ನವದೆಹಲಿ: ಮಲೇಷ್ಯಾದಲ್ಲಿ ಅ. 26ರಿಂದ 28ರವರೆಗೆ ಆಯೋಜನೆಗೊಂಡಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಅಸಿಯಾನ್) ಶೃಂಗ ಸಭೆಯಲ್ಲಿ ಮೂಲೆಗುಂಪಾಗುವುದನ್ನು ತಪ್ಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಪೂರ್ವಕವಾಗಿ ಗೈರುಹಾಜರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಾನೇ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದಾಗಿ ಈಗಾಗಲೇ 53 ಸಲ ಪುನರುಚ್ಚರಿಸಿದ್ದಾರೆ. ಜತೆಗೆ ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸಲಿದೆ ಎಂದೂ ಹಲವು ಬಾರಿ ಹೇಳಿದ್ದಾರೆ. ಹಾಗಾಗಿ ಟ್ರಂಪ್ ಅವರನ್ನು ನೇರವಾಗಿ ಭೇಟಿಯಾಗುವುದು ಅಪಾಯಕಾರಿ ಎಂದು ಅರಿತಿರುವ ಮೋದಿ ಅಲ್ಲಿಗೆ ಹೋಗುತ್ತಿಲ್ಲ ಎಂದು ವಿವರಿಸಿದ್ದಾರೆ.
ಅಸಿಯಾನ್ ಸಭೆಯಲ್ಲಿ ಭಾಗವಹಿಸಲು ಕ್ವಾಲಾಲಂಪುರಕ್ಕೆ ಪ್ರಧಾನಿ ಮೋದಿ ಹೋಗುವರೇ ಇಲ್ಲವೇ ಎಂದು ಚರ್ಚೆ ನಡೆಯುತ್ತಲೇ ಇತ್ತು. ಮೋದಿ ಭಾಗವಹಿಸುವುದಿಲ್ಲ ಎನ್ನುವುದು ಈಗ ಖಚಿತವಾಗಿದೆ. ಇದರಿಂದ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರನ್ನು ತಬ್ಬಿಕೊಂಡು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಅವಕಾಶದಿಂದ ಮೋದಿ ವಂಚಿತರಾಗಿದ್ದಾರೆ. ವಿಶ್ವ ವೇದಿಕೆಯಲ್ಲಿ ತಾನೊಬ್ಬ ವಿಶ್ವಗುರು ಎಂದು ಹೇಳಿಕೊಳ್ಳುವ ಅವಕಾಶವೂ ಇಲ್ಲವಾಗಿದೆ ಎಂದು ಜೈರಾಂ ರಮೇಶ್ ವ್ಯಂಗ್ಯವಾಡಿದ್ದಾರೆ.
ಈ ಬೆಳವಣಿಗೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಮುಖ್ಯ ಕಾರಣ. ಕೆಲ ದಿನಗಳ ಹಿಂದೆ ಈಜಿಪ್ಟ್ ನಲ್ಲಿ ಜರುಗಿದ ಗಾಜಾ ಶಾಂತಿ ಸಭೆಯಲ್ಲಿ ಭಾಗವಹಿಸುವ ಆಹ್ವಾನವನ್ನೂ ಮೋದಿ ತಿರಸ್ಕರಿಸಿದ್ದೂ ಇದೇ ಕಾರಣಕ್ಕಾಗಿ. ಈಗಲೂ ಟ್ರಂಪ್ ಅವರ ಮುಖಾಮುಖಿಯಾಗುವುದನ್ನು ತಪ್ಪಿಸಿಕೊಳ್ಳಲು ಸಭೆಗೆ ಹೋಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಅಸಿಯಾನ್ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಬದಲಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾಗಿಯಾಗುತ್ತಿದ್ದಾರೆ. ಮೋದಿ ಅವರು ವರ್ಚುವಲ್ ಸಭೆ ಮೂಲಕ ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಇತರ ರಾಷ್ಟ್ರಗಳ ನಾಯಕರು ಭಾಗವಹಿಸುತ್ತಿದ್ದಾರೆ.