ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ; ಕೇಸರಿ ಪಡೆ ಕೆರಳಿ ಕೆಂಡ

Most read

ಶೈಕ್ಷಣಿಕ ಆವರಣಗಳಲ್ಲಿ ಶಿಕ್ಷಣೇತರ ಚಟುವಟಿಕೆಗಳು ನಡೆಯುವುದನ್ನು ನಿರ್ಬಂಧಿಸಲೇ ಬೇಕಿದೆ. ಶಾಲೆಗಳಿಗೆ ಸರಕಾರ ಹೊರಡಿಸಿದ ಆದೇಶವನ್ನು ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಿಗೂ ಹಾಗೂ ವಿವಿ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೂ ಹೊರಡಿಸ ಬೇಕಿದೆ. ಉಲ್ಲಂಘಿಸುವ ಶಾಲೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಮುಖ್ಯಸ್ಥರನ್ನು ಕೂಡಲೇ ಅಮಾನತ್ತು ಮಾಡಬೇಕಿದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ರಾಜ್ಯ ಸರಕಾರ ಅತ್ಯಂತ ಅಗತ್ಯವಾಗಿದ್ದ ಆದೇಶವೊಂದನ್ನು ಹೊರಡಿಸಿ ಕೇಸರಿ ಪಡೆಯ ಕಣ್ಣನ್ನು ಕೆಂಪಾಗಿಸಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮೈದಾನಗಳನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಬಳಸದಂತೆ ಸರಕಾರವು ಆದೇಶ ಹೊರಡಿಸಿದೆ. ಈ ಆದೇಶಕ್ಕನುಗುಣವಾಗಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆಯೊಂದನ್ನು ಪ್ರಕಟಿಸಿದ್ದಾರೆ. ಈ ಆದೇಶ ಉಲ್ಲಂಘಿಸಿದರೆ ಶಾಲಾ ಮುಖ್ಯಸ್ಥರು ಹೊಣೆಗಾರರಾಗುತ್ತಾರೆ ಎಂದು ದಕ್ಷಿಣ ಕನ್ನಡದ ಡಿಡಿಪಿಐ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಾಗೂ ಯಾರೂ ಶಾಲೆಗಳ ಆವರಣದ ಬಳಕೆಯ ಅನುಮತಿಗಾಗಿ ಶಿಕ್ಷಣ ಇಲಾಖೆಗೆ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಬಾರದು ಎಂದೂ ಸೂಚನೆ ನೀಡಲಾಗಿದೆ. 

ಇನ್ನೇನು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಗಣೇಶ ಹಬ್ಬಗಳು ಮುಂದಿವೆ. ಹಲವಾರು ಕಡೆ ಶಾಲೆಗಳ ಆವರಣದಲ್ಲೇ ಗಣೇಶನನ್ನು ಪ್ರತಿಷ್ಠಾಪಿಸುವ ಪರಂಪರೆ ಮುಂದುವರೆದುಕೊಂಡು ಬಂದಿದೆ. ಇಂತಹ ಸಮಯದಲ್ಲಿ ಈ ರೀತಿ ನಿರ್ಬಂಧದ ಆದೇಶ ಹೊರಬಿದ್ದರೆ ಸಂಘ ಪರಿವಾರದ ಹಿಂದುತ್ವವಾದಿಗಳು ಕೆರಳದೆ ಸುಮ್ಮನಿರಲು ಸಾಧ್ಯವೇ? ಅತ್ತ ಸರಕಾರಿ ಆದೇಶವನ್ನೂ ಮೀರಲಾಗದೆ ಇತ್ತ ಲೋಕಲ್ ಹಿಂದೂ ಸಂಘಟನೆಗಳನ್ನೂ ನಿಯಂತ್ರಿಸಲಾಗದೆ ಶಾಲಾ ಮುಖ್ಯಸ್ಥರುಗಳು ಇಕ್ಕಟ್ಟಿಗೆ ಸಿಕ್ಕಿದ್ದಾರೆ.

ಇಷ್ಟಕ್ಕೂ ಈ ಆದೇಶದಲ್ಲಿ ತಪ್ಪೇನಿದೆ?

ಶಾಲೆ ಹಾಗೂ ಅವುಗಳ ಆವರಣಗಳನ್ನು ಶಾಲೆಯ ವಿದ್ಯಾರ್ಥಿಗಳಿಗಾಗಿ ಮಾತ್ರ ಬಳಸಬೇಕು ಎನ್ನುವುದು ಸಾಮಾನ್ಯ ತಿಳುವಳಿಕೆ. ಆದರೆ ಈ ಅಸಾಮಾನ್ಯ ಕೇಸರಿ ಭಕ್ತ ಮಂಡಳಿಗೆ ಇದೆಲ್ಲಾ ಅರ್ಥವಾಗುವುದಿಲ್ಲ. ವಿದ್ಯೆ, ಜ್ಞಾನ ಹಾಗೂ ಶಿಕ್ಷಣಕ್ಕಿಂತಲೂ ಧರ್ಮ ಹಾಗೂ ದೇವರೇ ಮುಖ್ಯ ಎಂಬುದು ಈ ಭಕ್ತಾಸುರರ ಅಭೇದ್ಯ ನಂಬಿಕೆ. ಊರೂರಿಗೆ ಬೇಕಾದಷ್ಟು ದೇವಾಲಯಗಳು ಹಾಗೂ ದೇವಸ್ಥಾನಗಳ ಪ್ರಾಂಗಣಗಳು ಇದ್ದೇ ಇರುತ್ತವೆ. ದೈವ ಕಾರ್ಯಗಳನ್ನು ಅಲ್ಲಿ ನೆರವೇರಿಸಿದರೆ ಆಗುತ್ತದೆ. ಆದರೆ ಶಾಲೆಯ ಮೈದಾನದಲ್ಲೇ ನಾವು ಗಣಪತಿ ಕೂಡಿಸುತ್ತೇವೆ ಎಂದು ಹಠಕ್ಕೆ ಬೀಳುವವರಿಗೆ ಹೇಗೆ ತಿಳಿಹೇಳುವುದು?. ಪ್ರತಿ ಗ್ರಾಮಗಳಲ್ಲಿ ಶಾಲೆಗಳು ಇರುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಊರಿಗೆ ನಾಲ್ಕಾರು ಗಣೇಶೋತ್ಸವ ಆಚರಿಸುವ ಸಂಘಗಳಂತೂ ಇದ್ದೇ ಇರುತ್ತವೆ. ಜಿದ್ದಿಗೆ ಬಿದ್ದು ಸಾರ್ವಜನಿಕ ಸ್ಥಳಗಳಲ್ಲಿ, ಕೂಡು ರಸ್ತೆಗಳ ನಡುವಿನಲ್ಲಿ, ಶಾಲಾ ಮೈದಾನಗಳಲ್ಲಿ ಮೂರು, ಐದು ದಿನಗಳ ಕಾಲ ಗಣಪತಿ ಕೂಡಿಸಿ, ಮೈಕಲ್ಲಿ ಭಜನೆ ಹಾಕಿ, ಆರ್ಕೆಸ್ಟ್ರಾ ಅರ್ಭಟ ಮಾಡಿಸಿದರೇ ಈ ಭಕ್ತರಿಗೆ ಸಂಭ್ರಮದ ಸಿರಿ. ಸಾರ್ವಜನಿಕರಿಗೆ ಹೇಳಿಕೊಳ್ಳಲಾಗದ ಕಿರಿಕಿರಿ.

ಇಂತಹ ಭಕ್ತಾವೇಶ ಸನ್ನಿವೇಶದಲ್ಲಿ ಶಾಲೆಗಳ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆಗಳಿಗೆ ಅಂದರೆ ಪರೋಕ್ಷವಾಗಿ ಧಾರ್ಮಿಕ ಕಾರ್ಯಗಳಿಗೆ ಬಳಸಬೇಡಿ ಎಂದು ಸರಕಾರ ಆದೇಶ ಹೊರಡಿಸಿದರೆ ಹಿಂದೂ ಸಂಘಗಳು ಸಹಿಸಿಕೊಳ್ಳಲು ಸಾಧ್ಯವೇ? ಈಗಾಗಲೇ ಕರಾವಳಿಯ ಕೋಮುವಾದಿ ಪಡೆಗಳ ನಾಯಕ ಬೆಳ್ತಂಗಡಿ ಶಾಸಕ ‘ಕೂಡಲೇ ಈ ಆದೇಶವನ್ನು ಹಿಂಪಡೆಯುವಂತೆ ಹೂಂಕರಿಸಿಯಾಗಿದೆ. ಬಿಜೆಪಿಗರು ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟರಲ್ಲೇ ಈ ವಿಷಯದ ಕುರಿತು ಕರಾವಳಿಯಾದ್ಯಂತ ಕೋಮುಭಾವನೆ ಕೆರಳಿಸಿ ಬೆಂಕಿ ಹಚ್ಚುವ ಎಲ್ಲಾ ಸಾಧ್ಯತೆಗಳೂ ಇವೆ. 

ಸರಕಾರಕ್ಕೆ ಇದೆಲ್ಲಾ ಬೇಕಿತ್ತಾ?

ಸುಮ್ಮನಿರಲಾಗದೆ ಇರುವೆ ಬಿಟ್ಟುಕೊಳ್ಳುವ ಕಾರ್ಯ ಸರಕಾರ ಮಾಡಬೇಕಿತ್ತಾ? ಹೌದು ಬೇಕಿತ್ತು. ಈಗ ವಿಧಾನಸೌಧದಲ್ಲಿ ಹಗರಣಗಳ ಬಗ್ಗೆ ರಣೋತ್ಸಾಹದ ಚರ್ಚೆಯಾಗುತ್ತಿದೆ. ವಾಲ್ಮೀಕಿ ನಿಗಮದ ಹಗರಣ, ಮೂಡಾ ಸೈಟ್ ಹಂಚಿಕೆ ಹಗರಣಗಳು ಸದ್ದು ಮಾಡುತ್ತಿವೆ. ಮಾಧ್ಯಮಗಳ ಚಿತ್ತವೂ ರಾಜಕೀಯ ಕೆಸರೆರಚಾಟದ ಮೇಲೆಯೇ ಕೇಂದ್ರಿಕೃತವಾಗಿದೆ. ಸರಕಾರ ಭಾರೀ ಮುಜುಗರವನ್ನು ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಪ್ರಭುತ್ವ ಇರಲಿ ಬಳಸುವ ತಂತ್ರಗಾರಿಕೆ ಏನೆಂದರೆ ವಿಷಯಾಂತರ ಮಾಡುವುದು ಹಾಗೂ ಗಮನವನ್ನು ಬೇರೆ ಕಡೆ ಸೆಳೆಯುವುದು. ಒಂದು ಸಮಸ್ಯೆಯ ತೀವ್ರತೆಯನ್ನು ಕಡಿಮೆ ಮಾಡಲು ಇನ್ನೊಂದು ಬೇರೆ ಸಮಸ್ಯೆಯನ್ನು ಹುಟ್ಟು ಹಾಕುವುದು.

ಈಗ ಕಾಂಗ್ರೆಸ್ ಸರಕಾರ ಈ ರೀತಿ ಹಿಂದೂ ಸಂಘಟನೆಗಳನ್ನು ಕೆರಳಿಸುವ ಅದೇಶವನ್ನು ಹೊರಡಿಸುವ ಮೂಲಕ ವಿರೋಧ ಪಕ್ಷಗಳ, ಮಾಧ್ಯಮಗಳ ಹಾಗೂ ಜನರ ಗಮನವನ್ನು ಹಗರಣಗಳಿಂದ ಹಿಂದುತ್ವದ ಕಡೆಗೆ ಹೊರಳುವಂತೆ ಮಾಡುವ ತಂತ್ರಗಾರಿಕೆಯನ್ನು ಬಳಸಿದೆ. ಈ ಮಾತಿಗೆ ಪುರಾವೆ ಎನ್ನುವಂತೆ ಹಿಂದುತ್ವವಾದಿಗಳ ಪ್ರಯೋಗಶಾಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಈ ಆದೇಶ ಜಾರಿಯಾಗುವಂತೆ ಶಿಕ್ಷಣ ಇಲಾಖೆಯ ಮೂಲಕ ನೋಡಿಕೊಳ್ಳಲಾಗಿದೆ. ನಾಳೆಯಿಂದ ಹಿಂದೂ ಸಂಘಟನೆಗಳು ಪ್ರತಿಭಟಿಸುತ್ತವೆ, ಹಿಂದುತ್ವದ ಗುತ್ತಿಗೆದಾರರು ಬೆಂಕಿ ಭಾಷಣ ಮಾಡುತ್ತಾರೆ, ಅಧಿವೇಶನದಲ್ಲಿ ಪ್ರತಿಭಟನೆ ಪ್ರತಿಧ್ವನಿಸುತ್ತದೆ. ಹಿಂದೂ ವಿರೋಧಿ ಆದೇಶವನ್ನು ಹಿಂಪಡಿಯಬೇಕು ಎಂದು ಆಗ್ರಹ ಹೆಚ್ಚಾಗುತ್ತದೆ. ಹಗರಣಗಳ ತೀವ್ರತೆ ಕಡಿಮೆಯಾಗಿ ಈ ಆದೇಶದ ಕುರಿತ ವಾದ ವಿವಾದ ಮುನ್ನಲೆಗೆ ಬರುತ್ತದೆ. ಹಗರಣಗಳ ಬಲೆಗೆ ಸಿಕ್ಕು ಸಮರ್ಥನೆಗಾಗಿ ಪರದಾಡುತ್ತಿರುವ ಸರಕಾರಕ್ಕೆ ಇದೇ ಬೇಕಾಗಿದೆ. ದೊಡ್ಡ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಚಿಕ್ಕ ಕೋಲು ಕೊಟ್ಟು ಹೊಡಿಸಿಕೊಳ್ಳಲು ಸರಕಾರ ಮುಂದಾದಂತಿದೆ.

ಆದರೆ ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಧಾರ್ಮಿಕ ಕಾರ್ಯವೂ ಸೇರಿದಂತೆ ಯಾವುದೇ ಆಚರಣೆಗಳನ್ನು ನಿರ್ಬಂಧಿಸಲೇ ಬೇಕಿದೆ. ಶಾಲೆಗಳು ಧಾರ್ಮಿಕ ಆಚರಣೆಗಳ ಕೇಂದ್ರಗಳಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ. “ದೇವಸ್ಥಾನಗಳಿಗಿಂತ ಶಾಲೆಗಳ ಗಂಟೆ ಬಾರಿಸಿದಾಗಲೇ ಈ ದೇಶ ಉದ್ಧಾರವಾಗುತ್ತದೆ” ಎಂದು ಅಂಬೇಡ್ಕರರವರು ಹೇಳಿದರು. ಆದರೆ ಈ ಧರ್ಮಾಂಧರು ಶಾಲೆಗಳಲ್ಲಿಯೇ ದೇವರ ಗಂಟೆ ಬಾರಿಸಲು ಮುಂದಾದರು. 

ಶೈಕ್ಷಣಿಕ ಕೇಂದ್ರಗಳನ್ನು ಈ ಸಂಘಿಗಳು ಹೇಗೆ ತಮ್ಮ ಹಿಂದುತ್ವವಾದಿ ಪ್ರಚಾರಕ್ಕೆ ಬಳಸಿಕೊಳ್ಳುತ್ತವೆ ಎಂಬುದಕ್ಕೆ ಲೇಟೆಸ್ಟ್ ಉದಾಹರಣೆ ಹೀಗಿದೆ. ಕಲಬುರಗಿ ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ  ಜುಲೈ 18 ರಂದು ಆರೆಸ್ಸೆಸ್ ಮುಖಂಡರು ಸಭೆಯೊಂದನ್ನು ಮಾಡಿದ್ದಾರೆ. ಸಭೆಯಲ್ಲಿ, ಆರೆಸ್ಸೆಸ್ ಸಂಘಕ್ಕೆ ನೂರು ವರ್ಷ ತುಂಬಿದ್ದರಿಂದ ಕಲಬುರಗಿ ಭಾಗದಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಚರ್ಚಿಸಲಾಗಿದೆಯಂತೆ. ಅದಕ್ಕೆ ಸಂಘವನ್ನು ಕೇಂದ್ರೀಯ ವಿಶ್ವವಿದ್ಯಾಲಯದಿಂದಲೇ ಕಟ್ಟಬೇಕು ಎಂದೂ ನಿರ್ಧರಿಸಲಾಗಿದೆಯಂತೆ. ಹೋಗಲಿ ವಿವಿ ಮುಖ್ಯಸ್ಥರಿಗೆ ತಿಳಿಸದೆ ಯಾರೋ ಅತಿಥಿ ಗೃಹವನ್ನು ತಪ್ಪಾಗಿ  ಬಳಸಿ ಕೊಂಡಿರಬಹುದು ಎಂದುಕೊಳ್ಳುವುದೇ ತಪ್ಪಾದ ನಿರ್ಧಾರವಾಗಿದೆ. ಯಾಕೆಂದರೆ ಈ ಸಭೆಯಲ್ಲಿ ಈ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ, ಹಿರಿಯ ಪ್ರಾಧ್ಯಾಪಕರು ಸಕ್ರಿಯವಾಗಿ ಭಾಗವಹಿಸಿದ್ದು ಆತಂಕ ಕಾರಿಯಾಗಿದೆ. ಸಭೆಯ ಅಂತ್ಯದಲ್ಲಿ ಎಲ್ಲರೂ ಎದ್ದು ನಿಂತು ತಮ್ಮ ಬಲಗೈ ಎದೆಗೆ ಹಿಡಿದು ಆರೆಸ್ಸೆಸ್ ಸಂಘದ ರಾಷ್ಟ್ರಗೀತೆಯಂತಿರುವ “ನಮಸ್ತೆ ಸದಾ ವತ್ಸಲೆ” ಹಾಡಿಗೆ ಧ್ವನಿಗೂಡಿಸಿದ್ದು ವಿಡಿಯೋ ಆಗಿ ಹರಿದಾಡುತ್ತಿದೆ. ಇದೆಲ್ಲವನ್ನೂ ಚಿತ್ರೀಕರಣ ಮಾಡುತ್ತಿದ್ದ ವಿದ್ಯಾರ್ಥಿಯ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿ ಬೆದರಿಕೆಯನ್ನೂ ಹಾಕಲಾಗಿದೆ. “ಸರಕಾರಕ್ಕೂ ಸಚಿವರಿಗೂ ಹೆದರುವ ಅವಶ್ಯಕತೆಯಿಲ್ಲ” ಎಂದು ಸಭೆಯಲ್ಲಿ ದುರಹಂಕಾರದ ಮಾತನಾಡಿದವರು ವಿಡಿಯೋ ಮಾಡುವ ವಿದ್ಯಾರ್ಥಿಗೆ ಹೆದರಿ ಬೆದರಿಸಿದ್ದು ಅವರ ಹೇಡಿತನಕ್ಕೆ ಸಾಕ್ಷಿಯಾಗಿದೆ. 

ಇದೇನು ಮೊದಲನೇ ಬಾರಿ ಏನಲ್ಲ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅತಿಥಿ ಗೃಹ

ಹಿಂದೆಯೂ ಇದೇ ವಿವಿ ಯಲ್ಲಿ ಆರೆಸ್ಸೆಸ್ ಸಂಘದ ಚಟುವಟಿಕೆಗಳು ನಡೆದಿದ್ದವು. ಇದನ್ನು ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳು ವಿರೋಧಿಸಿ ವಿವಿ ಎದುರು ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದವು. ಈಗ ಮತ್ತೆ ಈ ಹಿಂದುತ್ವವಾದಿಗಳು ಕೇಂದ್ರೀಯ ವಿದ್ಯಾಲಯವನ್ನು ಕೇಂದ್ರಿಕರಿಸಿ ತಮ್ಮ ಸಂಘಿ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಯೋಜನೆ ರೂಪಿಸುತ್ತಿವೆ. ಶೈಕ್ಷಣಿಕ ಕ್ಷೇತ್ರಗಳಲ್ಲಿ ಇಂತಹ ಮತಾಂಧ ಚಟುವಟಿಕೆಗಳು ನಡೆಯುವುದನ್ನು ನಿರ್ಬಂಧಿಸಲೇ ಬೇಕಿದೆ. ಶಾಲೆಗಳಿಗೆ ಸರಕಾರ ಹೊರಡಿಸಿದ ಆದೇಶವನ್ನು ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಿಗೂ ಹಾಗೂ ವಿವಿ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೂ ಹೊರಡಿಸ ಬೇಕಿದೆ. ಶೈಕ್ಷಣಿಕ ಆವರಣಗಳಲ್ಲಿ ಶಿಕ್ಷಣೇತರ ಚಟುವಟಿಕೆಗಳನ್ನು ಕಡ್ಡಾಯವಾಗಿ ಸರಕಾರ ನಿರ್ಬಂಧಿಸ ಬೇಕಿದೆ. ಉಲ್ಲಂಘಿಸುವ ಶಾಲೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಮುಖ್ಯಸ್ಥರನ್ನು ಕೂಡಲೇ ಅಮಾನತ್ತು ಮಾಡಬೇಕಿದೆ.

ಯೂಟರ್ನ್ ಸರಕಾರ

ಆದರೆ ಯೂಟರ್ನ್ ಸರಕಾರ ಎಂದು ಹೆಸರಾದ ಕಾಂಗ್ರೆಸ್ ಸರಕಾರದಿಂದ ಇದೆಲ್ಲವೂ ಸಾಧ್ಯವಾ? ಆದೇಶ ಹೊರಡಿಸುತ್ತಾರೆ ನಂತರ ಪ್ರತಿರೋಧ ಬಂದರೆ ಹಿಂಪಡೆಯುತ್ತಾರೆ ಎಂಬುದು ಸಿ ಎಂ ಸಿದ್ದರಾಮಯ್ಯನವರ ಮೇಲಿನ ಗುರುತರ ಆರೋಪವಾಗಿದೆ. ಕನ್ನಡ ನಾಡಿನ ಉದ್ಯಮಗಳಲ್ಲಿ ಕನ್ನಡಿಗರಿಗೆ 100% ಉದ್ಯೋಗ ಕೊಡಬೇಕೆಂಬ ಸಚಿವ ಸಂಪುಟದ ನಿರ್ಣಯವನ್ನು ಉದ್ಯಮಿಗಳ ವಿರೋಧಕ್ಕೆ ಹೆದರಿ ಅಮಾನತ್ತಿನಲ್ಲಿಟ್ಟಿರುವುದೇ ಯೂಟರ್ನ್ ರಾಜಕೀಯಕ್ಕೆ ಲೇಟೆಸ್ಟ್ ಸಾಕ್ಷಿಯಾಗಿದೆ. ಅಧಿವೇಶನದಲ್ಲಿ ಹಗರಣಗಳ ಬೀಸೋ ದೊಣ್ಣೆಗಳಿಂದ ತಪ್ಪಿಸಿಕೊಳ್ಳಲು ಈ ‘ಶೈಕ್ಷಣಿಕೇತರ ಚಟುವಟಿಕೆಗಳನ್ನು ಶಾಲೆಗಳಲ್ಲಿ ನಿರ್ಬಂಧಿಸುವ’ ಆದೇಶವನ್ನು ಸರಕಾರ ಹೊರಡಿಸಿರಬಹುದಾದರೂ ಯಾವುದೇ ಒತ್ತಡ ವಿರೋಧಗಳಿಗೆ ಹೆದರದೇ ರಾಜ್ಯಾದ್ಯಂತ  ಕಡ್ಡಾಯವಾಗಿ ಈ ಆದೇಶವನ್ನು ಜಾರಿಗೆ ತಂದು ತಮ್ಮದು ಯೂಟರ್ನ್ ಸರಕಾರ ಅಲ್ಲಾ ಎಂಬುದನ್ನು ಮುಖ್ಯಮಂತ್ರಿಗಳು ಸಾಬೀತು ಪಡಿಸಬೇಕಿದೆ. ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೂ ಈ ಆದೇಶವನ್ನು ಜಾರಿ ಮಾಡಬೇಕಿದೆ. ಇಲ್ಲದೇ ಹೋದರೆ ಈ ಆರೆಸ್ಸೆಸ್ಸಿಗರು  ವಿಶ್ವವಿದ್ಯಾಲಯಗಳನ್ನೇ ತಮ್ಮ ಕೇಂದ್ರಗಳನ್ನಾಗಿ ಮಾಡಿಕೊಂಡು ಪ್ರತಿ ಕಾಲೇಜನ್ನು ಸಂಘದ ಶಾಖೆಗಳನ್ನಾಗಿ ಮಾಡಿಕೊಳ್ಳುವ ಅಪಾಯಕಾರಿ ಸಾಧ್ಯತೆಗಳಿವೆ. ಕನಿಷ್ಠ ಶೈಕ್ಷಣಿಕ ಕ್ಷೇತ್ರವನ್ನಾದರೂ ಧಾರ್ಮಿಕ ಆಚರಣೆಗಳಿಂದ ಹಾಗೂ ಹಿಂದುತ್ವವಾದಿ ಸಂಘಟನೆಗಳ ಚಟುವಟಿಕೆಗಳಿಂದ ಮುಕ್ತವಾಗಿಸಬೇಕು ಎಂದು ಎಲ್ಲಾ ಪ್ರಗತಿಪರ ಸಂಘಟನೆಗಳು ಒಂದಾಗಿ ಸರಕಾರವನ್ನು ಆಗ್ರಹಿಸ ಬೇಕಿದೆ. ವಿದ್ಯಾ ಕೇಂದ್ರಗಳನ್ನು  ಧಾರ್ಮಿಕ ಕೇಂದ್ರಗಳನ್ನಾಗಿಸುವುದನ್ನು ಶತಾಯ ಗತಾಯ ತಡೆಯಲೇ ಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article