ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟು ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈ ಕೋರ್ಟ್ ಸೆ.12ಕ್ಕೆ ಮುಂದೂಡಿದೆ.
ಇಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಆರಂಭವಾಯಿತು. ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕರಣ್ ಶೆಟ್ಟಿ ವಾದ ಮಂಡಿಸಿದರು.
17ಎ ಅಡಿ ಪ್ರಾಸಿಕ್ಯೂಷನ್ ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ಲಲಿತಾ ಕುಮಾರಿ ಪ್ರಕರಣ ಉಲ್ಲೇಖಿಸಿ ಶಶಿಕರಣ್ ಶೆಟ್ಟಿ ವಾದ ಮಂಡಿಸಿದರು.
17ಎ ಅಡಿಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ತನಿಖಾಧಿಕಾರಿ ತನಗೆ ಬರುವ ಮಾಹಿತಿ ಪರಿಶೀಲಿಸುತ್ತಾನೆ. ಆದರೆ ಖಾಸಗಿ ದೂರುದಾರರ ವಿಷಯದಲ್ಲಿ ಹೀಗಾಗುವುದಿಲ್ಲ. ದೂರು ನೀಡಿದ ನಂತರ 15 ದಿನಗಳಿಂದ 6 ವಾರ ಕಾಲಾವಕಾಶ ಇದೆ. ಆದರೆ ಅದಕ್ಕೆ ಕಾಯದೇ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಎಂದು ವಾದಿಸಿದರು.
ಸಿಎಂ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ. ಇದಕ್ಕೆ ಅವಕಾಶ ಕೊಟ್ಟರೆ ನಿತ್ಯ ಹಲವು ಖಾಸಗಿ ದೂರು ದಾಖಲಾಗಬಹುದು. ಸಕ್ಷಮ ಪ್ರಾಧಿಕಾರಿಯೇ ಇದನ್ನೆಲ್ಲಾ ವಿಚಾರಣೆ ನಡೆಸಿದರೆ ಸಮಸ್ಯೆ ಆಗಲಿದೆ. ಪೊಲೀಸ್ ಅಧಿಕಾರಿಯ 17ಎ ಅಡಿ ಅನುಮತಿ ಪಡೆಯಬೇಕು ಎಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದಾರೆ.
ಕೋರ್ಟ್ ವಾದವನ್ನು ಆಲಿಸಿತು. ಬಳಿಕ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 12ರ ಮಧ್ಯಾಹ್ನ 12ಕ್ಕೆ ಮುಂದೂಡಿಕೆ ಮಾಡಿತು.