬಿಜೆಪಿ ಅವಧಿಯಲ್ಲೇ 216 ಮಂದಿಗೆ ನೋಟಿಸ್ ನೀಡಿದ್ದರು. ಈಗ ಇದೇ ಬಿಜೆಪಿ ತಾನೇ ಮಾಡಿದ ಕೆಲಸಕ್ಕೆ ತಾನೇ ಪ್ರತಿಭಟನೆ ನಡೆಸುತ್ತಿದ್ದಾರೆ. ಎಂಥಾ ನಾಟಕ ಆಡ್ತಾರೆ ನೋಡಿ ಎmದು ವ್ಯಂಗ್ಯವಾಡಿದರು.

ನನ್ನ ಮತ್ತು ನನ್ನ ಪತ್ನಿ ವಿರುದ್ಧ ಷಡ್ಯಂತ್ರ ನಡೆಸಿ ಸುಳ್ಳು ಕೇಸು ಹಾಕಿಸಿದ್ದಾರೆ. ನಾಳೆ ಲೋಕಾಯುಕ್ತ ಪೊಲೀಸರ ಎದುರು ಸುಳ್ಳು ಕೇಸಿನ ಬಗ್ಗೆ ಹೇಳಿಕೆ ಕೊಡ್ಬೇಕಾಗಿದೆ. ಎಂಥಾ ಕುತಂತ್ರ ಮಾಡಿದ್ದಾರೆ ನೋಡಿ. ಇದಕ್ಕೆಲ್ಲಾ ಉತ್ತರ ಕೊಡಬೇಕು ಅಂದರೆ ಉಪ ಚುನಾವಣೆಯಲ್ಲಿ ಪಠಾಣ್ ಗೆಲ್ಲಿಸಿ. ಇಲ್ಲಿ ಪಠಾಣ್ ಗೆದ್ದರೆ ನನಗೆ ಶಕ್ತಿ ಬರುತ್ತದೆ. ಬಿಜೆಪಿಯ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂದು ಕರೆ ನೀಡಿದರು.

More articles

Latest article