ಧರ್ಮಸಹಿಷ್ಣುತೆಯ ದಾರ್ಶನಿಕರು; ಸ್ವಾಮಿ ವಿವೇಕಾನಂದರು

Most read

ಸ್ವಾಮಿ ವಿವೇಕಾನಂದರ ಜನುಮ ದಿನದ  ನೆನಪಿಗಾಗಿ ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ವಿವೇಕಾನಂದರನ್ನು ಸ್ಮರಿಸಿ ಬರೆದಿದ್ದಾರೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಗಂಗಾಧರಯ್ಯ ಹಿರೇಮಠ.

ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಬಹುಮುಖವಾದುದು. ಅದು ಮಹಾಸಾಗರದಂತೆ ವಿಶಾಲವೂ, ಅನಂತವೂ, ಗಂಭೀರವೂ ಆದುದು.  ನನ್ನನ್ನು ಕೇವಲ ಭಾರತಕ್ಕೆ ಮಾತ್ರ ಸೇರಿದವನೆಂದು ತಿಳಿಯದಿರಿ, ನಾನು ಸಮಸ್ತ ವಿಶ್ವಕ್ಕೆ ಸೇರಿದವನು ಎಂದು ಹೇಳುತ್ತ ವಿಶ್ವಭ್ರಾತೃತ್ವದ ಬೀಜವನ್ನು ಬಿತ್ತಿ, ವಿಶ್ವಶಾಂತಿ, ವಿಶ್ವಾತ್ಮಭಾವ, ಸುಮಧುರ ಸುಫಲವನ್ನು ನೀಡುವಂತಾಗಲು ನಾವು ನೀರೆರೆಯುವ ಕೆಲಸ ಮಾಡಬೇಕಾಗಿದೆ. ಅವರೊಬ್ಬ ಮಹಾವಾಗ್ಮಿ, ಅದ್ಭುತ ಶಕ್ತಿ, ಅವರ ವಿಚಾರಗಳನ್ನು ಕೇಳಿದವರೆಲ್ಲ ದೇಶ-ವಿದೇಶಗಳಲ್ಲಿ ಅವರ ಅನುಯಾಯಿಗಳಾಗುತ್ತಿದ್ದರು. ಸ್ವಾಮಿ ವಿವೇಕಾನಂದರ ಮಾನವೀಯ, ನೈತಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳು ಕರಗಿ ಹೋಗುತ್ತಿರುವ ಈ ಸಂದರ್ಭದಲ್ಲಿ ನಾವುಗಳೆಲ್ಲ ಅವರ ವಿಚಾರಗಳ ಅನುಷ್ಠಾನಕ್ಕೆ ಶ್ರಮಿಸಬೇಕಿದೆ, ಚಿಂತನೆಗೈಯಬೇಕಾಗಿದೆ.

ಭಾರತದಲ್ಲಿ ಜನವರಿ 12ರಂದು ರಾಷ್ಟ್ರೀಯ ಯುವ ದಿನವಾಗಿ ಆಚರಿಸುವ ಪದ್ಧತಿ 1884 ರಿಂದ ಆರಂಭಗೊಂಡಿತು. ಕಾರಣ ಯುವಶಕ್ತಿ, ಸಾಮರ್ಥ್ಯದ ಬಗ್ಗೆ ಅರಿವು ಹೊಂದಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನ 1863 ಜನವರಿ 12. ಇಂದಿಗೆ 162 ವರ್ಷಗಳಾದವು. 1902 ಜುಲೈ 4 ರಂದು ತಮ್ಮ 39ನೇ ವಯಸ್ಸಿನಲ್ಲಿ ಅವರು ನಿಧನರಾದರು. ಸುಭಾಶ್ಚಂದ್ರ ಬೋಸ್, ಅರವಿಂದ ಘೋಷ್, ಮಹಾತ್ಮಗಾಂಧಿ, ರವೀಂದ್ರನಾಥ್ ಠಾಗೊರ್, ರಾಜಗೋಪಾಲಾಚಾರಿ, ನೆಹರು, ತಿಲಕ್, ಆನಿಬೆಸೆಂಟ್, ಅಣ್ಣಾ ಹಜಾರೆ, ಹಾಗೂ ಕುವೆಂಪು ಮುಂತಾದವರ ಮೇಲೆ ಅಗಾಧ ಪ್ರಭಾವ ಬೀರಿದ ವಿವೇಕಾನಂದರು ಹಿಂದೂ ಆಧ್ಯಾತ್ಮವನ್ನು ಆಳವಾಗಿ ಅರ್ಥಮಾಡಿಕೊಂಡವರು.  ‘ಧರ್ಮವೇ’ ಹಿಂದೂ ಸಮಾಜದ ಪ್ರಮುಖ ಆಧಾರ ‘ಜತೋಮತ ತತೋಪಥ’ ಎಷ್ಟು ಮತಗಳಿವೆ ಅಷ್ಟು ದಾರಿಗಳಿವೆ ಎಂದು ಪ್ರತಿಪಾದಿಸಿದರು.

ಧರ್ಮದ ಕುರಿತು ವಿವೇಕಾನಂದರ ವ್ಯಾಖ್ಯಾನ

ವಿವೇಕಾನಂದರ ಆಶಯಗಳು ಎಲ್ಲ ಧರ್ಮೀಯರಿಗೆ ಅನ್ವಯಿಸುತ್ತದೆ. ಅವರ ಆಧ್ಯಾತ್ಮ ನಿಲುವು ವೇದ, ಬೈಬಲ್, ಕುರಾನ್ ಮೀರಿದ್ದು. ಆದರೆ ಅವರಿಗೆ ವಾಸ್ತವದ ಅರಿವಿತ್ತು. ಆದ್ದರಿಂದಲೇ ವೇದ, ಬೈಬಲ್, ಕುರಾನ್‍ಗಳನ್ನು ಉಳಿಸಿಕೊಂಡೇ ಒಂದಾಗುವ ಆದರ್ಶವನ್ನು ಪ್ರತಿಪಾದಿಸಿದ್ದಾರೆ. ಸಹಿಷ್ಣುತೆಯ ಸಂದೇಶ ನೀಡಿ, ಅದರಂತೆ ಬದುಕಿದ್ದಾರೆ. ನೇರ-ನಿಷ್ಠುರ ನುಡಿಗಳ ಮೂಲಕ ನಡೆಯನ್ನು ನೆಲೆಗೊಳಿಸಿದರು. ಧರ್ಮ ಸಾಮರಸ್ಯದ ಶಿಖರ ಸೂರ್ಯ ವಿವೇಕಾನಂದರು. ಅವರ ಧರ್ಮನಿಷ್ಠೆ, ದೇಶಭಕ್ತಿ ಇಂದು ದುರ್ಬಳಕೆಯಾಗುತ್ತಿದೆ. ಧರ್ಮವು ದೇವಸ್ಥಾನ, ಮಸೀದಿ, ಚರ್ಚ್ ಕಟ್ಟುವುದರಲ್ಲಿ ಇಲ್ಲ. ಪೂಜೆಗೆ ಹೋಗುವುದರಲ್ಲಿಲ್ಲ, ಗ್ರಂಥದಲ್ಲಿಲ್ಲ, ಉಪವಾಸದಲ್ಲಿಲ್ಲ. ಧರ್ಮವೆಂದರೆ ಸಾಕ್ಷಾತ್ಕಾರ, ಸ್ವಾರ್ಥವೇ ಅಧರ್ಮ, ನಿಸ್ವಾರ್ಥವೇ ಧರ್ಮ. ಒಳ್ಳೆಯದನ್ನು ಮಾಡುವುದೇ ಧರ್ಮ, ಜನರನ್ನು ಹಿಂಸಿಸುವುದೇ ಅಧರ್ಮ, ಮಾನವನಿಗಿಂತ ಮಿಗಿಲಾದ ದೇವರಿಲ್ಲ. ಧರ್ಮದ ರಹಸ್ಯ ಇರುವುದು ಸಿದ್ಧಾಂತಗಳಲ್ಲಿ ಅಲ್ಲ ಅದು ಅನುಷ್ಠಾನದಲ್ಲಿ ಎಂಬುದು ವಿವೇಕಾನಂದರ ಆಶಯವಾಗಿದೆ.

ಯುವ ಜನಾಂಗಕ್ಕೆ ವಿವೇಕಾನಂದರ ಕಿವಿ ಮಾತು

ಮಹತ್ವಾಕಾಂಕ್ಷಿಗಳು, ಧೈರ್ಯವಂತರು, ಶುದ್ಧ ಹೃದಯವಂತರು, ಮುಕ್ತ ಮನಸ್ಸಿನವರು, ಸಾಹಸಿಗ ಯುವ ಜನತೆಯೇ ದೇಶದ ಭವಿಷ್ಯ ಕಟ್ಟಲು ಬೇಕಾಗಿರುವ ಅಡಿಪಾಯ. ನಮ್ಮ ದೇಶಕ್ಕೆ ನಾಯಕರು ಬೇಕು. ನೀವು ಯಾವಾಗಲೂ ನಾಯಕರಾಗಿರಿ. ಕೆಲಸವೇ ನಿಮ್ಮ ಆದ್ಯತೆ, ಆಗ ಎಲ್ಲವೂ ನಿಮ್ಮನ್ನು ಅನುಸರಿಸಿಕೊಂಡು ಬರುತ್ತದೆ. ಅತ್ಯುನ್ನತ ಆದರ್ಶವನ್ನು ಆಯ್ಕೆ ಮಾಡಿಕೊಳ್ಳಿ, ಮತ್ತು ಅದರಂತೆ ಬದುಕಿ. ಸಮುದ್ರದತ್ತ ನೋಡಬೇಕೇ ಹೊರತು ಅಲೆಗಳತ್ತಲ್ಲ. ಹೃದಯ ವೈಶಾಲ್ಯ, ಪ್ರಾಮಾಣಿಕ ಮತ್ತು ಶಕ್ತಿವಂತರಾಗಿರುವ ಜನರು ದೇಶವನ್ನು ಸುಧಾರಿಸಬಲ್ಲರು, ನಡೆಸಬಲ್ಲರು. ನಿಮ್ಮ ಮೇಲೆ ನಿಮಗೆ ನಂಬಿಕೆಯಿರಲಿ, ಎಡಬಿಡದೆ ಕೆಲಸಮಾಡಿ, ದುರ್ಬಲತೆಯೇ ಗುಲಾಮಗಿರಿಗೆ ದಾರಿ, ದುರ್ಬಲತೆಯೇ ಸಾವು, ಶಕ್ತಿಯೇ ಜೀವನ, ಅಶಕ್ತಿಯೇ ಮರಣ. ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು. ಹೊರಗಿನಿಂದ ಯಾವ ಜ್ಞಾನವು ಬರುವುದಿಲ್ಲ. ತರುಣರು ಜೀವನದ ಸಮಸ್ಯೆಗಳನ್ನು ಧೈರ್ಯವಾಗಿ ಸಂಧಿಸಬೇಕು. ಸೋಲಿಗೆ ಅಂಜದೇ ಹೆದರದೇ ವಿಚಾರ ಮಾರ್ಗದಲ್ಲಿ ಮುಂದುವರಿಯಿರಿ. ಗುರಿ ತಲುಪುವವರೆಗೆ ನಿಲ್ಲದಿರಿ. ಏಳೀ ಎದ್ದೇಳಿ ಎಂದು ಯುವ ಜನಾಂಗಕ್ಕೆ ಕರೆ ನೀಡಿದ ದಾರ್ಶನಿಕ, ಪ್ರೇರಕ ಶಕ್ತಿ ಇವರು.

ವಿವೇಕಾನಂದರ ದೃಷ್ಠಿಯಲ್ಲಿ ಸಂಸ್ಕೃತಿ

‘ಸಂಸ್ಕೃತಿ’ ಎಂದರೆ ಜನತೆಯನ್ನು ಜಾತಿ, ಭೇದ, ಮತಗಳನ್ನು ಪರಿಗಣಿಸದೇ ಎಲ್ಲರನ್ನು ಮೇಲೆತ್ತುವ ಕೆಲಸವೇ ಆಗಿದೆ. ಮಕ್ಕಳಿಗೆ ಅವರಾಡುವ ಭಾಷೆಯಲ್ಲಿಯೇ ಶಿಕ್ಷಣ ಕೊಡಿ. ಅವರಿಗೆ ಸೂಕ್ತ ಜ್ಞಾನವನ್ನು ಕೊಡಿ, ಅಷ್ಟೇ ಸಾಲದು ಅದಕ್ಕಿಂತ ಹೆಚ್ಚಿನದೊಂದು ಬೇಕು, ಅದೇ ಸಂಸ್ಕೃತಿ. ಕೆಳವರ್ಗದ ಜನರು ಮೇಲೆದ್ದು ನಿಲ್ಲುವಂತಾಗಬೇಕಾದರೆ ಅವರು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ಶಾಸ್ತ್ರ, ಗ್ರಂಥಗಳೆಲ್ಲ ಹೇಳಿರುವುದು ಈ ಬಗೆಯ ಕಾರ್ಯಪ್ರಣಾಳಿಯನ್ನೇ. ಆಸಕ್ತಿ, ಶ್ರದ್ಧೆ, ಹಾಗೂ ಸತತ ಪರಿಶ್ರಮದಿಂದ ಈ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು. ಇದರೊಂದಿಗೆ ಆತ್ಮವಿಶ್ವಾಸ ಮುಖ್ಯ. ಕರ್ತವ್ಯ ಸವಿಯಾಗಿರುವುದು ಅಪರೂಪ, ಪ್ರೀತಿ ಸೇರಿಕೊಂಡರೆ ಅದು ಸುಲಭವಾಗಿ ಚಲಿಸುವುದು. ಒಬ್ಬ ವ್ಯಕ್ತಿ ತನ್ನ ಕರ್ತವ್ಯವನ್ನು ಯಾವ ರೀತಿ ಮಾಡುತ್ತಾನೆ ಎಂಬುದರ ಮೇಲೆ ಆತನ ಯೋಗ್ಯತೆ ತಿಳಿಯಬಹುದು.

ವಿವೇಕಾನಂದರ ಪಶ್ಚಿಮ ದೇಶಗಳ ಪಯಣ

ಪಶ್ಚಿಮ ರಾಷ್ಟ್ರಗಳಲ್ಲಿ ಅವರು ವಿವಿಧ ವಿಷಯಗಳ ಮೇಲೆ ಮಾಡಿದ ಭಾಷಣಗಳನ್ನು ಕೇಳಿ ಪಾಶ್ಚಾತ್ಯರು ಅವರ ಅನುಯಾಯಿಗಳಾಗಿದ್ದು ನೋಡಿದರೆ ಅವರ ಜ್ಞಾನ ಸಂಪತ್ತು ಎಂಥದ್ದೆಂದು ತಿಳಿಯದೇ ಇರಲಾರದು. ಭಕ್ತಿಯೋಗ, ಭಾರತದ ಸ್ತ್ರೀಯರು, ಯೋಗ ವಿಜ್ಞಾನ, ಆರ್ಯ ಜನಾಂಗ, ಬೌದ್ಧಕಾಲೀನ ಭಾರತ. ಜಗತ್ತಿನ ಮಹಾಗುರುಗಳು, ಹಿಂದೂ ಪುರಾಣಗಳು, ಜಗತ್ತಿಗೆ ಕ್ರೈಸ್ತನ ಸಂದೇಶ, ಬುದ್ಧನ ಸಂದೇಶಗಳು, ಪ್ರವಾದಿ ಪೈಗಂಬರ್, ಕೃಷ್ಣನ ಸಂದೇಶಗಳು, ಭವಿಷ್ಯದ ಧರ್ಮವೂ ವೇದಾಂತವೆ? ಹೀಗೆ ಅವರ ಭಾಷಣಗಳಲ್ಲಿ ಲಕ್ಷಾಂತರ ಚಿಂತನೆಗಳನ್ನು ಭಾರತ ಮತ್ತು ಪಾಶ್ಚಾತ್ಯ ದೇಶಗಳ ಜನತೆಯಲ್ಲಿ ಹಂಚಿಕೊಂಡಿದ್ದಾರೆ.

ಸ್ವಾಮಿ ವಿವೇಕಾನಂದರ ಸತ್ಯಾನ್ವೇಷಣೆ

ವಿವೇಕಾನಂದರ ಬುದ್ಧಿ ಎಷ್ಟರಮಟ್ಟಿಗೆ ತೀಕ್ಷಣವಾಗಿತ್ತೋ ಅದಕ್ಕೆ ಇಮ್ಮಡಿಯಾಗಿ ಹೃದಯ ವೈಶಾಲ್ಯತೆ ಇತ್ತು. ‘ನರೇಂದ್ರನು’ ಎಲ್ಲರಂತೆ ಜನಿಸಿದನು, ಬೆಳೆದನು, ವಿದ್ಯಾರ್ಜನೆ ಮಾಡಿದನು. ವಿದ್ವನ್ಮಣಿಯಾದನು, ಸ್ವಾಮಿ ವಿವೇಕಾನಂದನಾದನು. ಲೋಕಕಲ್ಯಾಣಕ್ಕೆ ನವಯುಗದ ಪ್ರವರ್ತಕನಾದನು. ವಿಶ್ವವಿಖ್ಯಾತ, ಸರ್ವಜನ ವಂದಿತನಾದನು. ಅವರ ತಂದೆ ವಿಶ್ವನಾಥದತ್ತ, ತಾಯಿ ಭುವನೇಶ್ವರಿದೇವಿ ನೀಡಿದ ಸಂಸ್ಕಾರ ಮತ್ತು ಶಿಕ್ಷಣ ಮಹತ್ವದ್ದಾಗಿದೆ. ಮಾತಾಪಿತೃರು ಹೇಳಿಕೊಟ್ಟ ಬಾಲ್ಯದ ಮೌಲ್ಯಗಳಾದ ‘ಸತ್ತರೂ ಸತ್ಯವನ್ನು ಬಿಡಬೇಡ’, ಪರಿಶುದ್ಧನಾಗಿರು, ಗಂಭೀರನಾಗಿರು, ಇತರರ ಅಭಿಪ್ರಾಯಗಳಿಗೆ ಗೌರವ ಕೊಡು, ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡ ಬರಬೇಡ ಕೋಮಲ ಹೃದಯಿಯಾಗಿರು, ಸಮಯ ಬಂದಾಗ ಕಠೋರ ನಿಶ್ಚಲವಾಗಿರಲು ಹಿಂಜರಿಯಬೇಡ ಎಂಬ ಸಂಗತಿಗಳನ್ನು ಅವರ ಜೀವನದಲ್ಲಿ ಕಾಣುತ್ತೇವೆ.

ಪರಮಹಂಸರ ಶಿಷ್ಯರು ವಿವೇಕಾನಂದರು

ಡೇಕಾರ್ಟಿನ್‍ನ ಅಹಂವಾದ, ಹ್ಯೂಮನ್‍ನ ನಾಸ್ತಿಕ ನಿರೀಶ್ವರವಾದ, ಸ್ಪೆನ್ಸರ್‌ ನ ಆಜ್ಞೇಯವಾದ ಹೀಗೆ ವಿಭಿನ್ನ ದರ್ಶನಗಳ ಚಿಂತಾರಣ್ಯದ ನಡುವೆ ಸತ್ಯದ ಲಾಭಕ್ಕಾಗಿ ವಿವೇಕಾನಂದರು ವ್ಯಾಕುಲ ಚಿತ್ತರಾದರು. ಸತ್ಯಾನ್ವೇಷಣೆಗಾಗಿ ಆಗಿನ ಕಾಲದ ಪ್ರಸಿದ್ಧ ಧರ್ಮ ಪ್ರಚಾರಕರಲ್ಲಿಗೆ ಹೋದರೂ ಯಾವ ಬೆಳಕು ಬರಲಿಲ್ಲ. ಆಧ್ಯಾತ್ಮಿಕ ಆಸಕ್ತಿ ಹೆಚ್ಚಿದಂತೆಲ್ಲ, ಅನ್ವೇಷಣೆಯೂ ಹೆಚ್ಚಿತು. ಅನೇಕ ಗ್ರಂಥಗಳಲ್ಲಿ ಸತ್ಯ ಹುಡುಕಿದರೂ ಪ್ರಯೋಜವಾಗಲಿಲ್ಲ. 1881ರಲ್ಲಿ ಪರಮಹಂಸರನ್ನು ಭೆಟ್ಟಿಯಾಗುವ ಸಂದರ್ಭ ದೊರಕಿತು. ಇವರನ್ನು ದಕ್ಷಿಣೇಶ್ವರಕ್ಕೆ ಬರಲು ಆಹ್ವಾನಿಸಿದರು. ‘ಬ್ರಹ್ಮಸಮಾಜ’ವನ್ನು ಸೇರಿ ಅದ್ಭುತವಾದ ಅನುಭವ ಪಡೆದರು ಪರಮಹಂಸರ ಶಿಷ್ಯರಾದರು. ಪರಮಹಂಸರ ಮತ್ತು ವಿವೇಕಾನಂದರ ಅನಿರ್ವಚನೀಯ ಸಾಧನೆ-ಸಿದ್ಧಿಗಳ ರಹಸ್ಯ ಕಥೆಗಳು, ಸಂಗತಿಗಳು, ಗುರು-ಶಿಷ್ಯರ ಸಂಬಂಧಗಳು ಅದ್ಭುತವಾದುದು. ವಿವೇಕಾನಂದರಲ್ಲಿ ತೋರಿಬರುವ ಸ್ವಾರ್ಥಶೂನ್ಯತೆ, ತೀವ್ರ ವೈರಾಗ್ಯ, ಅಮಿತಶಕ್ತಿ, ಅಹೇತುಕ  ಭಕ್ತಿ, ಸುತೀಕ್ಷಣ ಬುದ್ಧಿ-ಸಿದ್ಧಿಗಳು, ಶಕ್ತಿ-ಸಾಮರ್ಥ್ಯಗಳನ್ನು ಪರಮಹಂಸರು ಒರೆಗಲ್ಲಿಗಚ್ಚಿದರು. ಸನ್ಮಾರ್ಗ ಬೋಧಿಸಿ ಗುರುವಾದರು.‌

ವಿವೇಕಾನಂದರ ಸಂಕಷ್ಟ ದಿನಗಳು

ಅವರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ, 1884ರಲ್ಲಿ ಬಿ.ಎ. ಪರೀಕ್ಷೆ ಮುಗಿಸಿ ರಜಾ ದಿನಗಳಲ್ಲಿ ಸ್ನೇಹಿತರ ಮನೆಗೆ ಹೋದಾಗ ತಂದೆ ವಿಶ್ವನಾಥದತ್ತರು ಹೃದ್ರೋಗದಿಂದ ಮೃತರಾದರೆಂಬ ವಾರ್ತೆ ತಿಳಿಯಿತು. ತಂದೆಯ ಉತ್ತರ ಕ್ರಿಯೆಗಳಿಗೂ ಬೇಕಾಗುವಷ್ಟು ಆರ್ಥಿಕ ಸೌಲಭ್ಯವಿರಲಿಲ್ಲ. ಬಡತನ, ಬಂಧುಗಳ ದ್ರೋಹ, ಮಿತ್ರರ ತಿರಸ್ಕಾರ, ಅಪಪ್ರಚಾರ, ಮಾತೆಯ ಸಂಕಟ, ಸೋದರ-ಸೋದರಿಯ ಅನಾಥಸ್ಥಿತಿಯ ಸಂದರ್ಭದಲ್ಲಿ ವಿದ್ಯಾಸಾಗರ ಪಾಠಶಾಲೆಯಲ್ಲಿ ಉಪಾಧ್ಯಾಯ ಕೆಲಸ. ಇದರಿಂದ ಕುಟುಂಬದ ಸಮಸ್ಯೆ ಬಗೆಹರಿಸಲು ತುಸು ಸಹಾಯವಾಯ್ತು. ನರೇಂದ್ರನಿಗೆ ಹೆಣ್ಣು ಕೊಡುವವರು ಹಿಂಜರಿದರು. ಜೀವನದ ಸಂಕಷ್ಟಗಳನ್ನು ಅನುಭವಿಸಿದರು. ಸನ್ಯಾಸಿಯಾದರು. ಜೀವನದಲ್ಲಿ ನೂತನ ಅಧ್ಯಾಯ ಆರಂಭಗೊಂಡಿತು. ಆಧ್ಯಾತ್ಮ ಶಿಖರವನ್ನೇರಿದರು. ಭಾರತೀಯ ಸಂಸ್ಕೃತಿಯನ್ನು ಪ್ರಪಂಚಕ್ಕೆ ತಲುಪಿಸಿದರು. ಪ್ರಸ್ತುತ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರನ್ನು ಅಧ್ಯಯನಿಸ ಬೇಕಾಗಿದೆ. ಅವರ ದೇಶ ಪ್ರೇಮವನ್ನು ಅರಿಯಬೇಕಾಗಿದೆ.

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು.

ಇದನ್ನೂ ಓದಿ- ನಾ. ಡಿಸೋಜ: ಮಲೆನಾಡಿನ ನಾಡಿ ಮಿಡಿತದ ಬರಹಗಾರ

More articles

Latest article