Saturday, July 27, 2024

ರಾಯಚೂರಿನಲ್ಲಿ ಏಮ್ಸ್‌ (AIIMS) ಸ್ಥಾಪನೆಗೆ ಕೇಂದ್ರ ಸರ್ಕಾರದ ಮನವೊಲಿಸಿ : ಕಲ್ಯಾಣ ಕರ್ನಾಟಕ ಸಂಸದರಿಗೆ ಪತ್ರ ಬರೆದ ಸಚಿವ ಎನ್‌ ಎಸ್‌ ಭೋಸರಾಜು

Most read

ಬೆಂಗಳೂರು : ರಾಯಚೂರು ನಗರದಲ್ಲಿ ಏಮ್ಸ್‌ ಸಂಸ್ಥೆ ಸ್ಥಾಪನೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ಕಲ್ಯಾಣ ಕರ್ನಾಟಕ ಭಾಗದ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರಕಾರದಿಂದ ಮಹತ್ವಾಕಾಂಕ್ಷೆ ಜಿಲ್ಲೆಯ (Aspiration District) ಹಾಗೂ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ನಂಜುಂಡಪ್ಪ ವರದಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಐಐಟಿ (IIT) ಯಂತಹ ಶೈಕ್ಷಣಿಕ ಸಂಸ್ಥೆಗಳನ್ನ ಸ್ಥಾಪಿಸುವಂತೆ ಸಲಹೆ ನೀಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಐಐಟಿ ಯನ್ನ ಧಾರವಾಡ ಜಿಲ್ಲೆಗೆ ಮಂಜೂರು ಮಾಡಲಾಯಿತು. ಆ ನಂತರದ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಏಮ್ಸ್ ಮಂಜೂರು ಮಾಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿತ್ತು. 

ಧಾರವಾಡ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆ ಆದ ನಂತರ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಯಾಗಿರುವ ಏಮ್ಸ್‌ (AIIMS) ನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ಪಕ್ಷಾತೀತವಾಗಿ ರಾಯಚೂರು ನಗರದಲ್ಲಿ ಏಮ್ಸ್‌ (AIIMS)ನ್ನ ಸ್ಥಾಪಿಸಬೇಕು ಎನ್ನುವ ಕೂಗಿನ ನಡುವೆ 629 ದಿನಗಳಿಂದ ಸಾರ್ವಜನಿಕರು ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ರಾಯಚೂರಿಗೆ ಏಮ್ಸ್‌ (AIIMS) ಮಂಜೂರು ಮಾಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿದೆ. 17-06-2023 ರಂದು ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಮಂತ್ರಿಗಳಿಗೆ ಪತ್ರವನ್ನ ಬರೆದು ರಾಯಚೂರಿನಲ್ಲಿ ಏಮ್ಸ್ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಅಲ್ಲದೇ, ರಾಜ್ಯ ಸರಕಾರದಿಂದ ಅಗತ್ಯ ಸಹಕಾರ ನೀಡುವುದಾಗಿಯೂ ತಮ್ಮ ಪತ್ರದಲ್ಲಿ ತಿಳಿಸಿದ್ದರು. ಇದಕ್ಕೆ ಉತ್ತರ ದೊರಕದ ಹಿನ್ನಲೆಯಲ್ಲಿ 07-09-2023 ರಂದು ಮತ್ತೊಂದು ಪತ್ರವನ್ನು ಬರೆದು ಮನವಿಯನ್ನ ಮಾಡಿದ್ದರು. 22-08-2023 ರಂದು ರಾಯಚೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಹೋರಾಟ ಸಮಿತಿಯ ಸದಸ್ಯರನ್ನ ಒಳಗೊಂಡ ತಂಡ ದೆಹಲಿಗೆ ಭೇಟಿ ನೀಡಿ ಆರೋಗ್ಯ ಸಚಿವರನ್ನು ಭೇಟಿ ಮಾಡಿ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯನ್ನು ಸಲ್ಲಿಸಿತು. ಈ ತಂಡಕ್ಕೆ ಆರೋಗ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ರಾಜ್ಯ ಸರಕಾರದ ಆಶಯದಂತೆಯೇ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಆದರೆ, ಇದುವರೆಗೂ ಕೇಂದ್ರ ಸರಕಾರದಿಂದ ಇದುವರೆಗೂ ಯಾವುದೇ ರೀತಿಯ ಅಧಿಕೃತ ಸಂವಹನ ಸ್ವೀಕಾರವಾಗಿಲ್ಲ. ಈ ಹಿನ್ನಲೆಯಲ್ಲಿ 29-01-2024 ರಂದು ಮತ್ತೊಮ್ಮೆ ಮುಖ್ಯಮಂತ್ರಿಗಳು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು 2024-25 ರ ಕೇಂದ್ರ ಬಜೆಟ್‌ ನಲ್ಲಿ ಘೋಷಣೆ ಮಾಡುವಂತೆ ಕೋರಿದ್ದಾರೆ.

ಈ ಹಿನ್ನಲೆಯಲ್ಲಿ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳಾದ ತಾವುಗಳು ಕೇಂದ್ರ ಸರಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಅವಶ್ಯಕತೆಯಿದೆ. ತಾವುಗಳು ಕೇಂದ್ರ ಸರಕಾರದ ವಿತ್ತ ಸಚಿವರು ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿಕೊಳ್ಳುವ ಮೂಲಕ ರಾಯಚೂರು ನಗರಕ್ಕೆ ಏಮ್ಸ್‌ (AIIMS) ಮಂಜೂರು ಆಗುವಂತೆ ಮಾಡುವ ನಿಟ್ಟಿನಲ್ಲಿ ಸಹಕರಿಸಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಸಚಿವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

More articles

Latest article