ಬೆಂಗಳೂರು: ಕರ್ನಾಟಕದಲ್ಲಿ ಇಂದು ಮಿಶ್ರ ಹವಾಮಾನ ಇರಲಿದ್ದು, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿ 7 ಜಿಲ್ಲೆಗಳಲ್ಲಿ ಹಗುರ ಅಥವಾ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ ಮತ್ತು ವಿಪರೀತ ಚಳಿ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಸೃಷ್ಟಿಯಾಗಿರುವ ಪರಿಣಾಮ ಮಳೆಯಾಗುವ ಸಾಧ್ಯತೆಗಳಿವೆ. ಮುನ್ಸೂಚನೆ ಪ್ರಕಾರ ತಮಿಳುನಾಡು, ಕೇರಳ ಗಡಿ ಭಾಗದ ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇನ್ನೂ ಎರಡು ಮೂರು ದಿನ ಮಳೆ ಬರುವ ಸಾಧ್ಯತೆಗಳಿವೆ. ಉತ್ತರ ಒಳನಾಡು ಭಾಗದಲ್ಲಿ ತಾಪಮಾನ ಇಳಿಕೆ ಮತ್ತು ತೇವಾಂಶ ಕಡಿಮೆಯಾಗಿ ಒಣಹವೆ ಕಾಡಲಿದೆ ಎಂದು ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣ ಕರ್ನಾಟಕದ ಒಳನಾಡು ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ರಾಮನಗರ, ತುಮಕೂರು ಭಾಗದಲ್ಲಿ ಭಾರೀ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೇವಾಂಶ ಕುಸಿತವಾಗಿದ್ದು, ಒಣಹವೆ ಇರಲಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇರುವ ಸಾಧ್ಯತೆಯಿದೆ. ವಿಜಯಪುರ, ಬೀದರ್ ಭಾಗದಲ್ಲಿ ರಾತ್ರಿ ಮತ್ತು ಬೆಳಗ್ಗೆ ಚಳಿ ಹೆಚ್ಚಾಗಲಿದೆ. ಬಳಿಕ ಒಣಹವೆ ಇರಲಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.
ಕರ್ನಾಟಕದಲ್ಲಿ ನಿನ್ನೆ ಗರಿಷ್ಠ ಉಷ್ಣಾಂಶ 34.5 ಡಿಗ್ರಿ ಸೆಲ್ಶಿಯಸ್ ಪಣಂಬೂರು ಭಾಗದಲ್ಲಿ ದಾಖಲಾಗಿದ್ದರೆ ಕನಿಷ್ಠ ಉಷ್ಣಾಂಶ 10.6 ಡಿಗ್ರಿ ಸೆಲ್ಶಿಯಸ್ ವಿಜಯಪುರದಲ್ಲಿ ದಾಖಲಾಗಿದೆ.