ನವದೆಹಲಿ: ಅಮೆರಿಕ ವಿಧಿಸಿರುವ ಆಮದು ಸುಂಕ ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶಪಡಿಸಲಿದೆ. ಭಾರತದ 4,000 ಚದರ ಕಿ.ಮೀ. ಭೂಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ. ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯಗಳನ್ನು ಕುರಿತು ಅವರು ಪ್ರಸ್ತಾಪಿಸಿದ್ದಾರೆ.
ಅಮೆರಿಕ ವಿಧಿಸಿರುವ ಸುಂಕಗಳು ಭಾರತೀಯ ಆರ್ಥಿಕತೆಯನ್ನು ವಿಶೇಷವಾಗಿ ವಾಹನ, ಉದ್ಯಮ, ಔಷಧ ಮತ್ತು ಕೃಷಿಯಂತಹ ಕ್ಷೇತ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾ ಜತೆ ರಾಜತಾಂತ್ರಿಕ ಬಾಂಧವ್ಯದ 75ನೇ ವರ್ಷಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೀನಾ ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಆದರೆ ಇತ್ತೀಚಿಗೆ ನಮ್ಮ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಚೀನಾದ ರಾಯಭಾರಿಯೊಂದಿಗೆ ಕೇಕ್ ಕತ್ತರಿಸುವುದನ್ನು ನೋಡಿ ಆಘಾತವಾಯಿತು ಎಂದು ಅವರು ಹೇಳಿದ್ದಾರೆ.
2020ರ ಗಾಲ್ವನ್ ಕಣಿವೆಯಲ್ಲಿ ಚೀನಾ ವಿರುದ್ಧದ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿರುವ ಘಟನೆಯನ್ನು ಪ್ರಸ್ತಾಪಿಸಿರುವ ರಾಹುಲ್, ಹುತಾತ್ಮರ ನೆನಪಿಗಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮ ನಡೆಯುತ್ತಿದೆ. ಸಹಜ ಸ್ಥಿತಿಗೆ ಬರುವುದನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ನಾವು ನಮ್ಮ ಭೂಭಾಗವನ್ನು ಮರಳಿ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನೀವು ಚೀನಾಕ್ಕೆ 4,000 ಚದರ ಕಿ.ಮೀ. ಭೂಮಿಯನ್ನು ನೀಡಿದ್ದೀರಿ. ಮತ್ತೊಂದೆಡೆ ಮಿತ್ರ ರಾಷ್ಟ್ರವಾದ ಅಮೆರಿಕವು ಇದ್ದಕ್ಕಿದ್ದಂತೆ ಸುಂಕ ವಿಧಿಸಲು ನಿರ್ಧರಿಸಿದೆ ಎಂದು ರಾಹುಲ್ ಉಲ್ಲೇಖಿಸಿದ್ದಾರೆ.