Thursday, December 12, 2024

ಕನ್ನಡ ನಿಘಂಟಿನ ಪರಿಷ್ಕರಣೆಗೆ ಶಾಶ್ವತ ವ್ಯವಸ್ಥೆ ಬೇಕಿದೆ; ಡಾ. ಆರ್. ಶೇಷಶಾಸ್ತ್ರಿ

Most read

ಬೆಂಗಳೂರು: ಒಂದು ಭಾಷೆಯ ಅಸ್ತಿತ್ವವನ್ನು ಗಟ್ಟಿಗೊಳಿಸುವ, ಅದರ ನಿರಂತರ ಬೆಳವಣಿಗೆ, ಬದಲಾವಣೆಗಳನ್ನು ದಾಖಲಿಸುವುದು ನಿಘಂಟು. ಭಾರತೀಯ ಭಾಷೆಗಳಲ್ಲಿಯೇ ಅತ್ಯುತ್ತಮ ನಿಘಂಟನ್ನು ಪ್ರಕಟಿಸಿದ ಹೆಗ್ಗಳಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ. ದುರಂತವೆಂದರೆ, ಪರಿಷತ್ತು ನಿಘಂಟು ವಿಭಾಗವನ್ನು ಮುಚ್ಚಿ ಹಲವು ವರ್ಷಗಳಾಗಿವೆ. ಕನ್ನಡ ಭಾಷೆ ಬೇರುಗಳನ್ನು ಭದ್ರಗೊಳಿಸುವ ಕನ್ನಡ ನಿಘಂಟಿನ ಪರಿಷ್ಕರಣ ಕಾರ್ಯಕ್ಕೆ ಕರ್ನಾಟಕ ಸರ್ಕಾರ ಶಾಶ್ವತ ವ್ಯವಸ್ಥೆ ಮಾಡಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಖ್ಯಾತ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿ ಹೇಳಿದ್ದಾರೆ.

ಅವರು ಕನ್ನಡ ಗೆಳೆಯರ ಬಳಗವು ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕವಿ ಪ್ರತಿಮೆಗಳಿಗೆ ಮಾಲಾರ್ಪಣೆ ಮತ್ತು ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡದ ಮಹತ್ವದ ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಿರುವುದು ಪ್ರಶಂಸನೀಯ. ಆದರೆ ಅವುಗಳ ಪ್ರಕಟನೆಯ ವಿಚಾರದಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯ ಖಂಡನೀಯ. ಕನಕದಾಸರ ಎಲ್ಲ ಕೃತಿಗಳು ಅನುವಾದಗೊಂಡು ಅನೇಕ ವರ್ಷಗಳಾದರೂ ಪ್ರಕಟಣೆಯ ಭಾಗ್ಯ ದೊರೆತಿಲ್ಲದಿರುವುದು ವಿಷಾದದ ಸಂಗತಿ. ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಚೆಲುವ ಕನ್ನಡನಾಡನ್ನು ಕೊಂಡಾಡುತ್ತೇವೆ. ಆದರೆ, ನಮ್ಮ ಸಮುದ್ರ, ನದಿ ತೀರಗಳಲ್ಲಿ, ಪ್ರವಾಸಿತಾಣಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವ ಮೂಲಕ ಅದನ್ನು ವಿರೂಪಗೊಳಿಸು ತ್ತಿದ್ದೇವೆ. ಕನ್ನಡಾಭಿಮಾನಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ನೈರ್ಮಲ್ಯ ಕಾಪಾಡುವುದು ಕನ್ನಡದ ಕೆಲಸವೇ ಎಂದರು.

ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯಿದೆ ರೂಪಿಸಿ:

ರಾಜ್ಯದಲ್ಲಿರುವ ಕೇಂದ್ರ ಮತ್ತು ಖಾಸಗೀ ಉದ್ದಿಮೆ/ಸಂಸ್ಥೆ/ಬ್ಯಾಂಕ್ ಮುಂತಾದೆಡೆಗಳಲ್ಲಿ ಉದ್ಯೋಗದಲ್ಲ್ಲಿ ಕನ್ನಡಿಗರಿಗೆ (ಸ್ಥಳೀಯರಿಗೆ) ನ್ಯಾಯಯುತ ಪಾಲು ದೊರೆಯಲು ಪರಿಷ್ಕೃತ ಮಹಿಷಿ ವರದಿಯನ್ನು ಸದನದಲ್ಲಿ ಮಂಡಿಸಿ ಕಾಯಿದೆ ರೂಪಿಸಬೇಕು ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ರಾ.ನಂ. ಚಂದ್ರಶೇಖರ ಅವರು ಒತ್ತಾಯಿಸಿದರು.ಮಹಿಷಿ ವರದಿಗೆ ಶಾಸನಾಧಾರದ ಬೆಂಬಲವಿಲ್ಲದಿರುವುದರಿಂದ ಅದೊಂದು ಸಮಿತಿಯ ವರದಿ, ಅದನ್ನು ಅನುಸರಿಸಿ ಎಂದು ಹೇಳುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ದಾವೆಯನ್ನು ವಜಾ ಮಾಡಿದೆ. ಕೇಂದ್ರ ಸರ್ಕಾರ ನಡೆಸುವ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕು. ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪರಿಷ್ಕೃತ ಮಹಿಷಿ ವರದಿಯನ್ನು ಮಂಡಿಸಿ ಕಾಯಿದೆ ರೂಪಿಸಬೇಕು ಎಂದು ಮನವಿ ಮಾಡಿದರು.

ಬಸವನಗುಡಿ ನ್ಯಾಷನಲ್ ಸ್ಕೂಲ್ ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆ ಎದುರು ನಡೆದ ಕನ್ನಡ ಚಿಂತನ’ ಸಭೆಯಲ್ಲಿ ಕನ್ನಡ ಪರಿಚಾರಕ ಆರ್. ರಾಮಕೃಷ್ಣ (ಡಿಟಿಪಿ) ಅವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಕನ್ನಡ ಗೆಳೆಯರ ಬಳಗ ಸಂಚಾಲಕ ರಾ.ನಂ. ಚಂದ್ರಶೇಖರ, ಬಾ.ಹ. ಉಪೇಂದ್ರ, ಡಾ. ಸಿದ್ಧಾರ್ಥರೆಡ್ಡಿ, ಬಿ.ಎಂ. ಗಂಗಣ್ಣ, ಆರ್. ರಾಮಸ್ವಾಮಿ ಉಪಸ್ಥಿತರಿದ್ದರು.

More articles

Latest article