ಅವಳು ಸೂರು ಮತ್ತು ಸೇಫ್ಟಿ ಪ್ರಶ್ನೆ..

Most read

ನಾವೇನಾದರೂ ನಮ್ಮ ಸ್ನೇಹಿತರೊಟ್ಟಿಗೆ ಮುಖ್ಯವಾಗಿ ಹುಡುಗರೊಟ್ಟಿಗೆ ಮನೆ ಹುಡುಕುವುದಕ್ಕೆ ಹೊರಟರೆ ನಮ್ಮನ್ನ ಮೇಲಿಂದ ಕೆಳಗಿನವರೆಗೆ ನೋಡಿ ನಮ್ಮ ಕಾಲಿನಲ್ಲಿ ಕಾಲುಂಗುರವಿದೆಯಾ?  ಕತ್ತಿನಲ್ಲಿ ತಾಳಿ ಇದೆಯಾ? ಮದುವೆಯಾಗಿದೆಯಾ? ಮಕ್ಕಳೆಷ್ಟು ? ಗಂಡ ಯಾರು? ಗಂಡ ಏನು ಮಾಡುತ್ತಾನೆ?  ಅಪ್ಪ ಅಮ್ಮ ಯಾರು? ನಮ್ಮ ಜಾತಿ ಕುಲ ಗೋತ್ರ ಎಲ್ಲವನ್ನು ಅಳೆದು ತೂಗಿ ಕೇಳಿ ಜನ್ಮ ಜಾಲಾಡಿ ಬಿಡುತ್ತಾರೆ – ಶೃಂಗಶ್ರೀ ಟಿ, ಉಪನ್ಯಾಸಕಿ.

ಶಿವಮೊಗ್ಗೆಯಲ್ಲಿ ಕೆಲಸಕ್ಕೆ ಸೇರಿದ ಹೊಸದರಲ್ಲಿ ನನಗೊಂದು ಸೂರು ಹುಡುಕಿದ ತ್ರಾಸ ಹೇಳತೀರದ್ದು. ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ ಇರುವ ಏರಿಯಾಗಳಲ್ಲಿನ ಜನ ಮುಕ್ಕಾಲು ಭಾಗ The so called ಅಫಿಶಿಯಲ್ ಗಳು. ಅವರು ಅಫಿಶಿಯಲ್ ಎಂದು ಕರೆಸಿಕೊಂಡರೂ ಎಷ್ಟೇ ಒಳ್ಳೆಯ ಉತ್ತಮವಾದ ಮೇಲ್ದರ್ಜೆಯ ಕೆಲಸಗಳಲ್ಲಿ ಇದ್ದರೂ ಕೂಡ ಅವರ ಮನಸ್ಸಿನ್ನೂ ಬದಲಾಗಿಲ್ಲ ಅಥವಾ ಜಾತಿಗ್ರಸ್ತ ಮನಸ್ಥಿತಿಯಿಂದ ಎಷ್ಟೋ ಜನರು ಆಚೆಯೇ ಬಂದಿಲ್ಲ.

ಲಿಂಗ, ಧರ್ಮ, ಜಾತಿ, ಬಣ್ಣದ ಸಲುವಾಗಿ ಸಾವಿರಾರು ವರ್ಷಗಳಿಂದಲೂ ತಾರತಮ್ಯಗಳು, ದೌರ್ಜನ್ಯಗಳು, ಅನುಮಾನಗಳು, ಶೋಷಣೆಗಳು, ಹಿಂಸಾಚಾರಗಳು ನಡೆಯುತ್ತಲೇ ಬಂದಿವೆ. ಇಂದಿಗೂ ನಡೆಯುತ್ತಲೇ ಇವೆ.

ಒಬ್ಬಂಟಿ ಹೆಣ್ಣು ಇನ್ನೂ ಮದುವೆಯಾಗಿಲ್ಲ, ಅದರಲ್ಲೂ ತಳಸಮುದಾಯದ ಜಾತಿಗೆ ಸೇರಿದ ಹೆಣ್ಣು ಎಂಬುದೇನಾದರೂ ಗೊತ್ತಾದರೆ ಹೊರಗೆ ನಿಲ್ಲಿಸಿಯೇ ಒಂದೇ ಮಾತಿನಲ್ಲೇ ಮನೆ ಬಾಡಿಗೆಗೆ ಇಲ್ಲ ಎಂಬ ನಿರ್ಣಯವನ್ನು ಸಾರಾಸಗಟಾಗಿ ಹೇಳಿಬಿಡುತ್ತಾರೆ. ನೀವು ಕೆಳ ಜಾತಿಯವರು, ನೀವು ಮಾಂಸ ತಿನ್ನುವವರು ನೀವು ಮನೆಯಲ್ಲಿ ಮಾಂಸ ಮಾಡಿ ಮನೆಯಲ್ಲಾ ಗಬ್ಬೆಬ್ಬಿಸುತ್ತೀರಿ, ನಿಮ್ಮಂತಹ ಒಬ್ಬಂಟಿ ಹೆಣ್ಣಿನಿಂದ ಮನೆಯ ಸುತ್ತಮುತ್ತ ಗಂಡು ಮಕ್ಕಳು ಬರುತ್ತಾರೆ.. ಸೇಫ್ಟಿ ಪ್ರಶ್ನೆ ಹಾಗಾಗಿ ನಿಮಗೆ ಮನೆ ಕೊಡಲ್ಲ ಅನ್ನುವಾಗ ನಖಶಿಖಾಂತ ಸಿಟ್ಟು ಬರುತ್ತಿತ್ತು.

ಚಿತ್ರ ಕೃಪೆ: ಪ್ರಜಾವಾಣಿ

ಮನೆ ಸುತ್ತ ಹುಡುಗರು ಬರುತ್ತಾರೆ ಅಂದರೆ ನಾವೇನು ನಾಯಿಗಳಾ? ಪ್ರಾಣಿಗಳಿಗೆ ಹೇಳುವಂತೆ ಹೇಳುತ್ತಾರೆ. ಸೇಫ್ಟಿ ಪ್ರಶ್ನೆ ಎಂದರೆ ಅರ್ಥವೇನು? ಅದು ಅವಳ ಬದುಕು ಅವಳದೇ ಜವಾಬ್ದಾರಿ ಅಲ್ಲವಾ? ಅವಳ ಸೇಫ್ಟಿ ಬಗ್ಗೆ ಅವಳಿಗೆ ಅರಿವಿಲ್ಲವಾ? ಒಂದು ಕಡೆ ಮಾಂಸ ತಿನ್ನುವವರು ಅದಕ್ಕಾಗಿ ಮನೆ ಕೊಡುವುದಿಲ್ಲ ಎಂದರೆ ಮತ್ತೊಂದು ಕಡೆ ಮಾಂಸ ತಿನ್ನುವವರಿಗೆ ಮಾತ್ರವೇ ನಾವು ಮನೆ ಕೊಡುವುದು ಎನ್ನುವವರು ಮತ್ತೊಬ್ಬರು. ಇನ್ನು ಕೆಲವರು ನಾವು ಒಂಟಿ ಹೆಣ್ಣು ನಮಗೆ ಕುಟುಂಬವಿಲ್ಲ ಎಂದರೆ ಮುಗಿಯಿತು ನಮಗೆ ಜಗತ್ತಿನ ಮೇಲೆ ಬದುಕುವ ಅರ್ಹತೆಯೇ ಇಲ್ಲವೆಂಬಂತೆ ಮಾತಾಡುತ್ತಾರೆ.

ಈ ಸನ್ನಿವೇಶಗಳಲ್ಲಿ ಉಳಿದುಕೊಳ್ಳುವುದಕ್ಕೊಂದು ಸೂರಿಗಾಗಿ ಪರಿಚಯದವರನ್ನು ತಂದೆ-ತಾಯಿಗಳೆಂದು ಸುಳ್ಳು ಹೇಳುವ ಪ್ರಸಂಗವು ಬಂದೊದಗಿತ್ತು. ನಾವೇನಾದರೂ ನಮ್ಮ ಸ್ನೇಹಿತರೊಟ್ಟಿಗೆ ಮುಖ್ಯವಾಗಿ ಹುಡುಗರೊಟ್ಟಿಗೆ ಮನೆ ಹುಡುಕುವುದಕ್ಕೆ ಹೊರಟರೆ ನಮ್ಮನ್ನ ಮೇಲಿಂದ ಕೆಳಗಿನವರೆಗೆ ನೋಡಿ ನಮ್ಮ ಕಾಲಿನಲ್ಲಿ ಕಾಲುಂಗುರವಿದೆಯಾ?  ಕತ್ತಿನಲ್ಲಿ ತಾಳಿ ಇದೆಯಾ? ಮದುವೆಯಾಗಿದೆಯಾ? ಮಕ್ಕಳೆಷ್ಟು ? ಗಂಡ ಯಾರು? ಗಂಡ ಏನು ಮಾಡುತ್ತಾನೆ ?  ಅಪ್ಪ ಅಮ್ಮ ಯಾರು? ನಮ್ಮ ಜಾತಿ ಕುಲ ಗೋತ್ರ ಎಲ್ಲವನ್ನು ಅಳೆದು ತೂಗಿ ಕೇಳಿ ಜನ್ಮ ಜಾಲಾಡಿ ಬಿಡುತ್ತಾರೆ.

ನಮ್ಮ ಆತ್ಮೀಯ ಸ್ನೇಹಿತರೆಂದು ಹೇಳಿದರೂ ನಂಬದೆ ನಾವೇನೋ ಸಂಬಂಧಗಳಿಟ್ಟುಕೊಂಡಿರುವಂತೆ ಚಿತ್ರಿಸಿ ಅನುಮಾನಿಸುತ್ತಾರೆ. ಒಬ್ಬಂಟಿ ಹೆಣ್ಣು ಬದುಕುವುದೇ ತಪ್ಪು ಎಂಬಂತೆ ವರ್ತಿಸುತ್ತಾರೆ. ಒಂದು ಸೂರಿಗಾಗಿ ಪರದಾಡಿ ಹುಚ್ಚರಾಗಿ ನಾವು ಹೆಣ್ಣಾಗಿ ಹುಟ್ಟಿದ್ದೆ ಬಹುದೊಡ್ಡ ತಪ್ಪು ಎಂಬ ಅಭಿಪ್ರಾಯಕ್ಕೆ ನಾವು ಬರುವಂತೆ ಮಾಡಿಬಿಡುತ್ತಾರೆ.

ಸಾಂದರ್ಭಿಕ ಚಿತ್ರ

ಇಂತಹುದೇ ಕಾರಣಗಳಿಂದ ನಾನು ಮನೆಯೊಂದನ್ನು ಹುಡುಕಲು ನಿರಂತರ ಎರಡು ವರ್ಷಗಳ ಕಾಲ ಅಲೆದಿದ್ದೇನೆ. ಹುಡುಕಿದ್ದೇನೆ. ಅಸಹಾಯಕತೆಯಿಂದ ಒದ್ದಾಡಿದ್ದೇನೆ. ಈ ಜಗತ್ತು ಎಷ್ಟೇ ಬದಲಾದರೂ ಏನೇನೋ ಆವಿಷ್ಕಾರಗಳು ನಡೆದರೂ ಜನರ ಸಂಕುಚಿತ ಮನಸ್ಥಿತಿ ಬದಲಾಗಿಲ್ಲ. ಜಾತಿ, ಲಿಂಗ, ಧರ್ಮದ ಆಧಾರದ ಮೇಲೆ ಹಿಂಸೆ, ತಾರತಮ್ಯಗಳು, ಶೋಷಣೆಗಳು, ಅಸ್ಪೃಶ್ಯತೆಗಳು ನಡೆಯುತ್ತಲೇ ಹೋಗುತ್ತಿವೆ.

 ಬದುಕು ಒಂದು ನಿರಂತರ ಹೋರಾಟದ ಹಾದಿ ಎಂಬುದನ್ನ ಅರ್ಥ ಮಾಡಿಸುತ್ತಾ ಜಾತಿಯ ಕಾರಣಕ್ಕಾಗಿ ನಮ್ಮನ್ನು ಒಳಗೊಳ್ಳದ, ನಮ್ಮನ್ನ ಮುಟ್ಟಿಸಿಕೊಳ್ಳದ, ದನದ ಮಾಂಸವನ್ನು ತಿಂದೆವೆಂಬ ಕಾರಣಕ್ಕಾಗಿ ಇರುವುದಕ್ಕೊಂದು ಸೂರನ್ನು ಕೊಡದೆ ಪ್ರಾಣಿಗಳಂತೆ ಅತ್ಯಂತ ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುವ, ದಲಿತರನ್ನ ಅವಮಾನಿಸುವ, ದೇವದಾಸಿಯರ ಮಕ್ಕಳ ಸಂಕಟಗಳನ್ನ ಅವರು ಅನುಭವಿಸಬೇಕಾದ ಯಾತನೆಗಳನ್ನ ಸಮಾಜದ ಮುಂದಿಡುತ್ತಾ ಶೋಷಿತ ಸಮಾಜದ ಬದುಕಿಗೆ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವಂತ ನಾಟಕವನ್ನ ಪ್ರಸ್ತುತಗೊಳಿಸಿದ್ದಾರೆ.

ನಮ್ಮ ಅಂತರಾತ್ಮಕ್ಕೆ ನಮ್ಮ ಸಾಕ್ಷಿ ಪ್ರಜ್ಞೆಗೆ ಪ್ರಶ್ನೆಗಳನ್ನ ಎಸೆಯುತ್ತ ನಮ್ಮ ನಡೆನುಡಿಗಳನ್ನು ನಮ್ಮ ಬದುಕನ್ನ ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾ ಮನುಷ್ಯತ್ವದ ಪಾಠವನ್ನು ಕಲಿಸಿದ್ದಾರೆ. ಅಂಬೇಡ್ಕರ್ ರವರು ಬಾಪೂಜಿಯವರಿಗೆ ಹೇಳುವ ಮಾತು “ಬಾಪು ನಿಮಗೆ ಹೇಳಿಕೊಳ್ಳಲು ತಾಯಿ ನೆಲ ಒಂದಿದೆ. ನನಗೆ ಮತ್ತು ನನ್ನ ಬಾಂಧವರಿಗೆ ಯಾವ ನೆಲವು ಇಲ್ಲ” ಎಂಬ ಮಾತು ತಳಸಮುದಾಯದವರ ನೈಜ ಬದುಕನ್ನ ಅನಾವರಣಗೊಳಿಸುತ್ತಾ ಅವರ ಬದುಕಿಗೆ ಅವರ ಅಸ್ತಿತ್ವಕ್ಕೆ ಹಿಡಿದ ಕೈಗನ್ನಡಿಯಂತಿದೆ. ನಾಟಕದ ಮೂಲಕ  ಅಸಮಾನತೆಯ ವಿರುದ್ಧ ಹೋರಾಡುವ ಕಿಚ್ಚನ್ನು ಹೆಚ್ಚಿಸಿ ತಳಸಮುದಾಯವರ ಬಿಕ್ಕಟ್ಟುಗಳಿಗೆ ಉತ್ತರ ದೊರಕಿಸುವ ಪ್ರಯತ್ನ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್, ರೋಹಿತ್ ವೇಮುಲಾ, ದೂರದ ಜಮೈಕಾದ ಹಾಡುಗಾರ ಬಾಬ್ ಮಾರ್ಲಿ ಎನ್ ಕೆ ಹನುಮಂತಯ್ಯ ಇವರುಗಳು ನಮಗೆ ಮಿಂಚು ಹುಳುಗಳಿಗಾಗಿ ಕಾಣತೊಡಗುತ್ತಾರೆ. ನಾಟಕದಲ್ಲಿ ಬಣ್ಣಹಚ್ಚಿದ ಚಂದ್ರಶೇಖರ್ ಕೆ , ಭರತ್ ಡಿಂಗ್ರಿ, ಶ್ವೇತಾ ಇವರುಗಳು ತಮ್ಮ ಅಧ್ಬುತವಾದ ನಟನೆಯ ಮೂಲಕ ನಮ್ಮ ಬದುಕಿಗೂ ಬಣ್ಣ ತುಂಬಿದ್ದಾರೆ.

ಗುರುತನ್ನ ಬಿಡುವುದು ನಿಮ್ಮ ಜವಾಬ್ದಾರಿಯಲ್ಲ ಗುರುತನ್ನ ಎಲ್ಲರೂ ಸೇರಿ ಕಟ್ಟಿರುವಾಗ ನೀವೊಬ್ಬರೇ ಹೇಗೆ ಅದನ್ನ ಬಿಡುವುದಕ್ಕೆ ಸಾಧ್ಯ ? ಎಂಬ ಪಾತ್ರಧಾರಿಗಳ ಪ್ರಶ್ನೆ ಚಿಂತನೆಗೆ ಹಚ್ಚುತ್ತದೆ. ಗುರುತು ಎನ್ನುವುದು ಕೆಲವರಿಗೆ ಹೆಮ್ಮೆ ಆದರೆ ಕೆಲವರಿಗೆ ಅಸಹ್ಯ ಹಿಂಸೆ.

ಜೀವನದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ ಬದುಕು ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದದಾರಿಯಾಗಿ ಕಂಡುಬರುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚು ಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ಸಂಭ್ರಮ ಬೆಳಕೊಂದು ಸಂಭ್ರಮ. ಎಂಬ ಆಶಯಗಳನ್ನ ವ್ಯಕ್ತಪಡಿಸುವ ಈ ನಾಟಕ ಅವರು ಶ್ರೇಷ್ಠ ಉಳಿದವರು ಕನಿಷ್ಠ ಅನ್ನೋದು ಇರೋವರೆಗೂ ಘೋಷಣೆ ಇರ್ತದೆ, ಹೋರಾಟ    ಇರ್ತದೆ, ಸಂಘರ್ಷ  ಇರ್ತದೆ, ಯುದ್ಧ ಇರ್ತದೆ ಎಂಬ ಮಾತುಗಳೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಅದೆಷ್ಟೋ ನನ್ನ ಒಡಲಾಳದ ಸಂಕಟಗಳಿಗೆ ಉತ್ತರ ಸಿಗದ ಯಕ್ಷಪ್ರಶ್ನೆಗಳಿಗೆ ಮನದ ತಲ್ಲಣಗಳಿಗೆ ಹೆಣ್ಣಾಗಿಯೇ ಹುಟ್ಟ ಬಾರದಿತ್ತು ಎಂಬ ಪ್ರಶ್ನೆಗಳಿಗೆ ಈ ನಾಟಕ ಉತ್ತರವನ್ನ ದಕ್ಕಿಸಿಕೊಟ್ಟಿದೆ.

ಶೃಂಗಶ್ರೀ.ಟಿ.

ಅತಿಥಿ ಉಪನ್ಯಾಸಕಿ ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ.

ಇದನ್ನೂ ಓದಿ- ಚೆಂದದ ಬದುಕಿಗೆ ಬೇಕಿರುವುದೇನು?

More articles

Latest article