ರಂಗ ಪ್ರಯೋಗ ವಿಮರ್ಶೆ | ತೆರಿಗೆ ಭಯೋತ್ಪಾದನೆಗೆ ಪ್ರತಿರೋಧ ತೋರುವ “ಕಾಕನಕೋಟೆ”

ಕನ್ನಡದ ಸಣ್ಣ ಕಥೆಗಳ ಪಿತಾಮಹ ಎಂದೇ ಹೆಸರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರವರು 1938 ರಲ್ಲಿ ಬರೆದು ಪ್ರಕಟಿಸಿದ ಓದು ನಾಟಕ “ಕಾಕನಕೋಟೆ”. ನಾಡಿನವರಿಂದ ಕಾಡಿನವರ ಮೇಲೆ ಕಂದಾಯ ವಸೂಲಿ ಹೆಸರಲ್ಲಿ ನಡೆಯುವ ಶೋಷಣೆ  ದಬ್ಬಾಳಿಕೆಯನ್ನು ಹಾಗೂ ಹಾಡಿ ಜನರ ಪ್ರತಿರೋಧವನ್ನು ಈ ಸಾಮಾಜಿಕ- ಐತಿಹಾಸಿಕ  ವಸ್ತು ವಿಷಯದ ಕಾಲ್ಪನಿಕ ನಾಟಕವು ಪ್ರಸ್ತುತಪಡಿಸುತ್ತದೆ.

70 ರ ದಶಕದಲ್ಲಿ ನಟರಂಗ ರಂಗತಂಡದಿಂದ ನಿರ್ಮಾಣಗೊಂಡಿದ್ದ “ಕಾಕನಕೋಟೆ” ನಾಟಕವು ಆ ಕಾಲದಲ್ಲಿ ಕನ್ನಡ ರಂಗಭೂಮಿಯಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. 1977 ರಲ್ಲಿ ಈ ನಾಟಕವನ್ನು ಆಧರಿಸಿ ‘ಕಾಕನಕೋಟೆ’ ಸಿನೆಮಾವನ್ನು ಸಿ.ಆರ್.ಸಿಂಹ ರವರು ನಿರ್ದೇಶಿಸಿದ್ದು ಲೋಕೇಶ್, ಶ್ರೀನಾಥ್, ಲೋಕನಾಥ್, ಗಿರಿಜಾ ಲೋಕೇಶರವರು ನಟಿಸಿ ಮುಂದೆ ಹೆಸರುವಾಸಿಯಾದರು. ನಟರಂಗ, ರವಿ ಕಲಾವಿದರು, ಮೈಸೂರು ರಂಗಾಯಣಗಳು ಈ ‘ಕಾಕನಕೋಟೆ’ ನಾಟಕವನ್ನು ಹಲವು ಬಾರಿ ಪ್ರಯೋಗ ಮಾಡಿದ್ದಾರೆ.

 ಕನ್ನಡ ರಂಗಭೂಮಿಯಲ್ಲಿ ಕುರುಬ ಸಮುದಾಯದ ಧ್ವನಿಯನ್ನು ಎತ್ತಿ ಹಿಡಿದ ಈ  ಶಕ್ತಿಶಾಲಿ “ಕಾಕನಕೋಟೆ” ನಾಟಕವನ್ನು ‘ರಂಗದರ್ಶನ ಪ್ರದರ್ಶನ ಕಲಾಕೇಂದ್ರ’ ರಂಗ ತಂಡಕ್ಕೆ ಮೈಕೋ ಶಿವಶಂಕರರವರು ನಿರ್ದೇಶಿಸಿದ್ದು ಮಾರ್ಚ್ 24 ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು.

ಮೈಸೂರಿನ ಮಹಾರಾಜರಾಗಿದ್ದ  ಶ್ರೀ ರಣಧೀರ ಕಂಠೀರವ ನರಸರಾಜರ ಆಳ್ವಿಕೆಯಲ್ಲಿ ಗುಡ್ಡಗಾಡಿನ ಹಾಡಿ ಕುರುಬರು ಹೆಗ್ಗಡದೇವನಕೋಟೆಯ ಹೆಗ್ಗಡೆಯವರಿಗೆ ಸಲ್ಲಿಸಬೇಕಾಗಿದ್ದ ಕಂದಾಯದ ವಿಚಾರದಲ್ಲಿ ವಿವಾದ ಉಂಟಾಯಿತು. ಹಾಡಿಯ ನಾಯಕ ಕಾಚ ಎಂಬವನು ಮಹಾರಾಜರ ಆನೆ ಆಲಯದಲ್ಲಿ ಕೆಲಸ ಮಾಡಿ ಮಹಾರಾಜರನ್ನು ಮತ್ತೇರಿದ ಆನೆಯಿಂದ ರಕ್ಷಿಸಿ ಮರಳಿ ಹಾಡಿಗೆ ಮರಳಿದ್ದ. ಕಾಚನ ಮನವಿಯ ಮೇರೆಗೆ ಮಹಾರಾಜರು ಮಧ್ಯಪ್ರವೇಶ ಮಾಡಿ  ತೆರಿಗೆ ತಿಕ್ಕಾಟದ ಸಮಸ್ಯೆ ಬಗೆಹರಿಸಿ, ಕಾಚನ ಮಗಳಿಗೂ, ಹೆಗ್ಗಡೆ ಮಗನಿಗೂ ಮದುವೆ ಮಾಡಿಸಿ ಆ ಪ್ರದೇಶಕ್ಕೆ ಕಾಕನಕೋಟೆ ಎಂದು ನಾಮಕರಣ ಮಾಡುತ್ತಾರೆ ಎಂಬುದು ಇಡೀ ನಾಟಕದ ಸಂಕ್ಷಿಪ್ತ ಕಥೆ.

ಈಗ ಸರಕಾರಗಳು ಜನಗಳ ಮೇಲೆ ಮಾಡುತ್ತಿರುವ ಟ್ಯಾಕ್ಸ್ ಟೆರರಿಸಂ ರಾಜರ ಕಾಲದಲ್ಲೂ ಇತ್ತೆಂಬುದಕ್ಕೆ ಈ ನಾಟಕವೇ ಸಾಕ್ಷಿ. ಸರಕಾರ ಮತ್ತು ಜನರ ನಡುವೆ ಕಂದಾಯ ವಸೂಲಿ ಮಾಡಲು ನೇಮಕವಾಗಿರುವ ಮಧ್ಯವರ್ತಿಗಳ ದಮನಕಾರಿ ನೀತಿಯನ್ನೂ ಈ ನಾಟಕ ಹೇಳುತ್ತದೆ. ಆಗ ಹೆಗ್ಗಡೆಯವರಿದ್ದರು ಈಗ ತೆರಿಗೆ ಅಧಿಕಾರಿಗಳಿದ್ದಾರೆ ಅಷ್ಟೇ ವ್ಯತ್ಯಾಸ. ಯಾವಾಗ ತೆರಿಗೆ ಹೊರೆಯಿಂದ ಪೀಡಿತರಾದವರು ತಿರುಗಿ ಬಿದ್ದು ಪ್ರತಿಭಟಿಸುತ್ತಾರೋ ಆಗ ಸಂಘರ್ಷ ಉಂಟಾಗುತ್ತದೆ, ಪ್ರಭುತ್ವವೂ ರಾಜಿ ಸಂಧಾನಕ್ಕೆ ಮುಂದಾಗುತ್ತದೆ. ಕಂದಾಯ ಹೇರಿಕೆಯ ವಿರುದ್ಧ ಕಾಡು ಕುರುಬರ ಪ್ರತಿರೋಧವನ್ನು ಕಾಕನಕೋಟೆ ನಾಟಕ ತೋರಿಸುತ್ತದೆ. ಇದರ ನಡುವೆ ಮಧ್ಯವರ್ತಿ ಹೆಗ್ಗಡೆ ಮಗನಿಗೂ, ಪ್ರತಿರೋಧದ ನಾಯಕತ್ವ ವಹಿಸಿದ ಕಾಚನ ಮಗಳಿಗೂ ಮದುವೆ ಮಾಡಿಸುವ ಮೂಲಕ ಪ್ರಭುತ್ವವು ಸಂಘರ್ಷವನ್ನು ಶಮನಗೊಳಿಸುತ್ತದೆ, ನಾಟಕ ಸುಖಾಂತ್ಯವಾಗುತ್ತದೆ.

ಔಟ್ ಆಫ್ ಡೇಟೆಡ್ ಎನ್ನಿಸುವ ಈ ನಾಟಕವನ್ನು ಸಮಕಾಲೀನಗೊಳಿಸುವುದೇ ಸವಾಲಿನ ಕೆಲಸ. ಆದರೂ “ಕಾಡು ನಾಡಾಗುವುದು ಬೇಡ, ಕಾಡಿನಲ್ಲಿದ್ದವರನ್ನು ಅಲ್ಲಿಯೇ ನೆಮ್ಮದಿಯಾಗಿ ಬದುಕಲು ಬಿಡಿ” ಎನ್ನುವ ಸಂದೇಶವನ್ನು ಈ ನಾಟಕದ ಮೂಲಕ ನಿರ್ದೇಶಕರು ಕೊಟ್ಟಿದ್ದಾರೆ. ಮೀಸಲು ಅರಣ್ಯದ ಹೆಸರಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಅರಣ್ಯ ವಾಸಿಗಳನ್ನು ಎತ್ತಂಗಡಿ ಮಾಡಿಸುತ್ತಿರುವ ಪ್ರಸ್ತುತ ಕಾಲದಲ್ಲಿ “ಕಾಡಿನ ಜನರನ್ನು ಕಾಡಿನಲ್ಲೇ ಇರಲು ಬಿಡಿ” ಎಂದು ಹೇಳುವ ಈ ನಾಟಕ ಸರಕಾರಕ್ಕೆ ಸ್ಪಷ್ಟ ಸಂದೇಶವನ್ನು ಕೊಡುವಂತಿದೆ.  

ಇಂತಹ ನಾಟಕದ ಪ್ರದರ್ಶನವನ್ನು ಸೀಮಿತ ಸಂಪನ್ಮೂಲ ಪರಿಕರಗಳನ್ನು ಬಳಸಿ ಅತ್ಯಂತ ಸರಳವಾಗಿ ಕಟ್ಟಿ ಕೊಡುವ ಪ್ರಯತ್ನವನ್ನು ನಿರ್ದೇಶಕ ಮೈಕೋ ಶಿವಶಂಕರರವರು ಮಾಡಿದ್ದಾರೆ. ಹಾಡು ಸಂಗೀತ ಹಾಗೂ ನಟರ ಅಭಿನಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಕಾಲ ಪ್ರದೇಶ ಸನ್ನಿವೇಶ ಹಾಗೂ ಪಾತ್ರಗಳಿಗೆ ತಕ್ಕುದಾಗಿ ವಸ್ತ್ರ ವಿನ್ಯಾಸ ಮಾಡಿದ್ದರೆ ಚೆನ್ನಾಗಿತ್ತು. ಕರಣಿಕ ಪಾತ್ರದಾರಿ ಯಾವುದೋ ಗುಡಿಯ ಪೂಜಾರಿಯಂತೆ ಕಾಣುತ್ತಾನೆ, ಕಾಡಿನ ಹಾಡಿಯ ಹೆಣ್ಣುಮಕ್ಕಳು ನಾಡಿನ ಮಹಿಳೆಯರಂತೆ ಸೀರೆಯುಟ್ಟು ಕಂಗೊಳಿಸುತ್ತಾರೆ, ಕಾಡು ಜನರು ನಾಡಿನ ಹಳ್ಳಿ ವೇಷ ತೊಟ್ಟಿದ್ದಾರೆ, ಹೆಗ್ಗಡೆ ಹಾಗೂ ಆತನ ಮಗ ಸಾಮಂತ ರಾಜರ ಪೋಷಾಕಿನಲ್ಲಿದ್ದಾರೆ.. ಇವೆಲ್ಲಾ ಯಾಕೋ ಪಾತ್ರ ಪೋಷಣೆಗೆ ಹಿನ್ನಡೆ ಮಾಡುವಂತಿವೆ. ಆರಂಭದ ದೃಶ್ಯ ಹಾಗೂ ರೊಮ್ಯಾಂಟಿಕ್ ದೃಶ್ಯದಲ್ಲಿ ಬರುವ ಕೆಲವು ಯುವಕರಿಗೆ ಬ್ಯಾಂಡ್ ಸೆಟ್ಟಿನವರ ಮಾದರಿಯ ಯೂನಿಫಾರಂ ಹಾಕಿಸಿದ್ದು ಆಭಾಸಕಾರಿಯಾಗಿದೆ. ಪಾತ್ರೋಚಿತವಾಗಿ ಕಾಸ್ಟ್ಯೂಮ್ ಆಯ್ಕೆಯಲ್ಲಿ ನಿರ್ದೇಶಕರು ಮುತುವರ್ಜಿ ವಹಿಸಬೇಕಿದೆ. ಹಾಗೆಯೇ ಕೆಲವು ದೃಶ್ಯಗಳಲ್ಲಿ ಪಾತ್ರಧಾರಿಗಳನ್ನು ಸಾಲಾಗಿ ನಿಲ್ಲಿಸಿ ಸಂಭಾಷಣೆ ಹೇಳಿಸುವ ಬದಲಾಗಿ ಗುಂಪು ಸಂಯೋಜನೆಯನ್ನು ಕಲಾತ್ಮಕವಾಗಿ ಕಟ್ಟಬಹುದಾಗಿದೆ. ನಟರ ಚಲನೆಗೆ ಅಡೆತಡೆ ಒಡ್ಡುವ ಫ್ಲಾಟ್‌ಫಾರಂಗಳನ್ನು ತೆರವುಗೊಳಿಸಿ ಅಗತ್ಯವಿದ್ದಾಗ ಮಾತ್ರ ಬಳಸಬಹುದಾಗಿದೆ. ಬಹುತೇಕ ಪ್ರಮುಖ ದೃಶ್ಯಗಳು ರಂಗವೇದಿಕೆಯ ಬಲಭಾಗಕ್ಕೆ ಸೀಮಿತವಾಗಿದ್ದು ಸ್ಟೇಜ್ ಬ್ಯಾಲೆನ್ಸ್ ತಪ್ಪಿದಂತಾಗಿದೆ. ಸೆಂಟರ್ ಸ್ಟೇಜ್ ಬಳಸಿದ್ದರೆ ಇನ್ನೂ ಸೂಕ್ತವಾಗಬಹುದಾಗಿತ್ತು. ಬ್ಲಾಕಿಂಗ್, ಪ್ಲೇಸ್‌ಮೆಂಟ್ ಮತ್ತು ಮೂವ್‌ಮೆಂಟ್ ಗಳತ್ತಲೂ ನಿರ್ದೇಶಕರು ಚಿತ್ತ ಹರಿಸಬೇಕಿದೆ. ಮೊದಲ ಪ್ರದರ್ಶನದಲ್ಲಿ ಈ ರೀತಿಯ ಲೋಪಗಳಾಗಬಹುದು, ಮುಂದಿನ ಪ್ರದರ್ಶನಗಳಲ್ಲಿ ಸರಿಪಡಿಸಬಹುದಾಗಿದೆ.

ಇಡೀ ನಾಟಕಕ್ಕೆ ಹಾಡು ಮತ್ತು ಸಂಗೀತಗಳು ಪ್ರಧಾನ ಕೊಡುಗೆ ಕೊಟ್ಟಿವೆ. ಕಾಚನ ಮಗಳು ಮೊಲ್ಲೆ ಹಾಗೂ ಹೆಗ್ಗಡೆಯ ಮಗ ಚಿಕ್ಕಯ್ಯನ ರೊಮ್ಯಾಂಟಿಕ್ ದೃಶ್ಯ ಸೊಗಸಾಗಿ ಮೂಡಿ ಬಂದಿದೆ. ರೂಪಕವಾಗಿ ಬಳಸಲಾದ ಹೂವು ದುಂಬಿಗಳ ಪರಿಕಲ್ಪನೆ ಆಕರ್ಷಣೀಯವಾಗಿದೆ.

ಇಡೀ ನಾಟಕವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ನಾಟಕವನ್ನು ದಡ ಸೇರಿಸಿದ್ದು ಕಾಚ ಪಾತ್ರದ ಈಶ್ವರ್ ದಳರವರ ಅಭಿನಯ. ಉಳಿದೆಲ್ಲಾ ನಟವರ್ಗ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ.

ಒಟ್ಟಾರೆಯಾಗಿ ಈ ನಾಟಕ ಗಟ್ಟಿಯಾಗಿ ನಿಲ್ಲುವ ಎಲ್ಲಾ ಲಕ್ಷಣಗಳಿವೆ. ಪ್ರತಿಯೊಂದು ಪಾತ್ರಧಾರಿಗಳು ವೃತ್ತಿಪರತೆಯನ್ನು ಅಭಿನಯದಲ್ಲಿ ಮೈಗೂಡಿಸಿಕೊಂಡರೆ, ನಿರ್ದೇಶಕರು ರಂಗವಿನ್ಯಾಸ, ವಸ್ತ್ರ ವಿನ್ಯಾಸ ಹಾಗೂ ಇತರೇ ತಾಂತ್ರಿಕ ಸಂಗತಿಗಳ ಮೇಲೆ ನಿಗಾ ವಹಿಸಿದರೆ ಕನ್ನಡ ರಂಗಭೂಮಿಗೆ ಉತ್ತಮ ನಾಟಕವೊಂದು ದಕ್ಕಿದಂತಾಗುತ್ತದೆ. ಆ ಕುರಿತ ಅಪಾರ ನಿರೀಕ್ಷೆಯನ್ನು “ಕಾಕನಕೋಟೆ” ಹುಟ್ಟುಹಾಕುವಂತಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- http://ರಂಗ ಪ್ರಯೋಗ ವಿಮರ್ಶೆ | ಅಪಾರ ನಿರೀಕ್ಷೆಯನ್ನು ನಿರಾಸೆಗೊಳಿಸಿದ “ಅಂಬೇಡ್ಕರ್ ಕೊಲ್ಯಾಜ್” https://kannadaplanet.com/theatre-ambedkar-collage-disappointed-with-huge-expectation

More articles

Latest article

Most read