ಶಿಸ್ತು, ಕಾನೂನು ಪಾಲನೆ ಮತ್ತು ಮಾನವೀಯತೆ ಈ ಶಬ್ದಗಳು ಒಂದರೊಳಗೊಂದು ಮಿಳಿತವಾಗಿ ಇರಬೇಕಾದ ನಾಗರಿಕ ಬದುಕಿನ ಅಂಶಗಳು. ಆದರೆ ಇವೆಲ್ಲವೂ ವಿರುದ್ಧ ದಿಕ್ಕಿನಲ್ಲಿ ಚಲಿಸುವುದೇ ವಾಸ್ತವ -ವೃಂದಾ ಹೆಗಡೆ, ಅತಿಥಿ ಉಪನ್ಯಾಸಕಿ.
‘ಇನ್ನೇನೂ ವಿಚಾರಿಸುವ, ಆಲೋಚಿಸುವ ಪ್ರಶ್ನೆಯೇ ಇಲ್ಲ. ಪ್ರತೀ ತಿಂಗಳೂ ಕಿತ್ತು ಬಿಸುಡುವುದೇ”
ಒಂದು ಪದವಿ ಕಾಲೇಜಿನ ಪ್ರಾಂಶುಪಾಲರು ಹೀಗೆ ಹೇಳುವಾಗ ಕಿತ್ತು ಬಿಸುಡುವುದು ಏನಿರಬಹುದು? ಅದು ಅತಿಥಿ ಉಪನ್ಯಾಸಕರ ಬೆವರಿನ ಫಲದ ಒಂದು ಭಾಗ. ಸುರಿಸಿದ ಬೆವರಿಗೆ ತಕ್ಕ ಪ್ರತಿಫಲ ತೆಗೆದುಕೊಳ್ಳುವವರಿಗೆ ಚಿಕ್ಕದಾಗಿ ಕಾಣುವ ಆದರೆ ಬೆವರಿನ ಒಂದು ಪ್ರತಿಶತ ಫಲ ಮಾತ್ರ ಪಡೆಯುವವರಿಗೆ ದೊಡ್ಡದಾದ ಭಾಗ. ಅದೇ ಈಗ ಕೆಲವು ಕಾಲೇಜುಗಳಲ್ಲಿ ಮಾತ್ರ ತೆಗೆಯಹೊರಟಿರುವ ಪಿ ಟಿ. ಅಂದರೆ ಪ್ರೊಫೆಶನಲ್ ಟ್ಯಾಕ್ಸ್. ತಿಂಗಳಿಗೆ ಇನ್ನೂರು ರೂಪಾಯಿಗಳು ( ಕರ್ನಾಟಕದ ಬಜೆಟ್‌ನಲ್ಲಿ ನೂರು ರೂಪಾಯಿ ಏರಿಕೆ ಆಗಿದೆ).
ಕಥೆ ಪ್ರಾರಂಭವಾಗಿದ್ದು ಕಳೆದ ವರ್ಷದಲ್ಲೇ. ಏಕಾಏಕಿ ಗೌರವಧನದಲ್ಲಿ ಒಂದು ಸಾವಿರ ರೂಪಾಯಿ ಕಡಿತವಾದಾಗ ಆತಂಕಗೊಂಡ ಅತಿಥಿ ಉಪನ್ಯಾಸಕರು ಪ್ರಶ್ನಿಸಲಾಗಿ, ಅದು ಪ್ರೊಫೆಶನಲ್ ಟ್ಯಾಕ್ಸ್, ಇಪ್ಪತ್ತೈದು ಸಾವಿರ ರೂಪಾಯಿ ತಿಂಗಳಿಗೆ ವರಮಾನ ಪಡೆಯುವ ಯಾರೇ ಆದರೂ ಅವರು ಸರ್ಕಾರಕ್ಕೆ ಕಟ್ಟಬೇಕಾದ ವೃತ್ತಿ ತೆರಿಗೆ ಎಂದರು. ಆದೇಶವೇನಾದರೂ ಇದೆಯಾ ಅಂತ ಕೇಳಿದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಬಂದ ಪ್ರತ್ಯೇಕ ಆದೇಶ ಇಲ್ಲ, ಬದಲಾಗಿ ಕರ್ನಾಟಕ ಸರ್ಕಾರ ಹೊರಡಿಸಿದ ರಾಜ್ಯಪತ್ರವನ್ನು ತೋರಿಸಲಾಯಿತು. ಐಟಿ ಕೂಡಾ ಕಟ್ಟಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೇಲೆ ಐಟಿ ರಿಟರ್ನ್ ಫೈಲ್ ಮಾಡಿಸಿ, ಪಿ ಟಿ ಮಾತ್ರ ಬರುವುದಿಲ್ಲ ಸರ್ಕಾರಕ್ಕೆ ಹೋಗಿದೆ ಎಂದದ್ದಲ್ಲದೆ ಇನ್ನು ಮುಂದೆ ತೆಗೆಯುವುದಿಲ್ಲ ಎಂದರು!!!
ಇದಾದ ಒಂದು ವರ್ಷದ ಬಳಿಕ ಮತ್ತದೇ ಕರ್ನಾಟಕ ರಾಜ್ಯಪತ್ರವನ್ನು ಇಟ್ಟುಕೊಂಡು ಪಿ ಟಿ ಕಟ್ಟಿ ಎಂದರು. ಮೊದಲಿಗೆ ಮೂರು ತಿಂಗಳದ್ದು ಕಟ್ಟಬೇಕು ಎಂದವರು, ಸೂಪರಿಂಟೆಂಡೆಂಟ್ ಬಂದು ಜನವರಿಯಿಂದ ಕಟ್ಟಿ ಎಂದಾಗ ಏನು ಹೇಳುವುದು??! ಈ ಥರಾ ಕಣ್ಣೆದುರೇ ನಾಟಕ ನೋಡಿದರೂ ಪ್ರತಿಭಟಿಸುವ ಸೊಲ್ಲೇ ಇಲ್ಲದೆ ಹಲವರು ಇನ್ನೂರು ರೂಪಾಯಿ ಕೊಟ್ಟು ನಡೆದರು. (ಮೂರು ತಿಂಗಳ ಆರುನೂರು ಒಂದು ತಿಂಗಳಿನ ಇನ್ನೂರಕ್ಕೆ ಇಳಿದ ಖುಷಿಗೆ!! ) ಕೆಲವೇ ಕೆಲವರು ಪ್ರತಿರೋಧ ವ್ಯಕ್ತಪಡಿಸಿದರು. ಬೇರೆ ಹಲವು ಕಾಲೇಜುಗಳಲ್ಲಿ ಪಿ ಟಿ ಯ ಸುದ್ದಿಯೇ ಇಲ್ಲ ಎಂಬುದು ತಿಳಿದು ಬಂತು. ಕೊನೆಯದಾಗಿ ಜೆ ಡಿ(ಜಾಯಿಂಟ್ ಡೈರೆಕ್ಟರ್ ) ಯವರನ್ನು ಕೇಳಲಾಗಿ ಮೊದಲು ಇರಲಿಲ್ಲ ಅಲ್ವಾ..ನೀವು ಕಟ್ಟುವ ಹಾಗಿಲ್ಲ ಎಂದವರು ಕೊನೆಗೆ ಆಫೀಸಿನಲ್ಲಿ ವಿಚಾರಿಸಿ ‘ಆಯಾ ಟ್ರೆಷರಿ ಆಫೀಸರ್ ಗೆ ಸಂಬಂಧ ಪಡುವುದಂತೆ, ಸ್ಟ್ರಿಕ್ಟ್ ಇರುವ ಆಫೀಸರು ಬಿಡದೆ ಕಟ್ಟಿಸುವರು. ಇನ್ನು ಕೆಲವರು ಮಾನವೀಯ ದೃಷ್ಟಿಯಿಂದ ಬಿಡುವರು ” ಎಂದರು.
ಹೀಗನ್ನುವಲ್ಲಿಂದ ವ್ಯವಸ್ಥೆಯ ರಚನೆ, ಕಾನೂನು ಪಾಲನೆಯ ರೀತಿ ನೀತಿಗಳು ಎಲ್ಲವೂ ಅನಾವರಣಗೊಳ್ಳುತ್ತವೆ. ‘ಮಾನವೀಯತೆ ‘ ಎಂಬ ಶಬ್ದವಂತೂ ಪದೇಪದೇ ಅಕಾಲದಲ್ಲಿ, ಅಪ್ರಸ್ತುತವಾಗಿ ಬಳಕೆಯಾಗಿ ಅರ್ಥಪಲ್ಲಟ ಮಾಡಿಸಿಕೊಂಡಿದೆ. ಎಲ್ಲಾ ಥರದ ಮನವಿಗಳಲ್ಲಿ ಇದಕ್ಕೊಂದು ಸ್ಥಾನ!!. ಉದಾಹರಣೆಗೆ, ‘ಸರ್ಕಾರದಿಂದ ಗೌರವಧನ ಬಿಡುಗಡೆಯಾಗಿದೆ, ದಯವಿಟ್ಟು ಮಾನವೀಯ ದೃಷ್ಟಿಯಿಂದ ಆದಷ್ಟು ಬೇಗ ವಿತರಿಸಿ. ಸರ್ಕಾರ ಕೊಡುವ ಕನಿಷ್ಠ ವೇತನ ಬದುಕು ತೂಗಿಸಲು ಸಾಲದ ಕಾರಣ ಹಲವರಿಗೆ ಪ್ರತ್ಯೇಕ ದುಡಿಯುವ ಅನಿವಾರ್ಯತೆ ಇರುವುದರಿಂದ ಕೆಲಸದ ಅವಧಿಯನ್ನು ಅತಿಯಾದ ಶಿಸ್ತಿಗೆ ಒಳಪಡಿಸಬೇಡಿ. ಮಾನವೀಯ ದೃಷ್ಟಿಯಿಂದ ಪರಿಗಣಿಸಿ… ಹೀಗೇ ಸಾಗುತ್ತದೆ. ಹಕ್ಕನ್ನು ಪ್ರತಿಪಾದಿಸುವ ವೇಳೆಗೂ ಮಾನವೀಯ ಎಂಬ ಶಬ್ದ ನುಸುಳಿ ಪ್ರತಿಭಟನೆಯನ್ನು ಬೇಡಿಕೆಯ ಮಟ್ಟಕ್ಕೆ ಇಳಿಸುತ್ತದೆ.
ಈಗ ಪಿ ಟಿ ಯ ವಿಷಯಕ್ಕೆ ಬರೋಣ. ಶಿಸ್ತು, ಕಾನೂನು ಪಾಲನೆ ಮತ್ತು ಮಾನವೀಯತೆ ಈ ಶಬ್ದಗಳು ಒಂದರೊಳಗೊಂದು ಮಿಳಿತವಾಗಿ ಇರಬೇಕಾದ ನಾಗರಿಕ ಬದುಕಿನ ಅಂಶಗಳು. ಆದರೆ ಇವೆಲ್ಲವೂ ವಿರುದ್ಧ ದಿಕ್ಕಿನಲ್ಲಿ ಚಲಿಸುವುದೇ ವಾಸ್ತವ. ಕೆಲವು ನಿಜ ಘಟನೆಗಳನ್ನು ನಿದರ್ಶನವಾಗಿ ನೋಡೋಣ.
ಸಾಕಷ್ಟು ಆದಾಯವಿರುವ ನ್ಯಾಯವಾದಿಯೊಬ್ಬರು ಒಂದು ದಿನ ತೆಂಗಿನಕಾಯಿ ಸಿಪ್ಪೆ ತೆಗೆಯುವ ಕೆಲಸವನ್ನು ಒಬ್ಬ ಕೂಲಿಕಾರನಿಗೆ ವಹಿಸುತ್ತಾರೆ. ರಾಶಿಬಿದ್ದ ತೆಂಗಿನಕಾಯಿಯ ಪ್ರಮಾಣ ಅಂದಾಜು ಮಾಡಲಾಗದ್ದಕ್ಕೋ ಅಥವಾ ಹಸಿವಿನ ಕಿಚ್ಚು ಒದೆಯುತ್ತಿದ್ದರಿಂದಲೋ ಒಂದು ನೂರು ರೂಪಾಯಿಗೆ ಕೂಲಿಕಾರ ಆ ತೆಂಗಿನ ಗುಡ್ಡವನ್ನು ಕರಗಿಸಿಕೊಡುವೆ ಎಂದು ಒಪ್ಪಿಕೊಳ್ಳುತ್ತಾನೆ.! ಬೆಳಿಗ್ಗೆಯಿಂದ ಸಂಜೆಯವರೆಗೆ ಸುಲಿದರೂ ಕರಗದ ಗುಡ್ಡ!!! ಶಿಸ್ತು ಪಾಲಿಸುವ ನ್ಯಾಯವಾದಿಗಳು ಒಂದು ದಮಡಿಯನ್ನೂ ಹೆಚ್ಚು ಕೊಡಲು ತಯಾರಿಲ್ಲ. ಕಾನೂನು ಅಂದರೆ ಕಾನೂನು. ಒಪ್ಪಂದ ಆಗಿದ್ದು ನೂರು ರೂಪಾಯಿಗೆ. ಮಧ್ಯದಲ್ಲಿ ಟೀ ಕೊಟ್ಟರೆ ಅದು ಉದಾರತೆಗೆ, ಮಾನವೀಯತೆಗೆ ಸಂಬಂಧಿಸಿದ್ದು. ಅದು ಕಾನೂನಿನ ಪರಿಧಿಗೆ ಬರುವುದಿಲ್ಲ. ಕೂಲಿಕಾರನ ಅವಸ್ಥೆ ನೋಡಿ. ಮಧ್ಯದಲ್ಲಿ ಬಿಡುವಂತಿಲ್ಲ. ಬಿಟ್ಟರೆ ಇಲ್ಲಿನವರೆಗಿನ ದುಡಿಮೆಯ ಹಣವೂ ಸಿಗುವಂತಿಲ್ಲ. ತನ್ನ ಖೊಟ್ಟಿ ಅದೃಷ್ಟವನ್ನು ಹಳಿಯುತ್ತಾ ಗುಡ್ಡ ಕರಗಿಸುವುದೊಂದೇ ಮಾರ್ಗ.
ಇನ್ನೊಂದು ನಿದರ್ಶನ. ಮನೋರಂಜನ್ ಬ್ಯಾಪಾರಿಯವರ ಆತ್ಮಕಥೆಯಿಂದ. ದೇಶ ವಿಭಜನೆಯ ಸಮಯದ ಬಾಂಗ್ಲಾದೇಶದಲ್ಲಿ ನಡೆದ ಘಟನೆ. ಶ್ರೀಮಂತ ಹಿಂದೂಗಳು ತಮ್ಮ ಚರಾಸ್ತಿಯನ್ನು ಆದಷ್ಟು ಗಂಟುಕಟ್ಟಿ, ಸ್ಥಿರಾಸ್ತಿಯನ್ನು ಆದಷ್ಟು ದುಡ್ಡಿಗೆ ಮಾರಿ ಭಾರತಕ್ಕೆ ವಲಸೆ ಬರುವ ಹೊತ್ತಲ್ಲಿ ಒಬ್ಬ ಅಸ್ಪೃಶ್ಯ ಕೂಲಿಕಾರ್ಮಿಕನ ಹೆಂಡತಿ ಬಸುರಿ. ಅಲ್ಲಿಯವರೆಗೆ ಆ ಶ್ರೀಮಂತರ ಮನೆಯಲ್ಲಿ ಆಳಾಗಿ ದುಡಿದವ. ಕೆಲಸ ಇಲ್ಲದ ಬೇಸಿಗೆ, ಚಳಿಗಾಲದಲ್ಲಿ ಸಾಲಪಡೆದು ಅದನ್ನು ಕೆಲಸ ಇರುವಾಗ ತೀರಿಸುವುದು ವಾಡಿಕೆ. ಆದರೆ ಈಗ ಪರಿಸ್ಥಿತಿ ಹೇಗೆಂದರೆ ಹಲವು ಮನೆಮಂದಿ ಭಾರತಕ್ಕೆ ಹೋಗಿಯಾಗಿದ್ದು, ಉಳಿದವರು ಗಂಟುಮೂಟೆ ಕಟ್ಟಿದ ಸಮಯ. ಈಗ ಹಣ ಕೊಟ್ಟರೆ ವಾಪಾಸ್ ಪಡೆಯುವುದೆಂತು? ಬಡ ಕಾರ್ಮಿಕನ ಮನೆಯಲ್ಲೋ ಒಂದು ವಾರದಿಂದ ಒಲೆಯುರಿಯದೆ, ಅಕ್ಕ ಪಕ್ಕದ ಹೆಚ್ಚು ಕಡಿಮೆ ಇದೇ ಪರಿಸ್ಥಿತಿಯಲ್ಲಿರುವ ಬಡಬಾಂಧವರು ಉಳಿಸಿದ ಅಗಳಿನಲ್ಲೇ ಜೀವ ಹಿಡಿದುಕೊಂಡ ಹೆಂಡತಿಗೆ ಹೆರಿಗೆ ನೋವು. ಹೊಟ್ಟೆಗೆ ಹಿಟ್ಟಿಲ್ಲ. ಬಡವ ಶ್ರೀಮಂತನ ಮನೆಗೆ ದೌಡಾಯಿಸುತ್ತಾನೆ. ಅವನಿಗೋ ಭಾರತಕ್ಕೆ ಹೋಗುವ ಅವಸರ. ಈಗ ಅಕ್ಕಿಯನ್ನೋ, ಹಣವನ್ನೋ ಕೊಟ್ಟರೆ ಪ್ರತಿಯಾಗಿ ಕೆಲಸ ಮಾಡಿಸಿಕೊಳ್ಳಲು ಅವಕಾಶವಿಲ್ಲವಲ್ಲಾ, ಪುಕ್ಕಟೆ ಕೊಡಲು ಮಾನವೀಯತೆ ಸಾಲದಲ್ಲಾ. ಸಂಜೆಯವರೆಗೆ ಕಟ್ಟಿಗೆ ಒಡೆಸಿ ಮುಷ್ಟಿ ಅಕ್ಕಿ ಕೊಟ್ಟು ಕಳಿಸುತ್ತಾನೆ!!!. ವ್ಯವಹಾರದ ಶಿಸ್ತು ಪಾಲನೆ. ಮನೆಗೆ ಬರುವ ಹೊತ್ತಿಗೆ ಕಣ್ಣೀರಿನಲ್ಲಿ ಅಕ್ಕಿ ನೆನೆದಿರುತ್ತದೆ. ಮತ್ತು ಹೆಂಡತಿ ಮಗುವಿಗೆ ಜನ್ಮ ನೀಡಿರುತ್ತಾಳೆ. ಆ ಮಗುವೇ ಪ್ರಸ್ತುತ ಪಶ್ಚಿಮ ಬಂಗಾಳದ ಶಾಸಕರಲ್ಲೊಬ್ಬರಾದ ಶ್ರೇಷ್ಠ ಬರಹಗಾರರೂ ಆದ ಮನೋರಂಜನ್ ಬ್ಯಾಪಾರಿ.
ಅದೇ ಆತ್ಮಕಥೆಯಲ್ಲಿ ಇನ್ನೊಂದು ನಿದರ್ಶನ. ಬಾಂಗ್ಲಾದ ಬಡ ಹಿಂದೂಗಳು ಭಾರತಕ್ಕೆ ವಲಸೆ ಬಂದು ಪಡಬಾರದ ಪಾಡುಪಡುತ್ತಿರುವಾಗ ಅವರು ವಾಸಿಸುತ್ತಿದ್ದ ನಿರಾಶ್ರಿತ ಶಿಬಿರದ ಹತ್ತಿರ ಖಾಸಗಿ ಒಡೆತನಕ್ಕೆ ಸೇರಿದ ಒಂದು ಕೊಳದಲ್ಲಿ ಒಂದು ಜಾತಿಯ ಹುಲ್ಲು ಕೊಳ ಮುಚ್ಚುವಷ್ಟು ಬೆಳೆದಿರುತ್ತದೆ. ಆ ಹುಲ್ಲಿನಿಂದ ಬುಟ್ಟಿ ತಯಾರಿಸುವ ಪರಿಣತಿ ಹೊಂದಿರುವ ನಿರಾಶ್ರಿತರು ಒಡೆಯನ ಒಪ್ಪಿಗೆ ಪಡೆದು ಹುಲ್ಲು ತೆಗೆಯುವ ಕೆಲಸಕ್ಕೆ ಮುಂದಾಗುತ್ತಾರೆ. ಪುಕ್ಕಟೆಯಾಗಿ ತನ್ನ ಕೊಳ ಸ್ವಚ್ಛವಾಗುವುದನ್ನು ಯಾವ ಶ್ರೀಮಂತ ಒಪ್ಪದಿರಲಾರ? ಸರಿ ಬಡ ನಿರಾಶ್ರಿತರು ಬುಟ್ಟಿ ಹೆಣೆದು ಮಾರಾಟ ಮಾಡಿ ಅರೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇಳಿಯುವ ಹೊತ್ತಿಗಾಗಲೇ ಸಾವ್ಕಾರನಿಗೆ ಜ್ಞಾನೋದಯವಾಗಿ ಮುಂದಿನ ಬಾರಿಯಿಂದ ಪ್ರತಿ ಕಟ್ಟು ಹುಲ್ಲಿಗೆ ದರ ನಿಗದಿ ಮಾಡುತ್ತಾನೆ. ಶಿಸ್ತಿನ ವ್ಯವಹಾರ!!! ತನ್ನ ಕೊಳದಲ್ಲಿ ಬೆಳೆದ ಹುಲ್ಲು ಯಾರಿಗೋ ಆದಾಯ ತರುವುದಾದರೆ ತನ್ನ ಪಾಲು ಪಡೆದುಕೊಳ್ಳುವುದು ತನ್ನ ಹಕ್ಕು ಎಂದಾಗಿ ಆತ ಆಲೋಚಿಸಿದ ಅಷ್ಟೇ.
ಮತ್ತೆ ಪಿ ಟಿ ಗೆ ಬರೋಣ. ಕೊನೆಯದಾಗಿ (ಅಂದರೆ ಈವರೆಗಿನ ಕಾಲ ಪರಿಗಣಿಸಿ. ಇನ್ನೂ ಬತ್ತಳಿಕೆಯಲ್ಲಿ ಏನೇನು ಅಡಗಿದ್ದಾವೋ ಗೊತ್ತಿಲ್ಲ.) ಪ್ರಾಂಶುಪಾಲರು ತಮ್ಮ ಶಿಸ್ತಿನ ಆದೇಶಕ್ಕೆ (ಲಿಖಿತ ಅಲ್ಲ) ಇನ್ನೊಂದು ಕಾರಣ ಹೇಳಿದರು. ಆಡಿಟ್‌ನವರು ಅಂಕೆ ಒಂದರ ಮುಂದೆ ಎಣಿಸಲಾಗದಷ್ಟು ಸೊನ್ನೆ ಹಾಕಿ, ಇಷ್ಟು ದುಡ್ಡನ್ನು ಸರ್ಕಾರಕ್ಕೆ ಮೋಸ ಮಾಡಿದ್ದೀರಿ ಎಂದರಂತೆ!!!! ಆಘಾತಗೊಳ್ಳುವ ಸರದಿ ಅತಿಥಿ ಉಪನ್ಯಾಸಕರದ್ದೇ. ಗಂಟಲ ತುದಿಯಲ್ಲೇ ಇರುವ ಸರ್ಕಾರ ತಮಗೆ ಮೋಸ ಮಾಡಿದ ಹಣದ ಅಂಕಿ ಅಂಶಗಳನ್ನು ಅತ್ತ ನುಂಗಲೂ ಆಗದ, ಇತ್ತ ಉಗುಳಲೂ ಆಗದ ಪರಿಸ್ಥಿತಿ ಸುಡಿಸಿಕೊಳ್ಳುವವರದ್ದು. ಈಗಿನ್ನೂ ಎರಡು ವರ್ಷ ಪೂರೈಸಿಲ್ಲ ಇಪ್ಪತ್ತೈದು ಸಾವಿರ ಗೌರವಧನ ಪಡೆಯಲು ಪ್ರಾರಂಭಿಸಿ. ಅದೂ ಕೂಡಾ ಹತ್ತು ತಿಂಗಳಿಗೆ. ಆ ಹತ್ತು ತಿಂಗಳೂ ಭದ್ರವಲ್ಲ. ಇಂಥಾ ಅಭದ್ರ ಪರಿಸ್ಥಿತಿಯಲ್ಲಿ ಹಗ್ಗದ ಮೇಲೆ ನಡೆದಂತೆ ಬದುಕು ಸಾಗಿಸುವವರಿಂದ ಎಣಿಸಲಾಗದಷ್ಟು ಹಣದ ವಂಚನೆ!!! ಇಪ್ಪತ್ತೊಂದನೇ ಶತಮಾನದ ಕ್ರೂರ ವಿಡಂಬನೆ.
ಖಾಲಿ ಬಿದ್ದ ಹುದ್ದೆಗಳನ್ನು ನಾಲ್ಕು ದಶಕಗಳಿಂದ ತುಂಬಿಸದೇ ನಾಲ್ಕು ಕಾಸಿಗೆ ದುಡಿಸಿಕೊಳ್ಳುವುದನ್ನು ಮುಂದುವರೆಸಿರುವುದು ವಂಚನೆಯಲ್ಲವೆ?
ವಂಚನೆ ಯಾವುದಯ್ಯಾ?
ವೃಂದಾ ಹೆಗಡೆ
ಅತಿಥಿ ಉಪನ್ಯಾಸಕರು, ಸಾಗರ
ಇದನ್ನೂ ಓದಿ- http://“ಮೆಟ್ರೋಸಿಟಿಯಲ್ಲೊಂದು ಇಳಿಸಂಜೆ” https://kannadaplanet.com/one-evening-in-in-the-metrocity/