ಭಾರತದ ಹಿಂದೂಗಳಿಗೆ  ಶಿವನೇ ನಂಬರ್‌ ವನ್ ದೇವರು!

Most read

ಕಳೆದ ವಾರ ಜನೆವರಿ 22 ರಂದು ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಟೆಯ ದಿನ ಬಿ‌ಜೆ‌ಪಿಯವರು ಮತ್ತು ಸಂಘ ಪರಿವಾರದವರು ದೇಶದಾದ್ಯಂತ ಹುಟ್ಟು ಹಾಕಿದ ಸಮೂಹ ಸನ್ನಿಯ ಹಿನ್ನೆಲೆಯಲ್ಲಿ  “ಪೀವ್ ರಿಸರ್ಚ್ ಸೆಂಟರ್” ಎಂಬ ಒಂದು ಸರ್ವೇ ಸಂಸ್ಥೆ ಭಾರತ ದೇಶದಾದ್ಯಂತ ಮಾಡಿದ ಸರ್ವೆಯಲ್ಲಿ ಕಂಡು ಬಂದಿದ್ದೇನೆಂದರೆ  ಭಾರತದಲ್ಲಿ ಹಿಂದೂಗಳಲ್ಲಿ  ಶಿವಶಂಕರನೇ ಅತ್ಯಂತ ಜನಪ್ರಿಯ ವೈದಿಕ ದೇವರು!   

ಬಿ‌ಜೆ‌ಪಿ ಪಕ್ಷದವರು ದೇಶದೆಲ್ಲೆಡೆ ಮಂತ್ರಾಕ್ಷತೆ ಹಂಚಿ ಹಿಂದೂಗಳಲ್ಲಿ, ಮುಖ್ಯವಾಗಿ ಮಹಿಳೆಯರಲ್ಲಿ ಹುಟ್ಟು ಹಾಕಿದ ಉನ್ಮಾದ ನೋಡಿದರೆ ಶ್ರೀರಾಮ ಈ ದೇಶದ ಸಮಸ್ತ ಹಿಂದೂಗಳ “ಏಕೈಕ ಆರಾಧ್ಯ ದೈವ” ಎನ್ನುವಂತೆ ಇತ್ತು. ಆದರೆ ನಿಜದಲ್ಲಿ ಕೇವಲ 17% ಹಿಂದೂಗಳು ಮಾತ್ರ ರಾಮನನ್ನು ದೇವರು ಎಂದು ಪರಿಗಣಿಸಿ ಪೂಜಿಸುತ್ತಾರೆ ಅಷ್ಟೇ.  ರಾಮನಿಗಿಂತ ಹೆಚ್ಚು ಜನರು ರಾಮನ ಬಂಟ ಹನುಮಂತನನ್ನು ಭಕ್ತಿಯಿಂದ ಪೂಜಿಸುತ್ತಾರೆ ಎಂದು ಪಿ‌ಇಡಬ್ಲೂ (PEW) ರಿಸರ್ಚ್ ಸಂಸ್ಥೆಯ ಸರ್ವೆಯಲ್ಲಿ ಕಂಡು ಬಂದಿದೆ.  
ಎಲ್ಲಾ ರಾಜ್ಯಗಳ ಜನರ ಅಭಿಪ್ರಾಯದ ಸರಾಸರಿ ತೆಗೆದಾಗ  ಶಿವನನ್ನು 44 %  ಜನರು,  ಹನುಮಂತನನ್ನು 35% ಜನರು, ಗಣೇಶನನ್ನು 32% ಜನರು, ಲಕ್ಷ್ಮಿಯನ್ನು 28% ಜನರು, ಕೃಷ್ಣನನ್ನು 21% ಜನರು, ಕಾಳಿ-ದುರ್ಗಾದೇವಿಯನ್ನು 20% ಜನರು  ಹಾಗೂ ರಾಮನನ್ನು ಕೇವಲ 17% ಜನರು  ಆರಾಧಿಸುತ್ತಾರೆ.

ವಿಚಿತ್ರವೆಂದರೆ ದಕ್ಷಿಣ ಭಾರತದಲ್ಲಿ 500 ವರ್ಷಕ್ಕಿಂತ ಹಳೆಯ ಹಲವು ರಾಮನ ದೇವಸ್ಥಾನಗಳು ಇವೆ.  ಆದರೆ ಶ್ರೀ ರಾಮ ಆಳಿದ ಕೋಸಲ ರಾಜ್ಯವಿರುವ ಉತ್ತರ ಪ್ರದೇಶದಲ್ಲಿ 500 ವರ್ಷಗಳಿಗಿಂತ ಹೆಚ್ಚು ಹಳೆಯ ಒಂದೇ ಒಂದು ರಾಮನ ದೇವಸ್ಥಾನ ಕಂಡು ಬರುವುದಿಲ್ಲ. ಹಾಗಾಗಿ 500 ವರ್ಷಗಳ ಹಿಂದೆ ಬಾಬ್ರಿ ಮಸೀದಿಯ ಸ್ಥಳದಲ್ಲಿ ಶ್ರೀರಾಮನ ಏಕೈಕ ದೇವಸ್ಥಾನ ಇತ್ತು ಎಂದು ನಂಬುವುದು ಯಾಕೋ ಸರಿ ಹೊಂದುವುದಿಲ್ಲ.

ಶ್ರೀರಾಮ ತನ್ನ ಪ್ರಜೆಗಳಿಗೆ ನೂರಾರು ವರ್ಷ ಕೊಟ್ಟಿದ್ದ “ರಾಮರಾಜ್ಯ” ಇದ್ದಿದ್ದು ಈಗಿನ ಉತ್ತರ ಪ್ರದೇಶದ ಮಧ್ಯ ಭಾಗ (ಅವಧ) ಮತ್ತು ಪೂರ್ವ ಭಾಗ ಆಗಿತ್ತು.  ಶ್ರೀರಾಮ ಪ್ರಾಚೀನ ಕೋಸಲ ಮತ್ತು ಅವಧ ಪ್ರದೇಶದಲ್ಲಿ ಅಷ್ಟೊಂದು ಜನಪ್ರಿಯ ದೇವರಾಗಿದ್ದದ್ದು ನಿಜ ಆಗಿದ್ದರೆ ಅವನ ಮುಖ್ಯ ಪ್ರತಿಮೆ ಇರುವ 500 ವರ್ಷಕ್ಕಿಂತ ಹಳೆಯ ಒಂದೇ ಒಂದು ಪ್ರಾಚೀನ ಶ್ರೀರಾಮ ದೇವಸ್ಥಾನ ಆ ಕೋಸಲ ಪ್ರದೇಶದಲ್ಲಿ ಯಾಕಿರಲಿಲ್ಲ?  ಉತ್ತರ ಪ್ರದೇಶದ ಕೋಸಲ-ಅವಧ ಪ್ರದೇಶದಲ್ಲಿ ಬೇರೆಲ್ಲಿಯೂ 500 ವರ್ಷಕ್ಕಿಂತ ಹೆಚ್ಚು ಹಳೆಯ ಒಂದೇ ಒಂದು ರಾಮನ ದೇವಸ್ಥಾನ ಇರದಿದ್ದಾಗ ಕೇವಲ ಬಾಬ್ರಿಯ ಜಾಗದಲ್ಲಿ ಮೊದಲು ಇದ್ದ ಹಳೆ ಕಟ್ಟಡ ಮಾತ್ರ ರಾಮನ ದೇವಸ್ಥಾನವೇ ಆಗಿತ್ತು ಅನ್ನುವುದು ಎಷ್ಟು ತಾರ್ಕಿಕ  ಎಂಬುವ  ಜಿಜ್ಞಾಸೆ ಹಲವರದ್ದು.  

ಹಾಗೆ ನೋಡಿದರೆ ಶ್ರೀರಾಮ ಉತ್ತರ ಭಾರತದಲ್ಲಿ ಆಳಿದ ರಾಜನಾದರೂ ಉತ್ತರ ಭಾರತದಲ್ಲಿ ರಾಮನ ದೇವಸ್ಥಾನಗಳು 400 ವರ್ಷಗಳ ಹಿಂದಿನ ವರೆಗೂ ಇರಲೇ ಇಲ್ಲ, ಆದರೆ ದಕ್ಷಿಣ ಭಾರತದಲ್ಲಿ 500 ವರ್ಷಕ್ಕಿಂತ ಹೆಚ್ಚು ಹಳೆಯ ಹಲವು ಶ್ರೀರಾಮ ದೇವಾಲಯಗಳು ಇವೆಯೆಂದರೆ ಈ ವ್ಯತ್ಯಾಸ ಆಗಲು ಕಾರಣಗಳೇನು?

ಅಯೋಧ್ಯೆಯ ಮೂಲ ಹೆಸರು ಸಾಕೇತ್  ಅಥವಾ ಶ್ರಾವಸ್ತಿ ಆಗಿತ್ತು ಎಂದು ಬೌದ್ಧ ಇತಿಹಾಸದ ದಾಖಲೆಗಳು ಹೇಳುತ್ತವೆ.  ಚೀನಿ ಪ್ರವಾಸಿ ಹುಯೆನ್ ತ್ಸಾಂಗ್ ಕ್ರಿ.ಶ.630 ರಲ್ಲಿ ಭಾರತಕ್ಕೆ ಬಂದಿದ್ದಾಗ ಅವನು  ಸಾಕೇತ್ ಗೆ ಅರ್ಥಾತ್ ಅಯೋಧ್ಯೆಗೆ ಭೇಟಿ ಕೊಟ್ಟ ಉಲ್ಲೇಖ ಇದೆ. ಆದರೆ ಅಲ್ಲಿ ಕೇವಲ ಬೌದ್ಧ ವಿಹಾರಗಳು ಮಾತ್ರ ಇದ್ದ ಕುರಿತು ಹುಯೆನ್ ತ್ಸಾಂಗನು ಹೇಳಿದ್ದಾನೆ. ಅಂದರೆ ರಾಮರಾಜ್ಯ ಇದ್ದಿದ್ದು 3,500 ವರ್ಷಗಳ ಹಿಂದೆಯಾದರೂ ಕೇವಲ 1,400 ವರ್ಷಗಳ ಹಿಂದೆ ಕೂಡ  ಚೀನಿ ಪ್ರವಾಸಿಗಳು ಬಂದಾಗ ಅಲ್ಲಿ ಒಂದೂ ರಾಮ ಮಂದಿರ ಇರದೆ ಕೇವಲ ಬೌದ್ಧ ವಿಹಾರಗಳು ಇರಲು ಕಾರಣಗಳೇನು?

ತನ್ನ ಕೊನೆಯ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕೂಡಾ, ಬಾಬ್ರಿ ಮಸೀದಿಯ ಕೆಳಗೆ ಹಳೆಯ ಕಟ್ಟಡದ ಅವಶೇಷಗಳು ಕಂಡು ಬಂದಿರುವುದು ನಿಜ ಆದರೂ ಅವು ನಿರ್ದಿಷ್ಟವಾಗಿ ಯಾವುದರ ಅವಶೇಷ ಎಂದು ಹೇಳುವುದು ಕಷ್ಟ ಎಂದು ಪುರಾತತ್ವ ಇಲಾಖೆ ಹೇಳಿದೆ ಎಂಬುದಾಗಿ ನಮೂದಿಸಿತ್ತು.  
  
ವೈವಿಧ್ಯಮಯ ಸಂಸ್ಕೃತಿ, ಹಲವಾರು ಸಂಪ್ರದಾಯ, ವಿವಿಧ ಪರಂಪರೆ, ನೂರಾರು ಜಾತಿವಾರು ದೇವರುಗಳು ಇರುವ ನಮ್ಮ ದೇಶದಲ್ಲಿ ರಾಜ್ಯವಾರು ಲೆಕ್ಕ ಮಾಡಿದರೂ ಹೆಚ್ಚಿನ ಎಲ್ಲಾ ರಾಜ್ಯಗಳಲ್ಲೂ ಶಿವನೇ ನಂಬರ್ ವನ್ ಜನಪ್ರಿಯ ದೇವರು ಹಾಗೂ ಶ್ರೀರಾಮ ಎಲ್ಲೆಡೆ ನಂಬರ್ ಏಳನೇ ಸ್ಥಾನಕ್ಕಿಂತ ಕೆಳಗೆ ಎಂದು PEW ಸರ್ವೇ ಸಂಸ್ಥೆ ಹೇಳಿದೆ.  ಆದರೆ ಮಹಾರಾಷ್ಟ್ರದಲ್ಲಿ  ಗಣಪತಿ ಒಂದನೇ ಸ್ಥಾನದಲ್ಲಿ ಹಾಗೂ ಶಿವ ಎರಡನೇ ಸ್ಥಾನದಲ್ಲಿ ಇದ್ದಾರೆ.  ಪಶ್ಚಿಮ ಬಂಗಾಳದಲ್ಲಿ ಕಾಳಿ-ದುರ್ಗಾದೇವಿ ಒಂದನೇ ಸ್ಥಾನದಲ್ಲಿ ಹಾಗೂ ಶಿವ ಎರಡನೇ ಸ್ಥಾನದಲ್ಲಿ.  ನಮ್ಮ ದಕ್ಷಿಣ ಭಾರತದ ತಮಿಳು ನಾಡಿನಲ್ಲಿ ಶಿವ ಮತ್ತು ಸುಬ್ರಹ್ಮಣ್ಯ ಇಬ್ಬರೂ ಒಂದನೇ ಸ್ಥಾನದಲ್ಲಿ ಇದ್ದಾರೆ.  ಲಿಂಗಾಯತರು ಮತ್ತು ಶೈವರ ಸಂಖ್ಯೆ ಹೆಚ್ಚಿರುವ ಕರ್ನಾಟಕದಲ್ಲಿ 60% ಹಿಂದೂಗಳ ಆರಾಧ್ಯ ದೇವರು ಶಿವಶಂಕರ.  ಕೇವಲ ಪೂರ್ವೋತ್ತರ ಭಾರತದ ಮಣಿಪುರದಲ್ಲಿ ಮಾತ್ರ ಕೃಷ್ಣ ಒಂದನೇ ಸ್ಥಾನದಲ್ಲಿ ಇದ್ದಾನೆ, ಆದರೆ ಶ್ರೀರಾಮ ಅಲ್ಲಿಯೂ ಕೊನೆಯ ಸ್ಥಾನದಲ್ಲಿ. 

ಹೆಚ್ಚಿನ ಭಾರತೀಯರ ನಂಬಿಕೆ ಏನೆಂದರೆ ವಾಲ್ಮೀಕಿ ಋಷಿ ತನ್ನ ರಾಮಾಯಣದಲ್ಲಿ ಎಲ್ಲಿಯೂ ರಾಮನು ಒಬ್ಬ ದೇವರು ಅಥವಾ ದೇವರ ಅವತಾರ ಎಂದು ಬರೆದೇ ಇಲ್ಲ.  ರಾಮ ಒಬ್ಬ ಮರ್ಯಾದಾ ಪುರುಷೋತ್ತಮ ಅಂದರೆ ಪುರುಷರಲ್ಲಿ ಉತ್ತಮನು ಎಂದು ವಾಲ್ಮೀಕಿ ಬರೆದಿರುವುದು.  ರಾಮ ಯಾವುದೇ ಪವಾಡ ಮಾಡಿಲ್ಲ (ರಾಮ ಮಾಡಿದ ಒಂದೇ ಒಂದು ಪವಾಡ ಅಂದರೆ ಕಲ್ಲಾಗಿದ್ದ ಅಹಲ್ಯೆಯನ್ನು ಮನುಷ್ಯ ರೂಪಕ್ಕೆ ಮರಳಿ ತಂದಿದ್ದು ಅಷ್ಟೇ).  ರಾಮನು ಹಣ್ಣು ಹಣ್ಣು ಮುದುಕನಾದ ಮೇಲೆ ತನ್ನ ಅವತಾರ ಮುಗಿಸಿದ್ದು ಸಹಾ ಸಾಮಾನ್ಯ ಮನುಷ್ಯರಂತೆ.  “ಜಲ ಸಮಾಧಿ” ಪಡೆದು (ಅಂದರೆ ಸರಯೂ ನದಿಯಲ್ಲಿ ಸ್ವಯಿಚ್ಛೆಯಿಂದ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಅರ್ಥಾತ್ ಜೈನ ಮುನಿಗಳಂತೆ  ‘ಸಲ್ಲೇಖನ’ ವೃತ ಮಾಡಿ ಜೀವ ತ್ಯಜಿಸಿದ್ದು).

ಇದನ್ನೂ ಓದಿ-ಪ್ರಾಣ ಪ್ರತಿಷ್ಠಾಪನೆಗೆ ಜನವರಿ ಇಪ್ಪತ್ತೆರಡನ್ನೇ ಯಾಕೆ ಆಯ್ದು ಕೊಳ್ಳಲಾಯಿತು?
           
 ತ್ರೇತಾ ಯುಗದಲ್ಲಿ ಅಯೋಧ್ಯೆಯಲ್ಲಿ ರಾಮ ಹುಟ್ಟಿದ ಸ್ಥಳದಲ್ಲಿ ಜನರು ರಾಮನ ಮಂದಿರ ಕಟ್ಟಿಸಿದರಂತೆ. ಆದರೆ ಅದಕ್ಕಿಂತ  ಹೆಚ್ಚಿನ ಪವಿತ್ರ ಸ್ಥಳ ಅಂದರೆ  ರಾಮನು ತನ್ನ ಅವತಾರ ಮುಗಿಸಿ ದೇಹ ತ್ಯಾಗ ಮಾಡಿದ ಸ್ಥಳವಾದ ಸರಯೂ ನದಿ ತೀರ.  ಶ್ರೀರಾಮ ಜಲಸಮಾಧಿ ಪಡೆದ ಸ್ವಲ್ಪ ಸಮಯದ ನಂತರ ರಾಮನ ಪಾರ್ಥಿವ ಶರೀರ ನದಿ ದಂಡೆಗೆ ತೇಲಿ ಬಂದಿರಲೇ ಬೇಕು!  ಆ ಪವಿತ್ರ ದೇಹ ಸಿಕ್ಕ ಸ್ಥಳದಲ್ಲಿ ಆಗಿನ ರಾಮನ ಭಕ್ತರು  ರಾಮನ ಒಂದು ಸಮಾಧಿ ಅಥವಾ ಸ್ಮಾರಕವನ್ನು ಕಟ್ಟಿಸಿರಲೇ ಬೇಕು ಅಲ್ಲವೇ?  ಆದರೆ ಈಗ ಸರಯೂ ನದಿ ದಂಡೆಯಲ್ಲಿ ಒಂದೂ ರಾಮನ ಸ್ಮಾರಕ ಇಲ್ಲದಿರುವುದು ಆಶ್ಚರ್ಯವಲ್ಲವೇ?

ಸರಯೂ ನದಿ ತೀರದಲ್ಲಿ ಯಾವುದಾದರೂ ಒಂದು ಹಳೆಯ ಮಸೀದಿ ಅಥವಾ ಬುದ್ಧ ವಿಹಾರ ಇದ್ದಿದ್ದರೆ ಅದುವೇ ರಾಮನ ಸಮಾಧಿ ಸ್ಥಳ ಎಂದು ತಕರಾರು ಎತ್ತುತ್ತಿದ್ದರೋ ಏನೋ ನಮ್ಮ ರಾಜಕೀಯ ಭಕ್ತರು. 
 ಒಟ್ಟಾರೆ “ಒಂದು ದೇಶ, ಒಂದೇ ದೇವರು, ಒಂದೇ ಭಾಷೆ, ಒಂದೇ ರಾಜಕೀಯ ಪಕ್ಷ ” ಎಂಬ ನರೇಟಿವ್ ಭಾರತದ ಜನಮಾನಸದಲ್ಲಿ ಗಟ್ಟಿಯಾಗಿ ಸೆಟ್ ಮಾಡಲು ಬಿ‌ಜೆ‌ಪಿ ಮತ್ತು ಸಂಘ ಪರಿವಾರ ಪ್ರಯತ್ನಿಸುತ್ತಿರುವುದು  ಇಷ್ಟರ ವರೆಗೆ ಫಲ ನೀಡದಿರುವುದು ಪ್ರಜ್ಞಾವಂತರಿಗೆ ಸಮಾಧಾನ ತಂದಿರುವ ವಿಷಯ!.   

ಪ್ರವೀಣ್. ಎಸ್. ಶೆಟ್ಟಿ. ಮಂಗಳೂರು

ಚಿಂತಕರು

More articles

Latest article