ಠುಸ್ಸಾದ ಆತ್ಮಹತ್ಯೆಯ ಪ್ರಯತ್ನ

Most read

ಆವತ್ತು 2009ನೇ ಇಸವಿಯ ಜುಲೈ 8ನೆ ತಾರೀಕು ಅತ್ತೂ ಅತ್ತೂ ನನ್ನ ಕಣ್ಣು ಬತ್ತಿ ಹೋಗಿ ಇನ್ನು ಅತ್ರೆ ಕಣ್ಣಲ್ಲಿ ಬೆಂಕಿ ಮಾತ್ರ ಬರುವಂತಿತ್ತು. ಆವತ್ತು ಸುನಿಲ್ ಮತ್ತೆ ನಾನು ಬ್ರೇಕಪ್ ಆದ ದಿನ. ನಾನು ಎಷ್ಟು ಅಂಗಲಾಚಿ ಬೇಡಿಕೊಂಡರೂ ನನ್ನ ಜೊತೆ ಯಾವ ಸಂಬಂಧ ಹೊಂದಲೂ ಸಾಧ್ಯವಿಲ್ಲ ಅಂತ ಖಡಾಖಂಡಿತವಾಗಿ ಹೇಳಿ ಬಿಟ್ಟಿದ್ದ. ಅವನಿಗೆ ಮತ್ತೊಬ್ಬ ಪ್ರೇಮಿ ಸಿಕ್ಕಿದ್ದ. ಹಾಗಂತ ಈ ವಿಷಯ ಕೊನೆಗೆ ತಿಳಿದಿದ್ದು ಅಂತ ಏನೂ ಇಲ್ಲ. ಸುನಿಲ ನನಗೆ ಮಾಹಿತಿ ಕೊಟ್ಟು ನನ್ನ ಒಪ್ಪಿಸಿಯೇ ಅವನ ಹತ್ತಿರ ಪ್ರೊಪೋಸ್ ಮಾಡಿದ್ದ. ಅಂದರೆ ಸುನಿಲನ ತತ್ವ ಏನೆಂದರೆ, ಪ್ರೇಮಿಯನ್ನು ಬಿಟ್ಟು ಹೋಗುವಾಗ ಸಂಬಂಧವನ್ನು ಕಡಿಯದೆ, ಸ್ನೇಹವನ್ನು ಬಿಡದೆ, ಒಬ್ಬರ ಆಯ್ಕೆಯನ್ನು ಒಪ್ಪಿಕೊಂಡು ಜವಾಬ್ದಾರಿಯಿಂದ ಮುಂದುವರೆಯುವುದು.

ಇದು ನನಗೆ ತೀರಾ ಹೊಸದು. ನನಗೇನೆಂದರೆ ನನ್ನ ಸಂಬಂಧವನ್ನು ಕಡಿಯದೇ ಆ ಸಂಬಂಧವನ್ನೂ ನಡೆಸು ಎಂದು. ಅದಕ್ಕವನು “ಅಸೂಯೆಯನ್ನು ಗೆದ್ದವರಿಲ್ಲ. ನಾವು ಮೂವರೂ ಸ್ನೇಹಿತರಾಗಬೇಕೆಂದರೆ ನಾವು ಈ ಸಂಬಂಧವನ್ನು ತ್ಯಜಿಸಿಯೇ ಸ್ನೇಹವನ್ನು ಗಟ್ಟಿಮಾಡಬೇಕು” ನಾನು “ಸ್ನೇಹವೋ ಪ್ರೇಮವೋ ನನಗೆ ವ್ಯತ್ಯಾಸ ಕಾಣುತ್ತಿಲ್ಲ ನಿನ್ನ ಜೊತೆ” ಎಂದೆ. ನಾವಿಬ್ಬರೂ ಯೋಚಿಸಿ ತೀರ್ಮಾನಿಸಬೇಕು ಎಂದು ಒಂದು ವಾರ ತೆಗೆದುಕೊಂಡೆವು.

ಆ ಒಂದು ವಾರ ನರಕ ಯಾತನೆ. ಅವನನ್ನು ಮಾತಾಡಿಸಲಾಗದೆ ಬಹಳ ಗಟ್ಟಿ ಮನಸ್ಸು ಮಾಡಿ ನಿಂತಿದ್ದೆ. ಅವನೂ ಗಟ್ಟಿಯಾಗಿದ್ದ. ಮಾತನಾಡುತ್ತಿರಲಿಲ್ಲ. ನಾನು ಎರಡನೆ ದಿನದ ರಾತ್ರಿ ಅತ್ತೂ ಅತ್ತೂ ಕಡೆಗೆ ಸುಸ್ತಾಗಿ ಹಾಗೇ ನೆಲದ ಮೇಲೆ ಬಿದ್ದೆ. ಚೆನ್ನಾಗಿ ಕುಡಿದಿದ್ದೆ. ಕಣ್ಣಿಗೆ ನಿದ್ದೆ  ಹತ್ತಿತಾದರೂ ಕನಸಲ್ಲಿ ಸುನಿಲ್ ಕೈ ಚಾಚಿ ಬಿಗಿದಪ್ಪಲು ಕರೆದಂತಾಗಿ ಕಿರುಚಿಕೊಂಡು ಎದ್ದೆ. ಯಾಕೋ ತಲೆಯ ಭಾರ ಆಗ ನನಗೆ ಇದ್ದ ಉದ್ದ ಕೂದಲಿಗೆ ಇಳಿದು ಇನ್ನು ನನಗೆ ತಡೆಯಲಾಗುವುದಿಲ್ಲ ಅನ್ನಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕತ್ತಿ ತೆಗೆದುಕೊಂಡು ಹಾಲಿಗೆ ಬಂದೆ. ಮನೆಯಲ್ಲಿ ಯಾರಿರಲಿಲ್ಲ. ಆ ಮಾಹಾ ಮೊಂಡು ಕತ್ತಿ ಮೆಣಸಿನಕಾಯನ್ನೂ ಕತ್ತರಿಸಲಾರದು. ಹತಾಶೆಯಲ್ಲಿ ಅದನ್ನು ಎತ್ತಿ ಬಿಸಾಕಿದೆ. ಹಾಲಿನ ಪಕ್ಕದಲ್ಲೇ ಇದ್ದ ಅಡುಗೆ ಮನೆಗೆ ಹೋಗಿ ಮತ್ತೇನಿದೆ ಅಂತ ಹುಡುಕಿದೆ. ದೈಹಿಕವಾಗಿ ಏನಾದರೂ ಗಾಯಗೊಂಡರೆ ಮಾನಸಿಕ ಗಾಯ ಕಡಿಮೆಯಾಗ ಬಹುದು ಎಂಬ ಯೋಚನೆಯಲ್ಲಿ ಸ್ವ ಹಾನಿ ಮಾಡಿಕೊಳ್ಳಲು ಮನೆಯಿಡೀ ಸುಂಟರ ಗಾಳಿಯಂತೆ ಓಡಾಡಿದೆ.

ಫೋನ್ ರಿಂಗ್ ಆಯ್ತು. ನನಗೆ ಗೊತ್ತಿತ್ತು ಅದು ಸುನಿಲೆ ಎಂದು. ನಾನು ಬೇಜವಾಬ್ದಾರಿಯಿಂದ ನಡೆದು ಕೊಳ್ಳಬಾರದು ಎಂದು ಫೋನೆತ್ತಿ ಬಹಳ ಸಹಜವಾಗಿ ಮಾತಾಡಿದೆ. ದನಿಯ ಭಾವದಿಂದಲೇ ತಿಳಿದ ಅವನು ಆ ಕಡೆಯಿಂದ ಅಳುತ್ತಿದ್ದ ಆದರೂ ಅದನ್ನು ತೋರಿಸಿಕೊಳ್ಳದೇ ಇಬ್ಬರೂ ಚೆನ್ನಾಗಿ ಸುಳ್ಳು ಹೇಳಿಕೊಂಡು ಫೋನ್ ಇಟ್ಟೆವು. ಆಗ ಸಮಯ 2 ಗಂಟೆ ಇರಬಹುದು.

ತಟ್ಟಂತ ನೆನಪಾಯಿತು. ಅಲ್ಲೊಂದು ಒಳ್ಳೆಯ ಕತ್ರಿ ಇತ್ತು. ಕನ್ನಡಿಯನ್ನೂ ನೋಡದೆ ಕೂದಲನ್ನು ಹಾಗೇ ಹಿಡಕ್ಕೊಂಡು ಹೆಂಗೆ ಹೆಂಗೋ ಕತ್ತರಿಸಿಕೊಂಡೆ. ಆಗಿನ್ನೂ ನಾನು ಸುಮತಿಯಾಗಿದ್ದೆ. ಉದ್ದ ಕೂದಲಿತ್ತು. ಕತ್ತರಿಸಿದ್ದೇ ತಡ ಇನ್ನಷ್ಟು ಕುಡಿದು ನಿಲ್ಲಲಾಗದ ಸ್ಥಿತಿಯಲ್ಲಿ ಗಾಡಿ ಹತ್ತಿ ಸುಮ್ಮಗೆ ಓಡಿಸ ತೊಡಗಿದೆ.

ನನ್ನ ಜೀವನದಲ್ಲಿ ಏನಾದರು ಒಂದು ಸೆಟಲ್ಡ್ ಜೀವನ ಅಂತ ಇದ್ದರೆ ಅದು ಸುನಿಲನಿಂದ ಮಾತ್ರ ಬಂದಿದ್ದು. ಅವನು ಸಿಗುವ ಮುಂಚೆ ಮತ್ತು ಬಿಟ್ಟ ಮೇಲೆ ನಾನೊಬ್ಬ ಅಬ್ಬೆಪಾರಿ ಅಲೆಮಾರಿ. ನನ್ನಮ್ಮ ನನ್ನ ಬೆಳೆಸಿದರು ಆದರೆ ಅವರಿಗೆ ನನ್ನ ಯಾವ ಮಿತಿಗಳೂ ತಿಳಿದಿರಲಿಲ್ಲ. ದಿನಕ್ಕೆ 10 ಗಂಟೆ ಸಂಗೀತಾಭ್ಯಾಸ ಮಾಡುವುದು ಬಿಟ್ಟರೆ ಅವರಿಗೆ ನನ್ನ ಬಗ್ಗೆ ಏನೂ ತಿಳಿಯುವ ಗೋಜಿರಲಿಲ್ಲ. ಸುನಿಲ ನನ್ನ ಜೀವನದಲ್ಲಿ ಬಂದಾಗಲೇ ಅವನು ಗಮನಿಸಿ ನೋಡಿದಾಗ ತಿಳಿದಿದ್ದು, ನನಗೆ ನಡೆಯಲು ಬರಲ್ಲ ಅಂದ್ರೆ ನಾನು ಕಾಲು ಅಗಲ ಅಗಲ ಹಾಕುತ್ತೇನೆ, ಹಾಗೇ ಹಾಕಿ ರೋಡಲ್ಲಿ ನಡೆಯುವಾಗ ಬೀಳುತ್ತಲೇ ಇರುತ್ತೇನೆ ಅಂತ. ಮತ್ತೆ ನನಗೆ ಸೀನಲು ಬರುವುದಿಲ್ಲ. ಸೀನಿದಾಗೆಲ್ಲ ನಾಲಿಗೆ ಕಡಿದುಕೊಂಡು ರಕ್ತ ಬರುತ್ತದೆ, ಅದಕ್ಕೆ ಅವನು ನನಗೆ ಸೀನಲು ಹೇಳಿಕೊಟ್ಟಿದ್ದ.

ಇದೆಲ್ಲಾ ತಲೆಯಲ್ಲಿ ಗಿರ್ ಎಂದು ಓಡುತ್ತಿತ್ತು. ನಾನೇನು ಕಳೆದುಕೊಂಡಿದ್ದು ಎಂದು ಭಾಸವಾದಾಗ ಗಾಡಿ ನಿಲ್ಲಿಸಿ (ಎಲ್ಲಿ ಅಂತ ಗೊತ್ತಿಲ್ಲ) ಹೊಟ್ಟೆ ಹಿಡಿದು ಜೋರಾಗಿ ಕಿರುಚಿ ಕಿರುಚಿ ಅತ್ತೆ. ನನ್ನಲ್ಲಿ ಅವನಿಗೆ ಪ್ರೇಮ ಕಡಿಮೆ ಆಯಿತೆ ಅಥವಾ ಖಾಲಿಯಾಯಿತೆ?  ನಮ್ಮಂತ ಸಮಲೈಂಗಿಕ ಪ್ರೇಮಿಗಳಿಗೆ ನಮ್ಮ ಸಂಗಾತಿಗಳು ಸಿಗುವುದೇ ಕಷ್ಟ. ಅದರಲ್ಲಿ ನಾನು ವರ್ಷಗಳೇ ಯಾವ ಸಂಗಾತಿಗಳಿಲ್ಲದೇ ಬದುಕಿದ್ದೆ. ಈಗ ಸುನಿಲ ನನ್ನ ಉಸಿರು. ಉಸಿರೇ ಇಲ್ಲದ ಬದುಕು ಹೇಗೆ?. ಕಡೆಗೆ ಹೇಗೋ ಮನೆಗೆ ಬಂದು ಬಾಗಿಲು ತೆಗೆದು ಬಿದ್ದದ್ದಷ್ಟೆ ಗೊತ್ತು.

ಜುಲೈ 9 2009, ಬೆಳಿಗ್ಗೆ 6 ಗಂಟೆಗೆ ಎಚ್ಚರವಾಗಿ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ನನ್ನ ಮುಖ ಮೊದಲ ಬಾರಿಗೆ ಆಷ್ಟು ಅಂದವಾಗಿತ್ತು! ನಾನೇ ಹೆದರಿಕೊಂಡೆ. ಏನಾದ್ರೂ ತಿಂದು ಮೂರು ದಿವಸ ಆಗಿತ್ತು. ಪಕ್ಕದಲ್ಲೇ ಅಜ್ಜಿ ಅಂಗಡಿ ತೆಗೆಯಕ್ಕೆ ಮುಂಚೆನೇ ಹೋಗಿ ಕೂತಿದ್ದೆ. ಅಜ್ಜಿ ಬಂದು “ಇದೆನ್ನ ಪಣ್ಣಿಟ್ಟೆ?” ಅಂತ ಕೇಳಿದರು. ಸುಮ್ಮನೆ ನಕ್ಕೆ. ಅಜ್ಜಿ ಇಡ್ಲಿ ಮಾಡಕ್ಕೆ ಶುರು ಮಾಡುವಾಗ ಅವರಿಗೆ ಸಹಾಯ ಮಾಡ್ತ ಹಾಗೆ ಟೈಮಾಯ್ತು ಅಂತ ಆಫೀಸ್ ಗೆ ಹೊರಟೆ. ಮಧ್ಯದಲ್ಲಿ ನನ್ನ ಗೆಳತಿ ಫೋನ್ ಮಾಡಿದಳು ದೆಹಲಿಯಿಂದ. ಕೂಗ್ತಾ ಹೇಳಿದಳು “ಲೇ…. ನಾವಿನ್ ಮೇಲೆ ಅಪರಾಧಿಗಳಲ್ಲ ಕಣೋ…. ತೀರ್ಪು ಕಳಿಸಿದ್ದೀನಿ ಓದು” ಅಂದಳು. ನಾನು ಧಾವಿಸಿ ಹೋಗಿ ಕಂಪ್ಯೂಟರ್ ಸ್ಟಾರ್ಟ್ ಮಾಡಿ ನ್ಯೂಸ್ ಮತ್ತೆ ಅವರು ಕಳಿಸಿದ ಮೇಲ್ ತೆರೆದು ನೋಡಿದೆ. ಸಮಲಿಂಗ ಪ್ರೇಮದ ಘನತೆ ಎಂದು ವಿಷಯ ಹಾಕಿ ಕಳಿಸಿದ ದೆಹಲಿ ಉಚ್ಛನ್ಯಾಯಾಲಯದ ಮೊದಲ ತೀರ್ಪು… ನಾಜ್  Vs  ಯೂನಿಯನ್ ಆಫ್‌ ಇಂಡಿಯ… ನ್ಯಾಯಾಧೀಶರು ಶಾ ಮತ್ತು ನಮ್ಮ ನೆಚ್ಚಿನ ನ್ಯಾಯಾಧೀಶರಾದ ಮುರಳಿ……

ಉಸಿರು ಕಟ್ಟಿ 105 ಪೇಜನ್ನ ಪಟಪಟಪಟ ಅಂತ ಒಂದೇ ಉಸಿರಲ್ಲಿ ಓದಿದೆ…. ಒಂದು ವಿಚಿತ್ರ ಘನತೆ ಕೂಡಿ ಬಂದಂತೆ. ಆ ತೀರ್ಪುಗಾರರು ತಮ್ಮ ತೀರ್ಪಿನಲ್ಲಿ ಸಮಲಿಂಗ ಪ್ರೇಮಿಗಳು ಎಂದು ಸಂಬೋಧನೆ ಮಾಡಿದ್ದರು. ಅಂದರೆ ನಾವು ಯಾವಾಗಲೂ ಕಾಮದಲ್ಲಿ ಮಾತ್ರ ಓಲಾಡುವುದಿಲ್ಲ, ನಮಗೆ ಸೆಕ್ಸಿನ ಗೀಳು ಇರುವುದಿಲ್ಲ, ನಾವೂ ಎಲ್ಲರಂತೆ ಸಾಮಾನ್ಯವಾಗಿ ನಮ್ಮ ಪ್ರೇಮ ಕಾಮ ನಡೆಸುತ್ತೇವೆ ಅದೂ ಗೌರವಯುತವಾಗಿ. ನಮಗೂ ಘನತೆ ಇದೆ. ಒಲವು ಮತ್ತು ಲಿಂಗತ್ವ ನಮ್ಮ ವೈಯಕ್ತಿಕ ಎಂದು ಬರೆದಿತ್ತು.‌

ಇದನ್ನೂ ಓದಿ- ಸಿನೆಮಾ, ಮನೆ, ಪ್ರಜಾಪ್ರಭುತ್ವ ಮತ್ತು ನಾನು

ನನ್ನೆಲ್ಲಾ ದು:ಖ ಮರೆತು ಹೋಯಿತು. ಯಾವುದಕ್ಕೆ ನಾವು ವರ್ಷಗಳಷ್ಟು ಕೆಲಸ ಮಾಡಿದ್ದೆವೋ ಆ ಕೆಲಸಕ್ಕೆ ಇಂದು ತೀರ್ಪು ಬಂದಿತ್ತು. ಅದು ನಮ್ಮ ಭಾಷೆಯಲ್ಲೇ ಇತ್ತು. ನನ್ನ ಕಣ್ಣುಗಳಲ್ಲಿ ಕಣ್ಣೀರು ಸುರಿಯಿತು. ಸುನಿಲನ ಬಳಿ ಮಾತನಾಡುವುದಿಲ್ಲ ಅಂತ ಹೇಳಿದ್ದೆ. ಆದರೆ ಸುನಿಲಿಗೇ ಫೋನ್ ಮಾಡಿ ನಾನು ತೀರ್ಪಿನ ಒಂದು ಲೈನು ಓದಿದೆ – ಸೋ ವಾಟ್ ಇಫ್ ನಾಟ್ ಕಾಮನ್ ದೇ ಹ್ಯಾವ್ ಡಿಗ್ನಿಟಿ. ದೇ ಆರ್ ಸಿಟಿಜನ್ಸ್ – ಸುನಿಲಾ ನಾವು ಅಪರಾಧಿಗಳಲ್ಲಾ.. ದೆಹಲಿ ಉಚ್ಛನ್ಯಾಯಾಲಯ ತೀರ್ಪು ಕೊಟ್ಟಿದೆ” ಅಂದೆ. ಅವನು ಕೂಡಲೇ “ವಾಟ್? ನಿಜ್ವಾಗ್ಲುನಾ?” ಅಂದ.

ಅವನು ಬಂದ ಮೇಲೆ ನನ್ನ ಕೂದಲಿನ ವಿಷಯದಲ್ಲಿ ಒಂದು ತೀರ್ಮಾನವಾಯಿತು. ಅದು ನಾನೆಂದೂ ಮರೆಯದ ಜುಲೈ 9, 2009.

ರೂಮಿ ಹರೀಶ್‌

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article