ಕನಸುಗಳ ಉಣಬಡಿಸಿದ ನನ್ನ ʼಕಮ್ರʼ

Most read

ನನ್ನ ರೂಮಲ್ಲಿ – ನನ್ನ ರೂಮು ಅಂತ ನಂಗೆ ಸಿಕ್ಕಿದ್ದೇ 20 ವರುಷಕ್ಕೆ. ಆದ್ರೂ ಚಿಕ್ಕ ವಯಸ್ಸಿನಲ್ಲಿ ಮನೇಲಿ ಯಾರೂ ಇಲ್ಲದಿದ್ದಾಗ ನನ್ನ ನಿಜ ಸ್ವರೂಪ ಆಚೆ ಬರೋದು. ಸಂಗೀತ ಕಲೀತಿದ್ದೆ ಅಂತ ನನಗೆ ಒಂದು ಟೇಪ್ ರೆಕಾರ್ಡರ್ ಕೊಡಿಸಿದ್ದರು ನನ್ನ ಕಛೇರಿ ದುಡ್ಡಲ್ಲಿ. ಆಗೆಲ್ಲ ಸ್ಪೂಲಿಂದ ಆಗಷ್ಟೆ ಕ್ಯಾಸೆಟ್ಗೆ  ಮುಂದುವರೆದಿದ್ರು. ಒಬ್ರ ಹೆಸರಲ್ಲಿ ಒಂದು ಕ್ಯಾಸೆಟ್ ಬರೋದು ತುಂಬಾ ದೊಡ್ಡದು. ನಂಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹಿಂದಿ ಸಿನೆಮ ಹಾಡು ಕೇಳೋದು ಒಂದು ಹರ. ಒಂದು ಹಾಡಲ್ಲಿ ಏನೆಲ್ಲಾ ವಾದ್ಯಗಳನ್ನ ಹೇಗೆಲ್ಲಾ ಉಪಯೋಗಿಸಿದ್ದಾರೆ, ಅದರ ಸಂರಚನೆ ಮಾಡಿದವರು ಯಾರು, ಅವರ ಹಿನ್ನೆಲೆ, ಅವರು ಸಿನೆಮಾದಲ್ಲಿ ಹೇಗೆ ಬಂದರು ಇದೆಲ್ಲಾ ತಿಳಿದು ಕನಸು ಕಾಣುತ್ತಿದ್ದೆ. ಯಾವ ರಾಗಗಳನ್ನು ಹೇಗೆ ಉಪಯೋಗಿಸಿದ್ದಾರೆ ಎಂದು ನೋಡುವುದು ನನ್ನ ಜೀವದ ಕೆಲಸ.

ಇದರ ಜೊತೆಗೆ ನಾನೇ ಆ ರಾಗ ಸಂಯೋಜಕನಾಗಿ ಒಂದು ಇಡೀ ವಾದ್ಯ ವೃಂದವನ್ನು ಕಣ್ ಮುಂದೆ ಕಾಣುತ್ತಾ ಅದನ್ನು ಕಂಡಕ್ಟ್ ಮಾಡುವಂತೆ ಕೈ ಅಲ್ಲಾಡಿಸುತ್ತಾ ಜೊತೆ ಜೊತೆಗೆ ಜೋರಾಗಿ ಹಾಡುವುದೂ ನನ್ನ ಇಷ್ಟದ್ದಾಗಿತ್ತು.. ಬಹುಷ: ನಾನು ಕಂಡ ನನ್ನ ಮೊದಲ ಗಂಡಸುತನದ ಗುರುತುಗಳಲ್ಲಿ ಇದೂ ಒಂದು. ನಾನು ಯಾವಾಗಲೂ ಗಂಡಸರು ಹಾಡೋದನ್ನ ಮಾತ್ರ ಹಾಡುತ್ತಿದ್ದೆ. ಅಂದ್ರೆ ನನ್ನ ಕನಸಿನಲ್ಲಿ ನಾನು ಆಶಾ, ಲತಾ, ರಫಿ, ಕಿಶೋರ್ ಮನ್ನಾಡೆ ಇವರಿಗೆಲ್ಲ ನಿರ್ದೇಶಿಸಿರುವ ಕನಸು ಕಂಡಿದ್ದೇನೆ. ಆ ಕನಸುಗಳು ನನಗೆ ತುಂಬಾ ಮುಖ್ಯ. ಆಗ ನನ್ನ ವಯಸ್ಸು 12 ವರುಷ ಇರಬಹುದು. ನಾನು ಮದನ್ ಮೋಹನ್ ಎಂಬ ಸಂಗೀತ ನಿರ್ದೇಶಕನಾಗಿ ರೂಪಾಂತರಗೊಳ್ಳುತ್ತಿದ್ದೆ. ನಾನು ನನ್ನ 42ರ ವಯಸ್ಸಿನ ವರೆಗೂ ಈ ಕನಸುಗಳ ಆಟವನ್ನು ನನ್ನ ಜೀವನದಲ್ಲಿ ಆಡಿದ್ದೇನೆ. ಅಷ್ಟು ಹೊತ್ತಿಗಾಗಲೇ ನಾನು ಎರಡು ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೆ ನನ್ನ ನಿಜ ಜೀವನದಲ್ಲಿ.

ನಾನು ಯಾವಾಗ ಗಂಡಸು ಎಂದು ನನ್ನ ಸ್ವಾತಂತ್ರ್ಯದಿಂದ  ಬದುಕಲು ಶುರು ಮಾಡಿದೆನೋ ಆನಂತರ  ಈ ಕನಸು ನನ್ನಲ್ಲಿ ಬದುಕ ಬೇಕಿರಲಿಲ್ಲ. ಆದರೆ, ಈ ಕನಸಿನ ಬದುಕು ನನಗೆ “ನನ್ನ” ರೂಮು, ಜಾಗ, ಕಮ್ರ, ನನ್ನ ಯೋಚನೆಗಳು, ನಾನಿರುವ ಸ್ಥಿತಿಗತಿ, ನನಗಿರುವ ಸೌಲತ್ತುಗಳು  ಯಾವುವು ಎಂದು ತೋರಿಸಿದೆ.

ಈಗ ನನ್ನ ಮನೆಯೇ ನನ್ನ ಕಮ್ರ… ಮೆಹೆಫಿಲ್ಗಳು ನಡೆದೇ ಇರುತ್ತೆ. ಕಾವ್ಯ, ಸಂಗೀತ, ಚರ್ಚೆಗಳು, ಓದು, ಮತ್ತೆ ನನ್ನ ರಿಯಾಜು (ಸಂಗೀತಾಭ್ಯಾಸ). ನಾನೆಷ್ಟು ಓಡಾಡಿ ಮನೆಯೇ ಇಲ್ಲದೆ  ಹೋರಾಟದಲ್ಲಿ ಮುಳುಗಿದ್ದೆನೋ ಈವಾಗ ನನಗೆ ಹೋರಾಟಗಳ ಬಗ್ಗೆ ಭ್ರಮನಿರಸನವಾಗಿದೆ. ಕೆಲವೇ ಹೋರಾಟಗಳನ್ನು ಬಿಟ್ಟರೆ ಮಿಕ್ಕೆಲ್ಲವು ಸಾಂಕೇತಿಕವಾಗಿ ಬಿಟ್ಟಿದೆ. ಅದೇ ಫ್ರೀಡಂ ಪಾರ್ಕು, ಟೌನ್ ಹಾಲು, ಸ್ಲೋಗನ್‌ಗಳಂತೂ ಒಂದೊಂದು ವಾಕ್ಯದಷ್ಟು ಉದ್ದ ಇರುತ್ತವೆ. ಮತ್ತೆ ನಮ್ಮ ನಮ್ಮಲ್ಲೇ “ನೀವು ಈ ಹೋರಾಟದವರು, ನಾವು ಈ ಹೋರಾಟದವರು, ಅವರು ಆ ಹೋರಾಟದವರು” ಎಂಬ ವಿಭಜನೆಗಳು.  ನಾವು ಇದನ್ನು ನೋಡುತ್ತೇವೆ, ನೀವು ನಮ್ಮ ವಿಷಯವನ್ನು ನೋಡಬೇಕು ಎಂಬ ವಿನಂತಿ ಬೇರೆ. ಅದಕ್ಕೆ ಒಂದು ಇಂಗ್ಲೀಷ್ ಪದ ಬೇರೆ ಸಾಲಿಡ್ಯಾರಿಟಿ. ನಾವು ನಿಮ್ಮೊಟ್ಟಿಗಿದ್ದೇವೆ ಎನ್ನುವುದಷ್ಟೆ.

ಒಂದು ಕಾಲದಲ್ಲಿ ಎನ್ ಜಿ ಒ ಬಾಸ್‌ಗಳು ನಮ್ಮನ್ನು ಎಲ್ಲಾ ಪ್ರತಿಭಟನೆಗಳಿಗೆ ಕಳಿಸುತ್ತಿದ್ದರು. ಸೋ ದಟ್ ಅವರು ನಮ್ಮ ಪ್ರತಿಭಟನೆಗೆ ಬರಲಿ ಎಂದು. ಇದನ್ನು ಸಾಲಿಡ್ಯಾರಿಟಿ ಎನ್ನುತ್ತಿದ್ದರು. ಇತ್ತೀಚೆಗೆ ಒಬ್ಬರು ಸ್ನೇಹಿತರ ಹತ್ತಿರ ಹೇಳಿದೆ ನಾವು ಲೈಂಗಿಕ ರಾಜಕಾರಣ ಮತ್ತು ಜಾತಿ ರಾಜಕಾರಣವನ್ನು ಒಟ್ಟಿಗೆ ನೋಡಿ ಚರ್ಚಿಸಬೇಕು ಅಂತ. ಆಗ ಅವರು ಇವೆರಡಕ್ಕೂ ಏನು ಸಂಬಂಧ ಅಂತ ಕೇಳಿದರು. ನನಗೆ ಏನು ಹೇಳುವುದು ತಿಳಿಯಲಿಲ್ಲ. ಎಲ್ಲಾ ಹೋರಾಟಗಳೂ ಒಂದರೊಳಗೊಂದು ಸೇರಿಕೊಂಡಿವೆ. ಅದು ಹೇಗೆ ಅಂತೀರ.. ಇಸೈಜ್ಞಾನಿ ಇಳೆಯರಾಜ ಹಾಡುಗಳಂತೆ. ಅವರ ಪ್ರತಿಯೊಂದು ಹಾಡುಗಳಲ್ಲಿ ಇನ್ನಾವುದೋ ಹಾಡಿನ ಛಾಯೆ ಅಥವಾ ರಾಗ ಸೇರಿಯೇ ಇರುತ್ತೆ.  ಲೈಂಗಿಕತೆ ಮತ್ತು ಲಿಂಗತ್ವದ ಹೋರಾಟದ ಪ್ರತಿಯೊಬ್ಬರಿಗೂ ಒಂದು ಜಾತಿ ಧರ್ಮ ಎನ್ನುವುದಿರುತ್ತದೆ. ಎಲ್ಲಾ ಲೈಂಗಿಕತೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಒಂದೇ ತಕ್ಕಡಿಯಲ್ಲಿ ಹಾಕಕ್ಕೆ ಆಗಲ್ವಲ್ಲ.

ಈಗ ನನಗೆ ಹೋರಾಟಗಳ ಬಗ್ಗೆ ಕನಸು. ಸುಮ್ಮನೆ ಒಗ್ಗಟು ಐಕ್ಯತೆ ಎಂದರೆ ಆಗುವುದಿಲ್ಲ. ಲಿಂಗತ್ವ, ಲೈಂಗಿಕತೆ, ಶ್ರಮ, ಜಾತಿ, ಧರ್ಮ, ಇಂತಹ ಅನನ್ಯತೆಗಳನ್ನು ಸಮಗ್ರವಾಗಿ ನೋಡಬೇಕು. ಡಿ.ಎಸ್ಎಸ್ ನ ಒಳ ಮೀಸಲಾತಿಯಂತ ಹೋರಾಟ ಇಂತಹ ಒಳ ಪದರಗಳನ್ನು ಅರ್ಥ ಮಾಡಿಕೊಳ್ಳಲು ಬಹಳ ಮುಖ್ಯವಾಗುತ್ತದೆ.

ಒಳ ಮೀಸಲಾತಿಯ ಬಗ್ಗೆ ಚಿಂತಿಸುತ್ತಿದ್ದಾಗ ಈ ಯೋಚನೆ ಬಂತು. ನನ್ನ ಒಬ್ಬ ಸ್ನೇಹಿತ ಈ ವಿಷಯಕ್ಕೆ ಉದಾಹರಣೆ ಆಗಬಹುದು. ಒಬ್ಬ ಮುಸ್ಲಿಮ್ ದಲಿತ, ಓದು ಮುಗಿಸಲು ಸಾಧ್ಯವಾಗದೆ, ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಾನೆ. ಅವನು ಸರ್ಜರಿ ಮಾಡಿಸಿಕೊಳ್ಳಲಾಗದಿರುವ ಟ್ರಾನ್ಸ್ ಪುರುಷ ಮತ್ತು ಕಡು ಬಡತನದ ಹಿನ್ನೆಲೆಯಿಂದ ಬಂದವನು. ಅವನ ಅನನ್ಯತೆಯಿಂದಾಗಿ ಅವನ ಬಗ್ಗೆ ಇಲ್ಲಿ ವಿವರಿಸಿರುವ ಪ್ರತಿಯೊಂದು ವಿಷಯವೂ ಒಂದೊಂದು ರೀತಿಯ ವ್ಯವಸ್ಥೆಯ ಅನ್ಯಾಯ. ಆತ ಬಹು ಸ್ತರಗಳಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವವನು. ಹೋರಾಟಗಳು ಒಂದೇ ವಿಷಯಕ್ಕೆ ಸೀಮಿತಗೊಳ್ಳದೆ ಈ ವ್ಯವಸ್ಥೆಯ ಅನ್ಯಾಯಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡರೆ ಉತ್ತಮ. ಇದು ನನ್ನ ಕನಸು. ಇಳಯರಾಜಾನ ಹಾಡುಗಳನ್ನು ಬಿಡಿಸಿ ಬಿಡಿಸಿ ನೋಡಿದರೆ, ಪ್ರತಿಯೊಂದು ಎಳೆಯ ಪ್ರಾಮುಖ್ಯತೆ ತಿಳಿಯುತ್ತದೆ. ಹಾಗೆ ಸಮಗ್ರವಾಗಿ ಕೇಳಿಸಿಕೊಂಡರೆ ಅದು ಪರಿಚಯಿಸುವ ರಚನೆಯೇ ಬೇರೆಯಾಗುತ್ತದೆ.  

ಆಗೆಲ್ಲಾ ಬೇಕಿತ್ತು

‘ನನ್ನ ಕಮ್ರ’

ಕನಸುಗಳ ಉಣಬಡಿಸಿ

ಬೆಳೆಸಿ,

ಅದು ತನ್ನದೇ

ಜೀವ ಪಡೆದು

ಜೊತೆ ನಡೆಯಲು.

ನಡೆಯಲು ಜೊತೆ

ಈಗ ಬೇಕಿದೆ

ಹೆಜ್ಜೆಗಳು.

ಅರಿಯದ, ಕಂಡಿರದ, ಕೇಳಿರದ

ರಸ್ತೆಗಳ ಮೆಟ್ಟು

ಪಾದಗಳಿಗಂಟಿದ ಬಿರುಕುಗಳಲಿ

ಚಿಗುರುವ ಎಲೆಗಳು ಬೇಕಿದೆ.

ಬೇಕಿದೆ ಚಿಗುರೆಲೆಗಳು

ಕಮ್ರಾದ

ಗೋಡೆ, ಕಿಟಕಿ, ಛತ್ತನ್ನು ಉರುಳಿಸಿ

ಒಳಗಿನಿಂದೊಳಗೊಳ್ಳಲು

ತೆರೆದಷ್ಟೂ ತೋಳ್ಗಳ ಬಳಸಲು

ಶ್ರಮ ಹಂಚಿಕೊಂಡು

ಬೆವರ ನೋವುಗಳ ಬೆರೆಸಿ

ಮೈಗಚ್ಚಿ,

ಜೊತೆ ನಡೆಯಲು

ಕತ್ತಲ ಇಳಿ ಚಳಿ

ಭುಜ ನಡುಗಿಸುವಾಗ

ಹೆಜ್ಜೆಗಳ ಉಸಿರಿನ  ಬಿಸುಪು

ಚಳುವಳಿಯ ಬಿಸುಪು

ವ್ಯವಸ್ಥೆಯ ಮೇಲಿನ

ಸಿಟ್ಟಿನ ಬಿಸುಪು

ಕೈ ಹಿಡಿದುಕೊಳ್ಳಲು.

ಇಂದು ನಾವು

ಸರಹದ್ದುಗಳಿಲ್ಲದ ಕಮ್ರ ಆಗುವ ಜಾವ.

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

ಇದನ್ನೂ ಓದಿ-ʼಅವರುʼ ಮತ್ತು ʼಇವರʼ ಲೈಂಗಿಕತೆಯ ಸುತ್ತ ಮುತ್ತ

More articles

Latest article