Thursday, July 25, 2024

ಒಬ್ಬಳ ಇಗೋ ತಣಿಸಲು ಇಂಥ ಕ್ರೌರ್ಯವೇ? ದರ್ಶನ್, ನಿಮಗೆ ಕ್ಷಮೆಯೇ ಇಲ್ಲ

Most read

ಯುವಕನೊಬ್ಬನ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ಮತ್ತು ಆತನ ಸಂಗಡಿಗರು ಬಂಧನಕ್ಕೊಳಗಾಗಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದುವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ಬೆಂಗಳೂರು ಪೊಲೀಸರು ಅತ್ಯಂತ ದಕ್ಷತೆ, ಚಾಣಾಕ್ಷತೆ ಮತ್ತು ವೃತ್ತಿಪರತೆಯಿಂದ ಪ್ರಕರಣವನ್ನು ನಿಭಾಯಿಸಿದ್ದಾರೆ. ದುಡ್ಡಿದ್ದವರ ದೌಲತ್ತಿನಲ್ಲಿ ಸುಲಭವಾಗಿ ಮುಚ್ಚಿಹೋಗಬಹುದಾಗಿದ್ದ ಪ್ರಕರಣವನ್ನು ಮೇಲೆತ್ತಿ ತಂದು ಒಂದು ತಾರ್ಕಿಕ ಅಂತ್ಯದತ್ತ ಕೊಂಡೊಯ್ಯುತ್ತಿದ್ದಾರೆ. ಹೀಗಾಗದೆ ಹೋಗಿದ್ದರೆ ಒಬ್ಬ ಅಮಾಯಕ ಯುವಕ ನಾಯಿಗಳು ಎಳೆದಾಡಿ ಬಿಟ್ಟ ಅನಾಥ ಶವವಾಗಿ, ಆತನ ಮನೆಯವರ ಪಾಲಿಗೆ ನಾಪತ್ತೆಯಾದವನಾಗಿ ಎಲ್ಲೋ ಹೂತುಹೋಗಿರುತ್ತಿದ್ದ. ‘ಬಡವರಿಗೆ ನ್ಯಾಯ ಸಿಗದು’ ಎಂಬ ಕ್ಲೀಷೆಯ ಮಾತುಗಳು ನಿಜವಾಗದಂತೆ ಪೊಲೀಸರು ಇದುವರೆಗೆ ನಡೆದುಕೊಂಡಿದ್ದಾರೆ.

ಒಂದು ಕೆಟ್ಟ ಸಂದೇಶಕ್ಕೆ ಒಬ್ಬನನನ್ನು ಹೀಗೆ ದಾರುಣವಾಗಿ ಹಿಂಸಿಸಿ ಕೊಲ್ಲಬೇಕಿತ್ತಾ? ಈ ಕ್ರೌರ್ಯಕ್ಕೆ ಏನಾದರೂ ಅರ್ಥವಿದೆಯಾ? ಒಂದು ಸಣ್ಣ ಪೊಲೀಸ್ ಕಂಪ್ಲೇಟಿನಿಂದಲೋ, ಒಂದು ಎಚ್ಚರಿಕೆಯಿಂದಲೋ ಮುಗಿಸಬಹುದಾಗಿದ್ದ ಪ್ರಕರಣವನ್ನು ವಿಕೃತವಾಗಿ ಕೊಲ್ಲುವ ಮಟ್ಟಕ್ಕೆ ಯಾಕೆ ತೆಗೆದುಕೊಂಡು ಹೋಗಲಾಯಿತು? ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ನಟ ದರ್ಶನ್ ಈ ಕೊಲೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದಾರೋ ಇಲ್ಲವೋ ಅದು ಎರಡನೇ ಪ್ರಶ್ನೆ. ಮೇಲ್ನೋಟಕ್ಕೆ ಎಲ್ಲವೂ ಅವರ ಅಣತಿಯಂತೆಯೇ ನಡೆದಿದೆ ಎಂಬುದು ಕಂಡುಬರುತ್ತಿದೆ. ಯಾಕೆಂದರೆ ಆತನ ಗೆಳತಿ ಪವಿತ್ರ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕ ಕೆಟ್ಟದಾಗಿ ಮೆಸೇಜ್ ಮಾಡಿದ್ದ. ಇದರಿಂದಾಗಿ ಆಕೆ ಸಿಟ್ಟಿಗೆದ್ದಿದ್ದರು. ದರ್ಶನ್ ಮತ್ತು ತಂಡ ಆತನನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದೆ. ಜೂನ್ 8ರಂದು ಪಟ್ಟಣಗೆರೆಯ ಶೆಡ್ ಒಂದರಲ್ಲಿ ಕೂಡಿಟ್ಟು ಕೊಡಬಾರದ ಹಿಂಸೆಗಳನ್ನು ನೀಡಿದೆ. ಆತ ಸತ್ತೇ ಹೋಗಿದ್ದಾನೆ. ಎದುರಿಗೆ ಹೆಣ ಬಿದ್ದಾಗ ಎಲ್ಲರೂ ಅಪ್ಪಟ ಕ್ರಿಮಿನಲ್ ಗಳ ರೀತಿಯೇ ವರ್ತಿಸಿದ್ದಾರೆ. ರಾತ್ರಿ 3.30ರ ಸುಮಾರಿಗೆ ಮೃತದೇಹವನ್ನು ಅಲ್ಲಿಂದ ಹೊತ್ತೊಯ್ದು ಸುಮನಹಳ್ಳಿಯ ರಾಜಾಕಾಲುವೆ ಬಳಿ ಎಸೆದುಹೋಗಿದ್ದಾರೆ. ಕಾಲುವೆಯಲ್ಲಿ ಹೆಣ ಕೊಚ್ಚಿಹೋಗಬಹುದು ಎಂದು ಅವರು ಭಾವಿಸಿದ್ದರಬಹುದು. ಅದು ಅಲ್ಲೇ ಉಳಿದುಕೊಂಡಿದೆ. ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ಹೋಗಿದೆ. ಪ್ರಕರಣ ತೆರೆದುಕೊಳ್ಳುವುದಕ್ಕೆ ಶುರುವಾಗಿದೆ.

ರೇಣುಕಾಸ್ವಾಮಿಯ ಮೃತದೇಹ ಪೊಲೀಸರ ಕೈಗೆ ಸಿಕ್ಕ ನಂತರ ಪ್ರಕರಣವನ್ನು ಮುಚ್ಚಿಹಾಕಲೆಂದೇ ಮೂವರನ್ನು ಸರಂಡರ್ ಮಾಡಿಸಲಾಗಿದೆ. ಹಣಕಾಸಿನ ವ್ಯವಹಾರಕ್ಕಾಗಿ ನಾವೇ ಕೊಂದೆವು ಎಂದು ಅವರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಮೃತದೇಹವೂ ಸಿಕ್ಕಿದೆ, ಕೊಲೆಗಡುಕರೂ ಸಿಕ್ಕಿದ್ದಾರೆ, ಕೊಲೆಗೆ ಕಾರಣವೂ ಇದೆ, ಇನ್ನೇನು ಬೇಕು ಎಂದು ಪೊಲೀಸರು ಸುಮ್ಮನಾಗಬಹುದಿತ್ತು. ಆದರೆ ಅವರು ಇದರ ಒಳಸುಳಿಗಳನ್ನು ಊಹಿಸಿ ಆರೋಪಿಗಳ ಬಾಯಿಬಿಡಿಸಿದ್ದಾರೆ. ಒಂದೊಂದಾಗಿ ಮಾಹಿತಿ, ಸಾಕ್ಷಿಗಳನ್ನು ಕಲೆ ಹಾಕಿ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ದೊಡ್ಡ ತಂಡವನ್ನೇ ಬಂಧಿಸಿದ್ದಾರೆ.

ಪವಿತ್ರ ಗೌಡ ಅವರಿಗೆ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಸಂದೇಶದಿಂದ ನೋವಾಗಿರಬಹುದು, ಸಿಟ್ಟೂ ಬಂದಿರಬಹುದು. ಇದಕ್ಕಾಗಿ ಅವರು ಒಂದು ಪೊಲೀಸ್ ದೂರು ನೀಡಬಹುದಿತ್ತು. ಪೊಲೀಸರ ಮೇಲೆ ಒತ್ತಡ ಹೇರಿ ಆತನ‌ ಬಂಧನಕ್ಕೂ ಪ್ರಯತ್ನಿಸಬಹುದಿತ್ತು. ಅಥವಾ ರೇಣುಕಾಸ್ವಾಮಿಯ ಜೊತೆಯೇ ಮಾತಾಡಿ ಒಮ್ಮೆ ಗದರಿ ಅಲ್ಲಿಗೆ ಮುಗಿಸಬಹುದಿತ್ತು. ಆದರೆ ಅವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ನಿರ್ಧರಿಸಿದ್ದರು. ರೇಣುಕಾಸ್ವಾಮಿಗೆ ಪಾಠ ಕಲಿಸಲು ದರ್ಶನ್ ಮೇಲೆ ಒತ್ತಡ ಹೇರಿದರು. ದರ್ಶನ್ ಅಣತಿಯ ಮೇರೆಗೆ ಇಡೀ ಒಂದು ತಂಡವೇ ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಸಣ್ಣ ನೌಕರಿ ಮಾಡಿಕೊಂಡಿರುವ ಯಕಶ್ಚಿತ್ ಮಧ್ಯಮವರ್ಗದ ಒಬ್ಬ ಯುವಕನ ಬೇಟೆಗೆ ಇಳಿದುಬಿಟ್ಟಿತು.

33 ವರ್ಷದ ಪೀಚಲು ದೇಹದ ಒಬ್ಬ ಹುಡುಗನ ಮುಂದೆ ಹತ್ತು-ಹನ್ನೆರಡು ದಾಂಡಿಗರು ತಮ್ಮ ಶೌರ್ಯ, ಪೌರುಷ ಪ್ರದರ್ಶನ ಮಾಡಿಕೊಂಡಿದ್ದಾರೆ. ಆರೋಪಿಗಳ ಹಿನ್ನೆಲೆಯನ್ನು ನೋಡಿ, ಅವರು ಯಾರೂ ಚಿಕ್ಕವಯಸ್ಸಲ್ಲೇ ದಾರಿತಪ್ಪಿದ ಪುಡಿ ರೌಡಿಗಳೇನೂ ಅಲ್ಲ. ಬಹುತೇಕರು ಬದುಕಿನಲ್ಲಿ ನೆಲೆನಿಂತಿರುವ ಉದ್ಯಮಿಗಳು, ಧನಿಕರು. ಅವರ ಎದುರು ರೇಣುಕಾಸ್ವಾಮಿ ಏನೇನೂ ಆಗಿರಲಿಲ್ಲ. ತಿಂಗಳಿಗೆ ಹದಿನೈದೋ ಇಪ್ಪತ್ತೋ ಸಾವಿರಕ್ಕೆ ದುಡಿಯುವ ಯುವಕ. ಹೋದವರ್ಷವಷ್ಟೇ ಮದುವೆಯಾಗಿದ್ದಾನೆ, ಹೆಂಡತಿ ಗರ್ಭಿಣಿ. ರಿಟೈರಾದ ಅಪ್ಪ, ಜೊತೆಗೆ ಅಮ್ಮ. ಒಬ್ಬನೇ ಮಗ. ಇಂಥ ಸಣ್ಣ ಹಿನ್ನೆಲೆಯ ಬಡಪಾಯಿ ಯುವಕನನ್ನು ಅಷ್ಟೊಂದು ಜನ ದಾಂಡಿಗರು ಸೇರಿ ಹರಿದುತಿಂದುಬಿಟ್ಟರಲ್ಲ, ಇವರಿಗೆ ಕ್ಷಮೆ ಇರಲು ಸಾಧ್ಯವೇ?

ನಿಜ, ರೇಣುಕಾಸ್ವಾಮಿಯವರನ್ನು ದರ್ಶನ್ ಗ್ಯಾಂಗ್ ಕೊಲ್ಲಬೇಕೆಂದು ಅಂದುಕೊಂಡಿರಲಿಕ್ಕಿಲ್ಲ. ಹೊಡೆದು, ಹಣ್ಣುಗಾಯಿ ನೀರುಗಾಯಿ ಮಾಡಿ ಪವಿತ್ರಗೌಡಳ ಇಗೋ ತಣಿಸುವುದು ಅವರ ಉದ್ದೇಶವಾಗಿರಬಹುದು ಎಂದುಕೊಳ್ಳೋಣ. ಯಾರ ಏಟು ಎಲ್ಲಿಗೆ ಬಿತ್ತೋ? ಜೀವಮಾನದಲ್ಲಿ ಎಂದೂ ಅನುಭವಿಸದ ಚಿತ್ರಹಿಂಸೆಗೆ ಆತ ನೀಗಿಕೊಂಡಿದ್ದಾನೆ. ಆತ ಹೀಗೆ ಸತ್ತೇ ಬಿಡಬಹುದು ಎಂಬ ವಿವೇಕ ಆ ದಾಂಡಿಗರಲ್ಲಿ ಒಬ್ಬನಿಗೂ ಹುಟ್ಟಲಿಲ್ಲವೇ? ‘ಇದೇನೋ ಸರಿಹೋಗ್ತಾ ಇಲ್ಲ, ಇಲ್ಲಿಗೆ ನಿಲ್ಲಿಸೋಣ’ ಎಂದು ಯಾರಿಗೂ ಅನಿಸಲೇ ಇಲ್ಲವೇ? ಮನುಷ್ಯ ಸ್ವಭಾವತಃ ಕ್ರೂರಿ ಎಂಬ ಮಾತಿದೆ. ಆದರೆ ಈ ಕ್ರೌರ್ಯಕ್ಕೆ ಅರ್ಥ ಹುಡುಕಲು ಸಾಧ್ಯವೇ? ಒಬ್ಬ ಅಮಾಯಕನ ಜೀವದ ಎದುರು ಒಬ್ಬ ಸಿರಿವಂತ ದುರಹಂಕಾರಿ ಹೆಣ್ಣಿನ ಇಗೋ ದೊಡ್ಡದಾಗಿಹೋಯಿತಾ?

ದರ್ಶನ್ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ. ಬಹುಶಃ ಅವರಿಗೆ ಇರುವಷ್ಟು ಅಭಿಮಾನಿ ಬಳಗ ಕನ್ನಡದ ಯಾವ ನಟರಿಗೂ ಇಲ್ಲ. ಅವರಿಗೆಲ್ಲ ಈಗ ಯಾವ ಸಂದೇಶವನ್ನು ನೀಡಿದಂತಾಯಿತು? ದರ್ಶನ್ ಹಿಂದೆ ಪತ್ನಿಯನ್ನು ಹೊಡೆದು ಜೈಲಿಗೆ ಹೋಗಿದ್ದರು. ಆತ ಹೊಡೆದಿದ್ದು ತನ್ನ ಹೆಂಡತಿಗಲ್ಲವೇ? ಅದರಲ್ಲಿ ತಪ್ಪೇನು ಎಂದು ಅಭಿಮಾನಿಗಳು ವಾದಿಸಿದ್ದರು. ಈಗಲೂ ಅಷ್ಟೆ, ರೇಣುಕಾಸ್ವಾಮಿ ತಪ್ಪಿಗೆ ನಮ್ಮ ಬಾಸ್ ಶಿಕ್ಷೆ ಕೊಟ್ಟಿದ್ದಾರೆ, ಅದರಲ್ಲಿ ತಪ್ಪೇನು ಎಂದು ಇದೇ ಅಭಿಮಾನಿಗಳು ಹೇಳುತ್ತಿದ್ದಾರೆ. ಹೀಗೆ ಎಲ್ಲರೂ ಒಂದು ಕೆಟ್ಟ ಸಂದೇಶಕ್ಕೆ ಕೊಲೆ ಮಾಡಲು ನಿಂತರೆ ನಾಡಿನ ತುಂಬ ಹೆಣದ ರಾಶಿಯೇ ಬೀಳಬೇಕಾಗುತ್ತದೆ. ಈ ಕುರುಡು ಅಭಿಮಾನಿಗಳಿಗೆ ಬುದ್ಧಿ ಹೇಳುವವರು ಯಾರು?

ಪಟ್ಟಣಗೆರೆಯಲ್ಲಿ ನಡೆದ ಕ್ರೌರ್ಯ ಅತ್ಯಂತ ಹೇಯ, ಭೀಕರ ಮತ್ತು ಅಕ್ಷಮ್ಯ. ಅದರಲ್ಲಿ ಎರಡನೇ ಮಾತೇ ಇಲ್ಲ. ಮನುಷ್ಯರಾದವರು ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ಪೊಲೀಸರು ಈವರೆಗೆ ತೋರಿದ ವೃತ್ತಿಪರತೆಯನ್ನೇ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ತೋರಬೇಕು. ಸರಿಯಾದ ಸಾಕ್ಷಿಗಳನ್ನು ನ್ಯಾಯಾಲಯದ ಮುಂದಿಡಬೇಕು. ಪ್ರಕರಣ ದಿಕ್ಕುತಪ್ಪದಂತೆ ನೋಡಿಕೊಳ್ಳಬೇಕು. ತ್ವರಿತಗತಿಯಲ್ಲಿ ವಿಚಾರಣೆ ನಡೆದು ಎಲ್ಲ ಆರೋಪಿಗಳಿಗೆ ಶಿಕ್ಷೆಯಾಗುವಂತಾಗಬೇಕು. ದರ್ಶನ್ ಆಗಲೀ ಮತ್ತೊಬ್ಬರಾಗಲೀ ದೇಶದ ಕಾನೂನಿನ ಅಡಿಯಲ್ಲಿ ವಿಶೇಷ ವ್ಯಕ್ತಿಗಳಾಗುವುದಿಲ್ಲ. ಆರೋಪಿಗಳ ಪರವಾಗಿ ವಾದಿಸಲು ಮುಂದಿನ ದಿನಗಳಲ್ಲಿ ಪ್ರಖ್ಯಾತ ಕ್ರಿಮಿನಲ್ ವಕೀಲರುಗಳ ದಂಡೇ ಸಾಲುಸಾಲಾಗಿ ನಿಲ್ಲಬಹುದು. ಹಣ, ಪ್ರಭಾವ, ತೋಳ್ಬಲ ಎಲ್ಲದರ ಎದುರು ನಿಂತು ಗೆಲ್ಲಬೇಕಿರುವುದು ನಾಡಿನ ಜನರ ಆತ್ಮಸಾಕ್ಷಿ. ಅದಾಗಲಿ, ಆ ಹುಡುಗನ ಸಾವಿಗೆ ನ್ಯಾಯ ಸಿಗಲಿ. ಪಟ್ಟಣಗೆರೆಯಲ್ಲಿ ಹರಿದ ಅವನ ಕಣ್ಣೀರು, ಆರ್ತನಾದಕ್ಕೆ ಒಂದು ಬೆಲೆಯಾದರೂ ಸಿಗಲಿ. ಇದು ನಮ್ಮ ಆಶಯ.

More articles

Latest article