ಬೆಂಗಳೂರು: ಕರ್ನಾಟಕದ ರಾಜಕೀಯ ಮತ್ತು ಆರ್ಥಿಕ ಇತಿಹಾಸದಲ್ಲಿ ಇಂದು ಒಂದು ಮಹತ್ವದ ದಿನ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಾರ್ಚ್ 6, 2026 ಬೆಳಿಗ್ಗೆ 10:15ಕ್ಕೆ ವಿಧಾನಸಭೆಯಲ್ಲಿ ರಾಜ್ಯದ 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸುತ್ತಿದ್ದಾರೆ. ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರಿಗೆ ಇದು ದಾಖಲೆಯ 17ನೇ ಬಜೆಟ್ ಆಗಿದೆ.
ಬಜೆಟ್ನ ಪ್ರಮುಖ ಮುಖ್ಯಾಂಶಗಳು:
ಬಜೆಟ್ ಗಾತ್ರ : ಈ ಬಾರಿಯ ಬಜೆಟ್ ಗಾತ್ರವು ಸುಮಾರು ₹4.20 ಲಕ್ಷಕೋಟಿ ತಲುಪುವ ನಿರೀಕ್ಷೆಯಿದೆ.
ಗ್ಯಾರಂಟಿ ಯೋಜನೆಗಳ ಸವಾಲು: ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳ ಅನುಷ್ಠಾನಕ್ಕೆ ಬಜೆಟ್ನಲ್ಲಿ ಸಿಂಹಪಾಲು ಮೀಸಲಿಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ಸುಮಾರು ₹55,000 ರಿಂದ ₹60,000 ಕೋಟಿ ವೆಚ್ಚವಾಗುವ ಅಂದಾಜಿದೆ.
ಕಂದಾಯ ಕೊರತೆ: ಜಿಎಸ್ಟಿ ದರಗಳ ತರ್ಕಬದ್ಧಗೊಳಿಸುವಿಕೆಯಿಂದಾಗಿ ರಾಜ್ಯದ ಆದಾಯದಲ್ಲಿ ಸುಮಾರು ₹15,000 ರಿಂದ ₹18,000 ಕೋಟಿ ಕೊರತೆ ಎದುರಾಗುವ ಸಾಧ್ಯತೆಯಿದೆ. ರಾಜಸ್ವ ಸಂಗ್ರಹಣೆ ಮತ್ತು ಜನಪ್ರಿಯ ಯೋಜನೆಗಳ ನಡುವೆ ಸಮತೋಲನ ಸಾಧಿಸುವುದು ಸಿಎಂಗೆ ದೊಡ್ಡ ಸವಾಲಾಗಿದೆ.
ಬೆಂಗಳೂರು ಮತ್ತು ಪ್ರಾದೇಶಿಕ ಅಭಿವೃದ್ಧಿ: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಿಂದುಳಿದ ತಾಲೂಕುಗಳ ಪ್ರಗತಿಗೆ ವಿಶೇಷ ಅನುದಾನ ನೀಡುವ ಸಾಧ್ಯತೆಯಿದೆ. ಪ್ರಾದೇಶಿಕ ಅಭಿವೃದ್ಧಿಗೆ ಕನಿಷ್ಠ ₹5,000 ಕೋಟಿ ಮೀಸಲಿಡುವ ನಿರೀಕ್ಷೆಯಿದೆ.
ಹೊಸ ಯೋಜನೆಗಳ ಭರವಸೆ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಉಚಿತ ಸೀರೆ, ರೈತರಿಗಾಗಿ ‘ಸಮಗ್ರ ಕೃಷಿ ಯೋಜನೆ’ ಮತ್ತು ಬಡ ಕುಟುಂಬಗಳಿಗೆ ‘ಇಂದಿರಾ ಆಹಾರ ಕಿಟ್’ ವಿತರಣೆಯಂತಹ ಹೊಸ ಘೋಷಣೆಗಳು ಹೊರಬೀಳುವ ಸಾಧ್ಯತೆಯಿದೆ.
ರಾಜಕೀಯ ಕುತೂಹಲ:
ಈ ಬಜೆಟ್ ಅಧಿವೇಶನದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಬಹುದು ಎಂಬ ವದಂತಿಗಳ ನಡುವೆ ಸಿದ್ದರಾಮಯ್ಯ ಅವರು ಈ ಬಜೆಟ್ ಮಂಡಿಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಪ್ರತಿಪಕ್ಷಗಳು ರಾಜ್ಯದ ಸಾಲದ ಹೊರೆ ಏರುತ್ತಿರುವುದನ್ನು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.

