ಆರ್ ಎಸ್ ಎಸ್/ ಬಿಜೆಪಿ ತಾವು ಹೇಗೆ ಮಹಿಳಾ ವಿರೋಧಿಗಳು ಎನ್ನುವುದನ್ನು ಅನೇಕ ಬಾರಿ ತಮ್ಮ ಮಾತು ಮತ್ತು ಕೃತಿಗಳಲ್ಲಿ ಬಹಿರಂಗಪಡಿಸಿದ್ದಾರೆ. .ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ, ಹಾತರಸ್ ದಲಿತ ಹೆಣ್ಣಿನ ಅತ್ಯಾಚಾರ ನಡೆದಾಗ, ಕುಸ್ತಿಪಟು ಮಹಿಳೆಯರು ನ್ಯಾಯಕ್ಕಾಗಿ ಮೊರೆ ಇಟ್ಟಾಗ ಇವರು ಹೆಣ್ಣಿಗೆ ಎಂತಹ ನ್ಯಾಯ ಕೊಟ್ಟಿದ್ದಾರೆ ಎನ್ನುವುದನ್ನು ಜಗತ್ತೇ ನೋಡಿದೆ. ಹಾಗಾಗಿ ಈಗ ಕುಮಾರಸ್ವಾಮಿ ನೀಡಿದ ಹೇಳಿಕೆಯು ಆರ್ ಎಸ್ ಎಸ್/ ಬಿಜೆಪಿ ಮಂದಿಯ ಆಲೋಚನೆಗಳ ದಾರಿಯಲ್ಲೇ ಇದ್ದು, ಆ ಪಕ್ಷ ಮತ್ತು ಸಂಘಟನೆಗೆ ಕುಮಾರಸ್ವಾಮಿಯವರು ಇನ್ನಷ್ಟು ಇಷ್ಟವಾಗಲೂ ಬಹುದು – ಶ್ರೀನಿವಾಸ ಕಾರ್ಕಳ.
“ಸ್ವಲ್ಪ ಗಮನ ಇಟ್ಟು ಎರಡು ಮಾತುಗಳನ್ನು ಕೇಳಿ, ಇವತ್ತಿನ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಈ ರೀತಿ ಉಚಿತ ಯೋಜನೆ ಕೊಟ್ಟರೆ ಹಳ್ಳಿಯ ತಾಯಂದಿರ ಬದುಕು ಏನಾಗಬೇಕು? ಈ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕಿದೆ. ನಿಮ್ಮ ಕುಟುಂಬದ ಬದುಕೇನಾಗಬೇಕು ಯೋಚನೆ ಮಾಡಬೇಕಿದೆ…” ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತುಮಕೂರಿನ ತುರುವೇಕೆರೆಯಲ್ಲಿ ಹೇಳಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹೇಳಿಕೆ ಅನೇಕ ಕಾರಣಗಳಿಗಾಗಿ ಅಪಾಯಕಾರಿಯಾದುದು. ಮೊದಲನೆಯದಾಗಿ, ‘ನನ್ನ ಮಾತು ಕೇಳಿ’ ಎಂದು ‘ಜಗತ್ತಿಗೆ ತಾನು ಉಪದೇಶ ಕೊಡುವಷ್ಟು ದೊಡ್ಡವನು’ ಎಂಬ ನೆಲೆಯಿಂದ ನಿಂತು ಕುಮಾರಸ್ವಾಮಿಯವರು ಹೇಳುತ್ತಿರುವುದಾದರೂ ಏನನ್ನು? ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ತಪ್ಪು ಎಂದೇ? ರಾಜಕೀಯ ಕಾರಣಕ್ಕಾಗಿ ಅವರು ಹೀಗೆ ಹೇಳಬಹುದು. ಆದರೆ ಕನಿಷ್ಠ ಆರ್ಥಿಕ, ಸಾಮಾಜಿಕ ಮತ್ತು ಸುತ್ತಲ ಜಗತ್ತಿನಲ್ಲಿ ಏನಾಗುತ್ತಿದೆ ಎಂಬ ಪರಿಜ್ಞಾನವಿರುವ ಯಾರೇ ಆಗಲಿ, ಇಂತಹ ಸಡಿಲ ಹೇಳಿಕೆಯನ್ನು ಕೊಡಲಾರರು. ಯಾಕೆಂದರೆ, ವಿಶೇಷವಾಗಿ ಕೋವಿಡ್, ಲಾಕ್ ಡೌನ್ ನಂತಹ ನಿರ್ಧಾರಗಳಿಂದ ದೇಶದ ಆರ್ಥಿಕತೆ ದಾರಿ ತಪ್ಪಿದ ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆಯ ಚಕ್ರ ತಿರುಗ ಬೇಕಾದರೆ ಉದ್ಯಮಿಗಳಿಗಲ್ಲ, ಜನ ಸಾಮಾನ್ಯರ ಕಿಸೆಗೆ ಹಣ ಹಾಕಿ ಎಂದು ದೊಡ್ಡ ದೊಡ್ಡ ಅರ್ಥಶಾಸ್ತ್ರಜ್ಞರೇ ಹೇಳಿದ್ದಾರೆ. ಅನೇಕ ದೇಶಗಳು ಈ ಕೆಲಸವನ್ನು ಮಾಡಿ ಅಸಾಧಾರಣ ಯಶಸ್ಸು ಸಾಧಿಸಿವೆ ಕೂಡಾ.
ಕರ್ನಾಟಕದಲ್ಲಿ ಈ ಗ್ಯಾರಂಟಿಗಳು ಬಡ ಕುಟುಂಬಗಳಲ್ಲಿ, ಅದರಲ್ಲೂ ಹೆಣ್ಣುಮಕ್ಕಳಲ್ಲಿ, ಸಬಲೀಕರಣದ ಮೂಲಕ, ಹಿಂದೆಂದೂ ಕಂಡಿರದ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ. ಒಂದು ಹೊತ್ತಿನ ಊಟ ಸಿಗದವರು ಹೊಟ್ಟೆ ತುಂಬ ಉಣ್ಣುತ್ತಿದ್ದಾರೆ. ಗಂಡ, ಮಕ್ಕಳು ಇಲ್ಲದೆ ಅನಾಥರಾದ ಮುದುಕಿಯರಿಗೆ ಆರ್ಥಿಕ ಚೈತನ್ಯ ಒದಗಿಸಿದೆ ಗ್ಯಾರಂಟಿಗಳು. ಜೀವನದಲ್ಲಿ ತಮ್ಮದೇ ಆದ ಬಿಡಿಗಾಸನ್ನೂ ನೋಡದವರು ತಿಂಗಳಿಗೆ ರು. 2000 ಪಡೆದು ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಖುಷಿ ಅನುಭವಿಸುತ್ತಿದ್ದಾರೆ. ತಮ್ಮದೇ ಆದ ಹಣ ಇಲ್ಲದ ಕಾರಣಕ್ಕೆ ತೀರ್ಥಯಾತ್ರೆಗೋ ಇನ್ನೊಂದಕ್ಕೋ ಹೋಗುವ ಕನಸು ಕಾಣುವುದೂ ಸಾಧ್ಯ ಇಲ್ಲದ ಮಹಿಳೆಯರು ತಮ್ಮದೇ ಆದ ಹಣ ಹಿಡಿದುಕೊಂಡು, ಹೆಂಗಳೆಯರೊಂದಿಗೆ ಕೂಡಿಕೊಂಡು, ಉಚಿತ ಬಸ್ ನಲ್ಲಿ ತಮ್ಮ ಬದುಕಿನ ಬಹುದೊಡ್ಡ ಕನಸಾದ ಸಣ್ಣ ಸಣ್ಣ ಯಾತ್ರೆಗಳನ್ನು ನಡೆಸುತ್ತಿದ್ದಾರೆ. ಗೃಹಲಕ್ಷ್ಮಿ ಹಣದಿಂದ ಹಳೆಯ ಸಾಲ ತೀರಿಸಿ ನಿಶ್ಚಿಂತೆಯ ನಿದ್ದೆ ಮಾಡುತ್ತಿದ್ದಾರೆ ಹಲವರು. ಜೀವನದ ಒಂದು ದೊಡ್ಡ ಕನಸಾದ ಒಂದು ಟೀವಿ ಖರೀದಿಸುವುದು, ಒಂದು ಸಣ್ಣ ಚಿನ್ನದ ಸರ ಮಾಡಿಸುವುದು ಇದನ್ನೂ ಈಡೇರಿಸಲಾಗದವರು ಏಳು ತಿಂಗಳ ಗೃಹಲಕ್ಷ್ಮಿ ಹಣ ಉಳಿಸಿ ಅದನ್ನು ಸಾಧಿಸಿದ ಕತೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಇಂತಹ ಹೆಣ್ಣುಮಕ್ಕಳು ದಾರಿತಪ್ಪಿದವರೇ?
ದಾರಿ ತಪ್ಪುವುದು ಎಂದರೆ ಏನು?!
ಇಷ್ಟಕ್ಕೂ ‘ದಾರಿ ತಪ್ಪುವುದು’ ಎಂದರೆ ಏನು? ಇಂತಹ ಪದ ಪ್ರಯೋಗ ಬಳಸುವಾಗ ಬಹಳ ಎಚ್ಚರವಿರಬೇಕು. ಯಾಕೆಂದರೆ ಗ್ರಾಮ್ಯ ಭಾಷೆಯಲ್ಲಿ ಅದಕ್ಕೆ ಬಹಳ ಕೆಟ್ಟ ಅರ್ಥವಿದೆ. ಅದರಲ್ಲೂ ಹೆಣ್ಣುಮಕ್ಕಳ ವಿಷಯದಲ್ಲಿ ಬಳಸುವಾಗ ಇನ್ನೂ ಹೆಚ್ಚು ಎಚ್ಚರದಿಂದಿರಬೇಕು. ಹೆಣ್ಣು ಹೇಗಿರಬೇಕು ಎಂದು ಗಂಡು ಸಮಾಜ ನಿರ್ಧರಿಸಿದೆಯೋ, ಅದಕ್ಕೆ ಭಿನ್ನವಾಗಿರುವ ಬಜಾರಿ, ಗಂಡುಬೀರಿ ಎಂದೆಲ್ಲ ಅದಕ್ಕೆ ಅರ್ಥಬರುವ ಸಾಧ್ಯತೆ ಇದೆ. ಇನ್ನೂ ಮುಂದಕ್ಕೆ ಹೋಗಿ ‘ಮೈಮಾರುವವರು’ ಎಂಬ ಅರ್ಥವೂ ಬರುವುದಿದೆ. ಕುಮಾರಸ್ವಾಮಿಯವರ ಪ್ರಕಾರ, ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಸಬಲೀಕರಣಗೊಂಡು ಮೊದಲ ಬಾರಿ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಸುಖ ಅನುಭವಿಸುತ್ತಿರುವ ನಮ್ಮ ಬಡ ತಾಯಂದಿರು ಅಂಥ ‘ದಾರಿ ತಪ್ಪಿದವರೇ’?!!
ಕುಮಾರಸ್ವಾಮಿಯಂತಹ ರಾಜಕಾರಣಿಗಳಿಂದ ಇದಕ್ಕೆ ಹೆಚ್ಚಿನ ಜವಾಬ್ದಾರಿಯುತ ಮಾತುಗಳನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ರಾಜಕೀಯ ಕಾರಣಕ್ಕೆ ಹೇಳಿಕೆಗಳನ್ನು ನೀಡುವಾಗ ಇವರಿಗೆಲ್ಲ ತಾವು ಏನು ಮಾತಾಡುತ್ತಿದ್ದೇವೆ ಎನ್ನುವ ಪರಿಜ್ಞಾನವೇ ಇರುವುದಿಲ್ಲ. ಲಿಂಗತ್ವ ಸಮಾನತೆಯ ಮತ್ತು ಲಿಂಗಸಂವೇದಿ ಆಲೋಚನೆಯ ಕಾಲದಲ್ಲಿ ತಾವು ಏನು ಮಾತಾಡಿದರೆ ಅದು ಹೆಣ್ಣು ಕುಲಕ್ಕೆ ಅವಮಾನ ಎಂಬ ಅರಿವು ಇರುವುದಿಲ್ಲ. ಹಾಗಾಗಿಯೇ ಅವರು ‘ನಾವೇನು ಬಳೆ ತೊಟ್ಟುಕೊಂಡಿದ್ದೀವಾ?’ ಎಂಬಂತಹ ಹೇಳಿಕೆಗಳ ಕೊಡುತ್ತಾ, ಹೆಣ್ಣನ್ನು ಅಬಲೆಯರು, ಎರಡನೆಯ ದರ್ಜೆಯ ಪ್ರಜೆಗಳು ಎಂದು ಪರಿಭಾವಿಸುವ, ಗಂಡು ಸಮಾಜದ ಸಮರ್ಥ ಪ್ರತಿನಿಧಿಗಳಂತೆ ತಮ್ಮನ್ನು ತಾವು ಬಿಂಬಿಸುತ್ತಲೇ ಇರುತ್ತಾರೆ. ಹೆಣ್ಣು ತನ್ನ ಅಡಿಯಾಳು, ಆಕೆ ತಾನು ಹೇಳಿದಂತೆ ಕೇಳುತ್ತಿರಬೇಕು, ಆಕೆಗೆ ಸ್ವಾತಂತ್ರ್ಯದ ಅರ್ಹತೆಯಿಲ್ಲ, ಧರ್ಮ, ಸಂಸ್ಕೃತಿ ರಕ್ಷಿಸುವುದು ಆಕೆಯ ಜವಾಬ್ದಾರಿ, ಗಂಡ ಹೇಳಿದಂತೆ ಕೇಳುತ್ತಿರಬೇಕು ಆಕೆ, ಮಕ್ಕಳನ್ನು ಹೆರುವುದು, ಗಂಡನ ಸೇವೆ ಮಾಡುವುದು ಮಾತ್ರ ಆಕೆಯ ಕರ್ತವ್ಯ ಎಂಬ ಯಾಜಮಾನ್ಯ ಗೌಡಿಕೆಯ ಅಧಿಕಾರ ನೆಲೆಯಿಂದ ಹೊರಡುವ ಆಲೋಚನೆಗಳಿವು. ತಾಯಂದಿರು ದಾರಿ ತಪ್ಪುವುದು ಎಂಬುದೂ ಅವರಿಗೆ ಗೊತ್ತಿಲ್ಲದೆಯೇ ಹೊರಬಂದಿರುವ ಅವರ ಮನಸಿನಾಳದ ಕೆಸರು.
ಒಂದೇ ಬಳ್ಳಿಯ ಹೂಗಳು
ಹಾಗೆ ನೋಡಿದರೆ, ಕುಮಾರಸ್ವಾಮಿಯವರ ಪಕ್ಷ ಈಗ ಸರಿಯಾದ ಪಕ್ಷದೊಂದಿಗೇ ಸ್ನೇಹ ಮಾಡಿಕೊಂಡಿದೆ. ಇಬ್ಬರಿಗೂ ಒಳ್ಳೆಯ ತಾಳ ಮೇಳವಿದೆ. ಹೆಣ್ಣಿನ ವಿಷಯದಲ್ಲಿ ಬಿಜೆಪಿಯ ತಾಯಿಯಾದ ಆರ್ ಎಸ್ ಎಸ್ ನ ನಿಲುವು ಕೂಡಾ ಇದೇ ರೀತಿಯದಾಗಿದೆ (ಸಂಘಕ್ಕೆ ಇಷ್ಟವಾದ ಮನುಸ್ಮೃತಿಯಲ್ಲಿ ಹೆಣ್ಣಿನ ಸ್ಥಾನ ಏನು?). ‘ಮದುವೆ ಎನ್ನುವುದು ಒಂದು ಕಾಂಟ್ರಾಕ್ಟ್, ಮಕ್ಕಳನ್ನು ಹೆರುವುದು ಪೊರೆಯುವುದು, ಗಂಡನ ಸೇವೆ ಮಾಡುವುದು ಆಕೆಯ ಕರ್ತವ್ಯ’ ಅರ್ಥಾತ್ ಆಕೆ ‘ಮನೆಯೊಳಗಿರಬೇಕಾದವಳು’ ಎಂಬರ್ಥದ ಮಾತುಗಳನ್ನು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅನೇಕ ಬಾರಿ ಹೇಳಿದ್ದಾರೆ. ಆರ್ ಎಸ್ ಎಸ್/ ಬಿಜೆಪಿ ತಾವು ಹೇಗೆ ಮಹಿಳಾ ವಿರೋಧಿಗಳು ಎನ್ನುವುದನ್ನು ಅನೇಕ ಬಾರಿ ತಮ್ಮ ಮಾತು ಮತ್ತು ಕೃತಿಗಳಲ್ಲಿ ಬಹಿರಂಗಪಡಿಸಿದ್ದಾರೆ. ಮಹಿಳೆ ಮತ್ತು ಆದಿವಾಸಿ ಎನ್ನುವ ಕಾರಣಕ್ಕೆ ಸಂಸತ್ ಮತ್ತು ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ರಾಷ್ಟ್ರಪತಿಗಳನ್ನೇ ಅವಮಾನಿಸಿದವರು ಎಂಬ ಆರೋಪ ಹೊತ್ತವರೂ ಇದೇ ಪಕ್ಷದ ಮಹಾನ್ ನಾಯಕಮಣಿಗಳು. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಾಗ, ಹಾತರಸ್ ದಲಿತ ಹೆಣ್ಣಿನ ಅತ್ಯಾಚಾರ ನಡೆದಾಗ, ಕುಸ್ತಿಪಟು ಮಹಿಳೆಯರು ನ್ಯಾಯಕ್ಕಾಗಿ ಮೊರೆ ಇಟ್ಟಾಗ ಇವರು ಹೆಣ್ಣಿಗೆ ಎಂತಹ ನ್ಯಾಯ ಕೊಟ್ಟಿದ್ದಾರೆ ಎನ್ನುವುದನ್ನು ಜಗತ್ತೇ ನೋಡಿದೆ. ಹಾಗಾಗಿ ಈಗ ಕುಮಾರಸ್ವಾಮಿ ನೀಡಿದ ಹೇಳಿಕೆಯು ಆರ್ ಎಸ್ ಎಸ್/ ಬಿಜೆಪಿ ಮಂದಿಯ ಆಲೋಚನೆಗಳ ದಾರಿಯಲ್ಲೇ ಇದ್ದು, ಆ ಪಕ್ಷ ಮತ್ತು ಸಂಘಟನೆಗೆ ಕುಮಾರಸ್ವಾಮಿಯವರು ಇನ್ನಷ್ಟು ಇಷ್ಟವಾಗಲೂ ಬಹುದು.
ಚುನಾವಣೆ, ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ, ಜನಸಂಖ್ಯೆಯ ಅರ್ಧದಷ್ಟಿರುವ, ಸಮಾಜದ ಒಂದು ಕಣ್ಣು ಎನಿಸಿಕೊಂಡಿರುವ ಮತ್ತು ಇಡೀ ಗಂಡು ಕುಲವನ್ನು ಈ ಭೂಮಿಗೆ ತರಲು ಕಾರಣಳಾದ ಹೆಣ್ಣಿನ ಬಗ್ಗೆ, ಆಕೆಯ ಶೀಲದ ಬಗ್ಗೆ ಅನುಮಾನ ಬರುವಂತೆ ಮಾತನಾಡುವಾಗ ಕುಮಾರಸ್ವಾಮಿಯಂಥವರು ಎಚ್ಚರಿಕೆಯಿಂದಿರಬೇಕು. ನಮ್ಮ ಹೆಣ್ಣುಮಕ್ಕಳು ಬುದ್ಧಿವಂತರು, ದಿಟ್ಟೆಯರು, ಸ್ವತಂತ್ರ ಆಲೋಚನೆಯಿರುವವರು, ಅವರಿಗೆ ತಾವು ಏನು ಮಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬ ಎಲ್ಲ ಅರಿವೂ ಇದೆ. ಅವರು ಬೇಕಿದ್ದರೆ ನಿಮಗೆ ದಾರಿ ತೋರಬಲ್ಲವರೇ ಹೊರತು ಸ್ವತಃ ಎಂದಿಗೂ ದಾರಿ ತಪ್ಪುವವರಲ್ಲ.
ರಾಜಕೀಯ ಕಾರಣಕ್ಕೆ, ಎದುರಾಳಿಗಳ ಮೇಲಿನ ಅಸಹನೆಯ ಕಾರಣಕ್ಕೆ ತಾಯಂದಿರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಿ. ತಮಗಾದ ಅವಮಾನಕ್ಕೆ ತಾಯಂದಿರೆಲ್ಲ ಒಂದಾಗಿ, ಪ್ರತೀಕಾರ ರೀತಿಯಲ್ಲಿ ಮತ ಚಲಾಯಿಸಿದರೆ, ನಿಮ್ಮ ಅಭ್ಯರ್ಥಿಗಳ ಠೇವಣಿ ಕೂಡಾ ಉಳಿಯದು, ನೆನಪಿರಲಿ.
ಶ್ರೀನಿವಾಸ ಕಾರ್ಕಳ
ಸಾಮಾಜಿಕ ಹೋರಾಟಗಾರರು
ಇದನ್ನೂ ಓದಿ- ಕುಮಾರಸ್ವಾಮಿ ತೆನೆಹೊತ್ತ ಮಹಿಳೆಯನ್ನು ಅಪಮಾನಿಸಿದ್ದಾರೆ : ದೀಪಕ್ ತಿಮ್ಮಯ್ಯ