ಮತಾಂಧತೆಯ ಸೇಡು; ಶಾಂತಿ ಸುವ್ಯವಸ್ಥೆಗೆ  ಕೇಡು

Most read

ಮುಸ್ಲಿಂ ಸಮುದಾಯದ ನಾಯಕರುಗಳು ತಮ್ಮ ಸಮುದಾಯದ ಮತಾಂಧರನ್ನು ನಿಯಂತ್ರಿಸಬೇಕಿದೆ. ಪ್ರತೀಕಾರ ಮನೋಭಾವದ ಬದಲಾಗಿ ಕಾನೂನಾತ್ಮಕ ಹಾಗೂ ಅಹಿಂಸಾತ್ಮಕ ಸಂಘಟಿತ ಹೋರಾಟವನ್ನು ರೂಪಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಧಾರ್ಮಿಕ ದ್ವೇಷ ಹಾಗೂ ಮತಾಂಧತೆಯ ಆವೇಶಗಳು ಎರಡೂ ಧರ್ಮದ ಸಮುದಾಯಗಳಲ್ಲಿ ಹಿಂಸೆಯನ್ನು ಉತ್ಪಾದಿಸುತ್ತವೆ. ರಕ್ತಕ್ಕೆ ರಕ್ತ, ಸೇಡಿಗೆ ಸೇಡು, ಕೊಲೆಗೆ ಕೊಲೆ ಎನ್ನುವ ವಿಕೃತ ಮನೋಭಾವ ಉಲ್ಬಣಿಸಿದರೆ ಸಾಮಾಜಿಕ ಧಾರ್ಮಿಕ ಸಾಮರಸ್ಯ ಹಾಳಾಗುತ್ತದೆ. ನೆತ್ತರು ಹರಿಯುತ್ತಲೇ ಇರುತ್ತದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮತಾಂಧತೆಯ ಅಟ್ಟಹಾಸ ಮೆರೆದಿದೆ. ರಸ್ತೆಯಲ್ಲಿ ನೆತ್ತರು ಹರಿದಿದೆ. ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಸಂಕಟದಲ್ಲಿದೆ.

ಮೇ 1 ರ ರಾತ್ರಿ 8 ಕ್ಕೆ ಮಂಗಳೂರಿನ ಜನನಿಬಿಡ ಪ್ರದೇಶವಾದ ಬಜ್ಪೆಯ ಹಳೇ ವಿಮಾನ ನಿಲ್ದಾಣದ ಬಳಿ ಸುಹಾಸ್ ಶೆಟ್ಟಿ ಎನ್ನುವ ವ್ಯಕ್ತಿಯನ್ನು ಬರ್ಬರವಾಗಿ ಕೊಚ್ಚಿ ಕೊಲ್ಲಲಾಗಿದೆ. ಹತ್ಯೆಯ ಸುದ್ದಿ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಘೋಷಿಸಿ ಬಲವಂತವಾಗಿ ಅಂಗಡಿ ಮಳಿಗೆಗಳನ್ನು ಮುಚ್ಚಿಸಲಾಗಿದೆ. ಆರು ಸರಕಾರಿ ಬಸ್ ಗಳಿಗೆ ಕಲ್ಲು ಹೊಡೆಯಲಾಗಿದೆ. ಮಂಗಳೂರಿನಿಂದ ಬಂಟ್ವಾಳದ ವರೆಗೆ ಶಾಸಕರ ಮುಂದಾಳತ್ವದಲ್ಲಿ ಶವದ ಮೆರವಣಿಗೆ ಮಾಡಲಾಗಿದೆ.

ಸುಹಾಸ್‌ ಶೆಟ್ಟಿ

“ಇಷ್ಟೆಲ್ಲಾ ಆಗಬೇಕಾದರೆ ಹತ್ಯೆಯಾದವನು ಸಾಧಕನಾಗಿರಬೇಕು, ಸಮಾಜದ ಒಳಿತಿಗೆ ಶ್ರಮಿಸಿದವನಾಗಿರಬೇಕು, ಜನರಿಗೆಲ್ಲಾ ಬೇಕಾದವನಾಗಿರಬೇಕು” ಎಂಬುದು ಅಪೇಕ್ಷಣೀಯ. ಆದರೆ ಹತ್ಯೆಯಾಗಿ ಸತ್ತ ಸುಹಾಸ್ ಶೆಟ್ಟಿ ಎಂಬಾತ ಒಬ್ಬ ರೌಡಿ ಶೀಟರ್. ಆತನ ಮೇಲೆ ಕೊಲೆ ಆರೋಪವೂ ಸೇರಿ ಐದು ಕ್ರಿಮಿನಲ್ ಕೇಸುಗಳಿವೆ. ಒಂದು ಪ್ರಕರಣದಲ್ಲಿ ಶಿಕ್ಷೆಯೂ ಆಗಿ ಜಾಮೀನಿನ ಮೇಲೆ ಹೊರಗಿದ್ದ. ಒಬ್ಬ ಕೊಲೆ ಆರೋಪಿ ರೌಡಿ ಶೀಟರ್ ಸತ್ತರೆ ಯಾಕೆ ಇಂತಹ ಅದ್ದೂರಿ ಶವ ಮೆರವಣಿಗೆ?. ಯಾಕೆ ಊರ ತುಂಬಾ ಬ್ಯಾನರ್ ಗಳು?

ಯಾಕೆಂದರೆ ಹತ್ಯೆಯಾದವ ಕೇವಲ ರೌಡಿ ಎಲೆಮೆಂಟ್ ಮಾತ್ರವಲ್ಲ ಹಿಂದೂ ಕಾರ್ಯಕರ್ತನೂ ಆಗಿದ್ದ. ಹಿಂದೂ ಧರ್ಮರಕ್ಷಣೆಯ ಹೆಸರಲ್ಲಿ ಮುಸ್ಲಿಂ ದ್ವೇಷ ಸಾಧನೆಗೆ ಕೊಲೆಯನ್ನೂ ಮಾಡಿದ ಆರೋಪದಲ್ಲಿ ಜೈಲಿಗೆ ಹೋಗಿದ್ದ.

2022 ರಲ್ಲಿ ಪ್ರವೀಣ್ ನೆಟ್ಟಾರು ಎನ್ನುವ ಸಂಘ ಪರಿವಾರದ ಹಿಂದೂ ಕೋಮುವಾದಿಯನ್ನು ಕೆಲವು ಮುಸ್ಲಿಂ ಮತಾಂಧರು ಕೊಲೆ ಮಾಡಿದ್ದರು. ಈ ಹತ್ಯೆಯಿಂದ ಸಿಟ್ಟಿಗೆದ್ದ ಇದೇ ಸುಹಾಸ್ ಶೆಟ್ಟಿ ಆಂಡ್ ಗ್ಯಾಂಗ್ ಯಾವುದಾದರೂ ಮುಸ್ಲಿಂ ವ್ಯಕ್ತಿಯ ಹತ್ಯೆ ಮಾಡಿ ಸೇಡು ತೀರಿಸಿಕೊಳ್ಳಲು ಹೊತೊರೆಯುತ್ತಿತ್ತು. ಆಗ ಸುರತ್ಕಲ್ ಜಂಕ್ಷನ್ ಬಳಿ ಇವರ ಕಣ್ಣಿಗೆ ಬಿದ್ದವನೇ ಮಹಮದ್ ಫಾಜಿಲ್.‌ ಆತ ಮುಸ್ಲಿಂ ಎನ್ನುವ ಒಂದೇ ಕಾರಣಕ್ಕೆ ಈ ಶೆಟ್ಟಿ ಗ್ಯಾಂಗ್ ನಿರಾಯುಧನಾದ ಒಂಟಿ ಯುವಕನ ಮೇಲೆ ದಾಳಿ ಮಾಡಿ ಕತ್ತರಿಸಿ ಕೊಂದು ಹಾಕಿತ್ತು. ಅದೇ ರೀತಿ ಹಿಂದೂ ದಲಿತ ಯುವಕ ಕೀರ್ತಿ ಕೊಲೆಯ ಆರೋಪವೂ ಸುಹಾಸ್ ಶೆಟ್ಟಿ ಮೇಲಿತ್ತು. ಈತನ ಕ್ರಿಮಿನಲ್ ಹಿನ್ನೆಲೆ ಪರಿಗಣಿಸಿ ಪೊಲೀಸ್ ಇಲಾಖೆಯು ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರು ನೋಂದಾಯಿಸಿ ಕಣ್ಗಾವಲು ಇಟ್ಟಿತ್ತು. ಈಗ ಒಂದು ವರ್ಷದ ಹಿಂದೆ ಜಾಮೀನು ಪಡೆದು ಹೊರಗೆ ಬಂದಿದ್ದ ಶೆಟ್ಟಿಯನ್ನು ಕೊಲೆ ಮಾಡಲೆಂದೇ ಇನ್ನೊಂದು ಕೋಮಿನ ಮತಾಂಧ ಪಡೆ ಅವಕಾಶಕ್ಕಾಗಿ ಕಾಯುತ್ತಲೇ ಇತ್ತು ಎಂದು ಊಹಿಸಬಹುದು.  ಮೇ 1 ರಂದು ಪಕ್ಕಾ ಪ್ರೀಪ್ಲಾನ್ ಮಾಡಿ ಸುಹಾಸ್ ಶೆಟ್ಟಿಯನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಬರ್ಬರವಾಗಿ ಕೊಂದು ಹಾಕಲಾಯ್ತು.

ಈ ಕೊಲೆಯಿಂದ  ಹಿಂದುತ್ವವಾದಿಗಳು ಕೆರಳಿದರು. ಜಿಲ್ಲೆಯ ಬಂದ್ ಗೆ ಕರೆ ಕೊಟ್ಟರು. ಒಬ್ಬ ರೌಡಿ ಶೀಟರ್ ಕೊಲೆಯನ್ನು ಹಿಂದೂ ಕಾರ್ಯಕರ್ತನ ಹತ್ಯೆ ಎಂದು ಕರೆಯುವ ಮೂಲಕ ಬಿಜೆಪಿ ನಾಯಕರು ತಮ್ಮ ಮಾಮೂಲಿ ಶವ ರಾಜಕೀಯಕ್ಕೆ ಚಾಲನೆ ಇತ್ತರು. ಮಂಗಳೂರಿನ ಬಿಜೆಪಿ ಶಾಸಕದ್ವಯರಾದ ಭರತ್ ಶೆಟ್ಟಿ ಹಾಗೂ ವೇದವ್ಯಾಸ್ ಕಾಮತ್ ರವರು ಉದ್ರಿಕ್ತ ಸಂಘಿ ಕಾರ್ಯಕರ್ತರನ್ನು ನಿಯಂತ್ರಿಸುವ ಬದಲಾಗಿ ಪ್ರಚೋದನಕಾರಿ ಮಾತುಗಳನ್ನೇ ವಿಸರ್ಜಿಸಿದರು. ಬಿಜೆಪಿಯ ಸಿ.ಟಿ.ರವಿ, ಆರ್.ಅಶೋಕ, ಅನಂತಕುಮಾರ ಹೆಗಡೆಯಂತಹ ನಾಯಕರು ಹಿಂದೂ ಕಾರ್ಯಕರ್ತನ ಹತ್ಯೆಯ ಹೊಣೆಯನ್ನು ರಾಜ್ಯ ಸರಕಾರದ ಮೇಲೆ ಆರೋಪಿಸುವ ಮೂಲಕ ತಮ್ಮ ಕೋಮುರಾಜಕೀಯ ಆರಂಭಿಸಿದರು. ಸ್ವತಃ ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಮಂಗಳೂರಿಗೆ ಧಾವಿಸಿ ಬಂದು ರೌಡಿಯ ಶವದ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಮೂಲಕ ರಾಜ್ಯದ ಬಿಜೆಪಿಯ ನಾಯಕರುಗಳೆಲ್ಲಾ ಹಿಂದುತ್ವದ ಹೆಸರಲ್ಲಿ ರೌಡಿ ಶೀಟರ್ ಹಾಗೂ ಕೊಲೆ ಆರೋಪಿಯ ಪರವಾಗಿ ನಿಂತುಕೊಂಡು ತಮ್ಮ ಅಸಲಿಯತ್ತನ್ನು ಬಹಿರಂಗ ಪಡಿಸಿದರು.

ದುಷ್ಕರ್ಮಿಗಳು ಮಾಡಿದ ಶೆಟ್ಟಿಯ ಹತ್ಯೆ ಹಾಗೂ ಕೋಮು ರಾಜಕೀಯ ಶಕ್ತಿಗಳ ಪ್ರೇರಣೆಯಿಂದ ಪ್ರತೀಕಾರದ ಹತ್ಯಾ ಪ್ರಯತ್ನಗಳು ಹಿಂದೂ ಮತಾಂಧರಿಂದ ನಡೆಯತೊಡಗಿದವು. ಮೇ 1 ರ ರಾತ್ರಿ ಶೆಟ್ಟಿ ಹತ್ಯೆಯಾದ ನಂತರ ಉಡುಪಿಯಲ್ಲಿ ಮುಸ್ಲಿಂ ರಿಕ್ಷಾ ಚಾಲಕನ ಮೇಲೆ ತಲ್ವಾರ್ ದಾಳಿ ಮಾಡಲಾಯ್ತು. ಮರುದಿನ ಬೆಳ್ಳಂಬೆಳಿಗ್ಗೆ ಮಂಗಳೂರಿನ ಮೀನು ವ್ಯಾಪಾರಿ ಲುಕ್ಮಾನ್‌  ತಲೆ ಮೇಲೆ ಕಲ್ಲು ಹಾಕಿ ಕೊಲೆಗೆ ಪ್ರಯತ್ನಿಸಲಾಯ್ತು. ಹಿಂದೂ ಮಹಿಳೆಯೊಬ್ಬಳು ಹೆದರಿ ಕೂಗಾಡಿದ್ದರಿಂದಾಗಿ ಈ ಪುಕ್ಕಲು ಕೋಮು ಕ್ರಿಮಿಗಳು ಓಡಿ ಹೋಗಿದ್ದರಿಂದ ಆ ವ್ಯಕ್ತಿಯ ಪ್ರಾಣ ಉಳಿಯಿತು. ತದನಂತರ ಮಂಗಳೂರಿನ ಹೊರವಲಯದ ಕಣ್ಣೂರಿನಲ್ಲಿ ನೌಷಾದ್ ಎಂಬಾತನಿಗೆ ಚೂರಿ ಇರಿದು ಪ್ರಾಣಾಂತಿಕ ಹಲ್ಲೆ ಮಾಡಲಾಯ್ತು. ಇವಿಷ್ಟೇ ಅಲ್ಲಾ.. ಇನ್ನೂ ಪ್ರತಿಕಾರದ ದಾಳಿಗಳು ನಡೆಯುತ್ತಲೇ ಇರುತ್ತವೆ. ಮತ್ತೆ ಈ ಮತಿಗೆಟ್ಟ ಮತಾಂಧರ ಸಿಟ್ಟು ಕೆಎಸ್ಸಾರ್ಟಿಸಿ ಬಸ್ ಗಳ ಮೇಲೆ ತಿರುಗಿತು. ಸರಕಾರಿ ಬಸ್ ಗಳನ್ನು ತಡೆದು ಕಲ್ಲು ತೂರಿ ಜಖಂ ಗೊಳಿಸಲಾಯ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲುಕ್ಮಾನ್

ಇದೇನಾ ಹಿಂದೂ ಧರ್ಮ ಅಂದರೆ?. ದುಡಿಯುವ ವರ್ಗದ ಅನ್ಯ ಕೋಮಿನ ಅಮಾಯಕ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಪ್ರಯತ್ನಿಸುವುದರಿಂದ ಹಿಂದೂ ಧರ್ಮದ ರಕ್ಷಣೆ ಆಗುತ್ತದಾ? ಸಾರ್ವಜನಿಕ ಬಸ್ ಗಳ ಮೇಲೆ ಆಕ್ರೋಶ ತೋರುವುದನ್ನು ಹಿಂದೂ ಧರ್ಮ ಎನ್ನಲಾಗುತ್ತದಾ?

ಹೀಗೆಲ್ಲಾ ಹಲ್ಲೆ ಹತ್ಯೆ ಹಿಂಸೆಗೆ ಪ್ರಚೋದನೆ ಕೊಡುವವರು ಸಂಘ ಪರಿವಾರದ ನಾಯಕರಾದರೆ, ಇಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗುವವರು ಮಧ್ಯಮ ವರ್ಗದ ಕೆಳ ಸಮುದಾಯದ ಹಿಂದೂ ಯುವಕರು. ಪ್ರಚೋದಿಸಿದ ನಾಯಕರ ಮಕ್ಕಳು ಪ್ರತಿಷ್ಠಿತ ಶಾಲೆ ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರೆಸಿ ಆಯಕಟ್ಟಿನ ಜಾಗಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದು ಕಂಫರ್ಟಬಲ್ ಜೋನ್‌ನಲ್ಲಿ ಜಾಲಿಯಾಗಿ ಬದುಕುತ್ತಿದ್ದರೆ, ಈ ಕೋಮುವ್ಯಾಧಿ ನಾಯಕರ ಪ್ರಚೋದನೆಗೆ ಒಳಗಾಗಿ ಬೀದಿಗಿಳಿದು ಹಿಂಸಾತ್ಮಕ ಘಟನೆಗಳಲ್ಲಿ ಪಾಲ್ಗೊಳ್ಳುವ ಯುವಕರು ಕೇಸು ಹಾಕಿಸಿಕೊಂಡು, ಶೆಟ್ಟಿಯಂತೆ ರೌಡಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಕೋರ್ಟು ಜೈಲು ಅಲೆದಾಡುತ್ತಾರೆ. ಕೊನೆಗೆ ಹೀಗೆ ಹತ್ಯೆಗೊಳಗಾಗಿ ಬೀದಿ ಹೆಣವೂ ಆಗುತ್ತಾರೆ. ಈ ಮಾತಿಗೆ ಒಂದು ಉತ್ತಮ ಉದಾಹರಣೆ ಎಂದರೆ  ಈಗ ಕೊಲೆಯಾಗಿ ಸತ್ತ ಸುಹಾಸ್ ಶೆಟ್ಟಿಯವರ ತಂದೆ ಮಹೇಶ್ ಶೆಟ್ಟಿಯವರು ಮಾಧ್ಯಮಗಳ ಮುಂದೆ ಬಂದು “ವೃದ್ಧಾವಸ್ಥೆಯಲ್ಲಿ ಮಗ ಸತ್ತಾಗ ಬಹಳ ದುಃಖ ಆಗುತ್ತದೆ.‌ ಜೀವನ ಪರ್ಯಂತ ಹೆತ್ತವರು ನೋವು ಅನುಭವಿಸಬೇಕಾಗುತ್ತದೆ. ನಾಯಕರು ನಾಲ್ಕು ದಿನ ಬಂದು ಹೋಗುತ್ತಾರೆ. ಹಿಂದೂ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಾರೆ” ಎಂದು ಹೇಳಿದ  ಮಾತುಗಳು ಹಿಂದುತ್ವದ ಅಮಲೇರಿದ ಯುವಕರಿಗೆ ಹಾಗೂ ಹಿಂದುತ್ವವಾದಿ ಸಂಘಟನೆಯಲ್ಲಿ ಭಾಗಿಯಾಗಿದ್ದು ಗೊತ್ತಿದ್ದೂ ಮೌನವಾಗಿರುವ ಪೋಷಕರಿಗೆ ಪಾಠವಾಗಬೇಕಿದೆ.

ಸುಹಾಸ್ ಶೆಟ್ಟಿಯ ತಂದೆ ಮಹೇಶ್ ಶೆಟ್ಟಿಯವರು

 ವಿದ್ಯಾಭ್ಯಾಸ ಮಾಡಿ, ಉತ್ತಮ ಹುದ್ದೆ, ಸಂಪಾದನೆಯತ್ತ ಒಲವು ತೋರಬೇಕಾದ ಯುವಕರು ಮತಾಂಧರಾಗಿ ಕತ್ತಿ ಚಾಕು ತಲ್ವಾರಗಳನ್ನು ಹಿಡಿದು ಬಡಿದಾಡಿ ಬೀದಿ ಹೆಣವಾಗುತ್ತಾರೆ. ಹಿಂದುತ್ವ ಅಂದ್ರೆ ಇದೇನಾ? ಹಿಂದೂ ಯುವಕರನ್ನು ಪ್ರಚೋದಿಸಿ ಅನ್ಯ ಕೋಮಿನವರ ಮೇಲೆ ದಾಳಿ ದ್ವೇಷ ಸಾಧನೆಗೆ ಸಾಧನವಾಗಿಸಿಕೊಳ್ಳುವುದೇ ಹಿಂದುತ್ವಾನಾ? ಹಿಂಸೆಗೆ ಪ್ರಚೋದಿಸುವ ಹಿಂದುತ್ವ ಅಗತ್ಯಾನಾ?

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಕರಾವಳಿ: ಕೋಮು ಹಿಂಸೆ ನಿಯಂತ್ರಣದಲ್ಲಿ ಕಾಂಗ್ರೆಸ್ ಮತ್ತೆ ಸೋತಿತೇ?

More articles

Latest article