ಸೌಜನ್ಯ ನೆನಪು |ನಿರ್ಭಯಳಿಗೆ ಸಿಕ್ಕ ನ್ಯಾಯ ಸೌಜನ್ಯಳಿಗೇಕಿಲ್ಲ?

Most read

ಇಂದು ಸೌಜನ್ಯ ಬದುಕಿರುತ್ತಿದ್ದರೆ 29 ವರ್ಷ ತುಂಬಿ 30ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಆದರೆ, ಕಾಮುಕರ ಪೈಶಾಚಿಕ ಧಾಳಿಗೆ ತುತ್ತಾಗಿ ದಾರುಣ ಅಂತ್ಯ ಕಂಡು ಹದಿಮೂರು ವರ್ಷಗಳು ಸಂದರೂ ಅಪರಾಧಿಗಳ ಪತ್ತೆಯಾಗಿಲ್ಲ.ಧರ್ಮಕ್ಕೆ ರಾಜಕಾರಣ ಬೆರೆತಾಗ, ಹಣ ಮತ್ತು ಅಧಿಕಾರದ ಅಮಲು ಅತ್ಯಾಚಾರಿಗಳು ಮತ್ತು ಅವರ ರಕ್ಷಕರನ್ನು ಕುಣಿಸತೊಡಗಿದಾಗ ನ್ಯಾಯದೇವತೆ ಧರಾಶಾಹಿಯಾಗುತ್ತಾಳೆ ಎನ್ನುವುದಕ್ಕೆ ಸೌಜನ್ಯಾ ಪ್ರಕರಣ ಒಂದೊಳ್ಳೆಯ ಉದಾಹರಣೆ. ಈ ಹೊತ್ತು ಬರಹಗಾರರೂ ಕೃಷಿಕರೂ ಆಗಿರುವ ಉಷಾ ಕಟ್ಟೆಮನೆಯವರು ಅಮ್ಮನ ಹೃದಯದಿಂದ ಸೌಜನ್ಯಾಳನ್ನು ಸ್ಮರಿಸಿದ್ದಾರೆ.

ಇಂದು ಅಕ್ಟೋಬರ್ 18 . ಸೌಜನ್ಯ ಹುಟ್ಟಿದ ದಿನ.

ಅವಳಿಂದು ಬದುಕಿರುತ್ತಿದ್ದರೆ 29 ವರ್ಷ ತುಂಬಿ 30ನೇ ವರ್ಷಕ್ಕೆ ಕಾಲಿಡುತ್ತಿದ್ದಳು.

30 ವರ್ಷ ಅಂದರೆ ಪ್ರಬುದ್ಧತೆಯ ಹಂತ. ಒಂದು ಹೆಣ್ಣು ತನ್ನ ಬದುಕಿನ ನಿರ್ಣಾಯಕ ಘಟ್ಟದಲ್ಲಿ ನಿಂತಿರಬಹುದಾದ ವರ್ಷ.

ಎಲ್ಲವೂ ಸರಿಯಾಗಿದ್ದಿದ್ದರೆ ಈ ಹೊತ್ತಿಗೆ ಅವಳು ಹೆತ್ತವರ ಆಶೆಯಂತೆ ಮದುವೆಯಾಗಿರುತ್ತಿದ್ದಳು. ಅವಳ ಮಡಿಲಲ್ಲಿಒಂದು ಮಗುವಿರುತ್ತಿತ್ತು. ಅವಳಮ್ಮ  ಕುಸುಮಾವತಿ ಆ ಮೊಮ್ಮಗುವನ್ನು ಕಾಲಮೇಲೆ ತೂಗಿಸಿಕೊಂಡು ” ಕಾಲಾಡು ಕಪ್ಪೆ ಕಾಲಾಡು ನೀರಿನ ಮೇಲೆ ತೇಲಾಡು ’ ಎಂದು ಶಿಶುಗೀತೆ ಹಾಡುತ್ತಿದ್ದಳು. ಇಲ್ಲವೇ ತನ್ನಿಚ್ಚೆಯ ವಿದ್ಯಾಭ್ಯಾಸ ಪಡೆದು ಉದ್ಯೋಗವನ್ನು ಹೊಂದಿ ಸ್ವತಂತ್ರ ಬದುಕುರೂಪಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡಬಹುದಾದ ಕಾಲಘಟ್ಟದಲ್ಲಿರುತ್ತಿದ್ದಳು..ಆದರೆ ಏನಾಗಿ ಹೋಯ್ತು?

ಅದು 2012 ರ ಅಕ್ಟೋಬರ್ 9 .

ಸೌಜನ್ಯ, ತನ್ನ ಹದಿನೆಂಟನೆಯ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಾಗಿದ್ದ ಒಂದುವಾರದ ಮುನ್ನ ಕಾಮುಕರ ಪೈಶಾಚಿಕ ಧಾಳಿಗೆ ತುತ್ತಾಗಿ ದಾರುಣ ಅಂತ್ಯ ಕಂಡದಿನ.

ಇದಾಗಿ ಹದಿಮೂರು ವರ್ಷಗಳು ಸಂದು ಹೋಗಿವೆ. ಈ ನಡುವೆ ಅವಳ ಜನ್ಮದಾತ ಚಂದಪ್ಪ ಗೌಡರು ಇದೇ ಕೊರಗಿನೊಂದಿಗೆ ಇಹಲೋಕ ಯಾತ್ರೆ ಮುಗಿಸಿದರು. ಅವಳಮ್ಮ ಕುಸುಮಾವತಿ, ಅವಳ ಒಡಹುಟ್ಟಿದವರು ಅವಳ ಬರ್ಬರ ಹತ್ಯೆಗೆ ಕಾರಣರಾದವರ ಪತ್ತೆಗಾಗಿ ಅಂದಿನಿಂದ ಇಂದಿನವರೆಗೂ ಹೋರಾಡುತ್ತಲೇಇದ್ದಾರೆ. ನಾಡಿನ ಅನೇಕ ಜೀವಪರ ಮನಸುಗಳು ಅವರ ಜತೆಗೆ ನಿಂತಿವೆ. ಅದರೆನ್ಯಾಯದ ಹಾದಿ ತೆರೆಯಿತೇ? ಸಧ್ಯಕ್ಕಂತೂ ಇಲ್ಲ. ಕಾರಣ ಸ್ಪಷ್ಟ; ಕೃತ್ಯ ಎಸಗಿದವರ ಹಿಂದೆ ಹಣ ಬಲವಿದೆ. ಭುಜ ಬಲವಿದೆ. ಪ್ರಭುತ್ವದ ಅಭಯ ಹಸ್ತವಿದೆ. ಹಾಗಾಗಿ ಸೌಜನ್ಯಳ ಆತ್ಮ ಇವತ್ತಿಗೂ ಮೋಕ್ಷವಿಲ್ಲದೆ ಅಂಡಲೆಯುತ್ತಿದೆ. ಯಾವಯಾವುದೋ ರೂಪದಲ್ಲಿ ತಪ್ಪಿತಸ್ಥರನ್ನೆಲ್ಲಾ ಕಾಡುತ್ತಿದೆ.

ಗಮನಿಸಿ, ಅದೇ ವರ್ಷ2012ರ ದಶಂಬರ 19ರಂದು ದೆಹಲಿಯಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ನಿರ್ಭಯಎಂಬ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿರುವ ಬಸ್ ನಲ್ಲಿ ಅತ್ಯಂತ ದಾರುಣವಾದ ರೀತಿಯಲ್ಲಿ ಲೈಂಗಿಕ ಅತ್ಯಾಚಾರ ಆಗುತ್ತದೆ.. ರಾಷ್ಟ್ರ ರಾಜಧಾನಿಯಲ್ಲಿ ಇಂತಹದೊಂದು ಬರ್ಬರ ಕೃತ್ಯ ನಡೆದಾಗ ಇಡೀ ದೇಶ ಒಂದಾಗಿ ಇದನ್ನು ಪ್ರತಿಭಟಿಸುತ್ತದೆ. ಯುವ ಸಮೂಹ ಬೀದಿಗಿಳಿದು ಹೋರಾಟ ಮಾಡುತ್ತದೆ. ಈ ಹೋರಾಟ ಎಷ್ಟು ಫಲಪ್ರದ ಆಯ್ತೆಂದರೆ ಕೇವಲ ಐದುತಿಂಗಳ ಒಳಗಾಗಿ ಭಾರತೀಯ ಕ್ರಿಮಿನಲ್ ಲಾ ಗೆ ತಿದ್ದುಪಡಿ ತರಲಾಯ್ತು. ತಂದು ಲೈಂಗಿಕ ಅಪರಾಧಗಳಿಗೆಂದೇ ನಿರ್ಭಯ ಅಕ್ಟ್ ಎಂಬ ಕಠಿಣ ಕಾನೂನು ರೂಪಿಸಲಾಯ್ತು. ಇಷ್ಟು ತ್ವರಿತವಾಗಿ ನಮ್ಮ ಆಡಳಿತ ಯಂತ್ರ ಕ್ರಿಯಾಶೀಲವಾಗಿರುವಾಗ ಸೌಜನ್ಯ ಪ್ರಕರಣದಲ್ಲಿ ಯಾಕೆ ಸಾಧ್ಯವಾಗಿಲ್ಲ. ?

ಕಾರಣ ಸ್ಪಷ್ಟವಿದೆ;

ಅಲ್ಲಿ ಅತ್ಯಾಚಾರ ನಡೆಸಿದವರು ಜನಸಾಮಾನ್ಯರು.. ಅಬ್ಬೆಪಾರಿಗಳು, ಗತಿಗೋತ್ರ ಇಲ್ಲದವರು. ಅವರ ಹಿಂದೆ ಯಾವ ಬಲಾಢ್ಯರೂ ಇರಲಿಲ್ಲ. ಅದಲ್ಲದೆ ಅದುನಡೆದಿರುವುದು ರಾಷ್ಟ್ರ ರಾಜಧಾನಿಯಲ್ಲಿ. ಶಕ್ತ ರಾಜಕಾರಣದ ಅಧಿಕಾರ ಕೇಂದ್ರ ಸ್ಥಾನದ ಮಗ್ಗುಲಲ್ಲಿ. ಹಾಗಾಗಿ ಜನಾಂದೋಲನ ಯಶಸ್ವಿಯಾಯ್ತು.ಆದರೆ ಸೌಜನ್ಯ ಪ್ರಕರಣ ನಡೆದಿರುವುದು ದೇಶದ ಕಟ್ಟಕಡೆಯ ಹಳ್ಳಿಗಾಡಿನಲ್ಲಿ. ಆದರೆ ಇಲ್ಲಿಯೂ ಬಹುದೊಡ್ಡ ಮಟ್ಟದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯಿತು.ಆದರೆ ಅದು ನಿರೀಕ್ಷಿತ ಮಟ್ಟದ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ.ಯಾಕೆಂದರೆ ಸೌಜನ್ಯ ಪ್ರಕರಣ ನಡೆದದ್ದು  ಡೆಲ್ಲಿ ರಾಜಕಾರಣವನ್ನೇ ನಿಯಂತ್ರಿಸಬಹುದಾಗಿದ್ದ ಧಾರ್ಮಿಕ ಕೇಂದ್ರವೊಂದರಲ್ಲಿ. ಎಲ್ಲಾ ಅಧಿಕಾರಸ್ಥ ರಾಜಕಾರಣಿಗಳೂ, ಉದ್ಯಮಪತಿಗಳೂ ದೀರ್ಘದಂಡ ನಮಸ್ಕಾರ ಮಾಡುವುದು ಈ ಕೇಂದ್ರದ ಯಜಮಾನನ ಪಾದಕ್ಕೇ.

ಧರ್ಮ ರಾಜಕಾರಣದಲ್ಲಿ ಹೆಣ್ಣೊಬ್ಬಳು ದೇವರ ಸ್ಥಾನ ಅಲಂಕರಿಸಬಹುದು. ಆದರೆ ಮನುಷ್ಯಳಾಗಬಾರದು. ಅವಳನ್ನು ದೇವರಾಗಿಸಿ ಶಕ್ತಿಪೀಠದಲ್ಲಿ ಕುಳ್ಳಿರಿಸಿ ಯೋನಿ ಪೂಜೆ ಮಾಡುತ್ತಾರೆ. ಮನುಷ್ಯಳಾಗದ  ಅದೇ ಯೋನಿಗೆ ಮಣ್ಣು ತುಂಬಿಸಿ, ಕಬ್ಬಿಣದ ಸಲಾಕೆಯನ್ನು ತೂರಿಸಿ ವಿಕೃತಾನಂದ ಅನುಭವಿಸುತ್ತಾರೆ. ಎಂತಹ ವೈರುಧ್ಯದ ಸಂಸ್ಕೃತಿಯಿದು!

ಇನ್ನೂ ಮಾನವೀಯತೆ ಉಳಿಸಿಕೊಂಡ ಒಂದಷ್ಟು ಜನ ಈ ವಿಕೃತಿಯ  ವಿರುದ್ಧ ಪ್ರತಿಭಟನೆಗೆ ಇಳಿದಾಗ ಅವರ ಮೇಲೆ ಕಾನೂನು ಕಟ್ಟಳೆಗಳ ಮೂಲಕ ನಿಯಂತ್ರಣಕ್ಕೆ ಮುಂದಾಗುತ್ತಾರೆ. ಪ್ರಜಾಪ್ರಭುತ್ವವನ್ನು ಸದಾ ಜೀವಂತವಾಗಿ ಇಡಬೇಕಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಪತ್ರಿಕಾರಂಗಗಳು ಒಟ್ಟಾಗಿ ಸೇರಿ ನಾಗರಿಕ ಹಕ್ಕುಗಳನ್ನು ದಮನ ಮಾಡುತ್ತವೆ, ದೃಶ್ಯ ಮತ್ತು ಸಾಮಾಜಿಕ ಜಾಲತಾಣಗಳು ವೈಯಕ್ತಿಕ ತೋಜೋವಧೆಗೆ ಇಳಿದು ಬಿಡುತ್ತವೆ. ಸೌಜನ್ಯ ತಾಯಿ ಕುಸುಮಾವತಿ ಮೇಲಾಗುತ್ತಿರುವ ಚಾರಿತ್ರ್ಯವಧೆಗೆ ದುರ್ಬಲ ಮನಸ್ಸಿನವರಾದರೆ ಯಾವತ್ತೋ ಈ ಲೋಕಕ್ಕೆ ವಿದಾಯ ಹೇಳುತ್ತಿದ್ದರು. ಸೌಜನ್ಯ ಶಕ್ತಿಯೇ ಆ ತಾಯಿಯನ್ನು ಕಾಪಿಟ್ಟು ಕಾಯುತ್ತಿದೆ.

ಧರ್ಮಕ್ಕೆ ರಾಜಕಾರಣ ಬೆರೆತಾಗ, ಹಣ ಮತ್ತು ಅಧಿಕಾರದ ಅಮಲು ಅತ್ಯಾಚಾರಿಗಳು ಮತ್ತು ಅವರ ರಕ್ಷಕರನ್ನು ಕುಣಿಸತೊಡಗಿದಾಗ ಇದೆಲ್ಲಾ ಸಾಧ್ಯವಾಗುತ್ತದೆ. ನ್ಯಾಯದೇವತೆ ಧರಾಶಾಹಿಯಾಗುತ್ತಾಳೆ.

ಆದರೆ ಸೌಜನ್ಯ ಹೋರಾಟಗಾರರು ಸಿಸಿಫಸ್ ನ ವಂಶಸ್ಥರು. ಒಂದಲ್ಲಾ ಒಂದು ದಿನ, ಕಡಿದಾದ ಇಳಿಜಾರು ಬೆಟ್ಟದ ತುದಿಯ ಮೇಲೆ ನ್ಯಾಯದ ಬಂಡೆಯನ್ನು ತಂದು ನಿಲ್ಲಿಸಿಯೇ ನಿಲ್ಲಿಸುತ್ತೇವೆ ಎಂಬ ಅಮಿತ ಉತ್ಸಾಹದಲ್ಲಿದ್ದಾರೆ. ಅವರೆಲ್ಲರನ್ನೂ ಸೌಜನ್ಯ ಶಕ್ತಿ ಕಾಪಾಡಲಿ!

ಉಷಾ ಕಟ್ಟೆಮನೆ, ಬಂಡಿಹೊಳೆ

ಬರಹಗಾರರು ಮತ್ತು  ಕೃಷಿಕರು

ಇದನ್ನೂ ಓದಿ- ಮಹಿಳೆ- ಅಪಹರಣ, ನಾಪತ್ತೆ- ಮುಗಿಯದ ವ್ಯಥೆ

More articles

Latest article