ನವದೆಹಲಿ : ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಜಾಕೋಬ್ ಬೆಥೆಲ್ ಅವರನ್ನು ಕಳೆದುಕೊಂಡು, ಇನ್ನೂ 13.3 ಓವರ್‌ಗಳು ಬಾಕಿ ಇರುವಾಗಲೇ 76 ರನ್ ಗಳಿಸಿ,9 ವಿಕೆಟ್‌ಗಳಿಂದ ಪಂದ್ಯ ಗೆದ್ದುಕೊಂಡಿತು. ಈ ಮೂಲಕ ಹಾಲಿ ಚಾಂಪಿಯನ್‌ಗಳು ಕ್ಯಾಪಿಟಲ್ಸ್ ತಂಡವನ್ನು ಅವರದ್ದೇ ನೆಲದಲ್ಲಿಯೇ ಸೋಲಿಸಿದರು.
ಡಿಸಿ ತಂಡವು ತನ್ನ ಕೊನೆಯ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತಿತ್ತು. ಈ ಪಂದ್ಯ ಗೆಲ್ಲಲೇ ಬೇಕಾಗಿತ್ತು. ಇತ್ತ ಆರ್‌ಸಿಬಿ ತಂಡ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ರಜತ್ ಪಾಟಿದಾರ್ ನೇತೃತ್ವದ ತಂಡವು ತನ್ನ ಮೊದಲ ಏಳು ಪಂದ್ಯಗಳಲ್ಲಿ ಐದನ್ನು ಗೆದ್ದಿದೆ ಮತ್ತು ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ಸ್ಥಿರವಾದ ತಂಡಗಳಲ್ಲಿ ಒಂದಾಗಿ ಕಾಣುತ್ತಿದೆ.
ದೆಹಲಿಯ ಅರುಣ್ ಜೇಟ್ಲಿ ತವರು ಮೈದಾನದಲ್ಲೇ ದೆಹಲಿಯ ಪುತ್ರ ವಿರಾಟ್ ಕೊಹ್ಲಿ ಅಲ್ಲಿರುವ ಅಭಿಮಾನಿಗಳನ್ನು ರಂಜಿಸುವುದನ್ನು ಮರೆಯಲಿಲ್ಲ. ಕೊನೆಯ ಎರಡು ಬಾಲ್‌ಗಳಲ್ಲಿ ಎರಡು ಸಿಕ್ಸರ್ ಬಾರಿಸಿ ಪಂದ್ಯದ ಗೆಲುವಿಗೆ ಕಾರಣರಾದರು. 15 ಬಾಲ್‌ಗಳಿಗೆ 23 ರನ್ ಮಾಡಿದರು. ಇನ್ನೂ ಕರ್ನಾಟಕದ ಹುಡುಗರಾದ ಕೆ.ಎಲ್ ರಾಹುಲ್ 1 ರನ್‌ಗೆ ಔಟಾದರೆ, ದೇವದತ್ತ ಪಡಿಕ್ಕಲ್ 13 ಬಾಲ್‌ಗೆ 34 ರನ್ ಸಿಡಿಸಿದರು.
ಪವರ್‌ಪ್ಲೇನಲ್ಲಿ ಅತಿ ಕಡಿಮೆ ರನ್ : ಡೆಲ್ಲಿ ಕ್ಯಾಪಿಟಲ್ಸ್ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದ ತಂಡ ಎಂಬ ದಾಖಲೆ ಬರೆದಿದೆ. ಪವರ್‌ಪ್ಲೇನಲ್ಲಿ ಕೇವಲ 13 ರನ್ ಗಳಿಸಿದ ಡೆಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡವೊಂದು ಇಷ್ಟು ಕಡಿಮೆ ರನ್ ಗಳಿಸಿ ಪವರ್‌ಪ್ಲೇನಲ್ಲಿ ಐದು ವಿಕೆಟ್‌ಗಳಿಗಿಂತ ಹೆಚ್ಚು ಕಳೆದುಕೊಂಡಿರುವುದು ಇದೇ ಮೊದಲು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ತಂಡ ಡೆಕ್ಕನ್ ಚಾರ್ಜಸ್ ವಿರುದ್ಧ 29 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು.

