ತಿಲಕ್ ವರ್ಮಾ ಘಟನೆಗೆ ಸಂಬಂಧಿಸಿದಂತೆ ಅಭಿಮಾನಿಯೊಬ್ಬರಿಗೆ ನೀಡಿದ ವಿಚಿತ್ರ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಭಾರತದ ವೇಗಿ ಅರ್ಶ್ದೀಪ್ ಸಿಂಗ್ ನೆಟ್ಟಿಗರ ತೀವ್ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಅವರ ವಿರುದ್ಧ ಅರ್ಶ್ದೀಪ್ ಸಿಂಗ್ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈರಲ್ ಆದ ವಿಡಿಯೋವೊಂದರಲ್ಲಿ, ತಿಲಕ್ ವರ್ಮಾ ತಮ್ಮ ಪಕ್ಕದಲ್ಲಿ ನಡೆದುಹೋಗುವಾಗ ಅರ್ಶ್ದೀಪ್ “ಓಯ್ ಅಂಧೇರೇ” (ಹೇ ಕಪ್ಪಗಿರುವವನೇ/ಕತ್ತಲೆಯೇ) ಎಂದು ಕರೆದಿದ್ದರು. ಈ ಜನಾಂಗೀಯ ನಿಂದನೆಯ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಅವರು ಸಹ ಆಟಗಾರ ನಮನ್ ಧಿರ್ ಅವರತ್ತ ಕೈತೋರಿಸಿ ಪಂಜಾಬಿಯಲ್ಲಿ, “ಆ ದೇಖ್, ಆ ಹೈ ಪಂಜಾಬ್ ದಾ ಅಸ್ಲಿ ನೂರ್, ತೇ ಆ ಹೈ ನಕ್ಲಿ” (ಇವನನ್ನು ನೋಡಿ, ಇವನು ಪಂಜಾಬ್ನ ಅಸಲಿ ಕಳೆ/ಬೆಳಕು, ಅವನು ನಕಲಿ) ಎಂದು ಹೇಳಿದ್ದರು.
ಅಭಿಮಾನಿಯ ಕಾಮೆಂಟ್ ಮತ್ತು ಅರ್ಶ್ದೀಪ್ ಕೊಟ್ಟ ತಿರುಗೇಟು
ಈ ಘಟನೆಯಿಂದ ಬೇಸತ್ತ ಅಭಿಮಾನಿಯೊಬ್ಬರು, “ಐಪಿಎಲ್ನಿಂದ ಪಂಜಾಬ್ ಹೆಸರನ್ನು ತೆಗೆದುಹಾಕಿ, ಇದರಿಂದ ಪಂಜಾಬ್ ಕಿಂಗ್ಸ್ ಅಭಿಮಾನಿಗಳಿಗೆ ಅವಮಾನವಾಗುತ್ತಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಅರ್ಶ್ದೀಪ್ ಸ್ನ್ಯಾಪ್ಚಾಟ್ನಲ್ಲಿ (Snapchat) ನೀಡಿದ ಪ್ರತಿಕ್ರಿಯೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಅರ್ಶ್ದೀಪ್ ಸಿಂಗ್ ಪ್ರತಿಕ್ರಿಯೆ
“ಸಿಂಗ್ ಸಾಬ್, ನೀವು ಪಂಜಾಬ್ಗಾಗಿ ಏನು ಮಾಡಿದ್ದೀರಿ? ಇಂದಿಗೂ ಚಿಪ್ಸ್ ಮತ್ತು ಕೋಲ್ಡ್ ಡ್ರಿಂಕ್ಸ್ ಕೊಳ್ಳಲು ಮನೆಯವರಿಂದ ಹಣ ಕೇಳುವ ಜನರೆಲ್ಲಾ ಈಗ ನನಗೆ ಪಂಜಾಬ್ ಬಗ್ಗೆ ಸಲಹೆ ನೀಡುತ್ತಿದ್ದಾರಾ?”
ಈ ಘಟನೆಯು ಬಿಸಿಸಿಐ ಅನ್ನು ಕಠಿಣ ಪರಿಸ್ಥಿತಿಗೆ ತಳ್ಳಿದೆ. ಈಗಾಗಲೇ ಮಾಜಿ ಕ್ರಿಕೆಟಿಗರು ಅರ್ಶ್ದೀಪ್ ಸಿಂಗ್ ಅವರನ್ನು ಐಪಿಎಲ್ನಿಂದ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ಬಿಸಿಸಿಐ ಮೈದಾನದ ಹೊರಗಿನ ನಡವಳಿಕೆ ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯ ಕುರಿತು ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೆ ಕಟ್ಟುನಿಟ್ಟಿನ 7 ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು.
ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅರ್ಶ್ದೀಪ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ: “ಯಾರೂ ನನ್ನನ್ನು ನಂಬಲಿಲ್ಲ. ಎಲ್ಲರೂ ನನ್ನನ್ನು ಗೇಲಿ ಮಾಡಿದರು ಮತ್ತು ಟ್ರೋಲ್ ಮಾಡಿದರು. ಅರ್ಶ್ದೀಪ್ ಅವರನ್ನು ಈ ಸೀಸನ್ನಿಂದ ನಿಷೇಧಿಸಬೇಕು ಮತ್ತು ಆಡಿದ ಪಂದ್ಯಗಳ ಅನುಪಾತದ ಆಧಾರದ ಮೇಲೆ (pro rata basis) ಅವರಿಗೆ ಸಂಭಾವನೆ ನೀಡಬೇಕು. ಇಂದಿನ ಆಟಗಾರರಿಗೆ ಎಲ್ಲಿ ಪೆಟ್ಟು ಬಿದ್ದರೆಬುದ್ಧಿ ಬರುತ್ತದೋ ಅಲ್ಲೇ ಹೊಡೆಯಬೇಕು. ಇದಕ್ಕಾಗಿ ನಾನು ಮತ್ತೆ ಟ್ರೋಲ್ ಆಗಬಹುದು ಎಂಬುದು ನನಗೆ ಗೊತ್ತು.”
ವರದಿಗಳ ಪ್ರಕಾರ, ಈ ಹಿಂದೆ ವ್ಲಾಗಿಂಗ್ (Vlogging) ಮಾಡಿದ್ದಕ್ಕಾಗಿ ಅರ್ಶ್ದೀಪ್ ಅವರಿಗೆ ಬಿಸಿಸಿಐ ಎಚ್ಚರಿಕೆ ನೀಡಿತ್ತು. ಅರ್ಶ್ದೀಪ್ ತಮ್ಮ ವ್ಲಾಗ್ನಲ್ಲಿ ಯುಜ್ವೇಂದ್ರ ಚಹಾಲ್ ವೇಪಿಂಗ್ (ಇ-ಸಿಗರೇಟ್ ಧೂಮಪಾನ) ಮಾಡುತ್ತಿರುವುದನ್ನು ತಿಳಿಯದೇ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೋ ವಿವಾದ ಸೃಷ್ಟಿಸಿದ ಬಳಿಕವೇ ಬಿಸಿಸಿಐ ಆಟಗಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿತ್ತು. ಈಗ ಈ ಹೊಸ ವಿವಾದದ ಹಿನ್ನೆಲೆಯಲ್ಲಿ ಬಿಸಿಸಿಐ ಅರ್ಶ್ದೀಪ್ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

