ಸಿನೆಮಾ, ಮನೆ, ಪ್ರಜಾಪ್ರಭುತ್ವ ಮತ್ತು ನಾನು

Most read

ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಗಳಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು. ಕಂಕು ಸಕ್ಕತ್ ಐಡಿಯ ಮಾಡ್ತು. ನೋಡ್ನೋಡುತ್ತಿದ್ದಂತೆ 6 ಜನ ಪೌರಕಾರ್ಮಿಕರನ್ನು ಮನೆಗೆ ಕರೆದು ತಾಂಬೂಲ ಕೊಟ್ಟರು- ರೂಮಿ ಹರೀಶ್

ನನಗೆ ಚಿಕ್ಕ ವಯಸ್ಸಿನಿಂದ ಹಿಂದಿ ಸಿನೆಮ ಹುಚ್ಚು. ಅದು ಆ ಭಾಷೆ ಕಲಿಯಲು ಇರಬಹುದು, ಏಕೆಂದರೆ ನಾನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದೆ. ನನಗೆ ಮೊದಲು ಗುಲ್ಜಾರ್ ಬಗ್ಗೆ ತಿಳಿದು ಬಂದದ್ದು ಆಶೀರ್ವಾದ್ ಸಿನೆಮಾದಿಂದ. ಆ ಸಿನೆಮ ನನಗೆ ಯಾಕೆ ಹತ್ತಿರವಾಯ್ತು ಅಂದ್ರೆ ಅದರಲ್ಲಿ ನಟಿಸಿದ್ದ ಅಶೋಕ್ ಕುಮಾರ್ ನನಗಿಷ್ಟ. ನಾನು ಆ ಚಿಕ್ಕ ವಯಸ್ಸಿನಲ್ಲಿ ನಾನು ಯೋಚಿಸಿದ್ದು ಬೆಳೆಯುತ್ತಾ ನಾನು ಆಟೋಮ್ಯಾಟಿಕ್ ಆಗಿ ಅಶೋಕ್ ಕುಮಾರ್ ತರದ ಗಂಡಸಾಗ್ತಾನಿ ಅಂತ. ನನಗೆ ಅಶೋಕ್ ಕುಮಾರ್ (ದಾದಾಮೊನಿ) ಯಾಕೋ ತುಂಬಾ ಹತ್ರ ಅನಿಸುತ್ತಿತ್ತು. 2 -3 ಕಾರಣಗಳಿದ್ದವು. ಆ ಮನುಷ್ಯ ಎಲ್ಲಿ ಬೇಕಾದರೂ ಪದ್ಯಗಳನ್ನು ತಾಳಬದ್ದವಾಗಿ ಆಲ್ಮೋಸ್ಟ್ ರಾಪ್ ತರ ಹಾಡುತ್ತಿದ್ದರು. ಅವರದೇ ಪದ್ಯಗಳು ಆನ್ ದ ಸ್ಪಾಟ್. ಆಶೀರ್ವಾದ್ ಸಿನೆಮದಲ್ಲಿ ಅಶೋಕ್ ಕುಮಾರ್ ತರದ ಅಪ್ಪ ಬೇಕೆನಿಸುತ್ತಿತ್ತು. ನನಗೆ ಅಪ್ಪ ಅನ್ನೋ ವ್ಯಕ್ತಿ ಇನ್ಡಿಫರೆಂಟ್ ಆಗಿದ್ರು.

ನನಗೋ ಆ್ಯ……ಅಂತ ದಿನಕ್ಕೆ 10 ಗಂಟೆಗಳಷ್ಟು ರಿಯಾಸ್ (ಸಂಗೀತ ಅಭ್ಯಾಸ) ಮಾಡುವ ಮಧ್ಯದಲ್ಲಿ ಯಾರನ್ನೂ ಆರಾಮಾಗಿ ಮಾತಾಡಿಸಲು ಆಗ್ತಿರ್ಲಿಲ್ಲ. ಆಗೆಲ್ಲಾ ಸಿನಿಮ ನೋಡಲು ನನ್ನ ಕರೆದುಕೊಂಡು ಹೋಗೋದು ನನ್ನ ತಾಯಿಯ ಗುರುಗಳಾದ ಡಿ.ವಾದಿರಾಜ್ ಅವರು. ಅವರು ದೇಶದ ಹೆಸರಾಂತ ಶಿಲ್ಪಿ ಮತ್ತೆ ಒಂದು ಅಮೇಝಿಂಗ್ ಜೀನಿಯಸ್. ಅವರೂ ಸ್ವಲ್ಪ ನೋಡಕ್ಕೆ ಅಶೋಕ್ ಕುಮಾರ್ ತರ ಇದ್ರು. ಅವರು ನನಗೆ ಎಂಥೆಂಥಾ ಹಿಂದಿ ಮತ್ತೆ ಇಂಗ್ಲೀಷ್ ಸಿನಿಮಾಗಳನ್ನು ತೋರ್ಸಿದ್ದಾರೆ ಅಂದ್ರೆ… ದ ಗ್ರೇಟ್ ಡಿಕ್ಟೇಟರ್, ದ ಚೈಲ್ಡ್, ಬಂಧಿನಿ, ಜಲ್ಸಾ ಘರ್, ಮೊಘಲೆ ಆಜಮ್, ಸ್ಪರ್ಶ್, ಮಿರ್ಚ್ ಮಸಾಲಾ… ಹೀಗೆ ನಾನು ಅವರ ಬಾಲದಂತೆ ಎಲ್ಲಿ ಹೋದ್ರೂ ಹೋಗುತ್ತಿದ್ದೆ. ನಾನು ಅವರನ್ನು ಕರೀತಿದ್ದಿದ್ದು ಮಾಮಾ ಅಂತ.

ನನ್ನ ಸೀಕ್ರೆಟ್ ಡಿಸೈರ್ ಅಂದ್ರೆ ಅವರು ನನ್ ಅಪ್ಪ ಆಗಿದ್ರೆ ನಾನೂ ಸ್ವಲ್ಪ ಅಶೋಕ್ ಕುಮಾರ್ ಥರ ಕಾಣ್ತಿದ್ದೆ. ಆ ಟೈಮಲ್ಲಿ ನಂಗೆ ಹಿಂದಿ ಸಿನೆಮದ ಮೂವರು ಮುದುಕರು ತುಂಬಾ ಇಷ್ಟ… ಏಕೆ ಹಾನಗಲ್, ಉತ್ಪಲ್ ದತ್ ಮತ್ತೆ ಅಶೋಕ್ ಕುಮಾರ್. ಇವರ ಜೊತೆ ಓಮ್ ಪ್ರಕಾಶ್, ಮದನ್ ಪುರಿ, ಮತ್ತೆ ಎಲ್ಲರಿಗಿಂತ ಬಾಲ್ರಾಜ್ ಸಹಾನಿ. ಜೀವನದ ಒಂದು  ಹಂತ ಕಳೆದ ಮೇಲೆ ನಾನೇ ಯೋಚನೆ ಮಾಡ್ದೆ… ಇಂಥಾ ಸಿನಿಮಾಗಳಿಗೆ, ಇಂತಹ ಡಿಸೈರ್ಗೆ ಆಕ್ಸೆಸ್ ಇರೋದು ನನ್ನ ಬ್ರಾಹ್ಮಣ ಜಾತಿಯ ಪ್ರಿವಿಲೇಜಿಂದಾಗಿ. ಮತ್ತೆ ಒಂದು ರೀತಿ ನನ್ನ ಈ ಆಯ್ಕೆಯ ಬಗ್ಗೆ ಮೇಲರಿಮೆ ಇತ್ತು. ಅದು ಒಡೆದು ಬಿದ್ದಿದ್ದು ನಾನು ಸುನಿಲನ ಸಂಬಂಧದಲ್ಲಿ ಬಂದಾಗ. ಅವನು ಒಂದೇ ಒಂದು ಪ್ರಶ್ನೆ ಕೇಳ್ದ. ಕನ್ನಡ ಸಿನೆಮ ಎಷ್ಟು ನೋಡಿದ್ಯ? ನೀನು ಹೇಳೋ ಸಿನಿಮ ಚೆನ್ನಾಗಿಲ್ಲ ಅಂತ ಅಲ್ಲ. ಆದ್ರೆ ನಮ್ಮಂಥವರಿಗೆ ಆ ಆಕ್ಸೆಸ್ ಇಲ್ಲ. ನೆನಪಿರಲಿ ಅಂದ.

ಆಗ ಹುಚ್ಚು ಹಿಡಿದಂತೆ ಕನ್ನಡ ಸಿನೆಮ ನೋಡಲು ಶುರು ಮಾಡಿದೆ. ನಂಗೆ ಡಾ| ರಾಜ್ ಕುಮಾರ್ ಅವರ ಸರಳ ಅಭಿನಯ ತುಂಬಾ ಇಷ್ಟ ಆಯ್ತು, ಹಾಗೆ ನಂಗೆ ತುಂಬಾ ಇಷ್ಟದ ನಟಿ ಆರತಿ, ಆಮೇಲೆ ಲೋಕೇಶ್, ಶಂಕರ್ ನಾಗ್, ಕಲ್ಪನ ಹೀಗೆ…

ತುಂಬಾ ಮುಖ್ಯವಾಗಿ ನಂಗೆ ನಟನೆ ಯಾಕೆ ಹತ್ತಿರವಾಯ್ತು ಅಂದ್ರೆ … ಹಿಂದೂಸ್ತಾನಿ ಶಾಸ್ತೀಯ ಸಂಗೀತದಲ್ಲಿ ನಾನು ಹಾಡೋದು ಖಯಾಲ್ – ಅಂದ್ರೆ ಒಂದು ಯೋಚನೆ ಪ್ರಸ್ತುತ ಪಡಿಸೋದು ಅಂತ. ನಂಗೆ ಇಂತಾ ಸಿನೆಮಾಗಳು ನೋಡಿದಾಗ ಆ ಕಥೆಗಳ ಮುಂದುವರಿಕೆ ನನ್ನ ಖಯಾಲ್ ನಲ್ಲಿ ಆಗುತ್ತಿತ್ತು. ನನ್ನ ಜೀವನದಲ್ಲಿ ಮೂವರು ಮುದುಕರು ಬಹಳ ಪ್ರಭಾವ ಬೀರಿದ್ದರು. ಚಿಕ್ಕ ವಯಸ್ಸಿನಲ್ಲಿ ನನಗೆ ನನ್ನ ವಯಸ್ಸಿನ ಸ್ನೇಹಿತರಿರಲ್ಲ. ಈ ಮೂವರು ಮುದುಕರು  – ವಾದಿರಾಜ್ ಮಾಮಾ, ನಂ ಮೇಷ್ಟ್ರು ರಾಮರಾವ್ ನಾಯಕ್ ಮತ್ತೆ ಪತ್ರಕರ್ತ ಈ ಆರ್ ಸೇತುರಾಮ್. ಆಗ ನನಗಿದ್ದ ಒಬ್ಬರೇ ಒಬ್ಬ ಮಹಿಳಾ ಸ್ನೇಹಿತರು ಎಂದರೆ ನನ್ನ ತಾಯಿ ಕನಕಮೂರ್ತಿ. ನಾನು ಅವಳನ್ನ ಕಂಕು, ಮೂತ್ರಿ, ಕನಕ ಅಂತಲೇ ಕರೀತಿದ್ದೆ. ನಾನು ಮಾತಾಡುತ್ತಿರುವ ಕಾಲ 1970-80ರ ಕಾಲ. ಬ್ರಾಹ್ಮಣರ ಮಡಿವಂತಿಕೆ ಪೀಕ್ ನಲ್ಲಿದ್ದರೂ ನಮ್ಮ ಮನೆಯಲ್ಲಿ ಅದನ್ನು ಒಡೆಯುವ ಕಾಮಿಡಿ ನಡೆಯುತ್ತಲೇ ಇತ್ತು. ಸಿನೆಮಾಗಳಲ್ಲಿ ಬರುವ ಅಂದ್ರೆ ಆ ಕಾಲದ ಸಿನೆಮಾಗಳು ನಮ್ಮ ಮನೆಯ ಪ್ರಜಾಪ್ರಭುತ್ವವನ್ನು ಗಟ್ಟಿ ಮಾಡಿದವು. ಹಲವಾರು ರಗಳೆಗಳಿಗೆ ನನಗಿಂತ ಹೆಚ್ಚಾಗಿ ಕಂಕು ಕಾರಣವಾಗುತ್ತಿತ್ತು. ಒಮ್ಮೆ ಹೀಗೆ ನನ್ನ ಅಪ್ಪನ ಕಡೆಯವರು ಬಂದು ಠರಾವು ಹೊರಡಿಸಿದರು “ಇವತ್ತು ವೈಕುಂಠ ಏಕಾದಶಿ, ಹತ್ತು ಜನ ಮುತ್ತೈದೆಯರಿಗೆ ತಾಂಬೂಲ ಕೊಟ್ಟರೆ ನಿನಗೆ ಧನ ಸಿಗುತ್ತೆ, ಆದ್ರಿಂದ 10 ಜನಾನ ಕರಿ ಅಂದ್ರು.

ಇದನ್ನೂ ಓದಿ-ಸಂಬಂಧ ಮಾರಕ್ಕಾಗಲ್ಲ.. ಸೆಕ್ಸ್ ಮಾತ್ರ ಮಾರ್ಬೋದು!!!

ಕಂಕು ಸಕ್ಕತ್ ಐಡಿಯ ಮಾಡ್ತು. ನೋಡ್ನೋಡುತ್ತಿದ್ದಂತೆ 6 ಜನ ಪೌರಕಾರ್ಮಿಕರನ್ನು ಮನೆಗೆ ಕರೆದು ತಾಂಬೂಲ ಕೊಟ್ಟರು. ಅವರು ಹೋದ ಮೇಲೆ ಮನೆಯಲ್ಲಿ ಜೋರು ಕೂಗಾಟ. ಕಂಕು ಸೀದಾ ಹೋಗಿ ಕಲ್ಲಿನ ಮುಂದೆ ಕೂತು ಶಿಲ್ಪ ಕೆತ್ತಕ್ಕೆ ಶುರು. ಅವರೆಲ್ಲಾ ಅಲ್ಲಿಗೆ ಬಂದು ಜಗಳ ತೆಗೆದಾಗ ಕಂಕು ಒಂದೇ ಮಾತು “ನಂಗೆ ಟೈಮಿಲ್ಲ… ಮುತ್ತೈದೆಯರನ್ನ ಹುಡುಕಕ್ಕೆ. ನಿಮಗೆ ಸಮಾಧಾನ ಇಲ್ಲ ಅಂದ್ರೆ ಮನೆ ಬಿಟ್ಟು  ಹೋಗಿ ಅಂದ್ರು. ಪೌರಕಾರ್ಮಿಕರನ್ನು ನಮ್ಮವರು ಅಂತ ಸ್ವೀಕರಿಸಿದರು.. ಆಗ ಅವರು ಇನ್ನೂ 4 ಜನಕ್ಕೆ ಏನ್ ಮಾಡ್ತಿಯ ಅಂದ್ರು. ಆಗ ಕಂಕು ಸೀದ ಅಪ್ಪ, ಮಾಮಾ, ಮಾಮಾರ ಶಿಷ್ಯ ಮತ್ತೆ ದೊಡ್ಡ ಕಲ್ಲು ತೆಗೆದು ಕೆಲಸ ಮಾಡುವ ಕಂದಚಾಮಿನ ಕರೆಸಿ ತಾಂಬೂಲ ಕೊಟ್ಟರು.

ನಾನು ರೂಮಲ್ಲಿ ಕೂತು ಅಲ್ಲಾಹ್ ತೆರೆ ಕರಮ ಪರ್ ವಾರಿ ಹೂ ಅಂತ ಶ್ರೇಷ್ಠವಾಗಿ ಹಾಡ್ತಿದ್ದೆ.

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article