Thursday, December 12, 2024

ಅರಣ್ಯ ಭೂಮಿ ಒತ್ತುವರಿ: ಸಿದ್ದರಾಮಯ್ಯ ಸಂಪುಟದ ಮತ್ತೋರ್ವ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು

Most read

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿ ಅವರು, ತನಿಖೆಗೂ ಅನುಮತಿ ನೀಡಿದ್ದಾರೆ. ಇದೀಗ ರಾಜ್ಯ ಸಚಿವ ಸಂಪುಟದ ಮತ್ತೊಬ್ಬ ಸಚಿವ ಎನ್.ಎಸ್. ಬೋಸರಾಜು ಅವರ ವಿರುದ್ಧ ಆರ್ ಟಿ ಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜಭವನದ ಬಾಗಿಲು ತಟ್ಟಿದ್ದಾರೆ.

ಸಚಿವ ಬೋಸರಾಜು ಅವರು ತಮ್ಮ ಪತ್ನಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ದಿನೇಶ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ರಾಯಚೂರಿನ ರಕ್ಷಿತಾರಣ್ಯ ಪ್ರದೇಶದಲ್ಲಿ 5 ಎಕರೆ 27 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ದೂರು ದಾಖಲಿಸಲಾಗಿದೆ. ರಾಯಚೂರು ಉಪವಲಯ ಅರಣ್ಯಾಧಿಕಾರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ. ಆ ವರದಿ ಪ್ರಕಾರ ಬೋಸರಾಜು ಅವರ ಪತ್ನಿ ಎನ್.ಎಸ್.ಕೃಷ್ಣವೇಣಿ, ಸಿ.ಎಚ್.ಶ್ರೀನಿವಾಸ್, ಮುತ್ಯಾಲ ತಿರುಮಲ ಮತ್ತುವಿ.ಶಿವನಾದ ಅವರು ಆರೋಪಿಗಳಾಗಿದ್ದಾರೆ.

ಕೃಷ್ಣವೇಣಿಯವರು ಅರಣ್ಯ ಒತ್ತುವರಿಯಲ್ಲಿ ಪ್ರಭಾವ ಬಳಕೆ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಭೂಮಿ ಒತ್ತುವರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸೃಜನಪಕ್ಷಪಾತ ಎಸಾಗಿದ್ದಾರೆ. ತಮ್ಮದೇ ಗುಂಪು ಮಾಡಿಕೊಂಡು ರಕ್ಷಿತಾರಣ್ಯವನ್ನು ಕಬಳಿಸಿದ್ದಾರೆ. ಈ ಭಾಗದಲ್ಲಿ ಪ್ರತಿ ಚದರ ಅಡಿಗೆ ಕನಿಷ್ಟ 4 ಸಾವಿರ ರೂ. ಮಾರುಕಟ್ಟೆ ದರ ಇದೆ. ಇವರು ಒತ್ತುವರಿ ಮಾಡಿರುವ ಭೂಮಿಗೆ ನೂರಾರು ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವಿದೆ. ಕೃಷ್ಣವೇಣಿ ಅವರು 17 ಗುಂಟೆ ಜಮೀನನ್ನು ಕಬಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಅರಣ್ಯ ಒತ್ತುವರಿ ಸಂಬಂಧ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಬೋಸರಾಜು ಅವರನ್ನು ಸಂಪುಟದಿಂದ ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ದೂರಿನಲ್ಲಿ ಮನವಿ ಮಾಡಲಾಗಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

More articles

Latest article