ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಪವಿತ್ರ ಗೌಡ ಸೇರಿ ಹತ್ತು ಮಂದಿಗೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.
ಚಿತ್ರ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪವಿತ್ರ ಗೌಡ ಅವರಿಗೆ ನ್ಯಾಯಂಗ ಬಂಧನ ವಿಧಿಸಲಾಗಿರುವುದರಿಂದ ಜೈಲು ಸೇರಲಿದ್ದಾರೆ.
ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ಪೊಲೀಸ್ ಕಸ್ಟಡಿಯಲ್ಲಿದ್ದ ಎಲ್ಲ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಎ-2 ಆರೋಪಿಯಾಗಿರುವ ದರ್ಶನ್ ಮತ್ತು ಇತರ ಮೂವರ ವಿಚಾರಣೆ ಅಗತ್ಯವಿರುವುದರಿಂದ ಸರ್ಕಾರಿ ಅಭಿಯೋಜಕರ ವಿನಂತಿಯ ಮೇರೆಗೆ ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಆರೋಪಿಗಳಾದ ವಿನಯ್, ಧನರಾಜ್, ಪ್ರದೋಶ್ ಮತ್ತೆ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್ ಅವರೊಂದಿಗೆ ಎರಡು ದಿನ ವಿಚಾರಣೆ ಎದುರಿಸಲಿದ್ದಾರೆ.
ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್, ಕೇಶವ್ ಅವರುಗಳನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.