Sunday, September 8, 2024

ಆರೋಗ್ಯ ಸರಿ ಇರಲಿಲ್ಲ ಅದಕ್ಕೆ ಓಟ್ ಮಾಡ್ಲಿಲ್ಲ; ಇಲ್ಲದಿದ್ರೆ ಅಡ್ಡಮತದಾನ ಮಾಡ್ತಿದ್ದೆ! : ಶಿವರಾಮ್‌ ಹೆಬ್ಬಾರ್‌

Most read

ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಗೈರಾಗಿದ್ದರು. ಈ ಮೂಲಕ ಕಾಂಗ್ರೆಸ್‌ ಪರ ನಿಲುವನ್ನು ಹೆಬ್ಬಾರ್‌ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಅದಲ್ಲದೇ ಅವರು ಬಿಜೆಪಿಯನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿದ್ದವು. ಈ ಎಲ್ಲ ಗೊಂದಲಗಳಿಗೆ ಸ್ವತಃ ಶಿವರಾಮ್‌ ಹೆಬ್ಬಾರ್‌ ಸ್ಪಷ್ಟನೆ ನೀಡಿದ್ದು, ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಲಿಲ್ಲ ಎಂದಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಆರೋಗ್ಯ ಸರಿ ಇರಲಿಲ್ಲ. ವೈದ್ಯರ ಸಲಹೆಯಂತೆ ಸಂಜೆ 6 ಗಂಟೆಗೆ ಮನೆಗೆ ಬರಬೇಕಾಯ್ತು. ಪಕ್ಷದ ಬಗ್ಗೆ ಅಸಮಾಧಾವಿದ್ದಿದ್ದರೆ ಅಡ್ಡ ಮತದಾನ ಮಾಡುವ ಅವಕಾಶ ಇತ್ತು. ಆದರೆ, ನಾನು ಆ ರೀತಿ ಮಾಡಲಿಲ್ಲ ಎಂದಿದ್ದಾರೆ. ಈ ಮೂಲಕ ಮತದಾನಕ್ಕೆ ಗೈರಾಗಿರುವ ತಮ್ಮ ನಡೆಯನ್ನು ಶಿವರಾಮ್‌ ಹೆಬ್ಬಾರ್‌ ಸಮರ್ಥಿಸಿಕೊಂಡಿದ್ದಾರೆ.

ಇನ್ನು, ನಾನು ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ. ನಾನು ಯಾರಿಗೋ ಹೆದರಿಕೊಂಡು ಮತದಾನಕ್ಕೆ ಹೋಗಿಲ್ಲ ಎನ್ನುವುದು ನಿಜವಲ್ಲ. ನಾನು ಮತದಾನಕ್ಕೆ ಹೋಗಿ ಅಡ್ಡ ಮತದಾನ ಮಾಡಬಹುದಿತ್ತು, ಇಲ್ಲವೇ ಮತದಾನ ಮಾಡದೆಯೇ ಇರಬಹುದಿತ್ತು. ನಾನು ಯಾರಿಗೂ ವಾರ್ನಿಂಗ್ ಕೊಡಲು ಹೋಗಿಲ್ಲ. ನನಗೆ ನನ್ನದೇ ಆದ ಅಸಮಾಧಾನ ಇರುವುದು ನಿಜ. ಅದು ಜಿಲ್ಲಾ ಮಟ್ಟದಲ್ಲಿ ಮಾತ್ರ ಎಂದು ಯಲ್ಲಾಪುರ ಬಿಜೆಪಿ ಶಾಸಕ ಹೇಳಿದ್ದಾರೆ.

ನನಗೆ ಕೇಂದ್ರ ಮತ್ತು ರಾಜ್ಯದ ಮುಖಂಡರ ಮೇಲೆ ಯಾವುದೇ ಅಸಮಾಧಾನ ಇಲ್ಲ. ಸಮಸ್ಯೆ ಇರುವುದು ಜಿಲ್ಲಾ ಮಟ್ಟದ ನಾಯಕರಿಂದ ಮಾತ್ರ. ಯಾರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಕೊಡಲಿದೆ ಎಂದು ಶಿವರಾಮ್‌ ಹೆಬ್ಬಾರ್‌ ತಿಳಿಸಿದ್ದಾರೆ.

More articles

Latest article