ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿ, ರಾಜ್ಯದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಕೋರಿ 18 ಅಂಶಗಳ ಬೇಡಿಕೆಗಳ ಮವಿ ಪತ್ರವನ್ನು ಸಲ್ಲಿಸಿದರು.
ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಕೊಟ್ಟ 18 ಬೇಡಿಕೆಗಳೇನು?
ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗೆ ಮನವಿ. ರಾಜ್ಯ ಸರ್ಕಾರವು 1,123 ಎಕರೆ ಭೂಮಿಯನ್ನು ನೀಡಿದ್ದರೂ ಈ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ. ಇದನ್ನು ಪುನರುಜ್ಜೀವನಗೊಳಿಸಲು ಮನವಿ
ಮೈಸೂರಿಗೆ ಹೈ-ಸ್ಪೀಡ್ ರೈಲು ವಿಸ್ತರಣೆ ಮನವಿ. ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್ನಲ್ಲಿ ಬೆಂಗಳೂರು-ಮೈಸೂರು ವಿಭಾಗವನ್ನು ಸೇರಿಸಲು ಕೋರಿಕೆ
ಬೆಂಗಳೂರು ಉಪನಗರ ರೈಲು ಮತ್ತು ಮುಂಬೈ ಹೈ-ಸ್ಪೀಡ್ ಕಾರಿಡಾರ್ ಕುರಿತು ಮನವಿ. ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಮಾಡಲು ಮತ್ತು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕವನ್ನು ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಿಸಲು ವಿನಂತಿ
ಜಲ ಜೀವನ್ ಮಿಷನ್ ಕೇಂದ್ರ ಸರ್ಕಾರದಿಂದ ಬರಬೇಕಾದ 17,554 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಲು ಮನವಿ.
ಗ್ರಾಮ ಪಂಚಾಯತ್ಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಗೆ ಮನವಿ. 2025-26ನೇ ಸಾಲಿಗೆ ಬರಬೇಕಾದ ₹2,860 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲು ಮನವಿ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವಿಚಾರ ಮನವಿ. ಕಳೆದ 12 ವರ್ಷಗಳಿಂದ ಯಾವುದೇ ಪ್ರಮುಖ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮಂಜೂರಾಗಿಲ್ಲ. ಬಾಕಿ ಇರುವ ಯೋಜನೆಗಳ ಮಂಜೂರಾತಿಗೆ ಕೋರಿಕೆ.
ಕಂದಾಯ ಕೊರತೆ ಅನುದಾನ ಬಿಡುಗಡೆಗೆ ಮನವಿ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ₹5,495 ಕೋಟಿ ರೂ. ಬಾಕಿ ಅನುದಾನದ ಬಿಡುಗಡೆಗೆ ವಿನಂತಿ.
ಬೆಂಗಳೂರಿಗೆ ವಿಶೇಷ ಅನುದಾನಕ್ಕೆ ಮನವಿ. ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹26,000 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲು ಕೋರಿಕೆ.
ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ಮನವಿ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡಲು ಕೇಂದ್ರಕ್ಕೆ ಒತ್ತಾಯ.
ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಲು ಮನವಿ. ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದ್ದ 5,300 ಕೋಟಿ ರೂ. ಸಹಾಯಧನ ಬಿಡುಗಡೆ ಮಾಡಲು ಮತ್ತು ಇದಕ್ಕೆ ‘ರಾಷ್ಟ್ರೀಯ ಯೋಜನೆ’ ಎಂಬ ಸ್ಥಾನಮಾನ ನೀಡಲು ಕೋರಿಕೆ.
ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣ-2 (KWDT-II) ಅಧಿಸೂಚನೆಗೆ ಮನವಿ. ಈ ನ್ಯಾಯಾಧೀಕರಣದ ತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸಲು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಲು ಮನವಿ.
ಕಳಸಾ ನಾಲಾ ಯೋಜನೆ (ಮಹದಾಯಿ) ಬಗ್ಗೆ ಮನವಿ. ಕುಡಿಯುವ ನೀರಿನ ಉದ್ದೇಶದ ಈ ಯೋಜನೆಗೆ ವನ್ಯಜೀವಿ ವಿಭಾಗದಿಂದ ಶೀಘ್ರವಾಗಿ ಅನುಮತಿ ಕೊಡಿಸಲು ಮನವಿ.
ನದಿಗಳ ಜೋಡಣೆ ಯೋಜನೆಯಲ್ಲಿ ಪಾಲು ಬಗ್ಗೆ ಮನವಿ. ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ ನದಿ ಜೋಡಣೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ಹಂಚಿಕೆ ಮಾಡಲು ಒತ್ತಾಯ.
9ನೇ ವೇಳಾಪಟ್ಟಿಗೆ ಮೀಸಲಾತಿ ಪಾಲಿಸಿ ಸೇರ್ಪಡೆ ಮನವಿ. ರಾಜ್ಯದ 56% ಮೀಸಲಾತಿ ನೀತಿಯನ್ನು ಸಂವಿಧಾನದ ಒಂಬತ್ತನೇ ವೇಳಾಪಟ್ಟಿಗೆ ಸೇರಿಸಲು ಮನವಿ.
ಪರಿಶಿಷ್ಟ ಪಂಗಡದ (ST) ಪಟ್ಟಿಗೆ ಸೇರ್ಪಡೆಗೆ ಮನವಿ. ರಾಜ್ಯ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ವಿನಂತಿ.
ಕಲ್ಯಾಣ ಕರ್ನಾಟಕಕ್ಕೆ ಆರ್ಥಿಕ ಬೆಂಬಲ ನೀಡಲು ಮನವಿ. ಆರ್ಟಿಕಲ್ 371(J) ಅನ್ವಯ ಈ ಪ್ರದೇಶದ ಅಭಿವೃದ್ಧಿಗೆ ವಾರ್ಷಿಕ ₹5,000 ಕೋಟಿ ರೂ. ನೀಡಲು ಮತ್ತು ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸಾರ್ವಜನಿಕ ವಲಯದ ಉದ್ಯಮ (PSU) ಸ್ಥಾಪಿಸಲು ಕೋರಿಕೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಮನವಿ ಸಲ್ಲಿಕೆ. 2,000 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ಶೀಘ್ರವಾಗಿ ನೀಡಲು ವಿನಂತಿ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಮನವಿ. ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸುಧಾರಣೆಗಾಗಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆಯನ್ನು ಸ್ಥಾಪಿಸಲು ಮಂಜೂರಾತಿ ನೀಡಲು ಮನವಿ ಸಲ್ಲಿಕೆ.

