ಚೆನ್ನೈ: ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿ ಫೆಂಗಲ್ ಚಂಡಮಾರುತ ರೂಪುಗೊಂಡಿದೆ. ಇದರ ಪರಿಣಾಮ ಉತ್ತರ ತಮಿಳುನಾಡಿನ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ.
ಈ ಚಂಡಮಾರುತ ಪುದುಚೇರಿಗೆ ಇಂದು ಅಪ್ಪಳಿಸುವ ಸಾಧ್ಯತೆಗಳಿವೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಮಿಳುನಾಡಿನ ಹಲವು ಭಾಗಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಶುಕ್ರವಾರ ರಾತ್ರಿಯಿಂದಲೇ ಕರಾವಳಿ ಪ್ರದೇಶಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಗಾಳಿಯ ವೇಗ ಗಂಟೆಗೆ 90 ಕಿಲೋಮೀಟರ್ ವರೆಗೆ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಚೆನ್ನೈನ ಎನ್ನೋರ್ ಎಂಬಲ್ಲಿ ಕಳೆದ ಆರು ಗಂಟೆಗಳಲ್ಲಿ 8 ಸೆ.ಮೀನಷ್ಟು ಮಳೆಯಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದ 12 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮೆಟ್ರೋ ಮಾತ್ರ ಕಾರ್ಯಾಚರಣೆ ನಡೆಸುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಮರೀನಾ ಮತ್ತು ಮಾಮಲ್ಲಪುರಂ ಸೇರಿದಂತೆ ಪ್ರಮುಖ ಬೀಚ್ ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸರ್ಕಾರ ಐಟಿ ಕಂಪನಿಗಳಿಗೆ ಮನವಿ ಮಾಡಿಕೊಂಡಿದೆ.
ಪುದುಚೇರಿ ಮತ್ತು ಕಾಂಚೀಪುರಂ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಶನಿವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.. ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ತುರ್ತು ಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಲು ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯು ಟೋಲ್ ಫ್ರೀ ಸಂಖ್ಯೆ 112 ಮತ್ತು 1077 ಅನ್ನು ಆರಂಭಿಸಿದೆ. ಜನರು ವಾಟ್ಸಾಪ್ ಸಂಖ್ಯೆ 9488981070 ಮೂಲಕ ಸಹಾಯಕ್ಕಾಗಿ ಸಂಪರ್ಕಿಸಬಹುದಾಗಿದೆ. ಇದುವರೆಗೆ ತಿರುವರೂರ್ ಮತ್ತು ನಾಗಪಟ್ಟಣಂ ಜಿಲ್ಲೆಗಳ 164 ಕುಟುಂಬಗಳ ಒಟ್ಟು 471 ಜನರನ್ನು ಸ್ಥಳಾಂತರಿಸಲಾಗಿದೆ.