ಅವಳಿಗೆ ಬೇಕಿದೆ ಅವಳದೇ ಸ್ಪೇಸ್

Most read

ನಮ್ಮ ಮನೆಯಲ್ಲಿ ಮಕ್ಕಳು, ಗಂಡ ಪ್ರಯಾಣಕ್ಕೆ ಹೊರಟಾಗಲೆಲ್ಲಾ ಸಾಧ್ಯವಾದಷ್ಟು ವಿಚಾರಣೆಗಳನ್ನು ಕಡಿಮೆ ಮಾಡುವೆನಲ್ಲದೇ ನಡುವಲ್ಲಿ ಪದೇಪದೇ ಫೋನಾಯಿಸಿ ಅವರನ್ನು ಡಿಸ್ಟರ್ಬ್ ಮಾಡುವುದನ್ನು ನಿಲ್ಲಿಸಿರುವೆ. ಅವರೂ ಒಂದೆರಡು ದಿನ ನನಗೆ ಗೊತ್ತಿಲ್ಲದಿರುವಲ್ಲಿ ಕಳೆದುಹೋಗಲಿ ಎಂದು ಮನಸ್ಸು ಹಂಬಲಿಸುತ್ತದೆ ಸುಧಾ ಆಡುಕಳ, ಉಪನ್ಯಾಸಕರು

ಎರಡನೇ ತರಗತಿಯಲ್ಲಿರುವಾಗಲೇ ಜೈಮಿನಿ ಭಾರತವನ್ನು ( ನಮ್ಮ ಮನೆಯಲ್ಲಿ ಲಭ್ಯವಿದ್ದದ್ದೇ ಕೆಲವು ಹಳೆ ಗನ್ನಡ ಕಾವ್ಯಗಳು) ಓದುವಷ್ಟು ಪುಸ್ತಕದ ಮಳ್ಳಿಯಾದ ನಾನು ಮೊದಲ ಪತ್ರಿಕಾ ಲೇಖನವನ್ನು ಪ್ರಕಟಿಸುವಾಗ ನಲವತ್ತು ದಾಟಿದ್ದೆ. ಅದರ ನಂತರ ಚೂರು ಪಾರು ಬರೆಯುತ್ತಾ ಬಂದಿರುವೆನಾದರೂ ನನ್ನ ಬರವಣಿಗೆ, ಪುಸ್ತಕಗಳ ಬಗೆಗೆಲ್ಲಾ ಸಹೋದ್ಯೋಗಿಗಳಲ್ಲಿ ಪ್ರಸ್ತಾಪಿಸುವುದು ಕಡಿಮೆ. ಆದರೂ ಅಪರೂಪಕ್ಕೆಲ್ಲಿಯಾದರೂ ನನ್ನ ಬರಹವನ್ನು ಕಂಡಾಗಲೆಲ್ಲಾ ಅವರು ನಿಮಗೆ ಅದಕ್ಕೆಲ್ಲಾ ಸಮಯವೆಲ್ಲಿ ಸಿಗುತ್ತದೆ? ಎಂದು ಪ್ರಶ್ನಿಸುತ್ತಾರೆ. ದಿನನಿತ್ಯ ಭೇಟಿಯಾಗುವ ಸ್ನೇಹಿತರು, ಬಂಧುಗಳು ಕೂಡಾ ಇದೇ ಪ್ರಶ್ನೆಯನ್ನು ಕೇಳುತ್ತಾರೆ. ಮೊದಲೆಲ್ಲಾ ನಾನು ನಮ್ಮನೆಯಲ್ಲಿ ಮನೆಗೆಲಸವನ್ನು ಎಲ್ಲರೂ ಮಾಡುತ್ತಾರೆ ಎಂದೋ, ನನ್ನ ವೈಯಕ್ತಿಕ ಕೆಲಸಕ್ಕೆ ( ಡ್ರೆಸ್, ಸ್ನಾನ, ಇತ್ಯಾದಿ) ಉಪಯೋಗಿಸುವ ಸಮಯವನ್ನು ಕಡಿತಗೊಳಿಸಿರುವೆನೆಂದೋ ಅಥವಾ ರಾತ್ರಿ ನಿದ್ದೆಯನ್ನು ಕಡಿತಗೊಳಿಸಿರುವೆನೆಂದೋ ಉತ್ತರಿಸುತ್ತಿದ್ದೆ. ಆದರೆ ಅವರು ಕೇಳುತ್ತಿರುವುದು ಸಮಯದ ಉಳಿತಾಯದ ಬಗೆಗಲ್ಲಾ ಎಂಬುದು ಇತ್ತೀಚೆಗೆ ನನ್ನ ಅರಿವಿಗೆ ಬರುತ್ತಿದೆ. ಮಹಿಳೆಗೆ ಅವಳದೇ ಸಮಯ ಸಿಗುವುದರ ಬಗ್ಗೆ ಅವರು ಕೇಳುತ್ತಿದ್ದಾರೆಂದು ತಿಳಿಯುತ್ತಿದೆ.

ಚಿತ್ರ ಕೃಪೆ- ವಾಟ್ಸ್ಯಾಪ್

ಗಂಡ, ಮನೆ, ಸಂಸಾರ ಮಕ್ಕಳು, ಉದ್ಯೋಗ ಇವುಗಳನ್ನು ಬಿಟ್ಟು ಮತ್ತಿನ್ನೇನಾದರೂ ಮಾಡಬೇಕೆಂದಾಗಲೆಲ್ಲ ನಾನು ತಪ್ಪು ಮಾಡುತ್ತಿಲ್ಲವಲ್ಲ? ! ಎಂಬ ಪ್ರಶ್ನೆ ಹೆಂಗಸರೆದುರು ನಿಲ್ಲುತ್ತದೆ. ಸೇವೆಗೆ ಸೇರಿದಾಗಿನಿಂದಲೂ ಸಾವಿರದ ಹತ್ತಿರ ವಿದ್ಯಾರ್ಥಿಗಳಿರುವ ಸಂಸ್ಥೆಗಳಲ್ಲಿ ಪಾಠ ಮಾಡಿರುವ ನಾನು ಪಿ.ಯು. ಕಾಲೇಜಿಗೆ ಪ್ರಮೋಷನ್ ಪಡೆದ ಮೊದಲ ಐದು ವರ್ಷ ಇಪ್ಪತ್ತರ ಒಳಗಿನ ಸಂಖ್ಯೆಯ ತರಗತಿಗೆ ಅನಿವಾರ್ಯವಾಗಿ ಪಾಠ ಮಾಡಬೇಕಾಯ್ತು. ದಿನವೂ ಮೂರು ಪತ್ರಿಕೆಗಳನ್ನು ಓದುತ್ತಾ, ಹತ್ತಿರದಲ್ಲಿರುವ ಕಾರಂತ ಲೈಬ್ರರಿಯಿಂದ ಕನ್ನಡದ ಅತ್ಯುತ್ತಮ ಪುಸ್ತಕಗಳನ್ನು ತಂದು ನಾನೂ ಓದುವುದರೊಂದಿಗೆ ಸಹೋದ್ಯೋಗಿಗಳಿಗೆ ಓದಿಸುತ್ತಾ, ಮಕ್ಕಳಿಗೆ ನೆಚ್ಚಿನ ಓದು ಕಾರ್ಯಕ್ರಮ ಮಾಡಿಸುತ್ತಾ, ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತಾ ಹೇಗೋ ದಿನ ದೂಡುತ್ತಿದ್ದೆ. ಆದರೆ ಆ ಸಮಯದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಏನನ್ನು ಮಾಡಿದರೂ ಮನಸ್ಸಿನೊಳಗೆ ಒಂಥರಾ ಗಿಲ್ಟ್ ಎನಿಸಿ ( ಇಷ್ಟೆಲ್ಲಾ ಸಂಬಳ ಪಡೆದು ಹತ್ತು ಮಕ್ಕಳಿಗೆ ಪಾಠ ಮಾಡ್ತಿದ್ದೇನಲ್ಲ) ಮತ್ತೆ ದೊಡ್ಡ ಸಾಗರದಂತಿರುವ ಸಂಸ್ಥೆಗೆ ಬಂದು  ನಿರಾಳವಾದೆ. ಇಲ್ಲಿ ಪೇಪರ್ ಓದುವುದಂತಿರಲಿ ಪರೀಕ್ಷೆಯೊಂದು ಮುಗಿಯಿತೆಂದರೆ ಮಕ್ಕಳ ಪೇಪರ್ ತಿದ್ದಲು ವಾರಗಟ್ಟಲೆ ನೈಟ್ಔಟ್ ಮಾಡಬೇಕಾಗುತ್ತದೆ. ಆಗೆಲ್ಲಾ ನನ್ನಿಷ್ಟದ ಹಿಂದೂಸ್ತಾನಿ ಸಂಗೀತ ಜತೆಯಾಗುತ್ತದೆ. ಈಗ ಸಮಯವುಳಿಸಿ ಏನನ್ನಾದರೂ ಬರೆದರೆ ಸಾರ್ಥಕತೆಯೆನಿಸುತ್ತದೆ. ಇದನ್ನೆಲ್ಲಾ ಯಾಕೆ ಪ್ರಸ್ತಾಪಿಸಿದೆನೆಂದರೆ ನಮ್ಮದೇ ಆಸಕ್ತಿಗೆ ಸಮಯ ಕೊಡುವುದೆಂದರೆ ನಾವೆಷ್ಟು ಹಿಂಜರಿಯುತ್ತೇವೆಂಬುದನ್ನು ವಿಷದಪಡಿಸಲು ಅಷ್ಟೆ.

ನಮ್ಮೂರಿನ ಶ್ರೀದೇವಿ ಕೆರೆಮನೆ ಒಂದ್ಸಲ ಪೋಸ್ಟ್ ಹಾಕಿದ್ದರು, ಗೃಹಿಣಿಯೊಬ್ಬಳು ಬೆಳಿಗ್ಗೆ ಎದ್ದು ಪುಸ್ತಕ ಹಿಡಿದು ಕುಳಿತುಬಿಟ್ಟರೆ ಏನಾಗಬಹುದು? ಎಂದು. ಫೇಸ್ಬುಕ್ಕಿನಲ್ಲಿರುವ ಕೆಲವು ಗಂಡಸರು ಏನಾಗಲ್ಲ ಎಂದು ಪ್ರತಿಕ್ರಿಯಿಸಿದರಾದರೂ ನಮ್ಮ ಮನೆಗಳಲ್ಲೆ ನಡೆದಾಗ ಏನಾಗುವುದೆಂದು ಪ್ರಾಮಾಣಿಕವಾಗಿ ಯೋಚಿಸೋಣ. ಮಹಿಳೆ ತನ್ನದೇ ಸಮಯವನ್ನು ಪಡೆಯುವ ಬಗ್ಗೆ ಇತರರಿಗೆ ಕೊಡುವ ಉಪದೇಶವೇ ಬೇರೆ, ತಮ್ಮ ಮನೆಯಲ್ಲಿರುವ ಬಗೆಯೇ ಬೇರೆ. ನಮ್ಮ ಹತ್ತಿರದವರೊಬ್ಬರು ನನ್ನ ಎಳವೆಯಿಂದಲೇ ಬಹಳ ಮಹಿಳಾಸ್ನೇಹಿಯಾಗಿದ್ದರು. ಅವರನ್ನು ಮದುವೆಯಾಗುವ ಹೆಣ್ಣು ಅದೃಷ್ಟ ಮಾಡಿದ್ದಾಳೆಂದೇ ನಾವು ನಂಬಿದ್ದವು. ಪುಸ್ತಕಪ್ರಿಯರಾಗಿದ್ದ ಅವರ ತಾಯಿಗೂ, ನಮಗೆಲ್ಲರಿಗೂ ಅವರು ಪೇಟೆಯ ಲೈಬ್ರರಿಯಿಂದ ಅನೇಕ ಕಾದಂಬರಿಗಳನ್ನು ಓದಲು ತಂದುಕೊಡುತ್ತಿದ್ದರು. ಅವರಿಗೆ ಮದುವೆಯಾದಾಗ ಆ ಅದೃಷ್ಟವಂತೆಗೆ ನಾವು ಈ ವಿಷಯವನ್ನು ಹೇಳಿದೆವು. ಕಾದಂಬರಿಯ ಹುಚ್ಚಿಯಾದ ಅವಳು ತನಗೂ ತಂದುಕೊಡಿರೆಂದು ದುಂಬಾಲು ಬಿದ್ದಳು. ಅವರು ಏನಾದರೊಂದು ತಮಾಷೆ ಮಾಡಿ ಆ ವಿಷಯವನ್ನು ಮರೆಸುತ್ತಿದ್ದರೇ ಹೊರತು ಕಾದಂಬರಿಯನ್ನು ಮಾತ್ರ ತಂದುಕೊಡಲಿಲ್ಲ. ಧಾರಾವಾಹಿಯ ಬೆನ್ನಿಗೆ ಬಿದ್ದ ಅವರಮ್ಮ ಈಗ ಪುಸ್ತಕ ಓದುವುದನ್ನು ನಿಲ್ಲಿಸಿದ್ದರು. ಪುಸ್ತಕ ತಂದುಕೊಡುವ ಬಗ್ಗೆ ನಾನೊಮ್ಮೆ ಹೆಂಡತಿಯೆದುರೇ ಅವರನ್ನು ಗದರಿಸಿದೆ. ಅವರು ಏನೋ ಮಾತಾಡಿ ವಿಷಯವನ್ನು ತೇಲಿಸಿ ಹಾಕಿ, ಮತ್ತೆ ನನ್ನನ್ನು ಕರೆದು ಹೇಳಿದರು, ನಿಂಗೆ ಚೂರೂ ಕಾಮನ್ ಸೆನ್ಸ್ ಇಲ್ಲ, ಅವಳು ಹೊಸದಾಗಿ ಮದುವೆಯಾಗಿ ಬಂದಿದ್ದಾಳೆ, ಮನೆಯವರೊಂದಿಗೆ ಮಾತಾಡಿ, ಒಡನಾಡಿ ಹೊಂದಾಣಿಕೆಯಾಗಬೇಕು. ಮನೆಗೆಲಸಗಳನ್ನೆಲ್ಲಾ ಮಾಡಿ ಸೈ ಎನಿಸಿಕೊಳ್ಳಬೇಕು. ಅತ್ತೆಯೊಂದಿಗೆ ಧಾರಾವಾಹಿ ನೋಡುತ್ತಾ ಅನುಬಂಧ ಬೆಳೆಸಿಕೊಳ್ಳಬೇಕು. ನೀನು ಹೇಳ್ತೀಯಾ ಅಂತ ಪುಸ್ತಕ ತಂದುಕೊಟ್ಟರೆ ಅವಳು ತನ್ನದೇ ಪ್ರಪಂಚದಲ್ಲಿ ಮುಳುಗಿಹೋಗ್ತಾಳೆ ಎಂದರು. ನನಗೆ ನಾನೇ ದಡ್ಡಿಯೇನೊ? ವಿಷಯ ಹೌದೇನೋ? ಎಂದು ಆ ಕ್ಷಣದಲ್ಲಿ ಅನಿಸಿತು. ಆ ಕಾಲದಲ್ಲಿ ಕಾದಂಬರಿ ಓದನ್ನು ಒಂದು ಬಗೆಯ ಎಡಿಕ್ಷನ್ ಎಂದೇ ಗುರುತಿಸುತ್ತಿದ್ದರು. (ಹುಡುಗಿಯರು ಓದುವಾಗ ಮಾತ್ರ, ಹುಡುಗರು ನನಗೆ ತಿಳಿದಂತೆ ಕಾದಂಬರಿಗಳನ್ನು ಓದುತ್ತಿರಲಿಲ್ಲ) ಆದರೆ ಮುಂದೆ ಅವಳು ಮಹಾನ್ ಧಾರಾವಾಹಿ ಪ್ರಿಯೆಯಾಗಿ, ಮಗುವಿಗೆ ಹಾಲೂಡಿಸುವಾಗಲೂ ಟಿವಿಯೆದುರೇ ಕುಳಿತು, ಮಕ್ಕಳೂ ಟಿವಿ, ಮೊಬೈಲ್ ಗಳ ದಾಸರಾಗಿ ಓದು ಎಂಬುದು ಅವರ ಮನೆಯಲ್ಲಿ ನೈವೇದ್ಯವೇ ಆಗಿಹೋಯಿತು. ಕುಟುಂಬದವರೆಲ್ಲ ಟಿವಿ ನೋಡುವವರೇ ಆಗಿದ್ದರಿಂದ ಅದಕ್ಕೇನೂ ರಿಸ್ಟ್ರಿಕ್ಷನ್ ಇರಲಿಲ್ಲ. 

ಸಾಂದರ್ಭಿಕ ಚಿತ್ರ- ಕೃಪೆ, ವಾಟ್ಸ್ಯಾಪ್

ಇಷ್ಟುದ್ದ ಕತೆಯನ್ನು ಯಾಕೆ ಹೇಳಿದೆನೆಂದರೆ ಹೆಂಗಸರು ಅವರದೇ ಸಮಯವನ್ನು ಪಡೆಯುವುದು ಕೇವಲ ಸಮಯದ ಉಳಿತಾಯ ಮಾತ್ರವಲ್ಲ ಎಂಬುದನ್ನು ತಿಳಿಸಲು. ಇನ್ನೊಬ್ಬ ಸ್ನೇಹಿತೆಯ ಕತೆ ಇದಕ್ಕಿಂತ ಭಿನ್ನ. ನನ್ನಂತೆಯೇ ಕೆಲಸದಲ್ಲಿರುವ ಅವಳು ಬಹುಮುಖೀ ಪ್ರತಿಭಾನ್ವಿತೆ. ಸ್ಥಳದಲ್ಲಿಯೇ ಕವಿತೆ ರಚಿಸಿ ಅನೇಕ ಬಹುಮಾನಗಳನ್ನು ಪಡೆದಿರುವಾಕೆ. ಅವಳ ಲೇಖನವೊಂದು ಪತ್ರಿಕೆಯಲ್ಲಿ ಬಂದ ದಿನ ಎರಡೂ ಪುಟ್ಟ ಮಕ್ಕಳಿಗೆ ಬೆನ್ನಿಗೆ ಬಾಸುಂಡೆ ಬರುವಂತೆ ಅವಳ ಗಂಡ ಬಾರಿಸಿದ್ದ. ಅತ್ತರೆ ಪಕ್ಕದ ಮನೆಗೆ ಕೇಳುವುದೆಂದು ಬಾಯಿ ಒತ್ತಿ ಹಿಡಿದಿದ್ದ. ಸದಾ ಏನಾದರೊಂದು ಕೆಲಸ ಹಚ್ಚಿ ಅವಳಿಗೆ ಚೂರೂ ಬಿಡುವಿಲ್ಲದಂತೆ ಮಾಡಿದ್ದ. ತಾನು ಮಾತ್ರ ದಿನವೂ ಸಂಜೆ ವ್ಯಾಯಾಮದ ಹೆಸರಲ್ಲಿ ಗಂಟೆಗಟ್ಟಲೆ ಗೆಳೆಯರೊಂದಿಗೆ ಆಟವಾಡುತ್ತಿದ್ದ. ರಾತ್ರಿ ಬೇಗ ನಿದ್ದೆ ಬರುವುದೆಂಬ ನೆಪವೊಡ್ಡಿ ದೀಪವಾರಿಸುತ್ತಿದ್ದ. ಅವಳೂ ಮಲಗಲೇಬೇಕಿತ್ತು. ನನ್ನ ಬರಹಗಳನ್ನು ಬಹಳ ಮೆಚ್ಚುವ ಅವಳು ಸಿಕ್ಕಾಗಲೆಲ್ಲಾ ಎಲ್ಲದಕ್ಕೂ ಪಡಕೊಂಡು ಬಂದಿರಬೇಕು ಎಂದು ನಿಡುಸುಯ್ಯುತ್ತಾಳೆ. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಹೀಗಿರುವುದು ಅವಶ್ಯ ಎಂದು ಸಮಜಾಯಿಸಿ ನೀಡುತ್ತಾಳೆ. ನನ್ನ ವಿದ್ಯಾರ್ಥಿನಿಯರಿಗೆ ಸಾಹಿತ್ಯದ ಒಲವನ್ನು ದಾಟಿಸಿರುವೆ, ನನ್ನ ಬರಹವನ್ನೆಲ್ಲಾ ಅವರೇ ಬರೆಯುತ್ತಾರೆ ಬಿಡು ಎಂದು ಸಮಾಧಾನಿಸಿಕೊಳ್ಳುತ್ತಾಳೆ. ಲೋಕದ ದೃಷ್ಟಿಯಲ್ಲಿ ಯಶಸ್ವೀ ಗೃಹಿಣಿ, ಆದರ್ಶ ಶಿಕ್ಷಕಿ, ಒಳ್ಳೆಯ ಅಮ್ಮ ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾಳೆ. 

ನಿಮ್ಮ ನಿಮ್ಮ ಮನೆಗಳಲ್ಲಿ ಹೆಣ್ಣುಮಕ್ಕಳು ಅವರದೇ ಸಮಯ ಅಂತ ದಿನದಲ್ಲಿ ಎಷ್ಟು ನಿಮಿಷ ಪಡಕೊಳ್ಳುತ್ತಾರೆಂದು ಒಮ್ಮೆ ನೆನಪಿಸಿಕೊಂಡರೆ ಸಾಕು, ನಾನು ಹೇಳುವ ವಿಷಯ ಅರ್ಥವಾಗುತ್ತದೆ. ಹಾಗೆಂದು ಗಂಡಸರಿಗೆ ಹಾಗೆ ಸಮಯವಿದೆಯೇ? ಎಂದರೆ ಅದನ್ನು ಅವರೇ ಹೇಳಬೇಕು. ನಾನು ನೋಡಿದಂತೆ ನನ್ನ ಜತೆ ಮೌಲ್ಯಮಾಪನಕ್ಕೆ ಬರುತ್ತಿದ್ದ ಶಿಕ್ಷಕಿಯೊಬ್ಬರು ದಿನವೂ ತಡವಾಗಿ ಬರುತ್ತಿದ್ದರು. ನಮ್ಮ ಪೇಪರಿನ ಒಂದು ಭಾಗವನ್ನು ಅವರು ತಿದ್ದಬೇಕಾದ್ದರಿಂದ ದಿನವೂ ನಮಗೆ ತೊಂದರೆಯಾಗುತ್ತಿತ್ತು. ಒಂದೆರಡು ದಿನಗಳ ನಂತರ ನಾನು ಅವರಿಗೆ ಚೂರು ಬೇಗ ಬರುವಂತೆ ಹೇಳಿದೆ. ಅದಕ್ಕವರು ಮನೆಯಲ್ಲಿ ಎಲ್ಲವನ್ನೂ ನಾನೇ ಮಾಡಬೇಕು, ನನ್ನ ಗಂಡನಿಗೆ ಕಾಫಿ ಲೋಟ ಕೈಗೆ ಕೊಡಬೇಕು ಎಂದರು. ನಾನು ಮಾಮೂಲಿಯಂತೆ ಯಾಕೆ ಮೇಡಂ? ಅವರಿಗೂ ಚೂರು ಕೆಲಸ ಕೊಡಿ ಎಂದೆ. ಅದಕ್ಕವರು ನಮ್ಮನೆಯವರು ಅದ್ಯಾವುದೋ ಲೋಕಲ್ ಪತ್ರಿಕೆಯಲ್ಲಿ ಕಾಲಮಿಸ್ಟ್ ಮೇಡಂ, ಬರೆಯೋರಿಗೆಲ್ಲಾ ಯೋಚಿಸೋಕೆ ತುಂಬಾ ಸಮಯ ಬೇಕಲ್ಲ ಅಂದ್ರು.

ನಮ್ಮ ಬಾಲ್ಯದಲ್ಲಿ ಪಕ್ಕದ ಮನೆಯ ಮಗಳೊಬ್ಬಳು ರಜೆ ಬಂದರೆ ಸಾಕು, ಎರಡೂ ಮಕ್ಕಳನ್ನು ಕಟ್ಟಿಕೊಂಡು ತವರಿಗೆ ಬಂದು ತಿಂಗಳೆರಡರವರೆಗೆ ನಿಲ್ಲುತ್ತಿದ್ದರು. ಮನೆಯವರು ಮಾತ್ರ ಈಚೆಗೆ ಸುಳಿಯುತ್ತಲೂ ಇರಲಿಲ್ಲ. ಯಾಕೆ ಎಂದರೆ ಬ್ಯಾಂಕ್ ಕೆಲಸದಲ್ಲಿರುವ ಅವರು ಯಾವುದೋ ಡಿಪಾರ್ಟ್‌ಮೆಂಟ್‌ ಎಕ್ಸಾಂ ತಗೊಳ್ಳುವುದರಿಂದ ಓದಲು ಮಕ್ಕಳ ರಗಳೆಯಿರಬಾರದೆಂದು ಈ ವ್ಯವಸ್ಥೆ ಎಂದರು. ಈಗ ಇಪ್ಪತ್ತು ವರ್ಷಗಳ ಹಿಂದೆ ಎಂಜಿನಿಯರನ್ನು ಮದುವೆಯಾದ ನನ್ನ ಸಹೋದ್ಯೋಗಿಯ ಮಗಳೊಬ್ಬರು ತನ್ನ ಗಂಡನಿಗೆ ಮನೆಗೆ ಬಂದನಂತರವೂ ತಡರಾತ್ರಿಯವರೆಗೆ ಆನ್‌ಲೈನ್ ಮೀಟಿಂಗ್ ಎಲ್ಲ ಇರುವುದರಿಂದ ಮೀಟಿಂಗ್ ನಡೆಯುತ್ತಿರುವಾಗಲೇ ಊಟ ಮಾಡುತ್ತಾನೆಂದೂ, ಆಗ ಅಗಿಯುವ ಶಬ್ದವೆಲ್ಲಾ ಕೇಳಬಾರದೆಂದು ತಾನು ಅವನ ಊಟವನ್ನು ನುರಿದು ಗಂಜಿಯ ಹಾಗೆ ಮಾಡಿ ತಿನ್ನಿಸುವೆನೆಂದು ಹೇಳಿದ್ದಳು.‌ ವಾರದ ಕೆಲಸದ ದಿನಗಳಲ್ಲಿ ಒಂದು ಮಾತನಾಡಲೂ ಸಮಯವಿಲ್ಲದ ಅವನು ತನಗೆ ಬೋರಾಗಬಾರದೆಂದು ಮೊಬೈಲಿನಲ್ಲಿ ಸಾವಿರಗಟ್ಟಲೆ ರೂಪಾಯಿ ಕರೆನ್ಸಿ ಹಾಕಿಸಿದ್ದಾನೆ, ಇಡಿ ದಿನ ಯಾರಿಗಾದರೂ ಫೋನ್ ಮಾಡುತ್ತಾ ಸಮಯ ಕಳೆಯುವೆ ಎಂದೆಲ್ಲಾ ವರದಿ ಕೊಟ್ಟಿದ್ದಳು. ಪ್ರಸಿದ್ಧ ಲೇಖಕರ ಹೆಂಡತಿಯರೆಲ್ಲಾ ತಮ್ಮ ಗಂಡಂದಿರು ಬರೆಯುವಾಗ ಹೆಜ್ಜೆಯ ಸದ್ದಾಗದಂತೆ ನಡೆಯುತ್ತಿದ್ದುದನ್ನೂ, ಮಕ್ಕಳನ್ನೆಲ್ಲ ಸಂಭಾಳಿಸಿದ್ದನ್ನೂ, ಅವರ ಟೇಬಲ್ಲಿಗೇ ಬೇಕಾದ್ದನ್ನೆಲ್ಲ ಪೂರೈಸುತ್ತಿದುದನ್ನೂ ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ನೀವೆಲ್ಲರೂ ಕೇಳಿರುತ್ತೀರಿ.

solo travel- ಸಾಂದರ್ಭಿಕ ಚಿತ್ರ

ಈ ಎಲ್ಲಾ ಬಂಧನಗಳಿಂದ ನಮ್ಮನ್ನು ಬಿಡಿಸಿಕೊಂಡು ಬಯಸಿದಾಗಲೆಲ್ಲ ರಾತ್ರಿಯನ್ನು ಕರಗಿಸಿ ಬರವಣಿಗೆಯಾಗಿಸುವ ಸ್ವಾತಂತ್ರ್ಯ ಪಡೆದಿರುವೆವೆಂದು ಹಿಗ್ಗುವ ನಮ್ಮ ಆಸೆಯ ಬಲೂನುಗಳೂ ಸರಿಯಾಗಿ ಯೋಚಿಸಿದರೆ ಒಮ್ಮೊಮ್ಮೆ ಠುಸ್ಸೆಂದು ಒಡೆದುಹೋಗುತ್ತದೆ. ಕೊರೋನಾದ ಮನೆವಾಸದಿಂದ ಬೇಸತ್ತ ಕಾಲದಲ್ಲಿ ನನಗೆ ಅನೇಕಸಲ ಎಲ್ಲಿಯಾದರೂ ಎರಡು ದಿನ ಕಾಣೆಯಾಗಿಬಿಡಬೇಕು ಅನಿಸಿತ್ತು. ಅಂದರೆ ಕಾರ್ಯ, ಕಾರಣ, ಸ್ಥಳಗಳನ್ನು ಸೂಚಿಸದೇ ಏಕಾಂಗಿಯಾಗಿ ಹೊರಟುಬಿಡಬೇಕು ಎಂದು. ಈಗಿನ ಮಕ್ಕಳೆಲ್ಲಾ ಅದಕ್ಕೆ ‘ಸೋಲೋ ಟ್ರಿಪ್’ ಎಂಬ ಚಂದದ ಹೆಸರನ್ನು ಕೊಟ್ಟಿದ್ದಾರೆ. ಅದನ್ನು ಸಾಧ್ಯವಾಗಿಸಬಹುದಾ? ಎಂದು ಯೋಚಿಸಿದಾಗಲೇ ನನಗೆ ನನ್ನ ಸುತ್ತಲಿರುವ ಬಂಧನದ ಅರಿವಾದದ್ದು. ಇಂದಿನವರೆಗೂ ಹಾಗೆ ಕಾಣೆಯಾಗಿಬಿಡುವ ಒಂದು ದಿನವೂ ನನ್ನ ಪಾಲಿಗೆ ಬಂದಿಲ್ಲ, ಅಂದರೆ ಬರಿಸಿಕೊಳ್ಳುವ ದಾರಿಯನ್ನು ನಾನು ಕಂಡುಕೊಂಡಿಲ್ಲ. ಎಲ್ಲಿ? ಯಾಕೆ? ಹೇಗೆ? ಹೋಗುವೆನೆಂಬ ಸಂಪೂರ್ಣ ಮಾಹಿತಿಯನ್ನು ಜತೆಗಿರುವವರಿಗೆ ನೀಡದೇ ಒಂದು ದಿನವನ್ನೂ ನಮ್ಮದಾಗಿಸಿಕೊಳ್ಳುವಂತಿಲ್ಲ ಎಂಬ ಯೋಚನೆಯೇ ಅನೇಕ ಸಲ ನನಗೆ ಅಳುಬರುವಂತೆ ಮಾಡುತ್ತದೆ. ಮತ್ತಿದು ನಮ್ಮದೇ ಸ್ವಯಂಕೃತಾಪರಾಧವೆಂಬ ಅರಿವೂ ಇದೆ. ಆದರೆ ಈಗಿನ ನಮ್ಮ ತರಳೆಯರು ಇಂಥದ್ದನ್ನೆಲ್ಲಾ ಸಾಧಿಸಿಕೊಳ್ಳುತ್ತಿದ್ದಾರೆ. ಅಮೇರಿಕಾದಿಂದ ಬಂದ ನನ್ನ ಕಿರಿಯ ಗೆಳತಿಯೊಬ್ಬಳು ಬರಹಕ್ಕೆಂದು ತನ್ನ ಗಂಡನ ಮನೆಯವರಿಗೆ ಹೇಳಿ ಒಂದು ವಾರದ ಕಣ್ಮರೆಯ ಅವಧಿಯನ್ನು ಮಂಜೂರು ಮಾಡಿಸಿಕೊಂಡೆ ಎಂದು ನಗುತ್ತಾ ಹೇಳಿದಳು. ಆ ಸಮಯದಲ್ಲಿ ಎಲ್ಲಿರುವೆ? ಹೇಗಿರುವೆ? ಯಾರೊಂದಿಗಿರುವೆ? ಎಂದೆಲ್ಲಾ ವಿಚಾರಿಸಬಾರದು, ಹಾಗೇನಾದರೂ ಅವಶ್ಯಕತೆಯಿದ್ದರೆ ನಾನೇ ಕರೆಮಾಡುವೆನೆಂಬ ಷರತ್ತು ವಿಧಿಸಿರುವೆ ಎಂದಳು.

ನನ್ನ ಕಾಲಿಗೆ ಕೋಳವಿಲ್ಲವೆಂದು ನಾನೇಕೆ ಹಿಗ್ಗಲಿ? 

ನನ್ನ ಸುತ್ತಲೂ ಕಾವಲು ಗೋಡೆಯೇ ನಿಂತಿರುವಾಗ!

ಅಂದರೆ ನನ್ನ ಸುತ್ತಲಿನವರು ಕೇಳುತ್ತಿರುವುದು ನೀವು ಸಮಯವನ್ನು ಹೇಗೆ ಉಳಿಸುತ್ತೀರಿ ಎಂದಲ್ಲ, ನಿಮ್ಮದೇ ಸಮಯ ನಿಮಗೆ ಅಷ್ಟೊಂದು ಹೇಗೆ ಸಿಗುತ್ತದೆ? ಅಂತ. ಅಷ್ಟು ಸಮಯ ಗಿಟ್ಟಿಸುವ ಗಳಿಗೆಯಲ್ಲೂ ಪಾಪಪ್ರಜ್ಞೆಗೋ ಎಂಬಂತೆ ಹೊಸಬಗೆಯ ಅಡುಗೆ, ಹಳೆ ಮಾದರಿಯ ತರಾವರಿ ತಿನಿಸುಗಳು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿಯೆಂದು ವಾರ್ಷಿಕ ತಿಂಡಿಗಳನ್ನು ಮಾಡುವುದರ ಜತೆಗೆ ಊರು, ಹಿರಿಯರು, ಮದುವೆ, ಹಬ್ಬ, ಹೆರವರ ಕಷ್ಟ, ಸುಖ ಅಂತೆಲ್ಲಾ ಹೆಚ್ಚುವರಿಯಾಗಿ ದುಡಿಯುತ್ತಾ ನಮ್ಮ ಪಾಪಪ್ರಜ್ಞೆಯನ್ನು ತೊಳೆದುಕೊಳ್ಳುತ್ತಿರುತ್ತೇವೆ. ನಮ್ಮ ವಿದ್ಯಾರ್ಥಿಗಳು ಎಲ್ಲರೂ ಪಾಸಾಗಲೇಬೇಕೆಂದು ಹಗಲಿರುಳು ಸೆಣಸುತ್ತಿರುತ್ತೇವೆ. ಇವರಿಗೆ ಇಡೀದಿನ ತಮ್ಮ ಆಸಕ್ತಿಯ ಕ್ಷೇತ್ರದ ಬಗೆಗಿನ ಯೋಚನೆಯೇ ಆಯಿತು ಎಂಬ ಕಟಕಿಯನ್ನು ಸಹಿಸುತ್ತಿರುತ್ತೇವೆ. ಕಾಲೇಜಿನಲ್ಲಿ ಏನಾದರೂ ಬರೆಯುತ್ತಾರಾ? ಎಂದು ಇಣುಕುವವರಿಗೇನೂ ಕೊರತೆಯಿಲ್ಲ. ಇವೆಲ್ಲದರ ನಡುವೆ ಚೂರೇ ಚೂರು ಬರೆಯುವ ನಮ್ಮಂಥವರ ಕೆಲಸವೂ ವ್ಯೂಹದೊಳಗಿರುವವರ ಹುಬ್ಬೇರುವಂತೆ ಮಾಡುತ್ತದೆಯಷ್ಟೆ. ನಮ್ಮ ಸಮಾಜದಲ್ಲಿ ವೈಯಕ್ತಿಕತೆಯೆಂಬುದು ಎಷ್ಟು ದುರ್ಲಭ ಅಲ್ಲವೆ?

ಸುಧಾ ಆಡುಕಳ

ಉಪನ್ಯಾಸಕರು

ಇದನ್ನೂ ಓದಿ-

More articles

Latest article