Saturday, July 27, 2024

ಫೆ.7ರಂದು ಮಂಡ್ಯದ ಸೌಹಾರ್ದತೆಗಾಗಿ ಪ್ರಗತಿಪರರಿಂದ ಬಂದ್

Most read

ಮಂಡ್ಯ: ಜಿಲ್ಲೆಯ ಸೌಹಾರ್ದತೆ ಮತ್ತು ಶಾಂತಿಯನ್ನು ಕದಡುತ್ತಿರುವ ಶಕ್ತಿಗಳ ವಿರುದ್ಧ ಸಮಾನ ಮನಸ್ಕರ ವೇದಿಕೆಯು ಫೆ.7ರಂದು ಮಂಡ್ಯ ನಗರವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಕರೆ ನೀಡಿದೆ.

ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಂಡ್ಯ ಜಿಲ್ಲೆಯ ಸೌಹಾರ್ದ ಪರಂಪಂರೆಗೆ ಮಸಿ ಬಳಿದು, ಶಾಂತಿ ನೆಮ್ಮದಿ ಕೆಡಿಸುತಿರುವ ಶಕ್ತಿಗಳ ವಿರುದ್ಧ ಶಾಂತಿಯುತ ಬಂದ್ ನಡೆಸುವ ಮೂಲಕ ಜಿಲ್ಲೆಯನ್ನು ಸೌಹಾರ್ದದ ನೆಲೆಯಾಗಿ ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶವನ್ನು ಕೊಡಲು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ತೀರ್ಮಾನಿಸಿವೆ ಎಂದು ವೇದಿಕೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.7 ರಂದು ರಾಷ್ಟ್ರಧ್ವಜ ಹಿಡಿದು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ, ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು. ಶಾಂತಿಪ್ರಿಯ ಮಂಡ್ಯದ ಜನತೆ ಬಂದ್ ಗೆ ಸ್ವಯಂಪ್ರೇರಣೆಯಿಂದ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಕುರುಬರ ಹಾಸ್ಟೇಲ್ ದಾಳಿಗೆ ಖಂಡನೆ

ಇದೇ ವೇಳೆ ಕುರುಬ ಸಮುದಾಯ ನಡೆಸುತ್ತಿರುವ ವಿದ್ಯಾರ್ಥಿ ನಿಲಯದ ಮೇಲೆ ದಾಳಿ ಮಾಡಿದ ಕೃತ್ಯವನ್ನು ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ. ಒಂದು ಸಮುದಾಯ ನಡೆಸುವ ಹಾಸ್ಟೇಲ್ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿ ಫ್ಲೆಕ್ಸ್ ಹರಿದು ಹಾಕುವುದು ಪುಂಡಾಟಿಕೆಯ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಕೆಲಸವಾಗಿದೆ. ಇಂತಹ ಪುಂಡರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.

ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ವರ್ತಿಸಬೇಕು. ಮಂಡ್ಯ ಜಿಲ್ಲೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಅಡಿಯಲ್ಲಿ ಹೋರಾಡಲಿ. ಅದು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡಬಾರದು. ಜನರನ್ನು ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಬದುಕಿನ ಪ್ರಶ್ನೆಗಳನ್ನು ಮೂಲೆಗೆ ತಳ್ಳುವ ನೀಚ ರಾಜಕಾರಣವನ್ನು ಯಾವುದೇ ಸಂಘಟನೆ ಅಥವಾ ಪಕ್ಷ ಮಾಡಬಾರದೆಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸುತ್ತವೆ.

ಮಂಡ್ಯದ ಒಕ್ಕಲಿಗರಿಗೆ ಕುವೆಂಪು ಮಾದರಿಯಾಗಲಿ

ಮಂಡ್ಯ ಜಿಲ್ಲೆಯ ಹಿಂದೂಗಳಿಗೆ ವಿವೇಕಾನಂದರು, ಒಕ್ಕಲಿಗರಿಗೆ ಕುವೆಂಪು, ಶಂಕರೇಗೌಡರು, ವೀರಣ್ಣಗೌಡರು, ಮಾದೇಗೌಡರು ಮಾದರಿಯಾಗಬೇಕೇ ಹೊರತು, ಭಾವನೆಗಳಿಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಕೀಚಕರಲ್ಲ. ಹಾಗಾಗಿ ನಾವೆಲ್ಲಾ ವಿವೇಕಾನಂದರ, ಕುವೆಂಪು, ಶಂಕರೇಗೌಡ, ವೀರಣ್ಣಗೌಡ, ಮಾದೇಗೌಡರ ಹಾದಿಯಲ್ಲಿ ಕೈ ಕೈ ಹಿಡಿದು ನಡೆಯೋಣ ಎಂದು ಜಿಲ್ಲೆಯ ಯುವಜನರಲ್ಲಿ ಸಮಾನ ಮನಸ್ಕರ ವೇದಿಕೆಯ ಲಕ್ಷ್ಮಣ ಚೀರಣಹಳ್ಳಿ, ಕರುನಾಡ ಸೇವಕರು ಸಂಘಟನೆ ಜಿಲ್ಲಾಧ್ಯಕ್ಷ ಎಂ.ಬಿ ನಾಗಣ್ಣಗೌಡ, ಟಿ.ಡಿ. ಬಸವರಾಜು, ಜನಶಕ್ತಿಯ ಸಿದ್ದರಾಜು, ಟಿ.ಎಲ್. ಕೃಷ್ಣೇಗೌಡ ಸೇರಿದಂತೆ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.

More articles

Latest article