Thursday, December 12, 2024

ನಮಗೆ ಪೊಲೀಸ್‌ ನೋಟಿಸ್‌ ಬಂದಿಲ್ಲ ; ಚಂದ್ರಶೇಖರನಾಥಸ್ವಾಮೀಜಿ ಸ್ಪಷ್ಟನೆ

Most read

ಬೆಂಗಳೂರು:  ನಮ್ಮನ್ನು ಜೈಲಿಗೆ ಹಾಕುವುದಾದರೆ ಹಾಕಲಿ, ರೈತರು ಭೂಮಿ ಕಳೆದುಕೊಂಡ ನೋವಿಗೆ ಮಾತಿನ ಭರಾಟೆಯಲ್ಲಿ ಮುಸ್ಲಿಂ ಸಮುದಾಯದ ಮತದಾನ ಕುರಿತು ಮಾತನಾಡಿದ್ದೆ. ಅದು ಉದ್ದೇಶ ಪೂರ್ವಕ ಅಲ್ಲ ಎಂದು ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಾತುಗಳು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದೇನೆ. ನನ್ನ ಮಾತುಗಳನ್ನು ಬೆಳಸುವುದನ್ನು ಬಿಟ್ಟು ಇಲ್ಲಿಗೆ ಬಿಟ್ಟು ಬಿಡಬೇಕು. ಭಾರತ ಎಲ್ಲ ಧರ್ಮದವರ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ. ನಾನು ಕೂಡಾ ಮುಸ್ಲಿಂ ಸಮುದಾಯಗಳ ಕಾರ್ಯಕ್ರಮಗಳಿಗೆ ಹೋಗುತ್ತೇನೆ. ವಿಷಾದ ವ್ಯಕ್ತಪಡಿಸಿದ ನಂತರವೂ ನನ್ನ ವಿರುದ್ಧ ಏಕೆ ಪ್ರಕರಣ ದಾಖಲಿಸಿದ್ದಾರೆ ಎಂದು ಗೊತ್ತಿಲ್ಲ ಎಂದರು.

 ಪೊಲೀಸರು ನನಗೆ ನೋಟಿಸ್ ನೀಡಿರುವುದು ಗೊತ್ತಿಲ್ಲ. ನನ್ನ ಆರೋಗ್ಯ ಸರಿ ಇಲ್ಲ. ವಿಶ್ರಾಂತಿಯಲ್ಲಿದ್ದೇನೆ. ವಿಚಾರಣೆಗೆ ಹೋಗಲು ಆಗುವುದಿಲ್ಲ. ಪೊಲೀಸರೇ ಇಲ್ಲಿಗೆ ಬಂದರೆ ನಾನು ನನ್ನ ಹೇಳಿಕೆಗೆ ಸಮಜಾಯಿಷಿ ನೀಡುತ್ತೇನೆ ಎಂದರು. ವಕ್ಫ್ ಮಂಡಳಿಯನ್ನು ನಿಷೇಧಿಸಿ ಎಂದು ಹೇಳಿಲ್ಲ. ರೈತರಿಗೆ ಭೂಮಿ ನೀಡಿ ಎಂದು ಮಾತ್ರ ಹೇಳಿದ್ದೇನೆ. ಸರ್ಕಾರ ಏಕೆ ಹೀಗೆ ಮಾಡುತ್ತಿದೆಯೋ ಗೊತ್ತಿಲ್ಲ. ಒಂದು ಸಮುದಾಯ ಓಲೈಕೆ ಮಾಡಲು ಈ ರೀತಿ ನಡೆದುಕೊಳ್ಳುವುದು ಒಳ್ಳೆಯದಲ್ಲ ಎಂದು ಸ್ವಾಮೀಜಿ ಅಸಮಾಧಾನ ಹೊರಹಾಕಿದರು.
ಮಠಕ್ಕೆ ಕೆಲವು ನಾಯಕರು ಆಗಮಿಸಿ ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ. ಏನು ಬರುತ್ತದೆಯೋ ಅದನ್ನು ಎದುರಿಸುತ್ತೇನೆ. ದೇವರ ಮೇಲೆ ಭಾರ ಹಾಕಿದ್ದೇನೆ ಎಂದರು.


ಮುಸ್ಲಿಮರಿಗೆ ಮತದಾನದ ಹಕ್ಕು ರದ್ದುಗೊಳಿಸಬೇಕು ಎಂದು ಹೇಳಿಕೆ ನೀಡಿದ್ದ ಚಂದ್ರಶೇಖರನಾಥಸ್ವಾಮೀಜಿ ಅವರ ವಿರುದ್ಧ ಬೆಂಗಳೂರು ಉಪ್ಪಾರಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ. 2 ರಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

More articles

Latest article