ನಾಗರೀಕ ಸಮಾಜ ಎಂದು ಹೆಮ್ಮೆಪಡುವ ಜನರ ನಡುವೆಯೇ ಅಸ್ತಿತ್ವದಲ್ಲಿರುವ ಅನಾಗರೀಕ ಪ್ರಪಂಚವೊಂದನ್ನು ಅನಾವರಣಗೊಳಿಸುವ ‘ಈ ಕೆಳಗಿನವರು’ ನಾಟಕ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಸಮಾಜದ ಮೇಲ್ ಸ್ತರದಲ್ಲಿದ್ದವರಿಗೆ ನಿಕೃಷ್ಟ ಲೋಕವೊಂದರ ದರ್ಶನ ಮಾಡಿಸುವ ಮೂಲಕ ವ್ಯವಸ್ಥೆಯ ಅವ್ಯವಸ್ಥೆಯನ್ನು ತೆರೆದಿಡುತ್ತದೆ. ಅನೇಕ ಸ್ಲಂಗಳನ್ನು ನೋಡಿದ್ದೇವೆ. ಕಡುಬಡವರ ಗಲ್ಲಿಗಳಲ್ಲಿ ಸುತ್ತಾಡಿದ್ದೇವೆ. ಬಡತನದ ಬಗ್ಗೆ ಭಾಷಣಗಳನ್ನು ಕೇಳಿದ್ದೇವೆ, ಮಾಧ್ಯಮಗಳಲ್ಲಿ ತಳ ಸಮುದಾಯದ ಬಗ್ಗೆ ವೀಕ್ಷಿಸಿದ್ದೇವೆ, ಆದರೆ ಮಾಡಲು ಕೆಲಸವಿಲ್ಲದೆ, ತಿನ್ನಲು ಕೂಳಿಲ್ಲದೆ, ಇರಲು ಸರಿಯಾದ ಸೂರಿಲ್ಲದೆ, ಉಡಲು ನೆಟ್ಟಗಿನ ಬಟ್ಟೆಗಳಿಲ್ಲದೇ, ಕನಿಷ್ಟ ಅಗತ್ಯಗಳೂ ಇಲ್ಲದೇ ಬದುಕುವ ಯಕಶ್ಚಿತ್ ಮನುಷ್ಯರ ದಿನನಿತ್ಯದ ಅನಾಥ ಬದುಕನ್ನು ನೇರವಾಗಿ ನೋಡಿ ಅನುಭವಿಸಬೇಕೆಂದಿದ್ದರೆ ‘ಈ ಕೆಳಗಿನವರು’ ನಾಟಕವನ್ನೊಮ್ಮೆ ನೋಡಲೇಬೇಕು’.
ರಾಷ್ಟ್ರೀಯ ನಾಟಕ ಶಾಲೆ ( NSD) ಬೆಂಗಳೂರು ಕೇಂದ್ರದ ರೆಪರ್ಟರಿ ವಿಭಾಗವು “ಈ ಕೆಳಗಿನವರು” ಎನ್ನುವ ನಾಟಕವನ್ನು ನಿರ್ಮಿಸಿದೆ. ಕಲಾಗ್ರಾಮದಲ್ಲಿರುವ ಎನ್ ಎಸ್ ಡಿ ಕ್ಯಾಂಪಸ್ಸಿನಲ್ಲಿ ಹೊಸದಾಗಿ ನಿರ್ಮಾಣಗೊಂಡ ರಂಗ ಮಂದಿರದಲ್ಲಿ ಮಾರ್ಚ್ 19 ರಂದು ಪ್ರದರ್ಶನಗೊಂಡು ನಾವರಿಯದ ಲೋಕವೊಂದನ್ನು ಅನಾವರಣಗೊಳಿಸಿತು. NSD ಬೆಂಗಳೂರು ಕೇಂದ್ರದ ನಿರ್ದೇಶಕಿಯಾಗಿರುವ ಶ್ರೀಮತಿ ವೀಣಾ ಶರ್ಮಾರವರು ಈ ನಾಟಕವನ್ನು ನಿರ್ದೇಶಿಸಿದ್ದು ಕರ್ನಾಟಕದ ಬೇರೆ ಬೇರೆ ಜಿಲ್ಲೆಯ ಆಯ್ದ ಕಲಾವಿದರುಗಳು ಅಭಿನಯಿಸಿದ್ದಾರೆ.

ಅಲ್ಲಿ ಹೆಪ್ಪುಗಟ್ಟುವಷ್ಟು ನೋವಿದೆ, ತಲ್ಲಣಗೊಳಿಸುವಷ್ಟು ವಿಷಾದವಿದೆ, ಸಾವಿಗೂ ಸ್ಪಂದಿಸದಷ್ಟು ನಿಷ್ಕರುಣೆ ಇದೆ. ನೈತಿಕ ಪ್ರಜ್ಞೆಯನ್ನೂ ಮೀರಿದ ಅನೈತಿಕ ಸಂಬಂಧವಿದೆ, ಸ್ವಾರ್ಥತನವಿದೆ, ಕಳ್ಳತನವಿದೆ, ವಂಚಕತನವಿದೆ, ಕೊಲೆಪಾತಕತನವಿದೆ, ಸೂಳೆಗಾರಿಕೆ ಇದೆ, ಮಿತಿಮೀರಿದ ಕುಡುಕತನವಿದೆ, ಅಳತೆಗೆ ಸಿಕ್ಕದ ಕೆಡುಕುತನವೂ ಇದೆ. ಇವೆಲ್ಲಕ್ಕೂ ಕಾರಣವಾದ ಘನಘೋರ ಬಡತನವಿದೆ. ದಾರಿದ್ರ್ಯಕ್ಕೆ ಪ್ರೇರಕವಾಗಿ ನಿರುದ್ಯೋಗ, ಅನಕ್ಷರತೆ ಇದೆ. ಇವೆಲ್ಲಾ ವಿಷಾದಗಳನ್ನು ಮರೆಸಲು ವಿನೋದವೂ ಇದೆ. ಇವೆಲ್ಲವೂ ಸೇರಿ ‘ಈ ಕೆಳಗಿನವರ’ ಲೋಕ ಸೃಷ್ಟಿಯಾಗಿದೆ. ನಾಳೆಯ ಬಗ್ಗೆ ಕನಿಷ್ಠ ಆಲೋಚನೆಯನ್ನೂ ಮಾಡದೇ, ಭೂತಕಾಲದ ಗಾಯಗಳನ್ನು ಕೆದಕಿಕೊಳ್ಳುತ್ತಾ ಅವಮಾನಕಾರಿ ವರ್ತಮಾನವನ್ನು ಹೇಗೋ ದೂಡುವ ಅಸಂಖ್ಯಾತ ಜನರಿರುವ ದೇಶಗಳ ದಟ್ಟದಾರಿದ್ರ್ಯದ ಪ್ರತೀಕವಾಗಿ ‘ಈ ಕೆಳಗಿನವರು’ ನಾಟಕ ಮೂಡಿಬಂದಿದೆ.
ರಶಿಯಾ ದೇಶದ ಮಹಾನ್ ಲೇಖಕ ಮ್ಯಾಕ್ಸಿಂ ಗಾರ್ಕಿ ‘ದಿ ಲೋವರ್ ಡೆಪ್ತ್’ ನಾಟಕವನ್ನು 19ನೇ ಶತಮಾನದಲ್ಲಿ ಬರೆದು ಆಗಿನ ರಶಿಯಾ ದೇಶದ ಸಾಮಾಜಿಕ ಕಟುವಾಸ್ತವಿಕತೆಯನ್ನು ತೆರೆದಿಟ್ಟರು. ಕಾಲ ದೇಶವನ್ನು ಮೀರಿದ ಈ ಕೃತಿ ಈಗಲೂ ಎಲ್ಲಾ ದೇಶಗಳ ಬರ್ಬರ ಬದುಕಿನ ಸಂಕೇತವಾಗಿದೆ. ನಾಗರೀಕ ಸಮಾಜದ ಅನಾಗರೀಕ ವ್ಯವಸ್ಥೆಗೆ ಪ್ರತೀಕವಾಗಿದೆ. ಗಾರ್ಕಿಯ ಈ ನಾಟಕವನ್ನು ಬಿ.ಟಿ.ದೇಸಾಯಿಯವರು ‘ಈ ಕೆಳಗಿನವರು’ ಎಂಬ ಹೆಸರಲ್ಲಿ ಕನ್ನಡಕ್ಕೆ ಸೊಗಸಾಗಿ ರೂಪಾಂತರಿಸಿದ್ದಾರೆ.
ಸಾಂಪ್ರದಾಯಿಕವಾದ ಯಾವುದೇ ಚೌಕಟ್ಟಿಲ್ಲದ ಈ ನಾಟಕಕ್ಕೆ ಹೇಳಿಕೊಳ್ಳುವಂತಹ ಕಥೆಯೂ ಇಲ್ಲ. ಒಂದು ಹಳೆಯ ಶಿಥಿಲಗೊಂಡ ನೆಲಮಾಳಿಗೆ (ಛತ್ರ)ಯಲ್ಲಿ ನಡೆಯುವ ಘಟನೆಗಳ ಸರಮಾಲೆಯನ್ನು ಜೋಡಿಸಿ ಇಡೀ ನಾಟಕವನ್ನು ಕಟ್ಟಲಾಗಿದೆ. ಅಲ್ಲಿ ಸಮಾಜದಲ್ಲಿ ನಿರ್ಲಕ್ಷಿತವಾದ ಜನರ ಗುಂಪೊಂದು ಮನುಷ್ಯರ ಹಾಗೆ ಮಾತನಾಡುತ್ತಿದ್ದರೂ ಪ್ರಾಣಿಗಳ ಹಾಗೆ ಬದುಕುತ್ತಿರುತ್ತವೆ. ಕಳ್ಳತನ ಮಾಡುವ ‘ವಾಸ್ಯ’ನಿಗೆ ಛತ್ರದ ಮಾಲೀಕ ಕೃಷ್ಟಪ್ಪನ ಹೆಂಡತಿ ವಾಸಕ್ಕನ ಜೊತೆಗೆ ಅನೈತಿಕ ಸಂಬಂದದ ಜೊತೆಗೆ ಆಕೆಯ ತಂಗಿ ರತ್ನಾಳ ಮೇಲೂ ಆಸೆ. ಆ ವಾಸಕ್ಕ ದೊಡ್ಡ ಗಯ್ಯಾಳಿಯಾಗಿದ್ದು ವಾಸ್ಯನನ್ನು ತನ್ನ ಗಂಡನ ಕೊಲೆಗೆ ಪ್ರಚೋದಿಸುತ್ತಾಳೆ. ವೇಶ್ಯೆ ಸುಂದರಿಗೆ ಕಾದಂಬರಿ ಓದುವ ಹುಚ್ಚು. ಮಾಡಲೂ ಏನೂ ಕೆಲಸವಿಲ್ಲದ ಇನ್ನೂ ಹಲವಾರು ಜನ ಆ ಛತ್ರದಲ್ಲಿ ದಿನಬಾಡಿಗೆಯ ಲೆಕ್ಕದಲ್ಲಿ ಬದುಕುತ್ತಿರುತ್ತಾರೆ. ಆಗ ಲಕ್ಕಜ್ಜ ಎನ್ನುವ ಅಲೆಮಾರಿ ಸಂತನೊಬ್ಬ ಬಂದು ತನ್ನ ಮಾರ್ಮಿಕ ಮಾತುಗಳಿಂದ ಎಲ್ಲರಲ್ಲೂ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡುತ್ತಾನೆ. ಕೊನೆಗೆ ರತ್ನಳನ್ನು ಕೃಷ್ಣಪ್ಪ ಮತ್ತು ವಾಸಕ್ಕ ಸೇರಿ ವಾಸ್ಯಾನ ಸಹವಾಸ ಬಿಡು ಎಂದು ಹೊಡೆಯುತ್ತಾರೆ. ರತ್ನಳನ್ನು ಉಳಿಸುವ ಪ್ರಯತ್ನದಲ್ಲಿ ವಾಸ್ಯನಿಂದ ಕೃಷ್ಣಪ್ಪ ಸಾಯುತ್ತಾನೆ. ವಾಸ್ಯ ಕೊಲೆ ಆರೋಪದಲ್ಲಿ ಜೈಲು ಪಾಲಾಗುತ್ತಾನೆ. ಲಕ್ಕಜ್ಜ ಛತ್ರ ತೊರೆಯುತ್ತಾನೆ. ನಾಟಕದ ಹುಚ್ಚಿರುವ ನಟ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಉಳಿದವರು ಸರಾಯಿ ಕುಡಿದು ಮೊದಲಿನ ಹಾಗೆಯೇ ಬದುಕುತ್ತಾರೆ. ಇಲ್ಲಿಗೆ ನಾಟಕವೇನೋ ಮುಗಿಯುತ್ತದೆ. ಆದರೆ ಪ್ರೇಕ್ಷಕರ ಮನಸ್ಸಲ್ಲಿ ಆಲೋಚನೆಗಳನ್ನು ಹುಟ್ಟುಹಾಕುತ್ತದೆ.
ಅನೈತಿಕತೆ, ಕಳ್ಳತನ, ಹಾದರ, ಕುಡಿತಗಳನ್ನೇ ವೈಭವೀಕರಿಸುವ ಇಡೀ ನಾಟಕ ಯಾವುದೇ ರೀತಿಯ ನೈತಿಕತೆಯನ್ನು ಪ್ರತಿಪಾದಿಸಲು ಹೋಗುವುದಿಲ್ಲ. ಅದು ಈ ನಾಟಕದ ಉದ್ದೇಶವೂ ಅಲ್ಲ. ಶೋಷಕ ವ್ಯವಸ್ಥೆ ಹುಟ್ಟುಹಾಕಿರುವ ಅತ್ಯಂತ ಶೋಷಿತ ಜನರ ಕಂಗಾಲು ಬದುಕನ್ನು ಕಟುವಾಸ್ತವಗಳ ಜೊತೆಗೆ ತೋರಿಸುವುದೇ ಈ ನಾಟಕದ ಉದ್ದೇಶವಾಗಿದೆ. ಮಾನವೀಯ ಸಂಬಂಧಗಳೇ ಇಲ್ಲದೆ ಪ್ರಾಣಿಗಳಂತೆ ಬದುಕುವ ಜನರ ಬದುಕು ಬವಣೆಗಳನ್ನು ಹಾಸ್ಯಮಯವಾಗಿ ತೋರಿಸುವ ಪ್ರಯತ್ನ ಈ ನಾಟಕದಲ್ಲಿದೆ. ಚಾರ್ಲಿ ಚಾಪ್ಲಿನ್ ಸಿನೆಮಾಗಳ ಮಾದರಿಯಲ್ಲಿ ನೊಂದವರ ಜೀವನವನ್ನು ವಿನೋದದ ಮೂಲಕ ಹೇಳುವ ನಿಟ್ಟಿನಲ್ಲಿ ನಾಟಕ ಯಶಸ್ವಿಯಾಗಿದೆಯಾದರೂ ಚಾಪ್ಲಿನ್ ಸಿನೆಮಾಗಳು ಅಂತಿಮವಾಗಿ ಮೂಡಿಸುವ ವಿಷಾದವನ್ನು ಹುಟ್ಟಿಸುವಲ್ಲಿ ‘ಈ ಕೆಳಗಿನವರು’ ವಿಫಲವಾಗಿದೆ. ಗಾರ್ಕಿ ಉದ್ದೇಶ ಹಾಸ್ಯ ಅಲ್ಲವೇ ಅಲ್ಲ, ಕಣ್ಣೆದುರೇ ದುರಂತ ಬದುಕನ್ನು ನೋಡುತ್ತಿದ್ದರೂ ಪ್ರೇಕ್ಷಕರಲ್ಲಿ ಯಾವುದೇ ರೀತಿಯ ವಿಷಾದವಾಗಲೀ, ಸಂಕಟವಾಗಲೀ ಹುಟ್ಟುವುದೇ ಇಲ್ಲ. ತಮ್ಮ ಅನಿಷ್ಟದ ಬದುಕನ್ನು ಪಾತ್ರಗಳು ಎಂಜಾಯ್ ಮಾಡಿರುವುದು, ಜೊತೆಗೆ ಪ್ರೇಕ್ಷಕರನ್ನೂ ನಕ್ಕು ನಲಿಯುವ ಕೆಲಸವನ್ನು ಪೈಪೋಟಿಯಲ್ಲಿ ಮಾಡಿರುವುದು ಗಾರ್ಕಿ ನಾಟಕದ ಮೂಲ ಉದ್ದೇಶಕ್ಕೆ ಅಪಚಾರ ಮಾಡಿದಂತಿದೆ.

ಈ ನಾಟಕದ ಸಶಕ್ತವಾದ ಪಾತ್ರ ಲಕ್ಕಜ್ಜನದು. ಇದು ನಿಜವಾಗಿಯೂ ಮ್ಯಾಕ್ಸಿಂ ಗಾರ್ಕಿಯೇ ಈ ಪಾತ್ರವಾಗಿದ್ದಾನೆನ್ನಿಸುತ್ತದೆ. ಆಕಸ್ಮಿಕವಾಗಿ ಬರುವ ಲಕ್ಕಜ್ಜ ಎಲ್ಲರಲ್ಲೂ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡುತ್ತಾನೆ. ಕ್ಷುಲ್ಲಕ ಜನರಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಾನೆ. ಏನೇ ಆದರೂ ಲಕ್ಕಜ್ಜನ ಶ್ರಮ ವ್ಯರ್ಥವಾಗುತ್ತದೆ. ಯಥಾಸ್ಥಿತಿಯನ್ನು ಪ್ರತಿಪಾದಿಸುವ ನಾಟಕ ನಿರಾಶಾವಾದವನ್ನೂ ಹೇಳುತ್ತದಾ? ಹೀಗೊಂದು ಸಂದೇಹ ಬಾರದೇ ಇರದು. ತನ್ನ ಕುಡಿತ ಕುಣಿತ ನಾಟಕದ ಗುಂಗಿನಲ್ಲಿ ಖುಷಿಯನ್ನು ಹುಡುಕುತ್ತಿದ್ದ ನಟನ ಬದುಕಲ್ಲಿ ಲಕ್ಕಜ್ಜ ಬಂದು ನಿಜ ದರ್ಶನ ಮಾಡಿಸುತ್ತಾನೆ. ಆದರೆ ಸತ್ಯದ ಅರಿವಾದಾಗ ಪರಿವರ್ತನೆಗೊಳ್ಳುವ ಬದಲು ಆ ಪಾತ್ರ ಆತ್ಮಹತ್ಯೆ ಮಾಡಿಕೊಂಡು ಪಲಾಯನವಾದಿಯಾಗುತ್ತದೆ. ಬೇರೆಲ್ಲಾ ಪಾತ್ರಗಳೂ ಕೂಡಾ ಯಾವುದೇ ಬದಲಾವಣೆಗೆ ಸಿದ್ಧರಾಗದೇ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳುತ್ತವೆ. ಬದಲಾವಣೆಯಾಗಲೀ ಆಶಾವಾದವಾಗಲೀ ನಾಟಕದ ಯಾವುದೇ ಪಾತ್ರಗಳಲ್ಲೂ ಕಂಡುಬರುವುದಿಲ್ಲ. ಪ್ರೇಕ್ಷಕರಿಗೂ ಕೂಡಾ ಒಂದು ಹಂತದಲ್ಲಿ “ಏನೇ ಮಾಡಿದರೂ ಇವರ ಹಣೆಬರಹ ಇಷ್ಟೇ ಬಿಡು ಬರೀ ಕುಡಿತ, ಹಾದರ, ವಂಚನೆ ಬಿಟ್ಟು ಇವರು ಬದಲಾಗಲು ಸಾಧ್ಯವೇ ಇಲ್ಲಾ” ಎಂದೆನಿಸಿಬಿಡುವ ಅಪಾಯವೇ ಹೆಚ್ಚಾಗಿದೆ.
ಬಹುತೇಕ ಹೊಸ ಯುವ ಕಲಾವಿದರನ್ನು ಆಯ್ದು ಒಂದು ತಿಂಗಳು ಪೂರ್ಣಾವಧಿ ತರಬೇತಿ ಕೊಟ್ಟು ನಿರಂತರ ತಾಲಿಂ ನಡೆಸಿದ್ದರ ಫಲ ನಾಟಕದಾದ್ಯಂತ ಒಡಮೂಡಿ ಬಂದಿದೆ. ಮಾತಿನ ವರಸೆ ಮತ್ತು ದೇಹಭಾಷೆಗಳನ್ನು ಕಲಾವಿದರು ಸಮರ್ಥವಾಗಿ ಬಳಸಿದ್ದಾರೆ. ಇಡೀ ನಾಟಕ ನಿಂತಿರುವುದೇ ಅಭಿನಯದ ಮೇಲೆ, ಅದರಲ್ಲೂ ಮಾತಿನ ಮೇಲೆ. ವೀಣಾ ಶರ್ಮಾರವರು ಹೊಸ ನಟರುಗಳ ಅಭಿನಯ ಪ್ರತಿಭೆಯನ್ನು ಸಮರ್ಥವಾಗಿ ಹೊರತಂದಿದ್ದಾರೆ. ಆಗಾಗ ಬರುವ ಪಂಚ್ ಡೈಲಾಗ್‌ಗಳು ನಗು ಉಕ್ಕಿಸುವಂತಿವೆ. ಇಡೀ ನಾಟಕವೇ ಮಾತಿನ ನಾಟಕವಾಗಿದ್ದರಿಂದ ಮಾತಿಗೆ ಮಾತುಗಳು ಮಥಿಸುತ್ತವೆ. ಒಬ್ಬರಾದ ಮೇಲೆ ಒಬ್ಬರಂತೆ ಪಾತ್ರಗಳು ಮಾತಾಡುತ್ತಲೇ ಇರುತ್ತವೆ.
ಇಡೀ ನಾಟಕದಲ್ಲಿ ಗಮನ ಸೆಳೆಯುವುದು ಅದರ ರಂಗವಿನ್ಯಾಸ. ‘ಈ ಕೆಳಗಿನವರು’ ಹೆಸರಿಗೆ ಅನ್ವರ್ಥವಾಗುವಂತೆ ಕೊಳಗೇರಿಯನ್ನೇ ಸೃಷ್ಟಿಸಿ ಸೆಟ್ ಡಿಸೈನ್ ಮಾಡಿದ್ದು ಅದ್ಭುತ ಕ್ರಿಯಾಶೀಲತೆಯಾಗಿದೆ. ಇಡೀ ಸೆಟ್‌ನಲ್ಲಿ ಬರುವ ಚಿಕ್ಕ ಪುಟ್ಟ ಪರಿಕರಗಳು, ನಗಣ್ಯ ವಸ್ತುಗಳು, ಇಕ್ಕಟ್ಟಿನ ಸ್ಲಂ ಕೋಣೆಗಳು, ಒಬ್ಬರ ಮೇಲೆ ಇನ್ನೊಬ್ಬರು ಮಲಗುವಂತಹ ಬಂಕರ್ ಕಾಟ್‌ಗಳು, ಜೊತೆಗೆ ವಿಶಾಲವೆನ್ನಿಸುವ ಆಕ್ಟಿಂಗ್ ಸ್ಪೇಸ್.. ಎಲ್ಲವೂ ಕರಾರುವಕ್ಕಾಗಿತ್ತು. ನೋಡಿದವರು ಅವಕ್ಕಾಗುವಂತಿತ್ತು. ಮಹಾನಗರದ ಯಾವುದೋ ಒಂದು ಸ್ಲಮ್ಮಿನ ಭಾಗವೊಂದನ್ನು ರಂಗವೇದಿಕೆಯ ಮೇಲೆ ಸೃಷ್ಟಿಸಿದಂತಿತ್ತು. ಅದಕ್ಕಿಂತಲೂ ಹೆಚ್ಚಾಗಿ ರಂಗಸಜ್ಜಿಕೆಯನ್ನು ಪ್ರತಿ ಪಾತ್ರಗಳು ಬಳಸಿದ ರೀತಿ ಅದ್ಭುತ. ಕೆಳದರ್ಜೆಯ ಜನರ ಮಾಸಿದ ಕಾಸ್ಟೂಮ್‌ಗಳು ಸಹ ಇಲ್ಲಿ ಕಲಾತ್ಮಕವಾಗಿ ಮೂಡಿಬಂದಿದ್ದೊಂದು ಸೋಜಿಗ.
ಇಡೀ ನಾಟಕ ಸಂಭಾಷಣಾ ಪ್ರಧಾನವಾಗಿದೆ. ನಾಟಕಕ್ಕೆ ಕಥೆ ಇಲ್ಲದ್ದರಿಂದ, ಪಾತ್ರಗಳು ಬರ‍್ತಾವೆ ಮಾತಾಡ್ತಾವೆ ಹೋಗ್ತಾವೆ. ನಾಟಕದಾದ್ಯಂತ ಉತ್ತರ ಕರ್ನಾಟಕದ ಭಾಷೆ ಬಳಕೆಯಾಗಿದೆ. ಆ ಭಾಗದ ಕಲಾವಿದರನ್ನು ಹೊರತು ಪಡಿಸಿ ಬೇರೆ ನಟರಿಗೆ ಆ ಭಾಷೆಯ ಮೇಲೆ ಪ್ರಭುತ್ವ ಬಾರದಿರುವುದರಿಂದ ಸಂಭಾಷಣೆಯ ಸೊಗಡು ಅಲ್ಲಲ್ಲಿ ಆಭಾಸವೆನಿಸುತ್ತದೆ.
ನೋಡುಗರಲ್ಲಿ ಸಂಚಲನ ಮೂಡಿಸುವಂತಹ ಹಾಡು ಮತ್ತು ಸಂಗೀತ ಸಂಯೋಜನೆಗಳು ಈ ನಾಟಕದ ಪ್ರಮುಖ ಆಕರ್ಷಣೆಯಾಗಿವೆ. ವೀಣಾ ಶರ್ಮಾರವರು ಚೆಂದದ ಹಾಡುಗಳನ್ನು ರಚಿಸಿದ್ದಾರೆ.
ಅತಿಯಾದ ವಿನೋದದಲ್ಲಿ ಮರೆಯಾಗಿ ಹೋದ ವಿಷಾದ, ಪಾಸ್(pause), ಫುಲ್ ಸ್ಟಾಪ್ ಗಳಿಲ್ಲದ ಮಾತುಗಳು, ಎರಡೂ ಮುಕ್ಕಾಲು ಗಂಟೆಯಷ್ಟು ಸುದೀರ್ಘವಾದ ಕಾಲಾವಧಿ, ಸ್ವಲ್ಪ ಚಿಕ್ಕದಾದ ಸ್ಟೇಜ್, ಇವು ಈ ನಾಟಕದ ನಕಾರಾತ್ಮಕ ಅಂಶಗಳಾಗಿವೆ.

ಅದ್ಭುತವಾದ ಸೆಟ್, ಕಲಾತ್ಮಕವಾದ ಕಾಸ್ಟೂಮ್ಸ, ವಿಶಿಷ್ಟವಾದ ಬ್ಲಾಕಿಂಗ್, ಎಂಟ್ರಿ, ಎಕ್ಸಿಟ್ ಮತ್ತು ಮೂವ್ ಮೆಂಟ್ಸ್, ಕಲಾವಿದರ ಲವಲವಿಕೆಯ ಅಭಿನಯ ಹಾಗೂ ಪಂಚ್ ಮಾತುಗಳು, ಪೂರಕವಾದ ಬೆಳಕು ಸಂಯೋಜನೆ, ಮತ್ತು ಚುರುಕಾದ ಉತ್ತರ ಕರ್ನಾಟಕ ಭಾಷೆಯ ಮಾರ್ಮಿಕವಾದ ಸಂಭಾಷಣೆಗಳು ಈ ನಾಟಕದ ಸಕಾರಾತ್ಮಕ ಅಂಶಗಳಾಗಿವೆ.
ರಂಗ ತರಬೇತಿ ಶಾಲೆಗಳಿಗೆ, ರೆಪರ್ಟರಿಗಳಿಗೆ ಹೇಳಿ ಮಾಡಿಸಿದಂತಹ ನಾಟಕವಿದು. ಇಲ್ಲಿ ನಾಯಕ ನಾಯಕಿಯ ಸುತ್ತ ಕಥೆ ಸುತ್ತುವುದಿಲ್ಲ. ಅಸಲಿಗೆ ನಾಯಕ ನಾಯಕಿಯರೇ ಇಲ್ಲ. ಪ್ರತಿಯೊಬ್ಬ ಪಾತ್ರಧಾರಿಗೂ ಸಮಾನ ಅಭಿನಯದ ಅವಕಾಶವನ್ನು ಒದಗಿಸಿಕೊಡುವ ವ್ಯವಸ್ಥೆ ಈ ನಾಟಕದಲ್ಲಿದೆ.
ಕಥಾನಕದ ಕೊರತೆಯಿಂದಾಗಿ ನಾಟಕವನ್ನು ಸುಲಭಕ್ಕೆ ಅರ್ಥೈಸಿಕೊಳ್ಳುವುದು ಸ್ವಲ್ಪ ಕಷ್ಟಸಾಧ್ಯ. “ಏ ಎನಿದು ತಳಾ ಬುಡಾ ಒಂದೂ ತಿಳಿವಲ್ದು” ಎಂದು ಈ ನಾಟಕದ ಪಾತ್ರವೊಂದು ಹೇಳುತ್ತದೆ. ಬಹುಷಃ ಸಾಮಾನ್ಯ ಪ್ರೇಕ್ಷಕರು ನಾಟಕದ ನಂತರ ಕೇಳುವ ಪ್ರಶ್ನೆಯೂ ಅದೇ ಆಗಿದೆ. ನಾಟಕ ಪೂರಾ ನಿರೂಪಣೆ ಇಲ್ಲದ ಸ್ಲಂ ಕುರಿತ ಸಾಕ್ಷ್ಯಚಿತ್ರವೊಂದನ್ನು ನೋಡಿದ ಅನುಭವವಾಗುತ್ತದೆ. ರೂಢಿಗತ ಕಥೆ ಇಲ್ಲದ ಇಂತಹ ಕ್ಲಿಷ್ಟಕರ ನಾಟಕವನ್ನೂ ಎಲ್ಲೂ ಬೋರಾಗದಂತೆ ಕಟ್ಟಿ ಕೊಟ್ಟ ವೀಣಾ ಶರ್ಮರವರಿಗೆ ಅಭಿನಂದನೆಗಳು. ಈ ನಾಟಕದೊಂದಿಗೆ NSD ರೆಪರ್ಟರಿಯ ರಂಗಪಯಣ ಆರಂಭವಾಗುತ್ತಿದ್ದು ಪ್ರದರ್ಶನಗಳೆಲ್ಲಾ ಯಶಸ್ವಿಯಾಗಲಿ ಎಂದು ಹಾರೈಸೋಣ. ಭಾರೀ ಮಳೆ ಬಂದು, ಗಾಳಿ ಬೀಸಿ ಮೊದಲ ದಿನದ ಮೊದಲ ಪ್ರದರ್ಶನದಲ್ಲಿ ವ್ಯತ್ಯಯವಾದಂತೆ ಮತ್ತೆ ಆಗದಿರಲಿ ಎಂದು ಆಶಿಸೋಣ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- http://ರಂಗ ಪ್ರಯೋಗ ವಿಮರ್ಶೆ – ‘ನಿರ್ದಿಗಂತ’ದ ಪೊಲಿಟಿಕಲ್ ಪ್ರಿಸನರ್ಸ್ https://kannadaplanet.com/theater-review-political-prisoner-of-nirdiganta/


