Saturday, July 27, 2024

ಮತ್ತೆ ಪಲ್ಟಿ ಹೊಡೆದ ನಿತೀಶ್ ಕುಮಾರ್: ಇಂದು ರಾಜೀನಾಮೆ, ಭಾನುವಾರ ಮತ್ತೆ ಪ್ರಮಾಣ

Most read

ಪಲ್ಟಿ ಕುಮಾರ್ ಎಂದೇ ಹೆಸರಾಗಿರುವ  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಪಲ್ಟಿ ಹೊಡೆದಿದ್ದಾರೆ. ಮಹಾಘಟಬಂಧನವನ್ನು ತೊರೆದು NDA ತೆಕ್ಕೆಗೆ ಮರಳುತ್ತಿರುವ ನಿತೀಶ್ ಕುಮಾರ್ ಇಂದು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಭಾನುವಾರವೇ ಮತ್ತೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು NDTV ವರದಿ ಮಾಡಿದೆ. ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರೆ, ನಿತೀಶ್ ಕುಮಾರ್ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಂತಾಗುತ್ತದೆ.

ಪದೇಪದೇ ಜೊತೆಗಾರರನ್ನು ಬದಲಾಯಿಸುವ ನಿತೀಶ್ ಕುಮಾರ್, ಬಿಜೆಪಿ ಜೊತೆಗೊಂದಷ್ಟು ದಿನ, ಆರ್ ಜೆಡಿ-ಕಾಂಗ್ರೆಸ್ ಜೊತೆಗೆ ಒಂದಷ್ಟು ದಿನ ಸರ್ಕಾರ ರಚಿಸುವ ಮೂಲಕ ಮುಖ್ಯಮಂತ್ರಿಯಾಗಿ ಉಳಿದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್ ಜೆಡಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದಿದ್ದರೂ ನಿತೀಶ್ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆಯಾಗಿಲ್ಲ.

ಪಶ್ಚಿಮ ಬಂಗಾಳದಲ್ಲಿ TMC ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೇ INDIA ಮೈತ್ರಿಕೂಟದ ಪ್ರಮುಖ ಪಕ್ಷ ಜೆಡಿಯು ಈಗ ಹೊರಗೆ ಹೋಗುತ್ತಿರುವುದು ಬಿಜೆಪಿ ವಿರೋಧಿ ಒಕ್ಕೂಟಕ್ಕೆ ದೊಡ್ಡ ಆಘಾತ ತಂದಿದೆ.

ಕಳೆದ ಹಲವು ದಿನಗಳಿಂದ ಬಿಹಾರದಲ್ಲಿ ನಡೆಯುತ್ತಿರುವ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗಳಲ್ಲಿ ಜೆಡಿಯು ಎಂದಿನಂತೆ ತನ್ನ ರಾಜಕೀಯ ಸಂಗಾತಿಯನ್ನು ಬದಲಾಯಿಸಿದೆ. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ತಮ್ಮ ಗೋವಾ ಪ್ರವಾಸವನ್ನು ರದ್ದುಪಡಿಸಿ ಪಾಟ್ನಾದಲ್ಲೇ ಉಳಿದಿದ್ದಾರೆ. ನಿತೀಶ್ ಕುಮಾರ್ ತಮ್ಮ ಪಕ್ಷದ ಎಲ್ಲ ಶಾಸಕರು ಪಾಟ್ನಾದಲ್ಲಿ ಇರುವಂತೆ ಸೂಚಿಸಿದ್ದಾರೆ. ಮಹಾಘಟಬಂಧನದ ಪ್ರಮುಖ ಭಾಗವಾಗಿರುವ ಲಾಲೂ ಯಾದವ್ ಅವರ ಆರ್ ಜೆಡಿ ಕ್ಯಾಂಪ್ ನಲ್ಲೂ ಬಿರುಸಿನ ಚಟುವಟಿಕೆಗಳು ಕಾಣಿಸುತ್ತಿದ್ದು, ಇಂದು ಪಕ್ಷದ ಪ್ರಮುಖ ನಾಯಕರ ಸಭೆ ನಡೆಯುತ್ತಿದೆ.

INDIA ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮನ್ನು ಘೋಷಿಸಬೇಕು ಎಂದು ಜೆಡಿಯು ಸರ್ವೋಚ್ಛ ನಾಯಕ ನಿತೀಶ್ ಕುಮಾರ್ ಬಯಸಿದ್ದರು. ಆದರೆ TMC ನಾಯಕಿ ಮಮತಾ ಬ್ಯಾನರ್ಜಿ ಮತ್ತು AAP ನಾಯಕ ಅರವಿಂದ ಕೇಜ್ರಿವಾಲ್ ಇದಕ್ಕೆ ತಣ್ಣೀರೆರಚಿ, ಮಲ್ಲಿಕಾರ್ಜುನ ಖರ್ಗೆಯವರ ನಾಯಕತ್ವಕ್ಕೆ ಜೈ ಎಂದಿದ್ದರು. ಇದರಿಂದಾಗಿ ನಿತೀಶ್ ಕುಮಾರ್ ವ್ಯಗ್ರರಾಗಿದ್ದರು. INDIA ಮೈತ್ರಿಕೂಟದ ನಾಯಕತ್ವಕ್ಕೆ ತಮ್ಮ ಹೆಸರನ್ನು ಮುಂದೆ ತರಲು ವಿಫಲರಾದ ಜೆಡಿಯು ಬಿಹಾರ ಘಟಕದ ಅಧ್ಯಕ್ಷ ಲಲನ್ ಸಿಂಗ್ ಅವರ ಮೇಲೆ ಕೋಪಗೊಂಡು ಅವರನ್ನು ಸ್ಥಾನದಿಂದ ವಜಾಗೊಳಿಸಿ ತಾವೇ ಅಧ್ಯಕ್ಷ ಸ್ಥಾನಕ್ಕೆ ಮರಳಿದ್ದರು.

ಇದೆಲ್ಲ ಬೆಳವಣಿಗಳ ನಡುವೆ, ನಿತೀಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಕುಟುಂಬ ರಾಜಕಾರಣದ ಕುರಿತು ಟೀಕೆ ಮಾಡಿದ್ದು ಆರ್ ಜೆಡಿ ನಾಯಕರನ್ನು ಕೆರಳಿಸಿತ್ತು. ಆರ್ ಜೆಡಿ ನಾಯಕಿ, ಲಾಲೂ ಪುತ್ರಿ ರೋಹಿಣಿ ಆಚಾರ್ಯ X ನಲ್ಲಿ ಹಲವು ಪೋಸ್ಟ್ ಗಳನ್ನು ಬರೆದು ನಿತೀಶ್ ಕುಮಾರ್ ಅವರಿಗೆ ಉತ್ತರ ನೀಡಿದ್ದರು. ವಿವಾದ ದೊಡ್ಡದಾಗುತ್ತಿದ್ದಂತೆ ತಮ್ಮ ಪೋಸ್ಟ್ ಗಳನ್ನು ರೋಹಿಣಿ ಅಳಿಸಿಹಾಕಿದ್ದರು.

ಇದೆಲ್ಲದರ ನಡುವೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಬಿಹಾರ ಪ್ರವೇಶಿಸಲಿದ್ದು, ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನಿತೀಶ್ ಅವರನ್ನು ಕೋರಲಾಗಿತ್ತು. ಆದರೆ ಜೆಡಿಯು ಕಡೆಯಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯ ವ್ಯಕ್ತವಾಗಲಿಲ್ಲ. ಬಿಹಾರದ ಹಿರಿಯ ಸಮಾಜವಾದಿ ನಾಯಕ, ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿದ್ದು ಕೂಡ ನಿತೀಶ್ ಅವರ ಮಹಾಪಲ್ಲಟಕ್ಕೆ ಒಂದು ಸಮರ್ಥನೆಯಾಗಿ ಕಾಣಿಸುತ್ತಿದೆ.

More articles

Latest article