ಮುಂಬೈ: ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿಲ್ಲ ಎಂದು ಹೇಳುವ ಮೂಲಕ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ-ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ರಾಜಕೀಯ ನಿವೃತ್ತಿಯ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ. ತಮ್ಮ ಮೊಮ್ಮಗ ಯುಗೇಂದ್ರ ಪವಾರ್ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.
ರಾಜ್ಯಸಭೆಯ ಅವಧಿ ಮುಗಿದ ನಂತರ ಸಂಸದೀಯ ಸ್ಥಾನದಲ್ಲಿ ಉಳಿಯಬೇಕೇ? ಬೇಡವೇ? ಎನ್ನುವುದರ ಬಗ್ಗೆ ಯೋಚಿಸುತ್ತೇನೆ. ನನಗೆ ಯಾವುದೇ ಅಧಿಕಾರ ಇಲ್ಲ. ರಾಜ್ಯಸಭೆಯಲ್ಲಿ ಮಾತ್ರ ಇದ್ದೇನೆ. ರಾಜ್ಯಸಭಾ ಅಧಿಕಾರಾವಧಿ ಇನ್ನು ಒಂದೂವರೆ ವರ್ಷ ಬಾಕಿ ಇದೆ. ಇದುವರೆಗೆ ನಾನು 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇನ್ನು ಎಷ್ಟು ಚುನಾವಣೆಯಲ್ಲಿ ಸ್ಪರ್ಧಿಸಲಿ? ಹೊಸ ಪೀಳಿಗೆಗೆ ಅವಕಾಶ ನೀಡಬೇಕಿದೆ ಎಂದು ಹೇಳಿದರು.
ಅಧಿಕಾರ ತೊರೆದರೂ ಜನಸೇವೆ ಮಾಡುವುದನ್ನು ಬಿಡುವುದಿಲ್ಲ. ಸಾಮಾಜಿಕ ಸೇವೆಗೆ ಚುನಾವಣೆಯ ಅಗತ್ಯವಿಲ್ಲ ಎಂದು ಶರದ್ ಪವಾರ್ ಹೇಳಿದರು.
ಲೋಕಸಭಾ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ಇನ್ನು ಮುಂದೆ ಸ್ಪರ್ಧೆ ಮಾಡುವುದಿಲ್ಲ. ಇದುವರೆಗೆ ಸ್ಪರ್ಧಿಸಿದ್ದ ಎಲ್ಲ ಚುನಾಣೆಗಳಲ್ಲೂ ನನ್ನನ್ನು ಗೆಲ್ಲಿಸಿದ್ದೀರಿ. ಇನ್ನು ಮುಂದೆ ಹೊಸ ತಲೆಮಾರಿಗೆ ಅವಕಾಶ ನೀಡಬೇಕಿದೆ ಎಂದರು. ಮೂರು ದಶಕಗಳ ಹಿಂದೆ ರಾಷ್ಟ್ರ ರಾಜಕಾರಣಕ್ಕೆ ಹೋಗಿದ್ದ ನಾನು ರಾಜ್ಯದ ಜವಬ್ದಾರಿಗಳನ್ನು ಅಜಿತ್ ಪವಾರ್ ಅವರಿಗೆ ವಹಿಸಿದ್ದೆ. ಅವರು 25ವರ್ಷ ಈ ಜವಬ್ದಾರಿ ನಿರ್ವಹಿಸಿದ್ದಾರೆ. ಇನ್ನು ಮುಂದಿನ 30 ವರ್ಷಗಳಿಗೆ ವ್ಯವಸ್ಥೆ ಮಾಡಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದರು.