Thursday, December 12, 2024

ಸಾಲ ಕೊಡಿಸುವ ಭರವಸೆ; ನೂರು ಮಹಿಳೆಯರಿಗೆ ವಂಚಿಸಿದ ತಾಯಿ ಮಗಳ ಬಂಧನ

Most read

ಬೆಂಗಳೂರು: ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಕ್ಕೂ ಹೆಚ್ಚು ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದಡಿಯಲ್ಲಿ ತಾಯಿ, ಮಗಳು ಸೇರಿ ಮೂವರನ್ನು ಹೈ ಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರೇಷ್ಮಾ ಭಾನು, ಆಕೆಯ ಪುತ್ರಿ ತೌಸಿಯಾ ಅಂಜುಂ ಹಾಗೂ ಶ್ರೀಕಾರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನೌಕರ ಆನಂದ್ ಬಂಧಿತ ಆರೋಪಿಗಳು.


ರೇಷ್ಮಾ ಬಾನು, ತೌಸಿಯಾ ಅಂಜುಂ ಕ್ವಿನ್ಸ್ ರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ಈ ತಾಯಿ ಮಗಳ ಜೋಡಿ ಶ್ರೀಕಾರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ರೂ. 50 ಸಾವಿರ ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಇವರನ್ನು ನಂಬಿದ ಅಂಚೆಪಾಳ್ಯ ನಿವಾಸಿ ಶ್ವೇತಾ ಪಂಡ ಅವರೊಬ್ಬರೇ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದರು. ಆದರೆ ಯಾರೊಬ್ಬರಿಗೂ ಸಾಲ ಕೊಡಿಸಿರಲಿಲ್ಲ. ಇದೀಗ ಅವರು ದೂರು ನೀಡಿದ್ದಾರೆ.


ಬ್ಯಾಂಕ್ ಖಾತೆ ತೆರೆಯುವ ಉದ್ದೇಶದಿಂದ 75 ಮಹಿಳಾ ಸದಸ್ಯರಿಂದ ತಲಾ ರೂ. 2,500, 24 ಮಹಿಳೆಯರಿಂದ ತಲಾ 3 ಸಾವಿರ ರೂ. ಹಾಗೂ 40 ಮಹಿಳೆಯರಿಂದ ತಲಾ 5 ಸಾವಿರ ಸಂಗ್ರಹಿಸಿ ತಾಯಿ ಮತ್ತು ಮಗಳಿಗೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಾಲಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ನಮೂದಿಸಿದ್ದ ಮೊಬೈಲ್ ನಂಬರ್ ಅನ್ನೇ ಸಾಲದ ಖಾತೆ ನಂಬರ್ ಎಂದು ಆರೋಪಿಗಳು ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಕಟ್ಟಿರುವ ಹಣ ವಾಪಸ್ ಮಾಡುವಂತೆ ಕೇಳಿದಾಗ ರಾಜಕಾರಣಿಗಳ ಪರಿಚಯ ಇದೆ ಎಂದು ನಮ್ಮನ್ನೇ ಬೆದರಿಸುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

More articles

Latest article