ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಮಂಗಳವಾರ ಬೃಹತ್ ಶಕ್ತಿ ಪ್ರದರ್ಶನ ನಡೆದಿದೆ. ಶೋಷಿತರ ಸಮುದಾಯಗಳ ಪರವಾದ ಸಂಘಟನೆಗಳ ಒಕ್ಕೂಟ ಈ ಪ್ರತಿಭಟನೆ ಮತ್ತು ರಾಜಭವನ ಚಲೋವನ್ನು ಹಮ್ಮಿಕೊಂಡಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯ ಪರವಾಗಿ ಶಕ್ತಿ ಪ್ರದರ್ಶನ ನಡೆದಿದೆ.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಈ ಸಮಾವೇಶವನ್ನು ಆಯೋಜನೆ ಮಾಡಿದೆ. ಬೆಳಗ್ಗೆ 11 ಗಂಟೆಗೆ ಬೆಂಗಳೂರು ರೈಲ್ವೇ ನಿಲ್ದಾಣದಿಂದ ಸಮಾವೇಶ ಪ್ರಾರಂಭಗೊಂಡು, ನಂತರದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ನಡೆದಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಸಂವಿಧಾನದ ಮೂಲ ತತ್ವಗಳನ್ನು ಗಾಳಿಗೆ ತೂರಿದ್ದಾರೆ ಎಂದು ಸಮಾವೇಶ ಮುಗಿಸಿ ರಾಜ್ಯಭವನಕ್ಕೆ ತೆರಳುವಾಗ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ತೀರ್ವ ತಿಕ್ಕಾಟ ನಡೆದಿದೆ. ನಂತರ ಅವರನ್ನು ಪೊಲೀಸ್ ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಲು ಸಮಾವೇಶದಲ್ಲಿ ಸುಮಾರು 5 ಸಾವಿರಕ್ಕು ಹೆಚ್ಚು ಜನ ಸೇರಿದ್ದು ರಾಜಭವನ ಚಲೋ ವೇಳೆ ಅವರನ್ನು ಪೊಲೀಸರು ತಡೆ ಹಿಡಿದ್ದಾರೆ. ನಂತರ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ.
ರಾಜ್ಯಪಾಲರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಅಲ್ಲದೆ ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ವಿರುದ್ಧ ನಡೆಯುತ್ತಿರುವ ಪಿತೂರಿಯ ಭಾಗವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಈ ವೇಳೆ ಸಂಘಟನೆ ಆರೋಪ ಮಾಡಿದೆ.
ಸಿದ್ದರಾಮಯ್ಯ ಪರವಾಗಿ ಬೃಹತ್ ಶಕ್ತಿ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್, ರೈಲ್ವೇ ನಿಲ್ದಾಣ ಹಾಗೂ ರಾಜಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇದೆಲ್ಲವನ್ನು ಲೆಕ್ಕಿಸದ ಪ್ರತಿಭಟನಾಕಾರರು ರಾಜಭವನಕ್ಕೆ ತೆರಳಲು ಮುಂದಾದಾಗ ಅವರನ್ನು ಫ್ರೀಡಂ ಪಾರ್ಕ್ ನಲ್ಲೇ ತಡೆದಿದ್ದಾರೆ.