ಅತ್ಯಾಚಾರದ ಅನಂತ ರೂಪಗಳ ಅನಾವರಣ “ಸಫಾ”

Most read

ಕನ್ನಡ ಪ್ಲಾನೆಟ್‌.ಕಾಮ್‌ ಜಾಲತಾಣದಲ್ಲಿ  ಪ್ರಕಟವಾದ “ಮೊಲೆಗಳೇ ಬೇಡ” ಬರಹ ಓದಿದಾಗ ಥಟ್ಟನೆ ನೆನಪಾದುದು ಪ್ರಸಾದ್ ನಾಯಕ್ (ಈಗ ಪ್ಲಾನೆಟ್‌ ಅಂಕಣಕಾರರು) ಅವರು ಅನುವಾದಿಸಿರುವ ವಾರಿಸ್ ಡೀರೀ ಯವರ ಜೀವನ ಚರಿತ್ರೆ ‘ಸಫಾ”. ಸಫಾ ಎನ್ನುವ ಏಳು ವರುಷದ ಬಾಲಕಿಯ ಸುತ್ತ ಹೆಣೆದಿರುವ ಈ ಕತೆ, ಸಫಾಳನ್ನು ಯೋನಿ ಛೇದನದಂತಹ ಯಾತನಾಮಯ ಕ್ರಿಯೆಯಿಂದ ತಪ್ಪಿಸುವುದಕ್ಕಾಗಿ ಪ್ರಯತ್ನ ಪಡುವ ಲೇಖಕಿಯ ಹೋರಾಟವೇ ಆಗಿದೆ. ನಾನು ʼಸಫಾʼ ಕೃತಿಯ ಬಗ್ಗೆ ಬರೆದ ಬರಹ ಇದಾಗಿದೆ –ಡಾ.  ಗಿರಿಜಾ ಶಾಸ್ತ್ರಿ, ಸಂಶೋಧಕರು.

ಹೆಣ್ಣನ್ನು ಇಟ್ಟಾಡಿಸಿಕೊಂಡು ಸಾಯ ಹೊಡೆಯಲು, ಹಣಿಯಲು ಪಿತೃಪ್ರಧಾನ ವ್ಯವಸ್ಥೆಗೆ ಎರಡು ಚಾಬೂಕುಗಳಿವೆ. ಒಂದು ಧರ್ಮದ ಚಾಬೂಕಾದರೆ ಇನ್ನೊಂದು ಪ್ರಭುತ್ವದ ಚಾಬೂಕು. ಡಿ. ಆರ್. ನಾಗರಾಜ್ ಅವರು ಫ್ಯೂಕೋನ ವಾದವೊಂದನ್ನು ಮಂಡಿಸುತ್ತಾ, (ಸ್ತ್ರೀವಾದಿ ಸಾಹಿತ್ಯ ಮೀಮಾಂಸೆಯ ಸ್ವರೂಪ) “ಪ್ರಭುತ್ವದ ಅಧಿಕಾರವೆಂದರೆ ಬಟಾಬಯಲು. ಈ ಅಧಿಕಾರದಿಂದ ತಪ್ಪಿಸಿಕೊಂಡು ಪಾರಾಗಲು ಬಿಲಗಳೇ ಮಾರ್ಗ. … (ಆದರೆ) ಪ್ರಭುತ್ವದ ನುರಿತ ಬೇಟೆಗಾರನ ಕೈ ಎಂಥ ಬಿಲಕ್ಕೂ ಕೈಹಾಕಿ ಅಡಗಿ ಕೂತದ್ದನ್ನು ಹಿಡಿಯಬಹುದು” ಎನ್ನುತ್ತಾರೆ. ಹೀಗೆ ಅಡಗಿ ಕೂತದ್ದನ್ನು ಹಿಡಿಯಲು ಪ್ರಭುತ್ವ ಧರ್ಮದ ಸಹಾಯವನ್ನು ಪಡೆದುಕೊಳ್ಳುತ್ತದೆ.

‘ಪಿತೃಪ್ರಧಾನ ವ್ಯವಸ್ಥೆ’ ಎಂಬ ಶಬ್ದ ಸಾಹಿತ್ಯಕ ಬರಹಗಳಲ್ಲಿ ಚರ್ವಿತ ಚರ್ವಣವಾಗಿದೆ. ಆದರೂ ಇಪ್ಪತ್ತೊಂದನೆಯ ಶತಮಾನದ ಇಂದಿನ ಕಾಲಮಾನದಲ್ಲೂ ಅದನ್ನು ಬಳಸಬೇಕಾದ ದುರಂತವಿದೆ. ಒಮ್ಮೆ ಒಂದು ವಿಚಾರ ಸಂಕಿರಣದಲ್ಲಿ ಪಿತೃವನ್ನು ಬಿಟ್ಟು ಕೇವಲ ವ್ಯವಸ್ಥೆಯೆಂದು ಉಲ್ಲೇಖಿಸಿದೆ. ಆಗ ಅಧ್ಯಕ್ಷರಾಗಿ ಬಂದಿದ್ದ ನನ್ನ ಗುರುಗಳೂ ಆದ ಕಿ.ರಂ ನಾಗರಾಜ ಅವರು “ಬರೀ ವ್ಯವಸ್ಥೆ ಎಂದರೆ ಆಗೋದಿಲ್ರೀ! ಪಿತೃಪ್ರಧಾನ ವ್ಯವಸ್ಥೆಯೆಂದೇ ಸ್ಪಷ್ಟವಾಗಿ ಉಲ್ಲೇಖಿಸ ಬೇಕು. ಯಾಕೆ ಅದು ಈಗ ಇಲ್ಲವಾ? ಎಂದು ಗದರಿಸಿ ಹೇಳಿದ್ದರು.

ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯೊಬ್ಬಳು ಲೈಂಗಿಕ ಅನುಭವಗಳನ್ನು ಹೇಳಿಕೊಳ್ಳುವುದು ನಿಷಿದ್ಧ. ಹೇಳಿಕೊಳ್ಳುವ ಮಾತು ಹಾಗಿರಲಿ. ಲೈಂಗಿಕ ಅನುಭವಕ್ಕೆ ಕಾರಣವಾಗುವ ಯೋನಿಯ ಭಾಗವನ್ನೇ ಕತ್ತರಿಸಿ ಹಾಕಿಬಿಟ್ಟರೆ? ಹೀಗೆ ಯೋಚಿಸುವ (ಕು)ಸಂಸ್ಕೃತಿಯೂ ಒಂದಿದೆ, ಆಫ್ರಿಕಾ ಖಂಡದ ಪೂರ್ವಭಾಗದ ಸೊಮಾಲಿಯಾ, ಇಥಿಯೋಪಿಯಾ ದೇಶಗಳಲ್ಲಿ ಹಾಗೂ ಅದರ ಸುತ್ತಮುತ್ತ.

ಪಿತೃಪ್ರಧಾನ ವ್ಯವಸ್ಥೆಯ ಸೊಕ್ಕನ್ನು ಅದರ ಕ್ರೂರ ಮುಖವನ್ನು ಕಾಣಬೇಕಾದರೆ ಪ್ರಸಾದ್ ನಾಯಕ್ ಅವರು ಅನುವಾದಿಸಿರುವ ವಾರಿಸ್ ಡೀರೀ ಯವರ ಜೀವನ ಚರಿತ್ರೆ ‘ಸಫಾ” ವನ್ನು ಓದಬೇಕು. ‘ಚಾಬೂಕು’ ಬೀಸಿ ರಾತ್ರಿಯ ನಿದ್ದೆಗಳಿಂದ ಓದುಗರನ್ನು ಬಡಿದೆಬ್ಬಿಸುತ್ತದೆ. ಮಾತ್ರವಲ್ಲ ಕನಸುಗಳನ್ನೂ ಕಸಿದುಕೊಳ್ಳುತ್ತದೆ.

‘ಸಫಾ’ ಕೃತಿಯ ಹೆಣ್ಣು ಮಕ್ಕಳಿಗೆ ಕನಸು ಕಾಣುವ ಹಕ್ಕೇ ಇಲ್ಲ. ಅವು ಕೇವಲ ಪಿತೃಪ್ರಧಾನ ವ್ಯವಸ್ಥೆ ಆಡಿಸುವ ರಟ್ಟಿನ ಬೊಂಬೆಗಳು ಎನ್ನುವ ಭಯಂಕರ ಸತ್ಯವನ್ನು ಮನದಟ್ಟು ಮಾಡಿಸುತ್ತವೆ.

ಆರು ವರುಷಗಳ ಹಿಂದೆ ಈವ್ ಎನ್ಸರ್ ಳ Vagina monologues ಬಗ್ಗೆ ನಾನು ಬರೆಯಬೇಕೆಂದುಕೊಂಡಾಗ ಬಹಳ ಹಿಂಜರಿಕೆ ಇತ್ತು. ಓದುಗರು ಇದನ್ನು ಹೇಗೆ ಸ್ವೀಕರಿಸುತ್ತಾರೋ, ಎಲ್ಲಿ ಅಶ್ಲೀಲತೆಯ ಹಣೆಪಟ್ಟಿ ಕಟ್ಟಿ ಬಿಡುತ್ತಾರೋ ಎಂಬೆಲ್ಲಾ ಆತಂಕದಿಂದಲೇ ಪ್ರಜಾವಾಣಿಗೆ ಲೇಖನವನ್ನು ಕಳುಹಿಸಿದಾಗ ಅದು ಸಾಪ್ತಾಹಿಕದ ಮುಖ್ಯ ಬರಹವಾಗಿ ಪ್ರಕಟವಾಗಿಬಿಟ್ಟಿತು. ಇದಕ್ಕೆ ಬಂದ ಪ್ರತಿಕ್ರಿಯೆಗಳು ಅಭೂತಪೂರ್ವ!!. ಕೆಲವರು ಉಸಿರು ಬಿಗಿ ಹಿಡಿದು ಓದಿದೆ ಎಂದು ಹೇಳಿಕೊಂಡರೆ, ಕೆಲವು ಗಂಡಸರು ಪಾಪ ಪ್ರಜ್ಞೆಯಿಂದ ನರಳಿದೆ ಎಂದು ಹೇಳಿದರು. ಗುರುಗಳಾದ ಕಲ್ಗುಡಿಯವರಂತೂ path breaking article ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸಾದ್ ನಾಯಕ್ ಅವರು ಅನುವಾದಿಸಿರುವ ವಾರಿಸ್ ಡೀರೀಯವರ ಆತ್ಮಕಥನ ‘ಸಫಾ’ವನ್ನು ಓದುವಾಗ ಮೇಲಿನ ಎಲ್ಲ ನೆನಪುಗಳು ಹಾದುಹೋಗಿವೆ. ೨೭೬ ಪುಟಗಳ ಈ ಪುಸ್ತಕದ ತುಂಬಾ ಯೋನಿ ಛೇದನದ ಬರ್ಬರ ಕೃತ್ಯದ ಕಥೆಯೇ ಅಡಗಿದೆ. ಯೋನಿ ಛೇದನದ ಎಲ್ಲಾ ಪ್ರಕಾರಗಳನ್ನು ಸವಿಸ್ತಾರವಾಗಿ ವರ್ಣಿಸಲಾಗಿದೆ. (ಭಗಾಂಕುರವನ್ನು ಅವೈಜ್ಞಾನಿಕವಾಗಿ ತುಕ್ಕು ಹಿಡಿದ ಬ್ಲೇಡಿನಿಂದಲೋ, ಗಾಜಿನ ಚೂರಿನಿಂದಲೋ ಕತ್ತರಿಸಿ, ಮೂತ್ರ ವಿಸರ್ಜನೆ ಮಾಡಲು ಹಾಗೂ ಋತುಸ್ರಾವವಾಗಲು ಮಾತ್ರ ಸಣ್ಣ ರಂಧ್ರವೊಂದನ್ನು ಬಿಟ್ಟು ಯೋನಿಯನ್ನು ಮುಳ್ಳಿನಿಂದ ಹೊಲಿಯುತ್ತಿದ್ದರು. ಮದುವೆಯಾದನಂತರ ಗಂಡ ಆ ಹೊಲಿಗೆಯನ್ನು ಹರಿಯುತ್ತಿದ್ದ-ಇದು ಒಂದು ಪ್ರಕಾರ) ಇದರಿಂದಾಗಿ ಆಯುಷ್ಯ ಪೂರ್ತಿ ಮಹಿಳೆಯರು ನೋವಿನಿಂದ ನರಳುತ್ತಿದ್ದರಲ್ಲದೆ, ಹೆರಿಗೆ ಮತ್ತು ಸಂಭೋಗಗಳು ಯಮಯಾತನೆಯಿಂದ ಕೂಡಿರುತ್ತಿದ್ದವು, ಎಂದು ಲೇಖಕಿ ಹೇಳುತ್ತಾರೆ.

ವಾರಿಸ್ ಡೀರೀ

ಆರೇಳು ವರುಷಗಳ ಹಿಂದೆ ಇಂತಹ ವಿಷಯಗಳ ಬಗ್ಗೆ ಮಾತನಾಡಲೂ ಹಿಂಜರಿಕೆ ಇದ್ದಾಗ, ‘ಸಫಾ’ ಅಂತಹ ಕೃತಿಯೊಂದು ಪ್ರಕಟವಾಗಿರುವುದನ್ನು ನೋಡಿದರೆ ಕನ್ನಡ ಸಾಹಿತ್ಯಕ್ಕೆ ಒದಗಿರುವ ಈ ಧಾರ್ಷ್ಟ್ಯದ ಬಗ್ಗೆ ಸಂತೋಷವಾಗುತ್ತದೆ.

ಈ ಪುಸ್ತಕ ಓದಿ ಮುಚ್ಚಿದನಂತರ ಆಫ್ರಿಕಾದ ಹೆಣ್ಣು ಮಕ್ಕಳ ಸ್ಥಿತಿಯ ಬಗ್ಗೆ ಮರುಕ ಮಾತ್ರವಲ್ಲ. ಪಿತೃಪ್ರಧಾನ ವ್ಯವಸ್ಥೆಯ ಪಾಶವೀತನದ ಬಗ್ಗೆ ಆಕ್ರೋಶ ಉಂಟಾಗುತ್ತದೆ. ಧರ್ಮದ ಹೆಸರಲ್ಲಿ, ಸಂಸ್ಕೃತಿಯ ಹೆಸರಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಂತ ಹೀನವಾದ ಹಿಂಸೆ ಇದು. ಇಲ್ಲಿ ಬರುವ ಸಫಾಳ ತಂದೆ ಇಡ್ರಿಸ್ ಇಂತಹ ಕ್ರೂರ ವ್ಯವಸ್ಥೆಯ ಪ್ರತೀಕವಾಗಿದ್ದಾನೆ.

ಸಫಾ ಎನ್ನುವ ಏಳು ವರಷದ ಬಾಲಕಿಯ ಸುತ್ತ ಹೆಣೆದಿರುವ ಈ ಕತೆ, ಸಫಾಳನ್ನು ಯೋನಿ ಛೇದನದಂತಹ ಯಾತನಾಮಯ ಕ್ರಿಯೆಯಿಂದ ತಪ್ಪಿಸುವುದಕ್ಕಾಗಿ ಪ್ರಯತ್ನ ಪಡುವ ಲೇಖಕಿಯ ಹೋರಾಟವೇ ಆಗಿದೆ. ಆಫ್ರಿಕಾ ಖಂಡದ ಪೂರ್ವಭಾಗದಲ್ಲಿರುವ ಜಿಬೌಟಿ ಎನ್ನುವ ದೇಶದ ಪುಟ್ಟ ಬಾಲಕಿ ಸಫಾಳ ಕಥೆಯ ಮೂಲಕ ಆ ದೇಶದ ಹಾಗೂ ಅದರ ಸುತ್ತಮುತ್ತಲಿನ ಸೊಮಾಲಿಯಾ ಮತ್ತು ಇಥಿಯೋಪಿಯಾ ದೇಶದ ಮಹಿಳೆಯರು ಯೋನಿ ಛೇದನಕ್ಕೆ ಒಳಗಾಗುವ ಯಾತನಾಮಯ ಬದುಕನ್ನು ಬಯಲಾಗಿಸುವ ಕೃತಿ ಇದು.

ಬಡತನ, ಹಸಿವು, ಕೊಳಕುತನ, ಅಸೂಕ್ಷ್ಮತೆ, ಒರಟುತನ, ಭ್ರಷ್ಟತೆ, ಅಜ್ಞಾನ, ನಿರಕ್ಷರತೆ, ಪುರುಷರ ದಬ್ಬಾಳಿಕೆ ಮುಂತಾದ ಅನೇಕ ಅನಿಷ್ಠಗಳಿಂದ ಈ ದೇಶಗಳು ಬಳಲುತ್ತಿವೆ. ಇಲ್ಲಿನ ಯೋನಿ ಛೇದನದಂತಹ ಪಾಶವೀ ಕೃತ್ಯಕ್ಕೆ ಲಕ್ಷಾಂತರ ಹುಡುಗಿಯರು ಬಲಿಯಾಗುತ್ತಿದ್ದಾರೆ. (ಮದುವೆಗೆ ಮುನ್ನ ಹೆಣ್ಣು ಯಾವ ಪುರುಷನ ಸಂಪರ್ಕಕ್ಕೂ ಬರಬಾರದೆನ್ನುವುದು ಈ ಪಾಶವೀ ಕೃತ್ಯದ ಹಿಂದಿರುವ ಉದ್ದೇಶ) ಇದು ಅವರ ಧರ್ಮವಾದ ಕೊರಾನ್ ನಲ್ಲಿದೆ ಎಂಬ ಹೆಮ್ಮೆಯನ್ನು (ಸುಳ್ಳನ್ನು) ಹೆಣ್ಣುಮಕ್ಕಳ ತಲೆಗೆ ತಿಕ್ಕಿ ಅವರನ್ನು ಬಲಿಪಶುಗಳನ್ನಾಗಿ ಮಾಡುವ ಅಮಾನವೀಯ ವ್ಯವಸ್ಥೆ ಇದು. ಇಂತಹ ಸಾಮಾಜಿಕ ಅನಿಷ್ಠದ ವಿರುದ್ಧ ಲೇಖಕಿ ವಾರಿಸ್ ಡೀರೀ ಯುದ್ಧ ಸಾರುತ್ತಾಳೆ. ಸಫಾಳನ್ನು ಅವಳಂತಹ ಅಸಂಖ್ಯಾತ ಹುಡುಗಿಯರನ್ನು ಈ ಸಾಮಾಜಿಕ ಅನಿಷ್ಠದಿಂದ ಪಾರು ಮಾಡಬೇಕೆನ್ನುವುದೇ ಡೀರೀಯ ಹೋರಾಟದ ಉದ್ದೇಶ. ಅಂತಹ ಹೋರಾಟದ ಸಂಘಟನೆಯ ಸ್ವರೂಪವನ್ನು ಈ ಕೃತಿ ಬಯಲು ಮಾಡುತ್ತದೆ. ಇದರ ಹಿಂದಿರುವ ಆತಂಕಗಳು, ಬಲಿಷ್ಠ ಪಿತೃಪ್ರಧಾನ ವ್ಯವಸ್ಥೆಯ ವಿರುದ್ಧ, ಧಾರ್ಮಿಕ, ರಾಜಕೀಯ ವ್ಯವಸ್ಥೆಯ ವಿರುದ್ಧ ಯುದ್ಧ ಸಾರುವಾಗ ಇರಬೇಕಾದ ಎಚ್ಚರ, ಅಪಾಯದ ಅರಿವು, ಸೋಲೋ ಗೆಲುವೋ ಎನ್ನುವ ಶಂಕೆ, ಒತ್ತಡ ಎಲ್ಲವೂ ಮುಪ್ಪರಿಗೊಂಡು ಈ ಕೃತಿಯನ್ನು ಬಹಳ ಪರಿಣಾಮಕಾರಿಯಾಗಿಸಿದೆ.

ಸಫಾ

ಯೋನಿ ಛೇದನದ ಮಾರಣಾಂತಿಕ ಪರಿಣಾಮಗಳನ್ನು ಅನನ್ಯವಾಗಿ ಹಿಡಿದಿಡುವುದರ ಮೂಲಕ ಜನತೆಯಲ್ಲಿ ಅರಿವು ಮೂಡಿಸುವ ಡೀರೀಯ ಅವಿಶ್ರಾಂತ ಪ್ರಯತ್ನ, ಯಾವುದೇ ಪ್ರಚಾರದ ಹಂಗಿಲ್ಲದ, ಸಂಪತ್ತಿನ ಆಸೆಯಿಲ್ಲದ ಅವಳ ಪ್ರಾಮಾಣಿಕ ಕಳಕಳಿ ಬಹಳ ತೀವ್ರವಾಗಿ ಅನಾವರಣಗೊಂಡಿದೆ. ಬಾಲ್ಯದಲ್ಲಿ ಸ್ವತಃ ತಾನೇ ಈ ಕ್ರಿಯೆಗೆ ಒಳಗಾದದ್ದರಿಂದ ತನ್ನ ಜೀವನದ ಬಗ್ಗೆ ‘ಡೆಸೆರ್ಟ್ ಫ್ಲವರ್’ ಎಂಬ ಸಾಕ್ಷ್ಯಚಿತ್ರವನ್ನು ತೆಗೆಯುವುದರ ಮೂಲಕ ತನ್ನ ಹೋರಾಟವನ್ನು ಡೀರೀ ಪ್ರಾರಂಭಿಸುತ್ತಾಳೆ. ಆ ಚಿತ್ರದಲ್ಲಿ ಸಫಾ, ಬಾಲಕಿ ಡೀರೀಯ ಪಾತ್ರವನ್ನು ಮಾಡಿರುತ್ತಾಳೆ. ಇದಕ್ಕೆ ಬದಲಾಗಿ ಸಫಾಳ ಮನೆಯವರಿಗೆ ಆಹಾರ ಮತ್ತು ಔಷಧೋಪಚಾರದ ಖರ್ಚು, ಸಫಾಳಿಗೆ ಶಿಕ್ಷಣವನ್ನು ಕೊಡಿಸುವುದೇ ಮುಂತಾದ ಜವಾಬ್ದಾರಿಯನ್ನು ಡೆಸೆರ್ಟ್ ಫ್ಲವರ್ ಫೌಂಡೇಷನ್ ಅವರು ವಹಿಸಿಕೊಂಡಿರುತ್ತಾರೆ. ಜೊತೆಗೆ ಸಫಾಳಿಗೆ ಯೋನಿ ಛೇದನದಂತಹ ಕ್ರಿಯೆಯನ್ನು ಮಾಡಬಾರದು ಎನ್ನುವ ನಿಯಮವನ್ನೂ ಮಾಡಿಕೊಂಡಿರುತ್ತಾರೆ. ಡೀರೀ ಗೆ ಅವರ ಹಿಂದುಳಿದಿರುವ ಸ್ಥಿತಿಯ ಬಗ್ಗೆ ಅನುಕಂಪವೂ ಇದೆ. ಈ ಎಲ್ಲವೂ ಆ ಸಮಸ್ಯೆಯ ಅನೇಕ ಮಗ್ಗುಲುಗಳನ್ನು ಪರಿಚಯಿಸುವುದಲ್ಲದೇ ಅವುಗಳ ಸಂಕೀರ್ಣತೆಯನ್ನೂ ದಾಖಲು ಮಾಡುತ್ತದೆ. ಇದರ ಜೊತೆಗೆ ಬ್ರೆಸ್ಟ್ ಐರನಿಂಗ್, (ಹುಡುಗರನ್ನು ಸೆಳೆಯದಂತೆ, ಹೊಸದಾಗಿ ಮೂಡುತ್ತಿರುವ ಸ್ತನಗಳನ್ನು ಬಿಸಿ ಕಲ್ಲಿನಿಂದ ಸುಟ್ಟು ಅಥವಾ ಬಡಿಗೆಯಿಂದ ಬಡಿದು ಅವುಗಳ ಆರೋಗ್ಯಕರ ಬೆಳವಣಿಗೆಯನ್ನು ಕುಂಠಿತ ಗೊಳಿಸುವುದು) ‘ಫೋರ್ಸ್ ಫೀಡೀಂಗ್’ (ದಪ್ಪಗಿರುವುದು ಸೌಂದರ್ಯದ ಪ್ರತೀಕವೆಂದು, ಹೆಣ್ಣುಮಕ್ಕಳಿಗೆ ವಾಂತಿಯಾಗುವಂತೆ ಬಲವಂತವಾಗಿ ಆಹಾರವನ್ನು ಬಾಯಿಗೆ ತುರುಕಿ ಅವರ ತೂಕವನ್ನು ಹೆಚ್ಚಿಸುವುದು) ಮುಂತಾದ ಹುಡುಗಿಯರ ಮೇಲೆ ಎಸಗುವ ಅಮಾನುಷ ದೌರ್ಜನ್ಯವನ್ನು ಬಯಲು ಮಾಡಿರುವುದು, ಹೆಣ್ಣಿನ ಸಮಸ್ಯೆಯ ಇತರ ಭಯಾನಕ ಆಯಾಮಗಳನ್ನೂ ಬಯಲಾಗಿಸಿದೆ.

ಇದು ಕೇವಲ ಹೆಣ್ಣುಮಕ್ಕಳ ಪ್ರಶ್ನೆಯಲ್ಲ. ಇದು ಒಟ್ಟು ಮಾನವ ಸಂಸ್ಕೃತಿಯ ಪ್ರಶ್ನೆ. ಯಾಕೆಂದರೆ ಇದು ಕೇವಲ ಆಫ್ರಿಕಾ ಖಂಡದ ಇಸ್ಲಾಂ ಧರ್ಮೀಯರಲ್ಲಿ ಮಾತ್ರ ಇಲ್ಲ. ಕೆಲವು ಕ್ರಿಶ್ಚಿಯನ್ ಪಂಗಡಗಳಲ್ಲೂ ಈ ಅನಿಷ್ಟದ ಆಚರಣೆ ಇದೆ. ಆದುದರಿಂದ ಇದನ್ನು ಅಖಂಡವಾಗಿಯೇ ಸ್ತ್ರೀ ಪುರುಷರಿಬ್ಬರೂ ಸೇರಿಯೇ ನಿಭಾಯಿಸಬೇಕು ಎನ್ನುವ ಅರಿವು ಡೀರೀಗೆ ಇದೆ.

ಪಿತೃಪ್ರಧಾನ ವ್ಯವಸ್ಥೆಯ ಪ್ರತೀಕದಂತಿದ್ದ ಇಡ್ರಿಸ್ ಕೊನೆಗೆ  ಬದಲಾಗುವುದು ಈ ಹೋರಾಟದ ಸಂಘಟನೆಯ ಭಾಗವಾಗಲು ತೀರ್ಮಾನಿಸುವುದು ಭರವಸೆಯ ಒಂದು ಕಿರಣವಾಗಿದೆ.

ಯೋನಿ ಛೇದನದಂತಹ ವಸ್ತುವು ಕೃತಿಯ ಕೇಂದ್ರವಾಗಿರುವಾಗ ಇದನ್ನು ಎಲ್ಲಿಯೂ ಅಶ್ಲೀಲವಾಗದ ಹಾಗೆ ಬಹಳ ಸೂಕ್ಷ್ಮವಾಗಿ ಲೇಖಕಿ ನಿಭಾಯಿಸಿದ್ದಾರೆ. ಇನ್ನು ಅನುವಾದದ ಬಗ್ಗೆ ಹೇಳಬೇಕು. ಈ ಅನುವಾದ ಎಷ್ಟು ಸೊಗಸಾಗಿ ಬಂದಿದೆಯೆಂದರೆ ಎಲ್ಲಿಯೂ ಇದು ಇಂಗ್ಲಿಷ್ ನಿಂದ ಬಂದ ಕೃತಿ ಎಂಬ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಅನ್ಯ ಸಂಸ್ಕೃತಿಯ ವಿಚಾರಗಳನ್ನು ಹೇಳುವಾಗ ಲೇಖಕರಿಗೆ ಇರುವ ಸವಾಲುಗಳು ಬಹಳ, ಅವುಗಳೆಲ್ಲವನ್ನು ಅತ್ಯಂತ ಜವಾಬ್ದಾರಿಯಿಂದ ಅಷ್ಟೇ ಸೂಕ್ಷ್ಮವಾಗಿ ಪ್ರಸಾದ್ ನಾಯ್ಕ್ ಅವರು ನಿಭಾಯಿಸಿದ್ದಾರೆ. ಅವರಿಗೆ ಅಭಿನಂದನೆಗಳು.

ಇಂತಹ ಧೀರೋದಾತ್ತ ನಾಯಕಿಯ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಸೇರಬೇಕಾಗಿದೆ. ಆಗಲಾದರೂ ಹೆಣ್ಣುಮಕ್ಕಳು ಕಗ್ಗತ್ತಲ ಖಂಡದಿಂದ ಬೆಳಕಿಗೆ ಬಂದಾರು.

ಗಿರಿಜಾ ಶಾಸ್ತ್ರಿ

ಕನ್ನಡದ ಪ್ರಸಿದ್ಧ ಬರಹಗಾರರು, ಸಂಶೋಧಕರು. 

ಇದನ್ನೂ ಓದಿ- ಈ ಮೊಲೆಗಳೇ ಬೇಡ ಎಂಬ ಒಳಮನದ ತಳಮಳ

More articles

Latest article