ಹೈದರಾಬಾದ್ : ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಬಂಧನದ ಭೀತಿ ಎದುರಾಗಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಜೀವನ ಆಧರಿಸಿದ ವ್ಯೂಹಂ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅವರ ಪುತ್ರ ಹಾಗೂ ಸಚಿವ ನಾರಾ ಲೋಕೇಶ್, ಇವರ ಪತ್ನಿ ನಾರಾ ಬ್ರಾಹ್ಮಣಿ ಅವರ ವಿರುದ್ಧ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದರು. ಇವರ ವಿರುದ್ಧ ಟಿಡಿಪಿ ಮುಖಂಡ ರಾಮಲಿಂಗಂ ಅವರು ಪ್ರಕಾಶಂ ಜಿಲ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಐಟಿ ಕಾಯ್ದೆಯಡಿಯಲ್ಲಿ ವರ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರ್ಮಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ.
ಈ ಹಿಂದೆಯೂ ಚಂದ್ರಬಾಬು ನಾಯ್ಡು, ಲೋಕೇಶ್ ಮತ್ತು ಪವನ್ ಕಲ್ಯಾಣ್ ಸೇರಿದಂತೆ ಆಂಧ್ರ ಪ್ರದೇಶದ ಮೈತ್ರಿ ನಾಯಕರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಹಿಂದಿನ ಸರ್ಕಾರದಲ್ಲಿ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಟೀಕೆಗಳನ್ನು ಮಾಡುತ್ತಿದ್ದ ನಾಯಕರ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ವೈಎಸ್ಆರ್ಪಿ ಬೆಂಬಲಿಗ ಬೋರುಗಡ್ಡ ಅನಿಲ್ ಕುಮಾರ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಶ್ರೀ ರೆಡ್ಡಿ, ಪೊಸಾನಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಶ್ರೀ ರೆಡ್ಡಿ ಈಗಾಗಲೇ ಚಂದ್ರಬಾಬು, ಲೋಕೇಶ್, ಪವನ್ ಕಲ್ಯಾಣ್ ಸೇರಿದಂತೆ ಮೈತ್ರಿ ನಾಯಕರ ಕ್ಷಮೆ ಯಾಚಿಸಿದ್ದಾರೆ.