ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಸನ ಪೆನ್ ಡ್ರೈವ್ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ SIT ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ನೂರಾರು ಮಹಿಳೆಯರ ಜೊತೆ ರಾಜಕೀಯ ಮುಖಂಡನೊಬ್ಬ ಲೈಂಗಿಕ ಚಟುವಟಿಕೆ ನಡೆಸಿ, ಅದನ್ನು ತಾನೇ ರೆಕಾರ್ಡ್ ಮಾಡಿಕೊಂಡಿರುವ ದೃಶ್ಯಗಳಿರುವ ಪೆನ್ ಡ್ರೈವ್ ಗಳು ಹಾಸನ ಜಿಲ್ಲೆಯಾದ್ಯಂತ ಹರಡಿಕೊಂಡು ಇಡೀ ಜಿಲ್ಲೆ ಬೆಚ್ಚಿಬಿದ್ದಿತ್ತು. ವಿಕೃತ ಕಾಮಿಯೊಬ್ಬನ ಈ ನೀಚ ಹಗರಣವನ್ನು ಕನ್ನಡ ಪ್ಲಾನೆಟ್ ಬಯಲುಗೊಳಿಸಿತ್ತು.