ಕೋಲಾರದಲ್ಲಿ ಇಸ್ಪೀಟು ಅಡ್ಡೆಗೆ ಪೊಲೀಸ್ ಬರಬಹುದೆಂದು ಬೆದರಿ ಕೆರೆಗೆ ಹಾರಿದ ದುರ್ದೈವಿಯ ಸಾವು

Most read

ಕೋಲಾರ: ಇಸ್ಪೀಟು ಅಡ್ಡೆಯ ಮೇಲೆ ಪೋಲೀಸರು ದಾಳಿ ನಡೆಸಲಿದ್ದಾರೆ ಎಂಬ ಸುಳ್ಳು‌ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭೀತಿಗೆ ಒಳಗಾದ ವ್ಯಕ್ತಿಯೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿ ಕೆರೆಗೆ ಹಾರಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಗುರುವೊಳ್ಳಗಡ್ಡ ನಿವಾಸಿ ನಾರಾಯಣಪ್ಪನ ಮಗ ನರಸಿಂಹ (35 ) ಮೃತಪಟ್ಟ ದುರ್ದೈವಿ.

ಕೊಂಡಿರೆಡ್ಡಿ ಚೆರುವು ಸಮೀಪ ನಡೆಯುತ್ತಿದ್ದ ಇಸ್ಪೀಟು ಅಡ್ಡೆಯೊಂದರಲ್ಲಿ ಅಂದರ್ ಬಾಹರ್ ಆಟ ಆಡಿಸಲಾಗುತ್ತಿತ್ತು. ಈ ಅಡ್ಡೆಗೆ ಸುಮಾರು ಹತ್ತು ಕಿ.ಮೀ. ದೂರದ ಗ್ರಾಮವೊಂದಕ್ಕೆ ಅಲ್ಲಿ ನಡೆಯುತ್ತಿದ್ದ ಜಾತ್ರೆಯ ಬಂದೋಬಸ್ತ್ ಗಾಗಿ ಪೊಲೀಸರು ಆಗಮಿಸಿದ್ದರು. ಜಾತ್ರೆಗೆ ಬಂದ ಪೊಲೀಸರು ಕೊಂಡಿರೆಡ್ಡಿ ಚೆರುವು ಗ್ರಾಮಕ್ಕೂ ಬಂದಿದ್ದಾರೆ ಎಂದು ಸುಳ್ಳು ಸುದ್ದಿಯೊಂದು ಇಸ್ಪೀಟ್ ಆಡುತ್ತಿದ್ದವರಿಗೆ ರವಾನೆಯಾಗಿತ್ತು.

ಪೋಲೀಸರು ಬಂದೇ ಬಿಟ್ಟಿದ್ದಾರೆ ಎಂದು ಭಾವಿಸಿದ ಆರೋಪಿಗಳು ದಿಕ್ಕಾಪಾಲಾಗಿ ಓಡತೊಡಗಿದ್ದರು. ಈ ಪೈಕಿ ನರಸಿಂಹ ಓಡಿ ಹೋಗಿ ಕೆರೆಗೆ ಹಾರಿಕೊಂಡಿದ್ದಾನೆ. ಕೆರೆಯಲ್ಲಿ ಮುಳುಗಿ ಆತ ಅಲ್ಲೇ ಮೃತಪಟ್ಟಿದ್ದಾನೆ. ಕೆರೆಯಲ್ಲಿ ಹೂಳು‌ತುಂಬಿದ ಹಿನ್ನೆಲೆಯಲ್ಲಿ ಆತನ ರಕ್ಷಣೆ ಸಾಧ್ಯವಾಗಲಿಲ್ಲ.

ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೋಲೀಸು ಠಾಣಾ ವ್ಯಾಪ್ತಿಗೆ ಬರುವ ಕೊಂಡಿರೆಡ್ಡಿ ಚೆರುವುವಿನಲ್ಲಿ ಘಟನೆ ನಡೆದಿದ್ದು ಮೃತನ ಶವಕ್ಕಾಗಿ ಪೋಲೀಸರು ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳವೂ ಆಗಮಿಸಿದ್ದು, ಪೊಲೀಸರ ಕಾರ್ಯಾಚರಣೆಗೆ ಕೈ ಜೋಡಿಸಿದೆ.

More articles

Latest article