ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ; ಅನುಮತಿ ಇಲ್ಲದೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಅಚ್ಚು ಹಾಕಿಸಿದ್ದಕ್ಕೆ ಆಕ್ಷೇಪ; ಸಚಿವ ಪ್ರಿಯಾಂಕ್‌ ಖರ್ಗೆ ದಿಟ್ಟ ನಿಲುವು

Most read

ಬೆಂಗಳೂರು: ಜನವರಿ 29 ರಿಂದ ಫೆಬ್ರುವರಿ 6 ರವರೆಗೆ ಸೇಡಂ ತಾಲೂಕಿನ ಬೀರನಹಳ್ಳಿ ಗೇಟ್ ಸಮೀಪ ನಡೆಯಲಿರುವ 7ನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಬಹುತೇಕ ಸಚಿವರು ಮತ್ತು ಕಾಂಗ್ರೆಸ್‌ ಸಂಸದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಹರಿದಾಡುತ್ತಿದೆ.

ಮುಖ್ಯಮಂತ್ರಿಗಳು ಭಾಗವಹಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಮುಖ್ಯಮಂತ್ರಿಗಳ ಈ ನಿಲುವಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಜೆಪಿ ಚಳವಳಿಯ ಪ್ರೇರಣೆ ಪಡೆದ, ರಾಜಕೀಯ ಜೀವನದುದ್ದಕ್ಕೂ ಬಿಜೆಪಿ, ಸಂಘಪರಿವಾರ ಮತ್ತು ಬಲಫಂಥೀಯ ಧೋರಣೆಗಳನ್ನು ವಿರೋಧಿಸುತ್ತಾ ಬಂದ ಸಿದ್ದರಾಮಯ್ಯ ಇಂತಹುದೊಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎನ್ನುವುದು ಅಚ್ಚರಿ ಮೂಡಿಸಿತ್ತು. ಕೊನೆಗೂ ಸಿದ್ದರಾಮಯ್ಯ ತಾವು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾರತ ವಿಕಾಸ ಸಂಗಮ ಸಂಸ್ಥೆಯವರು ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವುದನ್ನು ಗಮನಿಸಿದ್ದೇನೆ. ಈ ಬಗ್ಗೆ ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಈ ಕಾರ್ಯಕ್ರಮವನ್ನು ಆಯೋಜಿಸಿರುವ ಸಂಸ್ಥೆಯ ಹಿನ್ನೆಲೆಯ ವಿವರವನ್ನು ತರಿಸಿ ಪರಿಶೀಲಿಸಿದ ನಂತರ ಅದರಲ್ಲಿ ಭಾಗವಹಿಸದೆ ಇರಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.

ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೂ ಇದೇ ನಿಲುವು ತಾಳಿದ್ದಾರೆ. ಅವರೂ ಸ್ಪಷ್ಟನೆ ನೀಡಿದ್ದು ತಾವು ಭಾಗವಹಿಸುತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಎಕ್ಸ್‌ ನಲ್ಲಿ ಅವರು ಭಾರತ ವಿಕಾಸ ಸಂಗಮ ಸಂಸ್ಥೆ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಮುದ್ರಣವಾಗಿರುವುದನ್ನು ಮಾಧ್ಯಮಗಳ ಮೂಲಕ ಗಮನಿಸಿದೆ. ನನಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ, ನನಗೆ ಆಹ್ವಾನವೂ ಬಂದಿಲ್ಲ.ನನಗೆ ಆಹ್ವಾನ ನೀಡದೆಯೇ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಹಂಚುವುದು ಸಮಂಜಸವಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಉಳಿದ ಸಚಿವರು ಇವರನ್ನು ಅನುಸರಿಸಲಿದ್ದಾರೆಯೇ ಎಂದು ಕಾದು ನೋಡಬೇಕಿದೆ.

ಏನಿದು ಕಾರ್ಯಕ್ರಮ? ಇದು ಬಲಪಂಥೀಯರ ಕಾರ್ಯಕ್ರಮವೇ?
7ನೇ ಭಾರತೀಯ ಸಂಸ್ಕೃತಿ ಉತ್ಸವ ಜನವರಿ 29 ರಿಂದ ಫೆಬ್ರುವರಿ 6 ರವರೆಗೆ ರಾಷ್ಟ್ರ ಮಟ್ಟದ ಕಾರ್ಯಕ್ರಮ ಸೇಡಂ ತಾಲೂಕಿನ ಬೀರನಹಳ್ಳಿ ಗೇಟ್ (ಕಲಬುರಗಿ – ಸೇಡಂ ಮುಖ್ಯರಸ್ತೆ) ಬಳಿ‌ 240ಎಕರೆ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಭಾರತೀಯ ಸಂಸ್ಕೃತಿ ಉತ್ಸವ ತಿಳಿಸಿತ್ತು ಮತ್ತು ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು.

ಸಚಿನ್ ತೆಂಡೂಲ್ಕರ್,ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಬಾಬಾ ರಾಮ್ ದೇವ್, ಮಂಜಮ್ಮ ಜೋಗತಿ, ವೀರೇಂದ್ರ ಹೆಗ್ಗಡೆ ದಂಪತಿಗಳು, ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಸುಧಾ ಮೂರ್ತಿ, ತೇಜಸ್ವಿನಿ ಅನಂತಕುಮಾರ, ಬಿಎಸ್ ಯಡಿಯೂರಪ್ಪ, ಸಚಿವರಾದ ಶರಣ ಪ್ರಕಾಶ್ ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ, ಶಿವರಾಜ ಪಾಟೀಲ್, ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಹುಬ್ಬಳ್ಳಿ ಸಿದ್ದಾರೂಡ ಶ್ರೀ, ದತ್ತಾತ್ರೇಯ ಹೊಸಬಾಳೆ, ನಟ ರಮೇಶ ಅರವಿಂದ, ಸಂಸದ ಡಾ ಸಿ ಎನ್ ಮಂಜುನಾಥ ಮೊದಲಾದವರು ಭಾಗವಹಿಸುವ ಮಾಹಿತಿ ಇದೆ. ಶ್ರೀ ಸುಬುದೇಂದ್ರತೀರ್ಥ ಸ್ವಾಮೀಜಿ, ಪದ್ಮಶ್ರೀ ಪುರಸ್ಕೃತ ಡಾ. ಖಾದರ್ ವಲಿ, ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ವಿದ್ಯಾರಣ್ಯ ಸ್ವಾಮೀಜಿ ನಾಡೋಜ ಗೊರೂರು ಚೆನ್ನಬಸಪ್ಪ, ವಿಜಯ ಸಂಕೇಶ್ವರ, ನಿತಿನ್ ಗಡ್ಕರಿ, ಕೆ ಎನ್ ಗೋವಿಂದಾಚಾರ್ಯ, ಹೆಚ್ ಡಿ ಕುಮಾರ ಸ್ವಾಮಿ, ಡಾ. ನಿರ್ಮಲಾನಂದನಾಥಸ್ವಾಮಿಜಿ, ನಾಡೋಜ ಮಹೇಶ ಜೋಶಿ ಸೇರಿದಂತೆ ಪದ್ಮಶ್ರೀ, ಪದ್ಮ ವಿಭೂಷಣ ಪುರಸ್ಕೃರತರು ಹಾಗೂ ಕೇಂದ್ರ ಮತ್ತು ರಾಜ್ಯ ಮಂತ್ರಿಗಳು ಇನ್ನೂ ಅನೇಕ ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.

ಒಂಬತ್ತು ದಿನಗಳಲ್ಲಿ ಒಂದು ಲಕ್ಷ ಮಾತೆಯರಿಂದ ಮಕ್ಕಳಿಗೆ ಕೈತುತ್ತು ಕಾರ್ಯಕ್ರಮ ಇರುತ್ತದೆ. ಶೋಭಾ ಯಾತ್ರೆ, ಪ್ರದರ್ಶನಿ ಉದ್ಘಾಟನೆ, ಮಾತೃ ಸಮಾವೇಶ, ಶೈಕ್ಷಣಿಕ ಸಮಾವೇಶ, ಯುವ ಸಮಾವೇಶ, ಗ್ರಾಮ ಕೃಷಿ ಸಮಾವೇಶ, ಆಹಾರ ಆರೋಗ್ಯ ಸಮಾವೇಶ, ಸ್ವಯಂ ಉದ್ಯೋಗ ಸಮಾವೇಶ, ಪ್ರಕೃತಿ ಮತ್ತು ನಾವು, ಸೇವಾ ಶಕ್ತಿ ಸಮಾವೇಶ, ದೇಶ ಧರ್ಮ ಸಂಸ್ಕೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿಗಳಿಗೆ ಶಿವಸುಂದರ್‌ ಬಹಿರಂಗ ಪತ್ರ:
ಇನ್ನು ಖ್ಯಾತ ಚಿಂತಕ ಶಿವಸುಂದರ್ ಅವರು ಈ ಸಂಬಂಧ ಮುಖ್ಯಮಂತ್ರಿಗಳಿಗೆ ಬರೆದಿರುವ ಬಹಿರಂಗ ಪತ್ರ ತೀವ್ರ ಕುತೂಹಲ ಮೂಡಿಸಿದೆ ಮತ್ತು ಚಿಂತನೆಗೆ ಒರೆ ಹಚ್ಚಿದೆ. ಸೇಡಂನ ಸಂಘಿ ಕಾರ್ಯಕ್ರಮದಲ್ಲಿ ನೀವು ಭಾಗವಹಿಸದಿರುವುದು ಉತ್ತಮ ನಿರ್ಧಾರವಾಗಿದೆ. ಸೇಡಂ ನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಹೆಸರಿನ ಸಂಘಿ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುತ್ತಿಲ್ಲ ಎಂದು ತಮ್ಮ X ಖಾತೆಯಲ್ಲಿ ಬಹಿರಂಗವಾಗಿ ಘೋಷಣೆ ಮಾಡಿದ್ದೀರಿ. ಇದು ನೀವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ತೆಗೆದುಕೊಂಡ ಪ್ರತಿಜ್ಞೆಗೆ ಸರಿಯಾದ ನಿರ್ಧಾರ.

ಆದರೆ ಆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಇರುವುದು ಕೇವಲ ನಿಮ್ಮ ಹೆಸರು ಮಾತ್ರವಲ್ಲ. ಸಂಘಟಕರು ಹೊರತಂದಿರುವ 52 ಪುಟಗಳ ಆಹ್ವಾನ ಪತ್ರಿಕೆಯ ಪ್ರಕಾರ ನಿಮ್ಮ ಅರ್ಧ ಸಚಿವ ಸಂಪುಟವೇ ಅದರಲ್ಲಿ ಭಾಗವಹಿಸುತ್ತಿದೆ ಮತ್ತು ಆ ಪ್ರದೇಶದ ದೊಡ್ಡ ದೊಡ್ಡ ಕಾಂಗ್ರೆಸ್ ನಾಯಕರೂ ಇದರಲ್ಲಿ ಭಾಗವಹಿಸಲಿದ್ದಾರೆ. 28-1-2025 ರಂದು ಪ್ರಾರಂಭಿಕ ಶೋಭಾ ಯಾತ್ರೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಾದ ಶರಣ ಪ್ರಕಾಶ್ ಪಾಟೀಲ್ ಮತ್ತು ಕಾಂಗ್ರೆಸ್ ಸಂಸದರಾದ ರಾಧಾಕೃಷ್ಣ ದೊಡ್ಡಮನಿಯವರು ಭಾಗವಹಿಸುತ್ತಿದ್ದಾರೆ. 29-1-2025 ರಂದು ಶುರುವಾಗುವ ಮೊದಲ ದಿನ ಕಾರ್ಯಕ್ರಮದಲ್ಲಿ ಮಂತ್ರಿ ಪ್ರಿಯಾಂಕಾ ಖರ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 30-1-2025 ರಂದು ನಡೆಯಲಿರುವ ಶಿಕ್ಷಣದ ಹೆಸರಿನ ಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಸರ್ಕಾರದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ವಹಿಸಿಕೊಳ್ಳಲಿದ್ದಾರೆ.1-2-2025 ರಂದು ನಡೆಯಲಿರುವ ಕೃಷಿ ಹೆಸರಿನ ಸಂಜೆಯೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಗ್ರೆಸ್ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ವಹಿಸಿಕೊಳ್ಳುತ್ತಿದ್ದಾರೆ. 3-2-2025 ರಂದು ನಡೆಯಲಿರುವ ಸ್ವಯಂ ಉದ್ಯೋಗದ ಹೆಸರಿನ ಕಾರ್ಯಕ್ರಾಮದ ಮುಖ್ಯ ಅತಿಥಿಯಾಗಿ ಕಾಂಗ್ರೆಸ್ಸಿನ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ್ ಭಾಗವಹಿಸಲಿದ್ದಾರೆ. 4-2-2025 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಳ್ಳಾರಿಯ ಕಾಂಗ್ರೆಸ್ ಸಂಸದ ತುಕಾರಾಮ್ ಭಾಗವಹಿಸಲಿದ್ದಾರೆ. ಅಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಕಾಂಗ್ರೆಸ್ಸಿನ ಅಜಯ್ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದಲ್ಲದೆ ಆ ಸಂಘಟನೆ ನಡೆಸುವ ಏಳು ದಿನಗಳ ವಿವಿಧ ಹೆಸರಿನ ಕಾರ್ಯಕ್ರಮದಲ್ಲಿ ಸರ್ಕಾರದ ಇಲಾಖೆಗಳೂ ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆಯೂ ಸಹಕರಿಸುತ್ತಿದೆ. ಹೀಗಾಗಿ ತಾವು ಮಾತ್ರ ಈ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರೆ ಸಾಲದು. ಸಚಿವ ಸಂಪುಟದ ಮುಖ್ಯಸ್ಥರಾಗಿ ತಾವು ಯಾವ ಕಾರಣಕ್ಕೆ ಆ ಸಭೆಯಲ್ಲಿ ಭಾಗವಹಿಸುತ್ತಿಲ್ಲವೋ, ಅದೇ ಕಾರಣಕ್ಕಾಗಿ ತಮ್ಮ ಸಚಿವ ಸಂಪುಟದ ಯಾರೂ ಕೂಡ ಈ ಸಂವಿಧಾನ ವಿರೋಧಿ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು. ಜೊತೆಗೆ ಸರ್ಕಾರದ ಯಾವ ಇಲಾಖೆಗಳೂ ಕೂಡ ಇದರಲ್ಲಿ ಯಾವುದೇ ರೀತಿಯಲ್ಲಿ ಭಾಗವಹಿಸಬಾರದು. ಹಾಗೆಯೇ ತಮ್ಮ ಒಪ್ಪಿಗೆಯಿಲ್ಲದೆ, ತಮ್ಮ ಗಮನಕ್ಕೆ ತರದೇ ತಮ್ಮ ಹೆಸರನ್ನು ಬಳಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎಂದು ಕೂಡ ತಾವು ಪರಿಶೀಲಿಸಬೇಕು. ಮುಖ್ಯಮಂತ್ರಿ ಕಚೇರಿಯ ಅಧಿಕೃತ ಒಪ್ಪಿಗೆ ಇಲ್ಲದೆ ರಾಜ್ಯದ ಮುಖ್ಯಮಂತ್ರಿಯ ಹೆಸರನ್ನು ಬಳಸಿಕೊಂಡ ಸಂಘಟಕರ ಮೇಲೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಸುಂದರ್ ಆಗ್ರಹಪಡಿಸಿದ್ದಾರೆ.

More articles

Latest article